ಟ್ಯಾಕ್ಸಿ ಬುಕ್ ಮಾಡಿದ ಟೆಕ್ಕಿಗೆ ಶಾಕ್! ಏಕೆಂದರೆ ಟ್ಯಾಕ್ಸಿ ಚಾಲಕ ಬೇರೆ ಯಾರೂ ಅಲ್ಲ, ಆ ಮಹಿಳಾ ಟೆಕ್ಕಿಯ ಐಟಿ ಕಂಪನಿಯ ಟೀಮ್ ಲೀಡರ್
ಟ್ಯಾಕ್ಸಿ ಬುಕ್ ಮಾಡಿದ ಟೆಕ್ಕಿಗೆ ಶಾಕ್ ಕಾದಿತ್ತು. ಏಕೆಂದರೆ ಟ್ಯಾಕ್ಸಿ ಚಾಲಕ ಬೇರೆ ಯಾರೂ ಅಲ್ಲ, ಆ ಮಹಿಳಾ ಟೆಕ್ಕಿಯ ಐಟಿ ಕಂಪನಿಯ ಟೀಮ್ ಲೀಡರ್ ಆಗಿದ್ದರು. ಇಷ್ಟಕ್ಕೂ ಅವರು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದದ್ದು ಏಕೆ? ಇಲ್ಲಿದೆ ಉತ್ತರ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಯೊಬ್ಬರು ಇತ್ತೀಚೆಗೆ ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಆದರೆ ಟ್ಯಾಕ್ಸಿ ಚಾಲಕನನ್ನು ನೋಡಿ ಅವರಿಗೆ ಶಾಕ್ ಆಗಿದೆ. ಏಕೆಂದರೆ ಟ್ಯಾಕ್ಸಿ ಚಾಲಕನಾಗಿ ಬಂದಿದ್ದವರು ಬೇರೆ ಯಾರೂ ಅಲ್ಲ, ಆ ಮಹಿಳಾ ಉದ್ಯೋಗಿ ಕೆಲಸ ಮಾಡುತ್ತಿದ್ದ ಐಟಿ ಕಂಪನಿಯ ಉದ್ಯೋಗಿ. ಮೇಲಾಗಿ ಆಕೆಯ ಟೀಮ್ ಲೀಡರ್ ಕೂಡಾ ಹೌದು.
ಏಕತಾನತೆಯ ಕೆಲಸದಿಂದ ಹೊರಬರಲು ಒಂದಿಷ್ಟು ಬದಲಾವಣೆ ಬಯಸಿ ಟೀಮ್ ಲೀಡರ್, ಸಮಯ ಸಿಕ್ಕಾಗಲೆಲ್ಲಾ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಟೆಕ್ಕಿ ತಮ್ಮ ಅನುಭವವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಸಾಕಷ್ಟು ವೈರಲ್ ಆಗಿದೆ. ಟೀಮ್ ಲೀಡರ್ ಜತೆ ವಾಟ್ಸಾಪ್ ನಲ್ಲಿ ನಡೆದ ಸಂಭಾಷಣೆಯ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
ಐಟಿ ಕಂಪನಿಯ ಟೀಮ್ ಲೀಡರ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದುದೇಕೆ
ಒಂದೇ ರೀತಿಯ ಕೆಲಸದಿಂದ ಹೊರಬಂದು ರಿಲಾಕ್ಸ್ ಮಾಡಿಕೊಳ್ಳಲು ಈ ಕೆಲಸ ಮಾಡುತ್ತಿರುವದಾಗಿ ಅವರು ತಮ್ಮ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ಬೋರ್ ಹೊಡೆಸುವುದರಿಂದ ತಪ್ಪಿಸಿಕೊಳ್ಳಲು ಮತ್ತು ಒಂದಿಷ್ಟು ಎಂಜಾಯ್ ಮಾಡಲು ಈ ಕೆಲಸ ಮಾಡುತ್ತಿದ್ದೇನೆ ಎಂದೂ ತಿಳಿಸಿದ್ದಾರೆ. ಈ ಸಂಭಾಷಣೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಆಸಕ್ತಿ, ಕುತೂಹಲ ಮತ್ತು ಮನರಂಜನೆ ಉದ್ದೇಶದಿಂದ ಈ ಕೆಲಸ ಮಾಡಿರಬಹುದು ತಪ್ಪೇನೂ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ವೈವಿಧ್ಯಮಯ ಕೆಲಸಗಳಿಗೆ ಅವಕಾಶವಿದೆ ಎನ್ನುವುದನ್ನು ತೋರಿಸುತ್ತದೆ ಎಂದಿದ್ದರೆ ಇದು ಸಾಧ್ಯವೇ ಎಂದು ಮತ್ತೊಬ್ಬರು ತಮ್ಮ ಅನಿಸಿಕೆಯನ್ನು ತೇಲಿ ಬಿಟ್ಟಿದ್ದಾರೆ.
ಉದ್ಯೋಗದಲ್ಲಿನ ಏಕತಾನತೆ ಓಡಿಸಲು ಪ್ರಯತ್ನಿಸುತ್ತಿರುವ ಟೆಕ್ಕಿಗಳು
ಮತ್ತೊಬ್ಬ ಐಟಿ ಉದ್ಯೋಗಿ ನಾನು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾಗ ನಮ್ಮ ಕಂಪನಿಯ ಸಿಇಒ ಹೋಟೆಲ್ ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ವಿಷಯವನ್ನು ಹಂಚಿಕೊಂಡಿದ್ದಾರೆ. ಅವರು ಕಾರು ಚಾಲಕನಾಗಿ ಕೆಲಸ ಮಾಡಿದ್ದೇ ಆಗಿದ್ದರೆ ಅವರಿಗೆ ಗುಡ್ ಲಕ್ ಹೇಳುತ್ತೇನೆ. ಅವರ ಶ್ರಮವನ್ನು ಮೆಚ್ಚಿಕೊಳ್ಳುತ್ತೇನೆ ಎಂದರೆ ಮತ್ತೊಬ್ಬರು ಟೀಮ್ ಲೀಡರ್ ಗೆ ಅಷ್ಟೆಲ್ಲಾ ಸಮಯ ಎಲ್ಲಿರುತ್ತದೆ ಎಂದು ಸಂಶಯ ತೋರಿಸಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಟೈಮ್ ಪಾಸ್ ಮಾಡಲು ಸಾಧ್ಯವೇ? ಎಂದು ನಕ್ಕಿದ್ದಾರೆ. ಕಾಮೆಂಟ್ ಮಡಿರುವ ಇನ್ನೊಬ್ಬರು ನಿಮ್ಮ ಟೀಮ್ ಲೀಡರ್ ಅವರೇ ನಿಮ್ಮ ಚಾಲಕರಾಗಿ ಬರುವುದು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ ಎಂದಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)