ಬೆಂಗಳೂರು: ಕುಡುಕ ಚಾಲಕನ ಕಿರುಕುಳ ತಾಳದೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಬಚಾವ್ ಆದ 30 ವರ್ಷದ ಮಹಿಳೆ
ಬೆಂಗಳೂರಿನ ನಾಗವಾರ ಸಮೀಪ ಕುಡುಕ ಚಾಲಕನ ಕಿರುಕುಳ ತಾಳದೆ 30 ವರ್ಷದ ಮಹಿಳೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಬಚಾವ್ ಆದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. ಆಟೋ ಚಾಲಕನ ವಿರುದ್ಧ ಕ್ರಮ ಜರುಗಿಸಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದು, ವಿವರ ಪಡೆದಿರುವುದು ಕಂಡುಬಂದಿದೆ. ನಮ್ಮ ಯಾತ್ರಿ ಕೂಡ ಆಟೋ ಚಾಲಕನನ್ನು ತನ್ನ ಪ್ಲಾಟ್‌ಫಾರಂನಿಂದ ತೆಗೆದುಹಾಕಿದೆ.
ಬೆಂಗಳೂರು: ಪೂರ್ವ ಬೆಂಗಳೂರು ವ್ಯಾಪ್ತಿಯಲ್ಲಿ ಕುಡುಕ ಚಾಲಕನ ಕಿರುಕುಳ ತಾಳದೆ ಚಲಿಸುತ್ತಿದ್ದ ಆಟೋದಿಂದ ಹೊರ ಜಿಗಿದು 30 ವರ್ಷದ ಮಹಿಳೆ ಬಚಾವ್ ಆದ ಘಟನೆಯನ್ನು ಆಕೆಯ ಪತಿ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ತನ್ನ ಸ್ಪಷ್ಟ ಸೂಚನೆಯ ಹೊರತಾಗಿಯೂ ಚಾಲಕ ರಿಕ್ಷಾವನ್ನು ಅಪರಿಚಿತ ಜಾಗಕ್ಕೆ ಕೊಂಡೊಯ್ಯುತ್ತಿರುವುದು ಗೊತ್ತಾದ ಕೂಡಲೇ ಮಹಿಳೆ ಎಚ್ಚೆತ್ತುಕೊಂಡು, ಚಲಿಸುತ್ತಿದ್ದ ರಿಕ್ಷಾದಿಂದ ಹೊರ ಜಿಗಿದಿರುವುದಾಗಿ ಅವರು ವಿವರಿಸಿದ್ದಾರೆ.
ಎಕ್ಸ್ ತಾಣದಲ್ಲಿ ಕುಡುಕ ಚಾಲಕನ ಕಿರುಕುಳದ ವಿಚಾರ ಪ್ರಸ್ತಾಪ
ಮಹಿಳೆ ಈ ಘಟನೆ ಸಂಬಂಧಿಸಿದಂತೆ ಪೊಲೀಸರಿಗೆ ಅಧಿಕೃತ ದೂರು ನೀಡಿಲ್ಲ. ಆದರೆ ಅವರ ಪತಿ ಅಜರ್ ಖಾನ್ ಅವರು ಎಕ್ಸ್ ತಾಣದಲ್ಲಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ, ತೊಂದರೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಘಟನೆಯ ಸಮಯದಲ್ಲಿ ಚಾಲಕ ಕುಡಿತದ ಅಮಲಿನಲ್ಲಿದ್ದ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕುಡುಕ ಚಾಲಕನ ಕಿರುಕುಳ ತಾಳದೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಬಚಾವ್ ಆದ ಮಹಿಳೆ; ಏನಿದು ಘಟನೆ
ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ರಿಕ್ಷಾ ಬುಕ್ ಮಾಡಿದ್ದ ಮಹಿಳೆಯು ಹೊರಮಾವು ಎಂಬಲ್ಲಿಂದ ಆಟೋ ಏರಿದ್ದು ಥಣಿಸಂದ್ರದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದರು. ಡ್ರೈವರ್ ಸಾಮಾನ್ಯ ಮಾರ್ಗವನ್ನು ಅನುಸರಿಸದೆ ಹೆಬ್ಬಾಳದ ಕಡೆಗೆ ಹೋಗಲಾರಂಭಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಮಹಿಳೆ, ಹೆಬ್ಬಾಳ ಕಡೆಗೆ ಯಾಕೆ ಹೋಗುತ್ತಿದ್ದೀರಿ ಎಂದು ಆಟೋ ಚಾಲಕನನ್ನು ಪ್ರಶ್ನಿಸಿದ್ದಾರೆ. ಆದರೆ ಚಾಲಕ ಸ್ಪಂದಿಸದ ಕಾರಣ, ಏನೋ ಎಡವಟ್ಟಾಗಿದೆ ಎಂದು ಚಾಲಕನನ್ನು ನೋಡಿದ್ದಾಳೆ. ಆಗ, ಚಾಲಕನ ಕಣ್ಣುಗಳು ಕೆಂಪಾಗಿದ್ದವು. ಆತ ನಶೆಯಲ್ಲಿದ್ದ ಎಂಬುದರ ಅರಿವು ಮಹಿಳೆಗಾಯಿತು. ಎಂಬ ಅಂಶ ಅಜರ್ ಖಾನ್ ಪೋಸ್ಟ್‌ನಲ್ಲಿ ಗಮನಸೆಳೆದಿದೆ.
ಆಟೋ ರಿಕ್ಷಾ ನಾಗವಾರ ತಲುಪಿದಾಗ ದಿಢೀರ್ ಆಗಿ ತಿರುವು ಪಡೆದುಕೊಂಡು ಫ್ಲೈಓವರ್ ಮೇಲೇರಿದೆ. ಅದು ಥಣಿಸಂದ್ರಕ್ಕೆ ಸರಿಯಾದ ಮಾರ್ಗವಲ್ಲ. ತನ್ನ ಪತ್ನಿ ಕೂಡಲೆ ಚಾಲಕನಿಗೆ ದಾರಿ ತಪ್ಪಿದೆ ಎಂದು ಹೇಳಿದಾಗ ಆತ ಸ್ಪಂದಿಸಿಲ್ಲ. ಕೊನೆಗೆ ಒಂದೆಡೆ ಆಟೋ ಸಂಚಾರ ದಟ್ಟಣೆ ಕಾರಣ ನಿಧಾನವಾದಾಗ ಚಲಿಸುತ್ತಿದ್ದಾಗಲೇ ಪತ್ನಿ ಅದರಿಂದ ಹೊರ ಜಿಗಿದಳು. ಈ ಘಟನೆ ರಾತ್ರಿ 9 ಗಂಟೆಗೆ ನಡೆದಿದೆ. ರಾತ್ರಿ ಪ್ರಯಾಣ ಎಷ್ಟು ಕಷ್ಟ ಯೋಚನೆ ಮಾಡಿ. ಅದೃಷ್ಟವಶಾತ್ ತನ್ನ ಪತ್ನಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ. ಈ ಘಟನೆ ಬಳಿಕ ರಿಕ್ಷಾ ಚಾಲಕ ಬಂದು ವಾಪಸ್ ರಿಕ್ಷಾ ಏರುವಂತೆ ಮನವಿ ಮಾಡಿದ್ದಾನೆ. ಆದರೆ ಆಕೆ ಒಪ್ಪಲಿಲ್ಲ. ಆನ್‌ಲೈನ್ ಮೂಲಕ ಹಣ ಪಾವತಿ ಮಾಡಿ, ಬೇರೆ ಆಟೋ ಹಿಡಿದು ಮನೆ ತಲುಪಿದಳು ಎಂದು ಅಜರ್ ಖಾನ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಜರ್ ಖಾನ್ ಟ್ವೀಟ್‌ಗೆ ನಮ್ಮ ಯಾತ್ರಿ ಸ್ಪಂದಿಸಿದ್ದು, ವಿವರವನ್ನು ನೇರ ಮೆಸೇಜ್ ಮಾಡುವಂತೆ ಮನವಿ ಮಾಡಿದೆ. ಕೂಡಲೇ ವಿವರ ಪಡೆದು ಅವರ ಜತೆಗೆ ಮಾತನಾಡಿದ್ದು, ಪೊಲೀಸರನ್ನು ಈ ವಿಚಾರವಾಗಿ ಸಂಪರ್ಕಿಸಿದ್ದು ಒಳ್ಳೆಯದಾಯಿತು. ನಾವು ಕೂಡ ಆ ರಿಕ್ಷಾ ಚಾಲಕನ ಖಾತೆಯನ್ನು ನಮ್ಮ ಪ್ಲಾಟ್‌ಫಾರಂನಲ್ಲಿ ರದ್ದುಗೊಳಿಸಿದ್ದೇವೆ. ನಿಮ್ಮ ಪತ್ನಿಗೆ ಆಗಿರುವ ಅನನುಕೂಲಕ್ಕೆ ವಿಷಾದಿಸುತ್ತೇವೆ. ಆಕೆ ಈಗ ಕ್ಷೇಮವಾಗಿದ್ದಾರೆ ಎಂದು ಭಾವಿಸುತ್ತೇವೆ. ನಿಮ್ಮ ರೈಡ್ ವಿವರ ಒದಗಿಸಿ, ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ನಮ್ಮ ಯಾತ್ರಿ ಭರವಸೆ ನೀಡಿದೆ.
ಇನ್ನೊಂದೆಡೆ ಬೆಂಗಳೂರು ನಗರ ಪೊಲೀಸರು ಕೂಡ ಟ್ವೀಟ್‌ಗೆ ಸ್ಪಂದಿಸಿದ್ದು, ಅಜರ್ ಖಾನ್ ಅವರ ಸಂಪರ್ಕ ಸಂಖ್ಯೆ, ಆಟೋ ಸಂಖ್ಯೆ ಮಾಹಿತಿಯನ್ನು ನೇರವಾಗಿ ಮೆಸೇಜ್ ಮಾಡುವಂತೆ ಸೂಚಿಸಿದ್ದಾರೆ.