ಬಾಲ್ಯದ ಕನಸಿನ ಕಾರು ಖರೀದಿಸಿದ ಆ ಖುಷಿಯ ಕ್ಷಣ; ಪ್ರೀಮಿಯರ್‌ ಪದ್ಮಿನಿ ವಿಂಟೇಜ್‌ ಕಾರು ಏರಿದ ಬೆಂಗಳೂರು ಯುವತಿ ಖುಷಿ
ಕನ್ನಡ ಸುದ್ದಿ  /  ಕರ್ನಾಟಕ  /  ಬಾಲ್ಯದ ಕನಸಿನ ಕಾರು ಖರೀದಿಸಿದ ಆ ಖುಷಿಯ ಕ್ಷಣ; ಪ್ರೀಮಿಯರ್‌ ಪದ್ಮಿನಿ ವಿಂಟೇಜ್‌ ಕಾರು ಏರಿದ ಬೆಂಗಳೂರು ಯುವತಿ ಖುಷಿ

ಬಾಲ್ಯದ ಕನಸಿನ ಕಾರು ಖರೀದಿಸಿದ ಆ ಖುಷಿಯ ಕ್ಷಣ; ಪ್ರೀಮಿಯರ್‌ ಪದ್ಮಿನಿ ವಿಂಟೇಜ್‌ ಕಾರು ಏರಿದ ಬೆಂಗಳೂರು ಯುವತಿ ಖುಷಿ

ಬೆಂಗಳೂರಿನ ಯುವತಿ ರಚನಾ ಮಹಡಿಮನೆ ಅವರು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅದು ಪ್ರೀಮಿಯರ್‌ ಪದ್ಮಿನಿ ಕಾರನ್ನು ಖರೀದಿಸುವ ಮೂಲಕ. ಆ ಕ್ಷಣದ ಖುಷಿ ಹೀಗಿತ್ತು.

ತಾವು ಖರೀದಿಸಿದ ಕಾರಿನೊಂದಿಗೆ ಬೆಂಗಳೂರಿನ ರಚನಾ ಮಹಡಿಮನೆ.
ತಾವು ಖರೀದಿಸಿದ ಕಾರಿನೊಂದಿಗೆ ಬೆಂಗಳೂರಿನ ರಚನಾ ಮಹಡಿಮನೆ.

ಇದು ನನ್ನ ಬಾಲ್ಯದ ಕನಸಾಗಿತ್ತು. ಈಗ ಈಡೇರಿಸಿಕೊಂಡೆ. ನಿಜಕ್ಕೂ ಖುಷಿಯಾಗುತ್ತಿದೆ. ಈ ದಿನಕ್ಕಾಗಿಯೇ ನಾನು ಕಾಯುತ್ತಿದ್ದೆ. ನನ್ನ ಬಾಲ್ಯದ ಕನಸನ್ನು ಈಗ ನನಸುಮಾಡಿಕೊಂಡ ಈ ಕ್ಷಣಕ್ಕಿಂತ ಬೇರೆನೂ ಖುಷಿ ಇದೆ ಹೇಳಿ ಎಂದು ಆ ಯುವತಿ ತಮ್ಮ ಕನಸು- ನನಸಾದ ಕ್ಷಣವನ್ನು ಬಿಡಿಸಿಡುತ್ತಲೇ ಹೋದರು. ಅವರು ಬಾಲ್ಯದಲ್ಲಿ ಕಾಣುತ್ತಿದ್ದ ಪದ್ಮಿನಿ ಪ್ರೀಮಿಯರ್‌ ಕಾರು ಖರೀದಿಸಬೇಕು ಎಂಬ ಕನಸು ಹೊಸ ವರ್ಷದಲ್ಲಿ ನನಸಾಗಿದೆ. ಆ ಕಾರಿನ ಮೇಲೆ ಕುಳಿತು ಖುಷಿ ಪಟ್ಟಿದ್ದಕ್ಕೆ ಪಾರವೇ ಇರಲಿಲ್ಲ. ಪ್ರೀಮಿಯರ್‌ ಪದ್ಮಿನಿ ಹಳೆಯ ಕಾರನ್ನು ಖರೀದಿಸಿ ಕೆಲವು ತಿಂಗಳಿನಿಂದ ಆ ಕಾರಿನ ರಿಪೇರಿ, ಹೊಸ ರೂಪ ನೀಡಿ ತನ್ನ ಕೈಗೆ ಬಂದಾಗ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿಯೋ ಖುಷಿ. ಇದು ಬೆಂಗಳೂರಿನ ಯುವತಿಯ ಸಂತಸದ ನೋಟ.

