ಮುಂದಿನ 3 ವರ್ಷ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಸ್ಕಾಂಗಳ ಪ್ರಸ್ತಾವನೆ, ಕೆಇಆರ್‌ಸಿ ಒಪ್ಪಿದರೆ ಏ 1 ರಿಂದ ಜಾರಿ, 5 ಮುಖ್ಯ ಅಂಶ
ಕನ್ನಡ ಸುದ್ದಿ  /  ಕರ್ನಾಟಕ  /  ಮುಂದಿನ 3 ವರ್ಷ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಸ್ಕಾಂಗಳ ಪ್ರಸ್ತಾವನೆ, ಕೆಇಆರ್‌ಸಿ ಒಪ್ಪಿದರೆ ಏ 1 ರಿಂದ ಜಾರಿ, 5 ಮುಖ್ಯ ಅಂಶ

ಮುಂದಿನ 3 ವರ್ಷ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಸ್ಕಾಂಗಳ ಪ್ರಸ್ತಾವನೆ, ಕೆಇಆರ್‌ಸಿ ಒಪ್ಪಿದರೆ ಏ 1 ರಿಂದ ಜಾರಿ, 5 ಮುಖ್ಯ ಅಂಶ

BESCOM Tariff: ವಿದ್ಯುತ್ ದರ ಏರಿಕೆ ಸುಳಿವು ಸಿಕ್ಕಿದೆ. ಮುಂದಿನ 3 ವರ್ಷವೂ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಕೆಇಆರ್‌ಸಿ ಒಪ್ಪಿದರೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಪ್ರಸ್ತಾವನೆಗೆ ಸಂಬಂಧಿಸಿ 5 ಮುಖ್ಯ ಅಂಶಗಳು ಇಲ್ಲಿವೆ.

ವಿದ್ಯುತ್ ದರ ಏರಿಕೆ; ಮುಂದಿನ 3 ವರ್ಷವೂ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಸ್ಕಾಂಗಳ ಪ್ರಸ್ತಾವನೆ, ಕೆಇಆರ್‌ಸಿ ಒಪ್ಪಿದರೆ ಏ 1 ರಿಂದ ಜಾರಿಯಾಗುವ ಸಾಧ್ಯತೆ ಇದೆ. (ಸಾಂಕೇತಿಕ ಚಿತ್ರ)
ವಿದ್ಯುತ್ ದರ ಏರಿಕೆ; ಮುಂದಿನ 3 ವರ್ಷವೂ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಸ್ಕಾಂಗಳ ಪ್ರಸ್ತಾವನೆ, ಕೆಇಆರ್‌ಸಿ ಒಪ್ಪಿದರೆ ಏ 1 ರಿಂದ ಜಾರಿಯಾಗುವ ಸಾಧ್ಯತೆ ಇದೆ. (ಸಾಂಕೇತಿಕ ಚಿತ್ರ)

BESCOM Tariff: ವಿದ್ಯುತ್ ಬಳಕೆದಾರರಿಗೆ ಕಹಿ ಸುದ್ದಿ. ಇನ್ನು ಮೂರು ವರ್ಷ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳದ ಬಿಸಿ ತಟ್ಟಲಿದೆ. ಪ್ರತಿವರ್ಷದಂತೆ ಈ ವರ್ಷವೂ ಬೆಸ್ಕಾಂ ಸೇರಿ ವಿವಿಧ ಎಸ್ಕಾಂಗಳು ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕ್ಕೆ ಸಲ್ಲಿಸಿದೆ. ಕೆಇಆರ್‌ಸಿ ಒಪ್ಪಿಗೆ ಸಿಕ್ಕಿದರೆ ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಖಚಿತವಾಗಲಿದೆ. ಈ ಪ್ರಸ್ತಾವನೆ ಪ್ರಕಾರ ಯೂನಿಟ್‌ಗೆ 60 ಪೈಸೆಯಿಂದ 1 ರೂಪಾಯಿ ತನಕ ದರ ಏರಿಕೆಯಾಗಬಹುದು.

ವಿದ್ಯುತ್ ದರ ಏರಿಕೆ ಪ್ರಸ್ತಾವನೆ; ಗಮನಿಸಬೇಕಾದ 5 ಅಂಶಗಳು

1) ಬೆಸ್ಕಾಂ ಯೂನಿಟ್‌ಗೆ 1.50 ಪೈಸೆ, ಇನ್ನಿತರೆ ಎಸ್ಕಾಂಗಳು 1.20 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಯೂನಿಟ್‌ಗೆ ಮೊದಲ ವರ್ಷ ಪ್ರತಿ ಯೂನಿಟ್‌ಗೆ 67 ಪೈಸೆ, ಎರಡನೆ ವರ್ಷ 74 ಪೈಸೆ, ಮೂರನೇ ವರ್ಷಕ್ಕೆ 94 ಪೈಸೆ ಹೆಚ್ಚಳ ಮಾಡುವಂತೆ ಕೋರಿವೆ.

2) ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನ.30 ಕೊನೆಯ ದಿನವಾಗಿತ್ತು. ಆ ಗಡುವಿನೊಳಗೆ ಎಲ್ಲಾ ಎಸ್ಕಾಂಗಳು ಕೂಡ ದರ ಏರಿಕೆಗೆ ಪ್ರಸ್ತಾವನೆ ಕೊಟ್ಟಿವೆ. ದರ ಏರಿಕೆ ಬಹುತೇಕ ಒಂದೇ ರೀತಿ ಆಗಲಿದೆ.

