ಕರ್ನಾಟಕದಲ್ಲಿ ಭೂ ಸುರಕ್ಷಾ ಯೋಜನೆಯ ಎರಡನೇ ಹಂತ ಆರಂಭ; ಭೂ ದಾಖಲೆಗಳ ಡಿಜಿಟಲೀಕರಣದ ಕುರಿತು ಇಲ್ಲಿದೆ ವಿವರ
Bhu Suraksha Project: ಭೂ ದಾಖಲೆಗಳ ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಯ ಎರಡನೇ ಹಂತಕ್ಕೆ ಕರ್ನಾಟಕದಲ್ಲಿ ಚಾಲನೆ ನೀಡಲಾಗಿದೆ. ಏನಿದು ಭೂ ಸುರಕ್ಷಾ ಯೋಜನೆ? ಹಳೆಯ ಭೂ ದಾಖಲೆಗಳ ಡಿಜಿಟಲೀಕರಣದ ಪ್ರಯೋಜನಗಳೇನು? ಇತ್ಯಾದಿ ವಿವರವನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ಭೂ ದಾಖಲೆಗಳ ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಯ ಎರಡನೇ ಹಂತಕ್ಕೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಆಡಳಿತ ಕಚೇರಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಕೋಲಾರದಲ್ಲಿ ಇದೇ ಯೋಜನೆಗೆ ಉಸ್ತುವಾರಿ ಸಚಿವ ಬೈರತಿ ಸುರೇಶ್ ನಿನ್ನೆ ಚಾಲನೆ ನೀಡಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳ 209 ತಾಲೂಕುಗಳಲ್ಲಿ ಭೂ ಸುರಕ್ಷಾ ಯೋಜನೆಯ ಎರಡನೇ ಹಂತ ಅಧಿಕೃತವಾಗಿ ಆರಂಭವಾಗುತ್ತಿದೆ. ಇದೇ ಸಮಯದಲ್ಲಿ ಈ ಯೋಜನೆಯ ಕುರಿತಾದ ಸಮಗ್ರ ಮಾಹಿತಿಯನ್ನು ತಿಳಿಯೋಣ.
ಏನಿದು ಭೂ ಸುರಕ್ಷಾ ಯೋಜನೆ?
ಕರ್ನಾಟಕದ 209 ತಾಲೂಕುಗಳಲ್ಲಿ ಎರಡನೇ ಹಂತದ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಲಾಗಿದೆ. ಇಲ್ಲಿನ ತಾಲ್ಲೂಕು ಕಚೇರಿಗಳಲ್ಲಿರುವ ಪ್ರಮುಖ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಇದಾಗಿದೆ. ಅಂದರೆ, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಹಳೆಯ ಭೂದಾಖಲೆಗಳನ್ನು ಈ ಮೂಲಕ ಡಿಜಿಟಲೀಕರಣ ಮಾಡಿ ರಕ್ಷಿಸಲಾಗುತ್ತದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ನೀಡುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿಯನ್ನೂ ನೀಡಲಾಗಿದೆ. ಕಳೆದ ವರ್ಷದ ಜನವರಿ ತಿಂಗಳಲ್ಲಿ ಮೊದಲ ಹಂತದಲ್ಲಿ ಪ್ರತಿಜಿಲ್ಲೆಯ ಒಂದೊಂದು ತಾಲೂಕಿನಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ 7.95 ಕೋಟಿ ಪುಟಗಳ 14.87 ಲಕ್ಷ ಫೈಲ್‌ಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ತಹಶೀಲ್ದಾರ್ ಕಚೇರಿ, ಸರ್ವೆ ಕಚೇರಿ ಮತ್ತು ಉಪನೋಂದಣಿ ಕಚೇರಿಗಳಲ್ಲಿರುವ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ.
ಆಸ್ತಿ ದಾಖಲೆಗಳನ್ನು ಪಡೆಯಲು ನಾಗರಿಕರು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಈ ಯೋಜನೆ ಸಹಕಾರಿ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ಕರ್ನಾಟಕದ ವಿವಿಧ ತಾಲೂಕು ಕಚೇರಿಗಳಲ್ಲಿ ಇರುವ ಅತ್ಯಂತ ಪ್ರಮುಖವಾದ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಹಳೆಯ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯಕ್ಕೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಇದೀಗ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿದೆ.
