ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಬೆಸ್ಕಾಂ ಕಾರ್ಯಾಚರಣೆ ಶುರು, 3 ವರ್ಷದಲ್ಲಿ ಹೆಚ್ಚಿದ ಕರೆಂಟ್ ಕಳವು ಪ್ರಕರಣ
ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಅಕ್ರಮ ಕಟ್ಟಡ ಕುಸಿದು ಬಿದ್ದು 9 ಕಾರ್ಮಿಕರು ಮೃತಪಟ್ಟ ಪ್ರಕರಣದಲ್ಲಿ ಲೋಕಾಯುಕ್ತರ ನಿರ್ದೇಶನ ಉಲ್ಲೇಖಿಸಿದ ಬೆಸ್ಕಾಂ ಸುತ್ತೋಲೆ, ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸೂಚನೆ ನೀಡಿದೆ. ಇನ್ನೊಂದೆಡೆ, 3 ವರ್ಷದ ಅವಧಿಯಲ್ಲಿ ಕರೆಂಟ್ ಕಳವು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿದೆ ವಿವರ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕ ತೆರವುಗೊಳಿಸುವ ಕಾರ್ಯಾಚರಣೆಯನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಶುರು ಮಾಡಿದೆ. ಈ ನಡುವೆ, ಮೂರು ವರ್ಷಗಳ ಅವಧಿಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಕರೆಂಟ್ ಕಳವು ಪ್ರಕರಣ ಹೆಚ್ಚಾಗಿರುವುದು ಕೂಡ ಗಮನಸೆಳೆದಿದೆ. ಕಾನೂನು ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಮತ್ತು ನಿರ್ಮಿಸಿದ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕೆಲಸ ಶುರುವಾಗಿದ್ದು, ಬೆಸ್ಕಾಂ ಸಿಬ್ಬಂದಿ ಈ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕ ತೆರವಿಗೆ ಬೆಸ್ಕಾಂ ಕಾರ್ಯಾಚರಣೆ; ಗಮನಸೆಳೆದ 4 ಅಂಶಗಳಿವು
1) ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಕ್ಕೆ ಸಂಬಂಧಿಸಿ, ಬೆಸ್ಕಾಂನ ಎಲೆಕ್ಟ್ರಿಕಲ್ ಕಾರ್ಯಾಚರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರು ಸುತ್ತೋಲೆಯನ್ನು ಇತ್ತೀಚೆಗೆ ಪ್ರಕಟಿಸಿದ್ದರು. ಅದರಂತೆ, ಸೂಕ್ತ ಪ್ರಾಧಿಕಾರದ ಯಾವುದೇ ಲಿಖಿತ ನಿರ್ದೇಶನ ಪಡೆದ ಗ್ರಾಹಕರು ಏಳು ದಿನಗಳ ಒಳಗೆ ಸ್ಪಂದಿಸಬೇಕು. ಈ ನೋಟಿಸ್ ಅನ್ನು ಏಳು ದಿನ ಮುಂಚಿತವಾಗಿ ಗ್ರಾಹಕರಿಗೆ ನೀಡಿರುವುದನ್ನು ಅಧಿಕಾರಿಗಳು ಖಚಿತಪಡಿಸಬೇಕು ಎಂಬ ಸೂಚನೆ ಇರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ವಿವರಿಸಿದೆ.
2) ಆದಾಗ್ಯೂ, ಸ್ಥಳೀಯಾಡಳಿತ ಸಂಸ್ಥೆ, ಪಂಚಾಯತ್ ರಾಜ್ ಇಲಾಖೆ, ಶಾಸನಬದ್ಧ ಅಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿ ಇತರರಿಂದ ಮನವಿ ಬರುವವರೆಗೆ ಯಾವುದೇ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂಬ ಷರತ್ತು ಕೂಡ ಬೆಸ್ಕಾಂ ಅಧಿಕಾರಿಗಳಿಗೆ ಇದೆ.
3) ಭಾರತೀಯ ವಿದ್ಯುಚ್ಛಕ್ತಿ ಕಾಯಿದೆ, ಕರ್ನಾಟಕ ವಿದ್ಯುತ್ ನಿಯಂತ್ರಣ ನಿಗಮ (ಕೆಇಆರ್‌ಸಿ) ಸಂಹಿತೆ 2004 ಮತ್ತು ಪರಸ್ಪರ ಒಪ್ಪಿಕೊಂಡಿರುವ ವಿದ್ಯುತ್ ಸರಬರಾಜು ಒಪ್ಪಂದದಲ್ಲಿ ಉಲ್ಲೇಖಿಸಲಾದ ಷರತ್ತುಗಳ ಪ್ರಕಾರ ಬೆಸ್ಕಾಂ ಕೆಲಸ ಮಾಡಬೇಕಾಗುತ್ತದೆ. ಇದರಂತೆ, ಸರ್ಕಾರಿ ಏಜೆನ್ಸಿಗಳ, ಸ್ಥಳೀಯಾಡಳಿತ ಸಂಸ್ಥೆ, ಪಂಚಾಯತ್ ರಾಜ್ ಇಲಾಖೆ, ಶಾಸನಬದ್ಧ ಅಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ದೇಶನ, ವಿನಂತಿ ಇದ್ದರಷ್ಟೆ ವಿದ್ಯುತ್ ಕಡಿತಗೊಳಿಸಬಹುದು.
4) ಬಿಬಿಎಂಪಿ ಸೂಚನೆ, ನಿರ್ದೇಶನಗಳ ಹೊರತಾಗಿಯೂ ನಿಯಮ ಉಲ್ಲಂಘಕರು ಅಕ್ರಮ ಕಟ್ಟಡ ನಿರ್ಮಾಣ ಮುಂದುವರಿಸಿದ್ದನ್ನು ನೋಡಿದ್ದೇವೆ. ಇದನ್ನು ನಿಲ್ಲಿಸಬೇಕಾದರೆ ದೊಡ್ಡ ಪ್ರಮಾಣದ ನಿಗಾ ಪಡೆ ರಚನೆಯಾಗಬೇಕು. ವಿದ್ಯುತ್ ಮತ್ತು ನೀರು ಪೂರೈಕೆ ಸ್ಥಗಿತವಾಗಬೇಕು ಎಂದು ಬೆಂಗಳೂರು ಒಕ್ಕೂಟದ ಸಂಚಾಲಕ ಆರ್ ರಾಜಗೋಪಾಲನ್ ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ವಿವರಿಸಿದೆ.
ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಅಕ್ರಮ ಕಟ್ಟಡ ಕುಸಿದು ಬಿದ್ದು 9 ಕಾರ್ಮಿಕರು ಮೃತಪಟ್ಟ ಪ್ರಕರಣದಲ್ಲಿ ಲೋಕಾಯುಕ್ತರ ನಿರ್ದೇಶನವನ್ನು ಸುತ್ತೋಲೆ ಉಲ್ಲೇಖಿಸಿದೆ. ಇದಕ್ಕೂ ಮೊದಲು, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಾಧವನ್ ಅವರ ಪೀಠವು ಅಕ್ರಮ ನಿರ್ಮಾಣಗಳ ಬಗ್ಗೆ ಪ್ಯಾನ್-ಇಂಡಿಯಾ ಮಾರ್ಗಸೂಚಿಗಳನ್ನು ಹೊರಡಿಸಿತ್ತು ಎಂಬುದರ ಕಡೆಗೆ ವರದಿ ಗಮನಸೆಳೆದಿದೆ.
3 ವರ್ಷದ ಅವಧಿಯಲ್ಲಿ ಹೆಚ್ಚಿದ ಕರೆಂಟ್ ಕಳವು ಪ್ರಕರಣ
ಬೆಂಗಳೂರಿನಲ್ಲಿ ವಿದ್ಯುತ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಇಂತಹ 645 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗವೊಂದರಲ್ಲೇ 218ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವುದಾಗಿ ಬೆಂಗಳೂರು ಮಿರರ್ ವರದಿ ಮಾಡಿದೆ.
ಗೃಹ ಜ್ಯೋತಿ ಯೋಜನೆ ಜಾರಿಯಾದ ನಂತರ ವಿದ್ಯುತ್ ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದರೂ, ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಕಳ್ಳತನದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಬೆಸ್ಕಾಂ ವಿಜಿಲೆನ್ಸ್ ತಂಡವು ಪ್ರದೇಶಗಳಲ್ಲಿ ಸಕ್ರಿಯವಾಗಿ ತಪಾಸಣೆ ನಡೆಸುತ್ತಿದೆ ಮತ್ತು ಬೆಂಗಳೂರಿನಲ್ಲಿ 645 ವಿದ್ಯುತ್ ಕಳ್ಳತನ ಪ್ರಕರಣಗಳನ್ನು ದಾಖಲಿಸಿದೆ. ಪ್ರಸಕ್ತ ವರ್ಷದಲ್ಲಿ ಇದುವರೆಗೆ 192 ಪ್ರಕರಣಗಳು ದಾಖಲಾಗಿವೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
2022ರಲ್ಲಿ, ಬೆಂಗಳೂರು ದಕ್ಷಿಣದಲ್ಲಿ 59 ಮತ್ತು ಪೂರ್ವದಲ್ಲಿ 63 ಪ್ರಕರಣ ದಾಖಲಾಗಿವೆ. 2023ರಲ್ಲಿ ದಕ್ಷಿಣ ವಿಭಾಗವು 90 ಪ್ರಕರಣ, ಪೂರ್ವ ವಿಭಾಗವು 63 ಪ್ರಕರಣಗಳನ್ನು ದಾಖಲಿಸಿವೆ. 2024 ರಲ್ಲಿ, ದಕ್ಷಿಣದಲ್ಲಿ 69 ಪ್ರಕರಣಗಳು ಮತ್ತು ಪೂರ್ವದಲ್ಲಿ 51 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 645 ವಿದ್ಯುತ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ದಕ್ಷಿಣದಲ್ಲಿ 218 ಮತ್ತು ಪೂರ್ವದಲ್ಲಿ 177 ಪ್ರಕರಣಗಳು ದಾಖಲಾಗಿವೆ ಎಂದು ವರದಿ ವಿವರಿಸಿದೆ.