3) ಎಸ್ಕಾಂಗಳ ಪ್ರಸ್ತಾವನೆಯನ್ನು ಕೆಇಆರ್‌ಸಿ ಜನವರಿ ಅಂತ್ಯ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಪರಿಶೀಲನೆ ನಡೆಸಲಿದ್ದು ಸಾರ್ವಜನಿಕರ, ರೈತರು ಹಾಗೂ ವಾಣಿಜ್ಯೋದ್ಯಮಿಗಳ ಅಹವಾಲುಗಳನ್ನು ಆಲಿಸಲಿದೆ. ನಂತರ ದರ ಏರಿಕೆಗೆ ಸಂಬಂಧಿಸಿದಂತೆ ನಿರ್ಧಾರ ಪ್ರಕಟಿಸಲಿದೆ.

4) ಎಸ್ಕಾಂಗಳು ಸಲ್ಲಿಸುವ ಪ್ರಸ್ತಾವನೆಯಲ್ಲಿನ ದರಕ್ಕೆ ಕೆಇಆರ್‌ಸಿ ಅನುಮೋದನೆ ನೀಡುವುದಿಲ್ಲ. ಎಲ್ಲವನ್ನೂ ಅಳೆದೂ ತೂಗಿ, ನಂತರ ದರ ಪರಿಷ್ಕರಣೆ ಮಾಡಿ ಹೊಸ ದರ ನಿಗದಿ ಮಾಡುತ್ತದೆ.

5) ಪ್ರಸ್ತುತ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ದರ ಏರಿಕೆ ವಿದ್ಯುತ್ ದರ ಪರಿಣಾಮ ಬೀರುವುದಿಲ್ಲ. ಆದರೆ, ಕೈಗಾರಿಕೆಗಳಿಗೆ ಇದರ ಹೊಡೆತ ಬೀಳಲಿದೆ.

ವಿದ್ಯುತ್ ದರ ಏರಿಕೆ ಬೆಸ್ಕಾಂ ಪ್ರಸ್ತಾವನೆಯಲ್ಲಿ ಏನಿದೆ

ಮುಂದಿನ 3 ವರ್ಷ ಕ್ರಮವಾಗಿ ಪ್ರತಿ ಯೂನಿಟ್‌ಗೆ 67 ಪೈಸೆ, 75 ಪೈಸೆ ಹಾಗೂ 91 ಪೈಸೆ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ ಮನವಿ ಸಲ್ಲಿಸಿದೆ. ಮುಂದಿನ ವರಷ (2025-26) ಬೆಸ್ಕಾಂಗೆ 2,572.69 ಕೋಟಿ ರೂಪಾಯಿ ಆದಾಯ ಕೊರತೆ ಉಂಟಾಗಬಹುದು. ಇದನ್ನು ನೀಗಿಸಲು 2025 ಏಪ್ರಿಲ್ 1 ರಿಂದ ಅನ್ವಯವಾಗುವಂತೆ 2025-26ರ ಸಾಲಿಗೆ ಪ್ರತಿ ಯುನಿಟ್‌ಗೆ 67 ಪೈಸೆಯಂತೆ ದರ ಹೆಚ್ಚಳ ಮಾಡಬೇಕು. ಇನ್ನು 2026-27ನೇ ಆರ್ಥಿಕ ವರ್ಷದಲ್ಲಿ 3,018.95 ಕೋಟಿ ರೂಪಾಯಿ ಆದಾಯ ಕೊರತೆ ಉಂಟಾಗಲಿದೆ. ಹೀಗಾಗಿ 2026-27ನೇ ಸಾಲಿಗೆ ಪ್ರತಿ ಯುನಿಟ್‌ಗೆ 75 ಪೈಸೆ ದರ ಹೆಚ್ಚಳ ಮಾಡಬೇಕು. 2027-28ರಲ್ಲಿ 3,882.69 ಕೊರತೆ ಉಂಟಾಗಲಿದ್ದು, ಪ್ರತಿ ಯುನಿಟ್‌ಗೆ 91 ಪೈಸೆ ಪರಿಷ್ಕರಣೆ ಮಾಡಬೇಕು ಎಂದು ಬೆಸ್ಕಾಂ ಕೋರಿದೆ.

ವಿದ್ಯುತ್‌ ದರ ಏರಿಕೆಗೆ ಕೈಗಾರಿಕೋದ್ಯಮಿಗಳ ಆಕ್ಷೇಪ

ಬೆಸ್ಕಾಂ ಸೇರಿ ಎಸ್ಕಾಂಗಳ ವಿದ್ಯುತ್‌ ದರ ಏರಿಕೆ ಪ್ರಸ್ತಾವನೆಗಳಿಗೆ ಕೈಗಾರಿಕೋದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿದ್ಯುತ್‌ ದರ ದುಬಾರಿ. ಮತ್ತೆ ಮತ್ತೆ ದರ ಏರಿಸುತ್ತ ಹೋದರೆ ಅದರ ಪರಿಣಾಮ ಗ್ರಾಹಕರ ಮೇಲಾಗಲಿದೆ. ಕೈಗಾರಿಕೋತ್ಪನ್ನಗಳ ದರ ಏರಿಕೆಯಾದರೆ, ವ್ಯಾಪಾರೋದ್ಯಮಗಳು ನಡೆಯುವುದು ಕಷ್ಟ. ಹೀಗಾಗಿ, ದರ ಏರಿಕೆ ಮಾಡಬಾರದು ಎಂದು ಕೈಗಾರಿಕೋದ್ಯಮಿಗಳು ಆಗ್ರಹಿಸಿದ್ದಾರೆ.

Whats_app_banner