ಕಾರು ಖರೀದಿಸುವ ಕನಸು

ಆಕೆಯ ಹೆಸರು ರಚನಾ ಮಹಾಡಿಮನೆ. ಮಧ್ಯಮ ವರ್ಗದ ಕುಟುಂಬದ ಯುವತಿ. ಸಣ್ಣವಳಿದ್ದಾಗ ರಸ್ತೆಯಲ್ಲಿ ನಡೆದು ಹೋಗುವಾಗಲೆಲ್ಲಾ ಪದ್ಮಿನಿ ಪ್ರೀಮಿಯರ್‌ ಕಾರು ಕಂಡರೆ ಅದೇನೋ ಪುಳಕ. ಅದರಲ್ಲಿ ನಾನೂ ಕುಳಿತು ಹೋಗಬೇಕು. ಆ ಕಾರಿನ ಪ್ರಯಾಣದ ಸುಖ ಅನುಭವಿಸಬೇಕು. ನಿಜಕ್ಕೂ ಆ ಕಾರಿನ ನೋಟವೇ ಸುಂದರ ಹಾಗೂ ಮಧುರ ಎನ್ನುವ ಭಾವನೆಗಳ ಲೋಕದಲ್ಲಿ ತೇಲುತ್ತಿದ್ದವರು ರಚನಾ. ಮುಂದೆ ನಾನು ಓದು ಮುಗಿಸಿ ಕೆಲಸಕ್ಕೆ ಸೇರಿದ ಬಳಿಕವಾದರೂ ಈ ಕಾರು ನನ್ನ ಬದುಕಿನ ಭಾಗವಾಗಬೇಕು. ಅದು ಎಷ್ಟು ವರ್ಷ ಆಗಬಹುದೋ ನೋಡೋಣ ಎಂದುಕೊಂಡು ಬಂದವರು.

ಶಿಕ್ಷಣ ಮುಗಿದು ಕೆಲಸಕ್ಕೆ ಸೇರಿಕೊಂಡು ಒಂದಷ್ಟು ವೇತನ ಬರ ತೊಡಗಿದ ನಂತರ ಬಾಲ್ಯದ ಕನಸು ರಚನಾ ಅವರಲ್ಲಿ ಚಿಗುರೊಡೆದಿತ್ತು. ಈ ನಡುವಿನ ಅವಧಿಯಲ್ಲಿ ಅವರ ಕಣ್ಣ ಮುಂದೆ ಅದೆಷ್ಟು ಪ್ರೀಮಿಯರ್‌ ಪದ್ಮಿನಿ ಕಾರುಗಳು ಸುಳಿದು ಹೋಗಿದ್ದವೋ ಗೊತ್ತಿಲ್ಲ. ಎಂತಹ ಕಾರು ಕಂಡರೂ ಪ್ರೀಮಿಯರ್‌ ಪದ್ಮಿನಿ ಮಾತ್ರ ಮನಸಿನಲ್ಲಿ ಅಚ್ಚಳಿಯದೇ ಉಳಿದಿತ್ತು. ಅಲ್ಲದೇ ರಚನಾಗೆ ಪದ್ಮಿನಿ ಕಾರಿನ ಮೋಹ ಎಷ್ಟಿತ್ತೆಂದರೆ ಅವರು ಬರೆದಿಟ್ಟುಕೊಂಡಿರುವ ಚಿತ್ರಗಳ ಸಂಖ್ಯೆಯೇ ಅಗಾಧ. ನಾನು ಆ ಕಾರುಗಳನ್ನು ಕಂಡು ಚಿತ್ರಿಸಿದ್ದೇನೆ. ಬಣ್ಣ ಹಚ್ಚಿದ್ದೇನೆ. ನನ್ನ ನೆರೆಹೊರೆಯಲ್ಲಿ ನೋಡಿದಾಗಲೆಲ್ಲಾ ಚಿತ್ರಗಳಲ್ಲಿ ದಾಖಲಿಸಿದ್ದೇನೆ ಎನ್ನುತ್ತಾರೆ ರಚನಾ.

ಪ್ರೀಮಿಯರ್‌ ಪದ್ಮಿನಿ ಸಿಕ್ಕಿತು

ಹೆಚ್ಚಿನ ಜನರಿಗೆ, ಕನಸಿನ ಕಾರು ಎಂದರೆ ಐಷಾರಾಮಿ ವಾಹನ ಅಥವಾ ಹೊಳೆಯುವ ಸ್ಪೋರ್ಟ್ಸ್ ಕಾರು. ಅದು ಈಗ ಬಂದಿರುವ ಬಗೆಬಗೆಯ ಕಾರುಗಳಲ್ಲಿ ಸುತ್ತಬೇಕು ಎನ್ನುವ ಬಯಕೆ ಇರುವವರೇ ಅಧಿಕ. ಹೀಗಿದ್ದರೂ ರಚನಾ ಅವರಿಗೆ ಮಾತ್ರ ಪದ್ಮಿನಿ ಮೋಹ ಕಡಿಮೆ ಆಗಿರಲಿಲ್ಲ.ಬೇರೆ ವಾಹನ ಖರೀದಿಸಿದರು ಪದ್ಮಿನಿ ಖರೀದಿಸಲೇಬೇಕು ಎಂದುಕೊಂಡಿದ್ದರು ರಚನಾ.

ಈ ವರ್ಷದ ಹುಟ್ಟುಹಬ್ಬಕ್ಕೆ ಪದ್ಮಿನಿ ಖರೀದಿಸಲೇಬೇಕು ಎಂದುಕೊಳ್ಳುವಾಗ ಬೆಂಗಳೂರಿನಲ್ಲಿಯೇ ಹಳೆಯ ಕಾರೊಂದು ಮಾರಾಟಕ್ಕೆ ಇರುವುದು ತಿಳಿಯಿತು. ಅದು ಸರಿಯಾಗಿ ಬಳಕೆಯೂ ಆಗುತ್ತಿರಲಿಲ್ಲ. ರಚನಾ ಅದನ್ನು ಕೊನೆಗೂ ಖರೀದಿಸಿದರು. ಬಳಕೆಗೆ ಯೋಗ್ಯವಾಗಿ ಇರದ ಇದನ್ನು ಸಿದ್ದಪಡಿಸುವುದೂ ದೊಡ್ಡ ಸವಾಲೇ. ಪ್ರೀಮಿಯರ್‌ ಪದ್ಮಿನಿ ಕಾರು ರಿಪೇರಿ ಮಾಡುವ ಪ್ರತಿನಿಧಿ ಹುಡುಕಿ ಅವರೊಂದಿಗೆ ನಿರಂತರ ಎಡತಾಕಿ ಎಂಜಿನ್‌ ರಿಪೇರಿ, ಹೊಸ ಬಣ್ಣ, ಅಲಂಕಾರದೊಂದಿಗೆ ಬಳಕೆ ಸಿದ್ದಪಡಿಸುವಾಗ ಅಬ್ಬಾ ಎನ್ನುವ ನಿರಾಳತೆ. ಕಾರು ಕೈಗೆ ಬಂದಾಗ ಖುಷಿಗೆ ಮಿತಿಯೇ ಇರಲಿಲ್ಲ. ನಾ ಕಂಡ ಕನಸು ನನಸಾಯಿತು ಎಂದು ಕಾರಿನ ಮೇಲೆ ಕುಳಿತು ಪದ್ಮಿನಿಯೊಂದಿಗೆ ಫೋಟೋಗೆ ಫೋಸು ನೀಡಿದಾಗ ವಾವ್‌ ಎನ್ನುವ ನಿರಾಳತೆ.

