ಮರೆಯಾಗಿದೆ ಮಳೆ, ಶುರುವಾಗಿದೆ ಚಳಿ, ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಹೀಗಿದೆ ಕರ್ನಾಟಕ ಹವಾಮಾನ ಇಂದು
ಕನ್ನಡ ಸುದ್ದಿ  /  ಕರ್ನಾಟಕ  /  ಮರೆಯಾಗಿದೆ ಮಳೆ, ಶುರುವಾಗಿದೆ ಚಳಿ, ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಹೀಗಿದೆ ಕರ್ನಾಟಕ ಹವಾಮಾನ ಇಂದು

ಮರೆಯಾಗಿದೆ ಮಳೆ, ಶುರುವಾಗಿದೆ ಚಳಿ, ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಹೀಗಿದೆ ಕರ್ನಾಟಕ ಹವಾಮಾನ ಇಂದು

ಕರ್ನಾಟಕದಲ್ಲಿ ಬಹುತೇಕ ಮಳೆ ಮರೆಯಾಗಿದೆ. ವಿವಿಧೆಡೆ ಚಳಿ ಶುರುವಾಗಿದೆ. ಬೆಂಗಳೂರು ನಗರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂಜಾನೆ ಮಂಜು ಆವರಿಸತೊಡಗಿದ್ದು, ಚಳಿಯೂ ಹೆಚ್ಚಾಗತೊಡಗಿದೆ. ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ಕರ್ನಾಟಕ ಹವಾಮಾನ ಇಂದು (ನವೆಂಬರ್ 19) ಹೀಗಿದೆ.

ಕರ್ನಾಟಕ ಹವಾಮಾನ: ಮರೆಯಾಗಿದೆ ಮಳೆ, ಶುರುವಾಗಿದೆ ಚಳಿ, ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು. ಹವಾಮಾನ ವರದಿಗೆ ಸಾಂಕೇತಿಕವಾಗಿ ಈ ಚಿತ್ರಗಳನ್ನು ಬಳಸಲಾಗಿದೆ.
ಕರ್ನಾಟಕ ಹವಾಮಾನ: ಮರೆಯಾಗಿದೆ ಮಳೆ, ಶುರುವಾಗಿದೆ ಚಳಿ, ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು. ಹವಾಮಾನ ವರದಿಗೆ ಸಾಂಕೇತಿಕವಾಗಿ ಈ ಚಿತ್ರಗಳನ್ನು ಬಳಸಲಾಗಿದೆ. (Pexels/ X)

ಬೆಂಗಳೂರು: ಕರ್ನಾಟಕದ ಉದ್ದಗಲಕ್ಕೂ ಮಳೆ ಮರೆಯಾಗಿದೆ. ಚಳಿ ಶುರುವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು ಆವರಿಸಿದ್ದು, ನಗರ ಪ್ರದೇಶ ಬಿಟ್ಟು ಉಳಿದೆಡೆ ಮೈ ನಡುಗಿಸುವ ಚಳಿ ಅನುಭವಕ್ಕೆ ಬರತೊಡಗಿದೆ. ನಿನ್ನೆ (ನವೆಂಬರ್‌18) ಕರ್ನಾಟಕದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಿತ್ತು. ಇಂದಿನಿಂದ ಇನ್ನೊಂದು ವಾರ ಮಳೆ ಮುನ್ಸೂಚನೆ ಇಲ್ಲ. ಕರ್ನಾಟಕದಲ್ಲಿ ನಿನ್ನೆ ರಾಜ್ಯದ ಗರಿಷ್ಠ ಉಷ್ಣಾಂಶ 35.8 ಡಿಗ್ರಿ ಸೆಲ್ಶಿಯಸ್‌ ಕಾರವಾರದಲ್ಲಿ ದಾಖಲಾಗಿದೆ. ಅದೇ ರೀತಿ ಕನಿಷ್ಠ ಉಷ್ಣಾಂಶ 12.5 ಡಿಗ್ರಿ ಸೆಲ್ಶಿಯಸ್ ಬೀದರ್‌ನಲ್ಲಿ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಈ ದಿನದ ಹವಾಮಾನ ಲಕ್ಷಣ ಗಮನಿಸುವುದಾದರೆ, ಒಂದು ಚಂಡಮಾರುತದ ಪರಿಚಲನೆಯು ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿದೆ. ಅದೇ ರೀತಿ, ಇಂದು (ನವೆಂಬರ್ 19) ಕರ್ನಾಟಕ ಹವಾಮಾನ ಮತ್ತು ಬೆಂಗಳೂರು ಹವಾಮಾನಗಳ ವಿವರ ಹೀಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಹವಾಮಾನ ಇಂದು; ನಗರ ಮತ್ತು ಗ್ರಾಮಾಂತರದಲ್ಲಿ ಮುಂಜಾನೆ ಮಂಜು, ಚಳಿ

ಕರ್ನಾಟಕ ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ನವೆಂಬರ್ 19ರ ಬೆಳಗ್ಗೆಯಿಂದ ನವೆಂಬರ್ 20ರ ಬೆಳಗ್ಗೆ ತನಕ) ಮಳೆ ಮುನ್ಸೂಚನೆ ಇಲ್ಲ. ಆದರೆ, ಮುಂಜಾನೆ ಮಂಜು ಇರಲಿದ್ದು, ರಾತ್ರಿ ಚಳಿ ಕಾಡಲಿದೆ. ಎರಡೂ ಜಿಲ್ಲೆಗಳಲ್ಲಿ ಇಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಶಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಶಿಯಸ್ ಇರಲಿದೆ. ಬಹುತೇಕ ಒಣಹವೆ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ನಿನ್ನೆ ಗರಿಷ್ಠ ಉಷ್ಣಾಂಶ 27.4 ಡಿಗ್ರಿ ಸೆಲ್ಶಿಯಸ್ ಇತ್ತು. ಮುಂಜಾನೆ ಮಂಜು ಮುಸುಕಿದ ವಾತಾವರಣ ಮತ್ತು ಚಳಿ ಇತ್ತು. ಕನಿಷ್ಠ ಉಷ್ಣಾಂಶ 20.3 ಡಿಗ್ರಿ ಸೆಲ್ಶಿಯಸ್ ಇತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ನಿನ್ನೆ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಶಿಯಸ್ ಇತ್ತು. ವಿವಿಧೆಡೆ ದಟ್ಟ ಮಂಜು ಮುಸುಕಿದ ವಾತಾವರಣ ಮತ್ತು ಚಳಿ ಇತ್ತು. ಕನಿಷ್ಠ ಉಷ್ಣಾಂಶ 19.8 ಡಿಗ್ರಿ ಸೆಲ್ಶಿಯಸ್ ಇತ್ತು.

ಕರ್ನಾಟಕದ ಹವಾಮಾನ ಇಂದು; ಬಹುತೇಕ ಒಣ, ಹಲವೆಡೆ ಚಳಿ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೆಲವು ಕಡೆ ಬೆಳಗ್ಗೆ ಲಘು ಮಳೆಯಾಗಬಹುದಾದರೂ, ಬಹುತೇಕ ಒಣ ಹವೆ ಇರಲಿದೆ. ಗ್ರಾಮಾಂತರ ಭಾಗದಲ್ಲಿ, ಕೆಲವು ಕಡೆ ಪಟ್ಟಣಗಳಲ್ಲೂ ವಿಪರೀತ ಚಳಿ ಅನುಭವಕ್ಕೆ ಬರಲಿದೆ. ಮುಂಜಾನೆ ಮಂಜು ಆವರಿಸಲಿದ್ದು, ಶುಷ್ಕ ಹವೆ ಇರಲಿದೆ ಎಂದು ಕರ್ನಾಟಕ ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ನಿನ್ನೆ (ನವೆಂಬರ್ 18) ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ದಾಖಲಾಗಿದೆ.

ಕೃಷಿಕರಿಗೆ ಮುನ್ಸೂಚನೆ: ನವೆಂಬರ್ 19ರ ಬೆಳಗ್ಗೆ ತನಕ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಕೃಷಿಕರಿಗೆ ನೀಡಿರುವ ಕರ್ನಾಟಕ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

Whats_app_banner