ಮಿಸ್ ಯು ಪಲ್ಲವಿ ಎಂದ i-pill: ಬೆಂಗಳೂರು ಮಹಿಳೆಗೆ ಅನುಚಿತ ಗರ್ಭನಿರೋಧಕ ಮಾತ್ರೆ ನೋಟಿಫಿಕೇಷನ್ ಕಳುಹಿಸಿ ಕ್ಷಮೆ ಕೇಳಿದ ಜೆಪ್ಟೊ
ಬೆಂಗಳೂರಿನ ಮಹಿಳಾ ಗ್ರಾಹಕರೊಬ್ಬರಿಗೆ ಝೆಪ್ಟೊ ಆನ್‌ಲೈನ್ ಗ್ರೋಸರಿ ಡೆಲಿವರಿ ತಾಣವು ಅನುಚಿತ ನೋಟಿಫಿಕೇಷನ್ ಕಳುಹಿಸಿದೆ. ಈ ಕುರಿತು ಪ್ರಶ್ನಿಸಿದ ಮಹಿಳೆ ಬಳಿ ಝೆಪ್ಟೊ ಕ್ಷಮಾಪಣೆ ಕೇಳಿದ್ದು, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ.

ಆನ್‌ಲೈನ್ ಖರೀದಿದಾರರನ್ನು ಸೆಳೆಯಲು ವಿವಿಧ ಇಕಾಮರ್ಸ್ ತಾಣಗಳು "ಕ್ಲಿಕ್‌ಬೈಟ್ ಸಂದೇಶಗಳನ್ನು" ಕಳುಹಿಸುತ್ತಾ ಇರುತ್ತವೆ. ಕೆಲವು ತಾಣಗಳು ಚಿನ್ನಾ, ಮುದ್ದು, ರನ್ನಾ ಎಂದೆಲ್ಲ ಮೆಸೆಜ್ ಮಾಡುತ್ತವೆ. ಝೊಮೆಟೊ, ಸ್ವಿಗ್ಗಿಯಂತಹ ತಾಣಗಳು ತಿಂಡಿ ತಿನಿಸುಗಳ ಕುರಿತು ಆಸೆ ಹುಟ್ಟಿಸುವಂತೆ ಕ್ರಿಯೆಟಿವ್ ಸಂದೇಶಗಳನ್ನು ನೋಟಿಫಿಕೇಷನ್ ಮೂಲಕ ಕಳುಹಿಸುತ್ತದೆ. ಇದೇ ರೀತಿ ಆನ್‌ಲೈನ್ ಪೋರ್ಟಲ್‌ಗಳು, ಇಕಾಮರ್ಸ್ ತಾಣಗಳು ಗ್ರಾಹಕರನ್ನು ತಮ್ಮ ಸೈಟ್‌ಗೆ ಅಥವಾ ಆಪ್‌ಗೆ ಬರುವಂತೆ ಮಾಡಲು ಇಂತಹ ಪುಷ್ ನೋಟಿಫಿಕೇಷನ್‌ಗಳನ್ನು ಕಳುಹಿಸುತ್ತವೆ. ಇದೇ ರೀತಿ ಬೆಂಗಳೂರು ಮೂಲದ ಕ್ವಿಕ್ ಕಾಮರ್ಸ್ ತಾಣ ಝೆಪ್ಟೊ ಕೂಡ ಗ್ರಾಹಕರಿಗೆ ಆಗಾಗ ನೋಟಿಫಿಕೇಷನ್‌ಗಳನ್ನು ಕಳುಹಿಸುತ್ತಾ ಇರುತ್ತದೆ. ಆದರೆ, ಇತ್ತೀಚೆಗೆ ಈ ತಾಣ ಕಳುಹಿಸಿದ ನೋಟಿಫಿಕೇಷನ್ ವಿವಾದಕ್ಕೆ ಕಾರಣವಾಗಿದೆ. ತನ್ನ ಗ್ರಾಹಕರೊಬ್ಬರಿಗೆ ಅನುಚಿತ ನೋಟಿಫಿಕೇಷನ್ ಕಳುಹಿಸಿದೆ. "ಐ ಮಿಸ್ ಯು ಪಲ್ಲವಿ, ಎನ್ನುತ್ತಿದೆ ಐ ಪಿಲ್ ಗರ್ಭನಿರೋಧಕ ಮಾತ್ರೆ (“I miss you, Pallavi. Says i-Pill emergency contraceptive pill) ಎಂಬ ನೋಟಿಫಿಕೇಷನ್ ಕಳುಹಿಸಿದೆ. ಐ ಮಿಸ್ ಯು ಪಲ್ಲವಿ ಜತೆಗೆ 3 ಇಮೋಜಿಯನ್ನೂ ಕಳುಹಿಸಿದೆ. ಈ ನೋಟಿಫಿಕೇಷನ್ ನೋಡಿ ಗ್ರಾಹಕರಾದ ಪಲ್ಲವಿ ಆಘಾತಗೊಂಡಿದ್ದಾರೆ. ಕಂಪನಿಯ ನೈತಿಕ ಗುಣಮಟ್ಟದ ಕುರಿತು ಪ್ರಶ್ನೆ ಮಾಡಿದ್ದಾರೆ.
ಅನುಚಿತ ಸಂದೇಶ
ಪಲ್ಲವಿ ಅವರು "ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಮತ್ತು ವೈವಿಧ್ಯತೆ, ಸಮಾನತೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಾಗಿದ್ದಾರೆ. ಇವರು ಈ ಸ್ಕ್ರೀನ್‌ಶಾಟ್ ಅನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡು ಝೆಪ್ಟೊ ಮತ್ತು ಕಸ್ಟಮರ್ ಸಪೋರ್ಟ್ ತಂಡವನ್ನು ಟ್ಯಾಗ್ ಮಾಡಿದ್ದಾರೆ. ಈ ಸಂದೇಶದ ಅನುಚಿತ, ಕೆಟ್ಟ ಉದ್ದೇಶ, ತಪ್ಪ ಮಾಹಿತಿಯನ್ನು ಒತ್ತಿ ಹೇಳಿದ್ದಾರೆ. "ಆತ್ಮೀಯ ಝೆಪ್ಟೊ, ನನಗೆ ಕಳುಹಿಸಿದ ಸಂದೇಶ ತಪ್ಪು. ನಾನು ನಿಮ್ಮಿಂದ ಎಂದಿಗೂ ಐಪಿಲ್ ಮಾತ್ರೆಗಳನ್ನು ಆರ್ಡರ್ ಮಾಡಿಲ್ಲ. ಎಲ್ಲಾದರೂ ಮಾಡಿದರೂ ಇದು ಮಿಸ್ ಮಾಡಬೇಕಾದ ವಿಷಯವಲ್ಲ. ನಾನು ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ನೀವು ಹೇಗೆ ಹೇಳುವಿರಿ?" ಎಂದು ಅವರು ಪ್ರಶ್ನಿಸಿದ್ದಾರೆ.
ಇಷ್ಟು ಮಾತ್ರವಲ್ಲ, ಈ ಸಂದೇಶದ ಒಳಾರ್ಥವನ್ನೂ ಅವರು ಪ್ರಶ್ನಿಸಿದ್ದಾರೆ. "ನಾನ ಈ ಮಾತ್ರೆಯನ್ನು ತೆಗೆದುಕೊಳ್ಳಬೇಕೆಂದು ನೀವು ಬಯಸುವಿರಾ? ನಾನು ನಿಮ್ಮಿಂದ ಇಂತಹ ಆರ್ಡರ್ ಪಡೆಯದೇ ಇರುವಾಗ ನನಗೆ ಯಾಕೆ ಈ ಸಂದೇಶ ಬಂದಿದೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಈ ಸಂದೇಶ ಅಸೂಕ್ಷ್ಮವಾಗಿದೆ ಎಂದ ಝೆಪ್ಟೊದ ಗಮನ ಸೆಳೆದಿದ್ದಾರೆ. "ಸಂವೇದನಾಶೀಲ, ಹಾಸ್ಯ ಅಥವಾ ಏನಾದರೂ ತರ್ಕವಿದ್ದರೆ ಇಂತಹ ಸಂದೇಶ ಕಳುಹಿಸಬಹುದು. ನಿಮ್ಮ ನೋಟಿಫಿಕೇಷನ್‌ಗಳು ಇಷ್ಟು ಸಿಲ್ಲಿಯಾಗಬಾರದು. ಹೀಗಿದ್ದರೂ ನಾನು ಝೆಪ್ಟೊದ ಸೇವೆಯನ್ನು ಇಷ್ಟಪಡುತ್ತೇನೆ. ನಿಮ್ಮ ಅಪ್ಲಿಕೇಷನ್ ಇಷ್ಟಪಡುತ್ತೇನೆ. ನನಗೆ ಪ್ರತಿದಿನ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ಇದು ನೆರವಾಗಿದೆ" ಎಂದಿದ್ದಾರೆ.
ಝೆಪ್ಟೊ ಪ್ರತಿಕ್ರಿಯೆ
ಲಿಂಕ್ಡ್‌ಇನ್‌ನಲ್ಲಿ ಪಲ್ಲವಿ ಮಾಡಿರುವ ಪೋಸ್ಟ್‌ಗೆ ಝೆಪ್ಟೊ ಪ್ರತಿಕ್ರಿಯೆ ನೀಡಿ ಕ್ಷಮಾಪಣೆ ಕಳಿದೆ. "ಹೇ ಪಲ್ಲವಿ, ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ. ಈ ಸಂದೇಶದ ಸಂವೇದನಾಶೀಲವಾಗಿಲ್ಲ, ಸಂಭಾವ್ಯ ಹಾನಿಕಾರಕ ಎಂದು ನಮಗೆ ಅರ್ಥವಾಗಿದೆ. ತಕ್ಷಣ ಈ ವಿಷಯದ ಕುರಿತು ಗಮನ ಹರಿಸಲಾಗುವುದು. ನಮ್ಮ ತಂಡಕ್ಕೆ ಸೂಚಿಸಲಾಗುವುದು" ಎಂದು ಸಂದೇಶ ಕಳುಹಿಸಿದೆ.
ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆ
ಪಲ್ಲವಿ ಮಾಡಿರುವ ಪೋಸ್ಟ್‌ಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಥರೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರ ಪ್ರತಿಕ್ರಿಯೆ ಹೀಗಿದೆ. "ಕಂಪನಿಗಳು ಅತಿಯಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಅನ್ನು ಅವಲಂಬಿಸಿದಾಗ ಇಂತಹ ಸಮಸ್ಯೆಗಳು ಹೆಚ್ಚುತ್ತವೆ. ಎಲ್ಲಾ ಬ್ರಾಂಡ್‌ಗಳು ಇಂತವುಗಳನ್ನು ಮಾನಿಟರ್ ಮಾಡಲು ಮನುಷ್ಯರ ಹಸ್ತಕ್ಷೇಪವನ್ನು ಹೊಂದಿರಬೇಕು" ಎಂದು ಬರೆದಿದಾರೆ. "ಹೇಗೆ ಈ ರೀತಿ ಸಂದೇಶ ಕಳುಹಿಸುತ್ತಾರೆ. ಕಂಪನಿಗಳಿಗೆ ಅತ್ಯುತ್ತಮ ತರಬೇತಿಯ ಅಗತ್ಯವಿದೆ" ಎಂದು ಇನ್ನೊಬ್ಬರು ಹೇಳಿದ್ದಾರೆ.