ಪದ್ಮಿನಿ ಪ್ರೀತಿಗೆ ಸೋತಾಗ

ಈ ಕ್ಷಣದ ಫೋಟೋ ಹಾಗೂ ವಿಡಿಯೋವನ್ನು ರಚನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಇದಕ್ಕೆ ಭಾರೀ ಪ್ರತಿಕ್ರಿಯೆಯೇ ಬಂದಿದೆ. ಖುಷಿ ಎಂದರೆ ಇದೆ. ಬಾಲ್ಯದ ಕನಸು ನನಸು ಮಾಡಿಕೊಳ್ಳುವ ಕ್ಷಣ ಸುಲಭವೇನಲ್ಲ. ಅದೂ ವಿಂಟೇಜ್‌ ಪದ್ಮಿನಿ ಕಾರಿನ ಜತೆಗೆ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ನಾನೂ ಕೂಡ ಹಳೆಯ ಅಂಬಾಸಿಡರ್‌ ಕಾರನ್ನು ಖರೀದಿಸಿದೆ. ಅದರಲ್ಲಿಯೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೋಗಿ ಬಂದೆ ಎಂದು ಇನ್ನೊಬ್ಬರು ಅಭಿಪ್ರಾಯ ದಾಖಲಿಸಿದ್ದಾರೆ.

ನಾನು ಡ್ರೈವಿಂಗ್‌ ಕಲಿತದ್ದು ಇದೇ ಪದ್ಮಿನಿ ಕಾರಿನಲ್ಲಿಯೇ. ಆ ಕ್ಷಣ ಇನ್ನೂ ನೆನಪಾಗಿದೆ. ಈಗ ನೀವು ಪದ್ಮಿನಿ ಕಾರಿನ ಒಡತಿ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ಕಾಲದ ಐಷಾರಾಮಿ ಕಾರು

ಪ್ರೀಮಿಯರ್‌ ಪದ್ಮಿನಿ ಕಾರು ಒಂದು ಕಾಲಕ್ಕೆ ಐಷಾರಾಮಿ ಸಂಕೇತವೇ ಆಗಿತ್ತು. ಇದರಲ್ಲಿ ಹೋಗುವುದು ಎಂದರೆ ಅದೇನೋ ಸಂತಸ. ಅಷ್ಟರ ಮಟ್ಟಿಗೆ ಪದ್ಮಿನಿ ರೈಡ್‌ ಖುಷಿ ಹಲವರಲ್ಲಿತ್ತು. ಪದ್ಮಿನಿಯನ್ನು ಫಿಯೆಟ್ ಪರವಾನಗಿಯಡಿಯಲ್ಲಿ ಭಾರತದಲ್ಲಿ ಮೊದಲು ತಯಾರಿಸಲಾಯಿತು ಅದರ ಜನಪ್ರಿಯತೆ 1970 ಮತ್ತು 80 ರ ದಶಕದಲ್ಲಿ ಉತ್ತುಂಗಕ್ಕೇರಿತು. ರಜನಿಕಾಂತ್, ಮಮ್ಮುಟ್ಟಿ ಮತ್ತು ಅಮೀರ್ ಖಾನ್ ಅವರಂತಹ ಸೆಲೆಬ್ರಿಟಿಗಳು ಇದೇ ಕಾರು ಏರಿದವರೇ.

ಮಾರುತಿ ಸುಜುಕಿಯಿಂದ ಹೆಚ್ಚು ಆಧುನಿಕ ಮತ್ತು ಇಂಧನ ದಕ್ಷತೆಯ ಕಾರುಗಳು ನಿಧಾನವಾಗಿ ಜನರ ಬದುಕಿನ ಭಾಗವಾದವು. ಪದ್ಮಿನಿಯ ಜನಪ್ರಿಯತೆ ನಿಧಾನವಾಗಿ ಕುಸಿಯಿತು. ಪದ್ಮಿನಿಸ್ 2023 ರಲ್ಲಿ ರಸ್ತೆಗಳಿಂದ ದೂರವಾಗುವ ಮುನ್ನ ಮುಂಬೈನಲ್ಲಿ "ಕಾಲಿ ಪೀಲಿ" ಟ್ಯಾಕ್ಸಿಗಳಾಗಿದ್ದವು. ಈಗ ಜನತನಿಂದ ಕಾಪಾಡಿಕೊಂಡು ಬಂದವರು ಮಾತ್ರ ಪದ್ಮಿನಿ ಉಳಿಸಿಕೊಂಡಿದ್ದಾರೆ. ಅವರ ಸಾಲಿಗೆ ರಚನಾ ಕೂಡ ಸೇರಿದ್ದಾರೆ.

Whats_app_banner