ಹೊಸ ತಂತ್ರಾಂಶ ಅಳವಡಿಕೆ; ಬೆಸ್ಕಾಂ ಗ್ರಾಮಾಂತರ ಪ್ರದೇಶಗಳಲ್ಲಿ ಬಿಲ್ಲಿಂಗ್-ಹೊಸ ಸಂಪರ್ಕ ಸೇವೆ 3 ದಿನ ಅಲಭ್ಯ
ಹೊಸ ತಂತ್ರಾಂಶ ಅಳವಡಿಕೆ ಹಿನ್ನೆಲೆಯಲ್ಲಿ ಬೆಸ್ಕಾಂ ಗ್ರಾಮಾಂತರ ಪ್ರದೇಶಗಳಲ್ಲಿ ಬಿಲ್ಲಿಂಗ್, ಹೊಸ ಸಂಪರ್ಕ ಸೇರಿದಂತೆ ಸಾಫ್ಟ್‌ವೇರ್ ಆಧರಿತ ಸೇವೆಗಳು ಮುಂದಿನ 3 ದಿನ ಲಭ್ಯವಾಗುವುದಿಲ್ಲ.

ಬೆಂಗಳೂರು: ಬೆಸ್ಕಾಂನ ಗ್ರಾಮಾಂತರ ಪ್ರದೇಶಗಳಲ್ಲಿ (ನಾನ್ ಆರ್‌ಎಪಿಡಿಆರ್‌ಪಿ) ಸಮಗ್ರ ಕಂದಾಯ ನಿರ್ವಹಣಾ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಇರುವ ಹಿನ್ನೆಲೆಯಲ್ಲಿ ನಾಳೆಯಿಂದ (ಜ.30) ಮೂರು ದಿನಗಳ ಕಾಲ ಬಿಲ್ಲಿಂಗ್, ಹೊಸ ಸಂಪರ್ಕ ಹಾಗೂ ತಂತ್ರಾಂಶ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ. ಹೀಗಾಗಿ ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 30ರ ಗುರುವಾರದಿಂದ 01ರ ಶನಿವಾರದವರೆಗೆ ತಂತ್ರಾಂಶ ಆಧಾರಿತ ಯಾವುದೇ ಸೇವೆಗಳು ಸಾಧ್ಯವಿಲ್ಲ. ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ, ಬೆಸ್ಕಾಂ ವ್ಯಾಪ್ತಿಯ ಉಳಿದ 7 ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಕಂದಾಯ ಸಂಗ್ರಹ ಹೊರತುಪಡಿಸಿ ತಂತ್ರಾಂಶ ಆಧಾರಿತ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಹೊಸ ಸಾಫ್ಟ್‌ವೇರ್ ಅಳವಡಿಸಿ ಅಪ್ಡೇಟ್ ಕಾರ್ಯ ನಡೆಯುತ್ತಿರುವುದಿಂದ ನಿತ್ಯದ ಕೆಲಸ ಕಾರ್ಯಗಳ ಜೊತೆಗೆ ಗ್ರಾಹಕರ ಸೇವೆಗೆ ಅಡಚಣೆಯುಂಟಾಗುತ್ತಿದೆ. ಹೊಸ ಸಂಪರ್ಕ ಅಳವಡಿಕೆ ನೋಂದಣಿ, ಬಿಲ್ಲಿಂಗ್ ಮಾತ್ರವಲ್ಲದೆ ಕಂಪ್ಯೂಟರ್ ತಂತ್ರಾಂಶ ಆಧಾರಿತ ಎಲ್ಲಾ ರೀತಿಯ ಗ್ರಾಹಕ ಸೇವೆಗಳು ಇರುವುದಿಲ್ಲ. ಫೆಬ್ರುವರಿ 1ರವರೆಗೂ ಹೀಗೆ ಮುಂದುವರೆಯಲಿದೆ. ಫೆಬ್ರುವರಿ 2ರಿಂದ ಗ್ರಾಹಕ ಸೇವೆಗಳು ಎಂದಿನಂತೆ ಇರುವ ನಿರೀಕ್ಷೆ ಇದೆ. ಈ ಕುರಿತು ಬೆಸ್ಕಾಂ ಕಡೆಯಿಂದ ಇನ್ನಷ್ಟೇ ಪ್ರಕಟಣೆ ಬರಬೇಕಿದೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
