ಬೆಂಗಳೂರಿನ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಈ ವರ್ಷದ ದುಬಾರಿ ಡೀಲ್; ಆ ಒಂದು ಮನೆಗೆ ಕೊಟ್ಟಿದ್ದು ಅಷ್ಟೊಂದಾ, ಯಾವ ಏರಿಯಾ?
Bengalurus Top Real Estate Deal: ಬೆಂಗಳೂರಿನ ಕೋರಮಂಗಲದ ಡಿಫೆನ್ಸ್ ಕಾಲೋನಿಯಲ್ಲಿರುವ 8,800 ಚದರ ಅಡಿ ಆಸ್ತಿಯನ್ನು 47 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಇದು ರಾಜ್ಯ ರಾಜಧಾನಿಯಲ್ಲಿ ಇದುವರೆಗಿನ ಅತ್ಯಂತ ದುಬಾರಿ ಆಸ್ತಿ ವ್ಯವಹಾರಗಳಲ್ಲಿ ಒಂದಾಗಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಭೂಮಿ ಅಥವಾ ಫ್ಲ್ಯಾಟ್ ಖರೀದಿಸುವುದೆಂದರೆ ನಮ್ಮ ಕೈಸುಡುವುದರ ಜತೆಗೆ ಕಿಸೆಯೂ ಖಾಲಿಯಾಗುತ್ತದೆ ಎಂಬುದು ಖಂಡಿತ. ಯಾವ ಪ್ರದೇಶಕ್ಕೆ ಹೊಂದಿಕೊಂಡಿದೆ ಎಂಬುದರ ಆಧಾರದ ಮೇಲೆ ಬೆಲೆಯೂ ಫಿಕ್ಸ್ ಆಗಿರುತ್ತದೆ. ಒಂದೊಂದು ಕಡೆಯೂ ಒಂದೊಂದು ರೇಟ್ ನಿಗದಿಯಾಗಿರುತ್ತದೆ. ಇಲ್ಲಿ ಜಾಗ ಅಥವಾ ಮನೆ ಅಥವಾ ಫ್ಲ್ಯಾಟ್ ಖರೀದಿಸಬೇಕು ಎಂದರೆ ಕೋಟಿಗಳು ಸುರಿಯಬೇಕು ಎಂಬುದಕ್ಕೆ ಸಾಕ್ಷಿ ಇಲ್ಲೊಂದು ಇಂಡಿಪೆಂಡೆಂಟ್ ಮನೆ ಮಾರಾಟವಾಗಿರುವುದು.
ಇಂದಿರಾನಗರ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇಂಡಿಪೆಂಡೆಂಟ್ ಮನೆಯೊಂದನ್ನು ಬರೋಬ್ಬರಿ 47.5 ಕೋಟಿ ರೂಪಾಯಿಗೆ ಮಾರಾಟವಾಗಿ ಹೊಸ ಇತಿಹಾಸ ಸೃಷ್ಟಿಸಿದೆ. ನಗರದ 2ನೇ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಡೀಲ್ಗಳಲ್ಲಿ ಇಂದಿರಾನಗರದ ಆಸ್ತಿ ಸೇರ್ಪಡೆಯಾಗಿ ಎಲ್ಲರ ಹುಬ್ಬೇರಿಸಿದೆ. ಈ ಬಗ್ಗೆ ಪ್ರಾಪ್ಟೆಕ್ ಫ್ಲಾಟ್ಫಾರ್ಮ್ ಜಾಪ್ಕಿ ಮೂಲಕ ಪಡೆದ ಆಸ್ತಿ ನೋಂದಣಿ ದಾಖಲೆಗಳು ತಿಳಿಸಿವೆ. ಇಂದಿರಾನಗರದ ಡಿಫೆನ್ಸ್ ಕಾಲೋನಿಯಲ್ಲಿರುವ 8,800 ಚದರಡಿ ಭೂಮಿಯ 2,500 ಚದರಡಿ ಸೈಟ್‌ನಲ್ಲಿ ಇಂಡಿಪೆಂಡೆಂಟ್ ಹೌಸ್ ನಿರ್ಮಿಸಲಾಗಿದೆ. ಈ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇಷ್ಟು ಕಡಿಮೆ ಚದರಡಿಗೆ ದೊಡ್ಡ ಮೊತ್ತ ಪಾವತಿಸಿರುವುದು ಇದೇ ಮೊದಲು.