ಹಳೆಯ ಭೂ ದಾಖಲೆಗಳ ಡಿಜಿಟಲೀಕರಣ ಏಕೆ?
ಹಳೆಯ ದಾಖಲೆಗಳನ್ನು ರಕ್ಷಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಜತೆಗೆ, ನಕಲಿ ಭೂ ದಾಖಲೆಗಳು ಸೃಷ್ಟಿಯಾಗುವುದನ್ನು ತಪ್ಪಿಸುವುದು ಕೂಡ ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ. ಈ ಮೂಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ದೊರಕುವಂತೆ ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆ ಈಗಾಗಲೇ ಈ ಯೋಜನೆಯ ಕುರಿತು ಮಾಹಿತಿ ನೀಡಿದೆ.
- ದಾಖಲೆಗಳು ಡಿಜಿಟಲ್ ರೂಪದಲ್ಲಿದ್ದರೆ ಅವುಗಳ ಆಯಸ್ಸು ಹೆಚ್ಚು. ಕಾಗದ ರೂಪದಲ್ಲಿರುವ ಭೂ ದಾಖಲೆಗಳಿಗೆ ಹಾನಿಯಾಗುವ ಅಪಾಯ ಹೆಚ್ಚಿರುತ್ತದೆ.
- ತಕ್ಷಣ ಬೇಕು ಎನಿಸಿದಾಗ ಹುಡುಕುವುದು ಸುಲಭ. ಯಾವುದೇ ಸ್ಥಳದಲ್ಲಿದ್ದುಕೊಂಡು ದಾಖಲೆಗಳನ್ನು ಪರಿಶೀಲಿಸಬಹುದು. ಆಯಾ ತಾಲೂಕು ಕಚೇರಿಗಳಿಗೆ ಎಡತಾಕಬೇಕಾಗಿಲ್ಲ
- ಸಾರ್ವನಿಕರಿಗೆ ಸುಲಭವಾಗಿ ಲಭಿಸುತ್ತದೆ. ಕಾನೂನು ವ್ಯಾಜ್ಯ ಮತ್ತು ಆರ್‌ಟಿಐ ಮನವಿಗಳನ್ನು ಕಡಿಮೆ ಮಾಡುತ್ತದೆ.
- ದಾಖಲೆಗಳನ್ನು ಯಾರೂ ಕೂಡ ತಿದ್ದುಪಡಿ ಮಾಡದಂತೆ ಅಥವಾ ಬದಲಾಯಿಸದಂತೆ ನೋಡಿಕೊಳ್ಳುತ್ತದೆ. ಭೂ ದಾಖಲೆಗಳ ಪೋರ್ಜರಿ ಮಾಡುವ ಅಪಾಯ ಕಡಿಮೆಯಾಗುತ್ತದೆ. ದಾಖಲೆಗಳ ಸುರಕ್ಷತೆ ಹೆಚ್ಚುತ್ತದೆ.
- ದಾಖಲೆಗಳಿಗಾಗಿ ತಾಲೂಕು ಕಚೇರಿಗಳಿಗೆ ಜನರು ಬರುವುದು ತಪ್ಪುತ್ತದೆ. ಇದರಿಂದ ಜನರಿಗೆ ಪ್ರಯಾಣದ ಹಣ ಮತ್ತು ಸಮಯದ ಉಳಿತಾಯವಾಗುತ್ತದೆ.
- ಭವಿಷ್ಯದಲ್ಲಿ ಇನ್ನಿತರ ವಿಭಾಗಗಳಲ್ಲಿನ ಡಿಜಿಟಲೀಕರಣಕ್ಕೂ ಈ ಯೋಜನೆಯ ಅನುಭವ ನೆರವಿಗೆ ಬರುತ್ತದೆ.
- ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದಾಖಲೆಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಭೂ ಸುರಕ್ಷಾ ಪ್ರಾಜೆಕ್ಟ್ ಕುರಿತು ಹೆಚ್ಚಿನ ವಿವರಕ್ಕೆ ಭೇಟಿ ನೀಡಬೇಕಾದ ವೆಬ್‌ಸೈಟ್ ಲಿಂಕ್ ಇಲ್ಲಿದೆ.