ಭದ್ರಾ, ಚಿತ್ರದುರ್ಗ ಉತ್ತರೆಗುಡ್ಡ, ಅರಸೀಕೆರೆ, ಕೊಪ್ಪಳ ಬಂಕಾಪುರ ವನ್ಯಜೀವಿಧಾಮ ಇನ್ನು ಪರಿಸರ ಸೂಕ್ಷ್ಮ ವಲಯ: ಇಲ್ಲಿ ಮರ ಕಡಿಯಲು ಬೇಕು ಅನುಮತಿ
ಕರ್ನಾಟಕದಲ್ಲಿ ಪ್ರಮುಖ ನಾಲ್ಕು ವನ್ಯಜೀವಿಧಾಮಗಳ ಪ್ರದೇಶಗಳು ಇನ್ನು ಮುಂದೆ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಗೆ ಬರಲಿವೆ. ಯಾವೆಲ್ಲಾ ಪ್ರದೇಶ ಇದೆ ಇಲ್ಲಿದೆ ವಿವರ.

ಬೆಂಗಳೂರು: ಕರ್ನಾಟಕ ಅರಣ್ಯಪ್ರದೇಶ ಹಾಗೂ ವನ್ಯಜೀವಿಗಳ ಆವಾಸ ಸ್ಥಾನವನ್ನು ಉಳಿಸಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಮಹತ್ವದ ತೀರ್ಮಾನ ಕೈಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಧಾಮ, ಕೊಪ್ಪಳದ ಬಂಕಾಪುರ ತೋಳ ವನ್ಯಜೀವಿಧಾಮ, ಚಿತ್ರದುರ್ಗದ ಉತ್ತರೆಗುಡ್ಡ ವನ್ಯಜೀವಿಧಾಮ ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಕರಡಿ ವನ್ಯಜೀವಿಧಾಮಗಳ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸಂಬಂಧ ಸಂಪುಟಕ್ಕೆ ಶಿಫಾರಸು ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದರಿಂದ ಜನರ ಸಹಭಾಗಿತ್ವದೊಂದಿಗೆ ಅವರ ಕೃಷಿ ಚಟುವಟಿಕೆ ಇಲ್ಲವೇ ಆಗು ಹೋಗುಗಳಿಗೆ ತೊಂದರೆಯಾಗದಂತೆ ಕರಡಿ, ಕೃಷ್ಣಮೃಗ ಸಹಿತ ಪ್ರಮುಖ ವನ್ಯಜೀವಿಗಳು ಹಾಗೂ ಅವುಗಳಿಗೆ ಮೀಸಲಾದ ಅರಣ್ಯವನ್ನು ಸಂರಕ್ಷಿಸಲು ಸಹಕಾರಿಯಾಗಲಿದೆ.
ಪರಿಸರ ಸೂಕ್ಷ್ಮ ವಲಯಗಳ ಅಧಿಸೂಚನೆ ಹೊರಡಿಸುವ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚೆ ಮಾಡಲಾಗಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದ್ದಾರೆ. ಇದನ್ನಾಧರಿಸಿ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಭದ್ರಾ, ಕೊಪ್ಪಳದ ಬಂಕಾಪುರ, ಹಾಸನದ ಅರಸೀಕೆರೆ, ಚಿತ್ರದುರ್ಗದ ಉತ್ತರೆಗುಡ್ಡ ಪ್ರದೇಶಗಳ ಅರಣ್ಯ ಪರಿಸರ ಸೂಕ್ಷ್ಮ ವಲಯವಾಗಿ ಪರಿವರ್ತನೆಯಾಗಲಿವೆ.
ಆಯ್ಕೆ ಹೇಗೆ
ಆಯಾ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಮೃಗ ಧಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಘೋಷಿಸಬೇಕು ಎಂದು ಸುಪ್ರೀಂಕೋರ್ಟ್ ಗೋದಾವರ್ಮನ್ Vs ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ನಿರ್ದೇಶನ ಆಧರಿಸಿಯೇ ಕರ್ನಾಟಕದಲ್ಲಿ ಪ್ರಮುಖ ವನ್ಯಧಾಮಗಳನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಣೆ ಮಾಡುವ ಪ್ರಕ್ರಿಯೆ ಶುರುವಾಗಿದೆ.
ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಾರ್ಗಸೂಚಿಗಳನ್ವಯ ಪರಿಸರ ಸೂಕ್ಷ್ಮ ವಲಯದಲ್ಲಿ ಉತ್ತೇಜಕ (Promoted) ಚಟುವಟಿಕೆ, ನಿರ್ಬಂಧಿತ (Regulated) ಮತ್ತು ನಿಷೇಧಿತ (prohibited) ಚಟುವಟಿಕೆ ಎಂದು ವರ್ಗೀಕರಿಸಲಾಗಿದೆ. ಉತ್ತೇಜಕ ಚಟುವಟಿಕೆಗಳಲ್ಲಿ – ಹಾಲಿ ಇರುವ ಕೃಷಿ, ಸಾವಯವ ಕೃಷಿ, ತೋಟಗಾರಿಕೆ, ಸೌರ ಫಲಕ ಅಳವಡಿಕೆಯಂತಹ ಚಟುವಟಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ.
ಯಾವುದಕ್ಕೆಲ್ಲ ನಿರ್ಬಂಧ
ನಿರ್ಬಂಧಿತ ಚಟುವಟಿಕೆಗಳಲ್ಲಿ – ಪರಿಸರ ಪ್ರವಾಸೋದ್ಯಮ, ಹೋಂಸ್ಟೇ, ರೆಸಾರ್ಟ್, ಹೊಟೆಲ್, ಶಾಲೆ, ಆಸ್ಪತ್ರೆ, ಸರ್ಕಾರಿ ಕಟ್ಟಡ, ಕಟ್ಟಡ ನಿರ್ಮಾಣ, ವಿದ್ಯುತ್ ಕೇಬಲ್ ಅಳವಡಿಕೆ, ಮೂಲಸೌಕರ್ಯ ಇತ್ಯಾದಿ ಬರುತ್ತದೆ. ಇದಕ್ಕೆ ಪ್ರಾದೇಶಿಕ ಆಯುಕ್ತರ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ಕಾರ್ಯಾಚರಣೆ ಮಾಡಬಹುದು.
ನಿಷೇಧಿತ ಚಟುವಟಿಕೆಗಳಲ್ಲಿ – ಅಪಾಯಕಾರಿ ತ್ಯಾಜ್ಯ ಹೊರಹಾಕುವ, ಶಬ್ದ, ವಾಯು ಮಾಲಿನ್ಯ ಉಂಟು ಮಾಡುವ ಕೆಂಪು ಪ್ರವರ್ಗದ ಕೈಗಾರಿಕೆ. ವಾಣಿಜ್ಯ ಗಣಿಗಾರಿಕೆ, ಸಾ ಮಿಲ್ ಸ್ಥಾಪನೆ, ವಾಣಿಜ್ಯ ಉದ್ದೇಶದ ಉರುವಲು ಸಂಗ್ರಹ ಇತ್ಯಾದಿ ಬರುತ್ತದೆ. ಈ ಪ್ರದೇಶಗಳಲ್ಲಿ ಮರ ಕಡಿಯಲು ವೃಕ್ಷ ಸಂರಕ್ಷಣಾ ಕಾಯಿದೆ ಅಡಿ ಪೂರ್ವಾನುಮತಿ ಪಡೆಯಬೇಕಾಗುತ್ತದೆ.
ಕರ್ನಾಟಕ ರಾಜ್ಯದ 4 ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಕನಿಷ್ಠ 1 ಕಿ.ಮೀ. ನಿಂದ 10 ಕಿ.ಮೀಟರ್ ವರೆಗೆ ಪರಿಸರ ಸೂಕ್ಷ್ಮ ವಲಯ (ESZ) ಘೋಷಣೆ ಮಾಡಲಾಗುತ್ತಿದ್ದು, ಜನವಸತಿ ಮತ್ತು ಪಟ್ಟಾ ಜಮೀನು ಇರುವ ಪ್ರದೇಶದಲ್ಲಿ ಕೇವಲ 1 ಕಿ.ಮೀ ಮಾತ್ರವೇ ಘೋಷಿಸುವ ಕಾರಣ ಇದರಿಂದ ಸ್ಥಳೀಯರಿಗಾಗಲೀ, ರೈತರಿಗಾಗಲೀ ಯಾವುದೇ ತೊಂದರೆ ಆಗುವುದಿಲ್ಲ . ಈಗಾಗಲೇ ಘೋಷಿಸಲಾಗಿರುವ ವನ್ಯಜೀವಿಧಾಮಗಳಿಗೆ ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಸಾರ್ವಜನಿಕರಿಗಾಗಲೀ, ಸ್ಥಳೀಯರಿಗಾಗಲೀ ಯಾವುದೇ ತೊಡಕುಂಟಾಗುವುದಿಲ್ಲ ಎನ್ನುವುದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟನೆ.