ಇಂದಿರಾನಗರದ 100 ಫೀಟ್ ರಸ್ತೆಯ ಪಕ್ಕದ ಡಿಫೆನ್ಸ್ ಕಾಲೋನಿ ಬೆಂಗಳೂರಿನಲ್ಲಿ ಒಂದು ಹೈ ಪ್ರೊಫೈಲ್ ಏರಿಯಾಗಳಲ್ಲಿ ಒಂದು. ಉನ್ನತ ಮಟ್ಟದ ವಸತಿ ಪ್ರದೇಶವು ವಿಶಾಲವಾದ ರಸ್ತೆಗಳು ಮತ್ತು ದಶಕಗಳ ಇತಿಹಾಸವುಳ್ಳ ಹಳೆಯ ಮರಗಳಿಂದ ಕೂಡಿದೆ. ನಗರದ ಅತ್ಯುನ್ನತ ಕಂಪನಿಗಳ ಅಧಿಕಾರಿಗಳು, ರಿಯಲ್ ಎಸ್ಟೇಟ್ ಡೆವಲಪರ್ಗಳು ಹೆಚ್ಚಾಗಿ ನೆಲಸಿರುವುದು ಇಲ್ಲೇ ನೋಡಿ. ಅತಿದೊಡ್ಡ ಶ್ರೀಮಂತರು, ಶ್ರೀಮಂತ ಅನಿವಾಸಿ ಭಾರತೀಯರು, ಸಿ-ಸೂಟ್ ಕಾರ್ಯನಿರ್ವಾಹಕರು, ಪ್ರವರ್ತಕರು ಮತ್ತು ಉದ್ಯಮಿಗಳು ಹೆಚ್ಚಾಗಿ ತಂಗುವುದು ಇದೇ ಏರಿಯಾದಲ್ಲಿ.
ಈ ಮನೆ ಖರೀದಿಸಿದವರು ಯಾರು?
ಅಷ್ಟಕ್ಕೂ ಸ್ವತಂತ್ರ ಮನೆಯನ್ನು ಖರೀದಿಸಿದವರು ಯಾರು? ಯಾವಾಗ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. 2024ರ ಜುಲೈ 25 ರಂದು ಭೂಮಿ ಖರೀದಿ ನೋಂದಣಿಯಾಗಿದೆ. ನೋಂದಾಯಿಸಿದ ಆಸ್ತಿಗಳ ಪ್ರಕಾರ ಶ್ರೀನಿಬಾಶ್ ಸಾಹೂ ಮತ್ತು ಹಿಮಾದ್ರಿ ತನಯಾ ಲೆಂಕಾ ಅವರು ಈ ಮನೆ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಹೂ ಒಡಿಶಾದಲ್ಲಿ ಅನೇಕ ಕಂಪನಿಗಳು, ಭುವನೇಶ್ವರದಲ್ಲಿ ಲೈಫ್ ಎಂಬ ಹೋಟೆಲ್ವೊಂದನ್ನೂ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅತಿ ದೊಡ್ಡ ಡೀಲ್ ಯಾವುದು?
2024ರಲ್ಲಿ ಬೆಂಗಳೂರಿನಲ್ಲಿ ಈ ವಹಿವಾಟು ಎರಡನೇ ಅತಿ ದೊಡ್ಡ ವಸತಿ ರಿಯಲ್ ಎಸ್ಟೇಟ್ ವ್ಯವಹಾರವಾಗಿದೆ ಎಂದು ಜಾಕ್ಪೇ ಯ ಡೇಟಾ ಸೂಚಿಸುತ್ತದೆ. ಕ್ವೆಸ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಐಸಾಕ್ ಕೋರಮಂಗಲದ ಬಿಲಿಯನೇರ್ ಸ್ಟ್ರೀಟ್‌ನಲ್ಲಿ 10,000 ಚದರ ಅಡಿ ಖರೀದಿಸಿದ್ದರು. ಪ್ರತಿ ಚದರಡಿಗೆ 70,300 ರೂಪಾಯಿ ನೀಡಿದ್ದರಂತೆ. ಇದರ ಒಟ್ಟಾರೆ ಬೆಲೆ 67.5 ಕೋಟಿ. ಇದು ವರ್ಷದ ಅತ್ಯಂತ ದೊಡ್ಡ ಒಪ್ಪಂದ ಎನಿಸಿಕೊಂಡಿದೆ. ಇದಕ್ಕೂ ಮುನ್ನ 9,488 ಚದರ ಅಡಿಯ ಪ್ಲಾಟ್ ಅನ್ನು ಅದೇ ಪ್ರದೇಶದಲ್ಲಿ ಟಿವಿಎಸ್ ಮೋಟಾರ್ಸ್‌ಗೆ ಪ್ರತಿ ಚದರ ಅಡಿಗೆ 68,597 ಸಾವಿರಕ್ಕೆ ಮಾರಾಟ ಮಾಡಲಾಗಿತ್ತು. ಅಂದು ಇದು ರಾಜಧಾನಿಯಲ್ಲಿ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಡೀಲ್ ಎಂಬ ಟ್ಯಾಗ್ ಪಡೆದಿತ್ತು. ಆದರೆ ಇದು ಈ ವರ್ಷ ಖರೀದಿಸಿದ್ದಲ್ಲ.
ಕೋರಮಂಗಲದ ಮೂರನೇ ಬ್ಲಾಕ್, ಪ್ರೀಮಿಯಂ ಪ್ಲಾಟ್‌ಗಳು ಮತ್ತು ಉನ್ನತ ಮಟ್ಟದ ನಿವಾಸಿಗಳಿಗೆ ಹೆಸರುವಾಸಿ. ಇದು ಬೆಂಗಳೂರಿನ ಅತ್ಯಂತ ದುಬಾರಿ ಪ್ರದೇಶವಾಗಿ ಉಳಿದಿದ್ದು, ಇನ್ಫೋಸಿಸ್ ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್, ನಾರಾಯಣ ಹೆಲ್ತ್ ಸಂಸ್ಥಾಪಕ ದೇವಿ ಶೆಟ್ಟಿ ಮತ್ತು ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಸೇರಿದಂತೆ ಗಣ್ಯರು ನೆಲೆಸಿರುವುದು ಇಲ್ಲೇ. ಇನ್ನು ಯುಬಿ ಸಿಟಿ ಭಾಗವಾಗಿ ಕಿಂಗ್‌ಫಿಷರ್ ಟವರ್ಸ್ನಲ್ಲಿ ಇರುವ ಅಲ್ಟ್ರಾ ಐಷಾರಾಮಿ ಅಪಾರ್ಟ್ಮೆಂಟ್ 50 ಕೋಟಿಗೆ ಮಾರಾಟವಾಗಿತ್ತಂತೆ. ಈ ಹಿಂದೆ ಸ್ಥಳೀಯ ದಲ್ಲಾಳಿಗಳು ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದ್ದರು.
ಕಿಂಗ್ ಫಿಷರ್ ಪಕ್ಕದಲ್ಲೇ ನಿರ್ಮಿಸಲಾಗಿರುವ ಯುಬಿ ಸಿಟಿಯಲ್ಲಿ ಬಯೋಕಾನ್‌ನ ಕಿರಣ್ ಮಜುಂದಾರ್ ಶಾ, ಫ್ಲಿಪ್‌ಕಾರ್ಟ್‌ನ ಸಚಿನ್ ಬನ್ಸಾಲ್, ಮೆನ್ಸಾ ಬ್ರ್ಯಾಂಡ್‌ನ ಅನಂತ್ ನಾರಾಯಣನ್ ಮತ್ತು ಜೆರೋಧಾದ ನಿಖಿಲ್ ಕಾಮತ್ ಸೇರಿದಂತೆ ಬಿಸಿನೆಸ್ಮೆನಗಳು, ಸಿಇಒಗಳೇ ಇದ್ದಾರೆ. 4.5-ಎಕರೆ ಜಮೀನಿನಲ್ಲಿ ವಿಸ್ತಾರವಾದ ಬಿಲಿಯನೇರ್ಸ್ ಟವರ್ 34-ಅಂತಸ್ತಿದೆ. ಸುಮಾರು 81 ಅಪಾರ್ಟ್‌ಮೆಂಟ್‌ಗಳನ್ನು (4 BHK) ಮೂರು ಬ್ಲಾಕ್‌ಗಳಲ್ಲಿ 8,000 ಚದರ ಅಡಿಗಳಿಂದ ನಿರ್ಮಿಸಲಾಗಿದೆ. ಇದರ ಎರಡು ಪೆಂಟ್ಹೌಸ್ಗಳಿದ್ದು, ಅತ್ಯಂತ ದುಬಾರಿ ಪೆಂಟ್ ಹೌಸ್ಗಳು ಎನಿಸಿವೆ.