ಭದ್ರಾವತಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ, ಎಫ್‌ಐಆರ್ ದಾಖಲು, ಎಂಎಲ್‌ಎ ಪುತ್ರನ ಹೆಸರಿಲ್ಲ, ಮೂವರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಭದ್ರಾವತಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ, ಎಫ್‌ಐಆರ್ ದಾಖಲು, ಎಂಎಲ್‌ಎ ಪುತ್ರನ ಹೆಸರಿಲ್ಲ, ಮೂವರ ಬಂಧನ

ಭದ್ರಾವತಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ, ಎಫ್‌ಐಆರ್ ದಾಖಲು, ಎಂಎಲ್‌ಎ ಪುತ್ರನ ಹೆಸರಿಲ್ಲ, ಮೂವರ ಬಂಧನ

ಭದ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ ಪ್ರಕರಣ ರಾಜ್ಯದ ಗಮನಸೆಳೆದಿತ್ತು. ಶಾಸಕ ಬಿಕೆ ಸಂಗಮೇಶ್ ಪುತ್ರ ಬಸವೇಶ್ ವಿರುದ್ಧ ಆರೋಪ ಕೇಳಿಬಂದಿತ್ತು. ಆದರೆ, ಎಫ್‌ಐಆರ್‌ನಲ್ಲಿ ಅವರ ಹೆಸರಿಲ್ಲದೆ ಇರುವುದು ಗಮನಸೆಳೆದಿದೆ.

ಭದ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣ ಗಮನಸೆಳೆದಿತ್ತು. ಅಧಿಕಾರಿ ನೀಡಿದ ದೂರಿನ ಪ್ರಕಾರ ಎಫ್‌ಐಆರ್ ದಾಖಲು ಮಾಡಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಭದ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣ ಗಮನಸೆಳೆದಿತ್ತು. ಅಧಿಕಾರಿ ನೀಡಿದ ದೂರಿನ ಪ್ರಕಾರ ಎಫ್‌ಐಆರ್ ದಾಖಲು ಮಾಡಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಶಿವಮೊಗ್ಗ: ಭದ್ರಾವತಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ಸೋಮವಾರ ರಾತ್ರಿ ಹೋಗಿದ್ದ ಗಣಿ ಮತ್ತು ಭೂವಿಜ್ಞಾನದ ಮಹಿಳಾ ಅಧಿಕಾರಿಯನ್ನು ನಿಂದಿಸಿದ ಪ್ರಕರಣ ರಾಜ್ಯದ ಗಮನಸೆಳೆದಿತ್ತು. ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಅವರ ಪುತ್ರ ಬಸವೇಶ್ ನಿಂದಿಸಿದ್ದು ಎನ್ನಲಾದ ಫೋನ್ ಕರೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ, ಮಹಿಳಾ ಅಧಿಕಾರಿ ನೀಡಿದ ದೂರಿನ ಪ್ರಕಾರ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಎಫ್‌ಐಆರ್‌ನಲ್ಲಿ ಶಾಸಕ ಬಿಕೆ ಸಂಗಮೇಶ್ ಅವರ ಪುತ್ರನ ಬಸವೇಶ್ ಹೆಸರಿಲ್ಲ ಎಂಬ ಅಂಶ ಗಮನಸೆಳೆದಿದೆ.

ಬಂಧಿತರನ್ನು ಅಜಯ್‌, ರವಿ, ವರುಣ್ ಎಂದು ಗುರುತಿಸಲಾಗಿದೆ. ಈ ಪೈಕಿ ಅಜಯ್‌ ಎಂಬಾತನನ್ನು ಹೊನ್ನಾಳಿಯಲ್ಲಿ, ರವಿ ಮತ್ತು ವರುಣ್‌ನನ್ನು ಚನ್ನಗಿರಿ ರಸ್ತೆ ಬಳಿ ಪೊಲೀಸರು ಬಂಧಿಸಿದರು. ಇನ್ನೂ ನಾಲ್ಕು ಜನರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?

ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಅವರ ಪುತ್ರ ಬಸವೇಶ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಜ್ಯೂತಿ ಎಂಬುವರಿಗೆ ಅವಾಚ್ಯವಾಗಿ ಬೈದ ವಿಡಿಯೋ ವೈರಲ್ ಆಗಿತ್ತು. ಭದ್ರಾ ನದಿ ತಟದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿ ಮತ್ತು ಅವರ ತಂಡ ಅದನ್ನು ತಡೆಯಲು ಸ್ಥಳಕ್ಕೆ ಹೋಗಿದ್ದಾಗ ನಡೆದ ಘಟನೆ ಎಂದು ವರದಿಯಾಗಿತ್ತು.

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ಅಧಿಕಾರಿ, ಗೌರವದಿಂದ ಮಾತನಾಡುವಂತೆ ಫೋನ್‌ನಲ್ಲಿದ್ದವರಿಗೆ ಮನವಿ ಮಾಡುತ್ತಿರುವ ದೃಶ್ಯವಿದೆ. ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿದ್ದ ವ್ಯಕ್ತಿ ಬಸವೇಶ್ ಅವರಿಗೆ ಕರೆ ಮಾಡಿದ್ದು, ಅವರು ಆ ರೀತಿ ಅವಾಚ್ಯವಾಗಿ ನಿಂದಿಸಿದರು ಎಂಬ ಆರೋಪ ಕೇಳಿಬಂದಿತ್ತು. ಇದು ರಾಜಕೀಯವಾಗಿ ಸಂಚಲನ ಮೂಡಿಸಿದ್ದು, ಬಿಜೆಪಿ, ಜೆಡಿಎಸ್ ನಾಯಕರು ಕೂಡ ಟೀಕೆ ಮಾಡಿದ್ದರು.

ಪೊಲೀಸರಿಗೆ ದೂರು ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ

ಅಕ್ರಮ ಮರಳುಗಾರಿಕೆ ತಡೆಯಲು ಹೋದಾಗ ಅವಾಚ್ಯವಾಗಿ ನಿಂದಿಸಿದ ಪ್ರಕರಣ ಸಂಬಂಧಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಜ್ಯೋತಿ, ತನ್ನನ್ನು ನಿಂದಿಸಿದವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಘಟನಾ ಸ್ಥಳದಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ದೂರು ನೀಡಿದ್ದೇವೆ. ಪೊಲೀಸರು ತನಿಖೆ ನಡೆಸಿದ ಬಳಿಕ ಸತ್ಯಾಸತ್ಯ ಹೊರಬರಲಿದೆ. ನನ್ನನ್ನು ನಿಂದಿಸಿದವರು ಯಾರು ಎಂಬುದು ಸ್ಪಷ್ಟವಾಗಲಿದೆ ಎಂದು ಮಾಹಿತಿ ನೀಡಿದರು.

ಈ ನಡುವೆ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಭದ್ರಾವತಿಯ ಘಟನೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕರ್ತವ್ಯ ನಿರತ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಶಾಸಕರ ಪುತ್ರನೆಂಬ ಅಹಂಕಾರದಿಂದ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿರುವುದು ಭದ್ರಾವತಿ ಗೂಂಡಾಗಿರಿಯಲ್ಲಿ ನಲುಗುತ್ತಿರುವುದನ್ನು ಸಾಕ್ಷೀಕರಿಸಿದೆ.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸ್ತ್ರೀಕುಲದ ಮೇಲೆ ನಡೆಯುತ್ತಿರುವ ದೌರ್ಜನ್ಯ ಒಂದು ಕಡೆಯಾದರೆ, ಸರ್ಕಾರದ ಮಹಿಳಾ ಅಧಿಕಾರಿ/ಸಿಬ್ಬಂದಿಗಳಿಗೂ ಯಾವ ರಕ್ಷಣೆಯೂ ಇಲ್ಲ ಎನ್ನುವುದಕ್ಕೆ ನಿನ್ನೆಯ ಘಟನೆ ಕನ್ನಡಿ ಹಿಡಿದಿದೆ, ಭದ್ರಾವತಿಯ ಗುಂಡಾಗಿರಿ ಆಡಳಿತ ಸಮರ್ಥಿಸುವ ರೀತಿಯಲ್ಲಿ ಸರ್ಕಾರ ಈವರೆಗೂ ಶಾಸಕರ ಪುತ್ರನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ಗಮನಿಸಿದರೆ ಈ ಸರ್ಕಾರ ಯಾರ ರಕ್ಷಕ ಎಂಬುದು ಜನರಿಗೆ ಮನವರಿಕೆಯಾಗುತ್ತದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಅಪಮಾನವಾಯಿತೆಂದು ನಮ್ಮ ಪಕ್ಷದ ಶಾಸಕರ ವಿರುದ್ಧ ಕ್ಷಣಮಾತ್ರದಲ್ಲಿ ನಿಯಮ ಮೀರಿ ಕ್ರಮ ಜರುಗಿಸಲು ಮುಂದಾದ ಸರ್ಕಾರ, ಸರ್ಕಾರದ ಮಹಿಳಾ ಅಧಿಕಾರಿಯ ಮೇಲೆ ನೇರಾ ನೇರ ದುಶ್ಯಾಸನ ದಾಳಿ ನಡೆದಿರುವಾಗ ಕಣ್ಣು ಮುಚ್ಚಿ ಕುಳಿತಿರುವುದೇಕೆ? ಈ ಸಂಬಂಧ ಮಹಿಳಾ ಆಯೋಗ ಕೂಡ ಈ ಕ್ಷಣದವರೆಗೂ ಮೌನ ವಹಿಸಿ ಕುಳಿತಿರುವುದೇಕೆ?" ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner