ಗೃಹಲಕ್ಷ್ಮಿ ಹಣ ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು, ಕೊಡ್ತೇವೆ ಅಂದ್ರು ಸಿಎಂ; ನಡೆಯುತ್ತಿರುವುದೇನು - 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಗೃಹಲಕ್ಷ್ಮಿ ಹಣ ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು, ಕೊಡ್ತೇವೆ ಅಂದ್ರು ಸಿಎಂ; ನಡೆಯುತ್ತಿರುವುದೇನು - 5 ಮುಖ್ಯ ಅಂಶಗಳು

ಗೃಹಲಕ್ಷ್ಮಿ ಹಣ ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು, ಕೊಡ್ತೇವೆ ಅಂದ್ರು ಸಿಎಂ; ನಡೆಯುತ್ತಿರುವುದೇನು - 5 ಮುಖ್ಯ ಅಂಶಗಳು

ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಕಳೆದ ಕೆಲವು ತಿಂಗಳಿಂದ ಈ ಯೋಜನೆ ಹಣ ಬಂದಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಏನಿದು ವಿದ್ಯಮಾನ- 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಕರ್ನಾಟಕದ ವಿವಿಧೆಡೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಬಂದಿಲ್ಲ, ಅದನ್ನು ಮೊದಲು ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು. ಜನಾಕ್ರೋಶ ಹೆಚ್ಚಾಗುತ್ತಿರುವಂತೆ, ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಡಲೇ ಬಿಡುಗಡೆ ಮಾಡೋದಕ್ಕೆ ಸೂಚನೆ ಕೊಡ್ತೇವೆ ಅಂತ ಹೇಳಿದ್ದಾರೆ.
ಕರ್ನಾಟಕದ ವಿವಿಧೆಡೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಬಂದಿಲ್ಲ, ಅದನ್ನು ಮೊದಲು ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು. ಜನಾಕ್ರೋಶ ಹೆಚ್ಚಾಗುತ್ತಿರುವಂತೆ, ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಡಲೇ ಬಿಡುಗಡೆ ಮಾಡೋದಕ್ಕೆ ಸೂಚನೆ ಕೊಡ್ತೇವೆ ಅಂತ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ನೀಡಿದ್ದ ಚುನಾವಣಾ ಭರವಸೆಗಳಾದ 5 ಗ್ಯಾರೆಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿಗೊಳಿಸಿದೆ. ಈ ಪೈಕಿ ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಮುಖ್ಯವಾದುದು. ಇನ್ನೊಂದು ಅನ್ನಭಾಗ್ಯದ ಯೋಜನೆ. ಈ ಎರಡೂ ಯೋಜನೆಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂಬುದು ಸದ್ಯದ ಆರೋಪ. ಗ್ಯಾರೆಂಟಿ ಯೋಜನೆಗಳು ಜಾರಿಗೆ ಮೊದಲೇ ಸಾಕಷ್ಟು ಟೀಕೆಗೆ ಗುರಿಯಾಗಿದ್ದು, ಇದರ ಅನುಷ್ಠಾನ ಕಷ್ಟ ಎಂಬ ಮಾತು ಆರಂಭದಲ್ಲೇ ಕೇಳಿತ್ತು. ಆದರೂ ಕಾಂಗ್ರೆಸ್ ಸರ್ಕಾರ ಇದನ್ನೇ ಮಾದರಿಯನ್ನಾಗಿ ಮಾಡಿ ಕರ್ನಾಟಕ ಮಾದರಿ ರೂಪಿಸಲು ಹೊರಟಿತ್ತು. ಬಿಜೆಪಿ ನಾಯಕರು ಇದನ್ನು ಟೀಕಿಸುತ್ತಲೇ ಇದ್ದು, ಈಗ ಫಲಾನುಭವಿಗಳಿಗೆ ಹಣ ಜಮೆ ಮಾಡುವುದು ವಿಳಂಬ ಮಾಡಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಗೃಹಲಕ್ಷ್ಮಿ ಹಣ ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು, ಕೊಡ್ತೇವೆ ಅಂದ್ರು ಸಿಎಂ

ಗದಗ, ಹುಬ್ಬಳ್ಳಿ, ದಕ್ಷಿಣ ಕನ್ನಡ ಹಾಗೂ ವಿವಿಧೆಡೆಯ ಮಹಿಳೆಯರು ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆ ಕೆಲವು ತಿಂಗಳಿಂದ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಈ ನಡುವೆ, ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ ಎಂಬುದು ಗಮನಕ್ಕೆ ಬಂದಿಲ್ಲ. ಈ ಕೂಡಲೇ ಬಿಡುಗಡೆ ಮಾಡುವುದಕ್ಕೆ ಸೂಚನೆ ಕೊಡ್ತೇನೆ ಅಂತ ಹೇಳಿದ್ದಾರೆ. ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಹಾಕಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದು, ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಅಸಮಾಧಾನವನ್ನು ಪುಷ್ಟೀಕರಿಸಿದೆ.

ಗೃಹಲಕ್ಷ್ಮಿ ಯೋಜನೆ - ನಡೆಯುತ್ತಿರುವುದೇನು - 5 ಮುಖ್ಯ ಅಂಶಗಳು

1) ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಳಿ ಗ್ಯಾರೆಂಟಿ ಯೋಜನೆಗಳನ್ನು ಮುಂದುವರಿಸುವುದಕ್ಕೆ ದುಡ್ಡಿಲ್ಲ. ಹೀಗಾಗಿ ಕಳೆದ ಕೆಲವು ತಿಂಗಳಿಂದ ಫಲಾನುಭವಿಗಳ ಖಾತೆಗೆ ಹಣವನ್ನೇ ಜಮೆ ಮಾಡಿಲ್ಲ ಎಂದು ವಿಪಕ್ಷ ನಾಯಕರು ಟೀಕೆ ಮಾಡಿದ್ದರು.

2) ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿ ಹಂತಕ್ಕೆ ಬಂದಿದ್ದು, ಗೃಹಲಕ್ಷ್ಮಿ, ಅನ್ನಭಾಗ್ಯಕ್ಕೆ ದುಡ್ಡು, ಅಕ್ಕಿ ಕೊಡಲು ಖಜಾನೆಯಲ್ಲಿ ದುಡ್ಡಿಲ್ಲ. ಇನ್ನು ಫಲಾನುಭವಿಗಳಿಗೆ ದುಡ್ಡು ಎಲ್ಲಿಂದ ಕೊಡ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ಟೀಕಿಸಿದರು.

3) ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಹುಬ್ಬಳ್ಳಿ, ಗದಗ, ಹಾವೇರಿ ಭಾಗದ ಮಹಿಳೆಯರು ಟಿವಿ ಮಾಧ್ಯಗಳಿಗೆ ಹೇಳಿಕೆ ನೀಡಿದ್ದು, ತಮ್ಮ ಸಂಕಟ ಅಹವಾಲನ್ನು ತೋಡಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿ ನಮ್ಮಲ್ಲಿ ಹೊಸ ಭರವಸೆ ಹುಟ್ಟಿಸಿದರು, ಆದರೆ ಈಗ ಹಣ ಹಾಕದೇ ಸಂಕಷ್ಟಕ್ಕೆ ತಳ್ಳುತ್ತಿದೆ ಸರ್ಕಾರ ಎಂದು ಮಹಿಳೆಯರು ಅಸಮಾಧಾನ ತೋಡಿಕೊಂಡಿದ್ದಾರೆ.

4) ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಹಾಕುವುದು ವಿಳಂಬವಾಗಿದೆ. ಕಳೆದ ಮೂರು ತಿಂಗಳಿಂದ ಹಣ ವರ್ಗಾವಣೆ ಮಾಡುವುದು ಸಾಧ್ಯವಾಗಿಲ್ಲ. ಆದರೆ, ಸರ್ಕಾರ ಕೊಟ್ಟ ಮಾತಿನ ಪ್ರಕಾರ, ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅದನ್ನು ಒದಗಿಸಲಿದೆ ಎಂದು ಹೇಳಿದರು.

5) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಕೂಡಲೇ ಜನರ ಖಾತೆಗೆ ಜಮೆ ಮಾಡುವಂತೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner