ಬೀದರ್ನಲ್ಲಿ 93 ಲಕ್ಷ ದೋಚಿದ ಡಕಾಯಿತರು ಹೈದರಾಬಾದ್ನಲ್ಲಿ ಪತ್ತೆ; ಪೊಲೀಸರ ಮೇಲೆ ಗುಂಡು ಹಾರಿಸಿ ಇಬ್ಬರು ಪರಾರಿ, ಒಬ್ಬ ಬಂಧನ
ಬೀದರ್ನಲ್ಲಿ ಶೂಟೌಟ್ ನಡೆಸಿ 93 ಲಕ್ಷ ರೂಪಾಯಿ ದರೋಡೆ ಮಾಡಿದ್ದ ದರೋಡೆಕೋರರು ಹೈದರಾಬಾದ್ನಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರ ನಡುವೆಯೂ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್: ಬೀದರ್ನಲ್ಲಿ ಎಟಿಎಂ ವಾಹನ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 93 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ ದರೋಡೆಕೋರರು ಕೊನೆಗೂ ಪತ್ತೆಯಾಗಿದ್ದು, ಮೂವರಲ್ಲಿ ಒಬ್ಬನನ್ನು ಸೆರೆಹಿಡಿಯುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ. ಹೈದರಾಬಾದ್ ಪೊಲೀಸರ ಸಹಾಯ ಪಡೆದು ಪತ್ತೆ ಹಚ್ಚಿದ ಕರ್ನಾಟಕ ಪೊಲೀಸರು, ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ಮತ್ತೆ ಗುಂಡಿನ ದಾಳಿ ನಡೆಸಿ ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದಾರೆ. ಹೈದರಾಬಾದ್‌ನ ಅಲ್ಫಜ್ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಹೈದರಾಬಾದ್‌ನ ಅಫ್ಜಲ್‌ಗಂಜ್ ಪ್ರದೇಶದಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಬೀದರ್ ಪೊಲೀಸರ ಮೇಲೆಯೇ ಅಂತಾರಾಜ್ಯ ಕಳ್ಳರ ಗುಂಪು ಗುಂಡಿನ ದಾಳಿ ನಡೆಸಿದೆ. ಪೊಲೀಸರು ಸಹ ಪ್ರತಿಯಾಗಿ ಗುಂಡು ಹಾರಿಸಿದ ಪರಿಣಾಮ ಒಬ್ಬ ಆರೋಪಿ ಗಾಯಗೊಂಡ. ಕೂಡಲೇ ಶಂಕಿತನನ್ನು ವಶಕ್ಕೆ ಪಡೆದು ಹತ್ತಿರದ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು, ಉಳಿದ ಇಬ್ಬರಿಗಾಗಿ ಬಲೆ ಬೀಸಿದ್ದಾರೆ.
ಬೀದರ್ನಲ್ಲಿ ನಡೆದಿದ್ದೇನು?
ಬೀದರ್‌ನ ಜನನಿಬಿಡ ಶಿವಾಜಿ ಸರ್ಕಲ್ ಬಳಿ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಎಸ್‌ಬಿಐ ಶಾಖೆಯ ಎಟಿಎಂಗೆ ಹಣ ತುಂಬಲು ಬಂದಿದ್ದ ವಾಹನದ ಸಿಬ್ಬಂದಿ ಮೇಲೆ ಇಬ್ಬರು ಗುಂಡಿನ ದಾಳಿ ನಡೆಸಿದ್ದರಿಂದ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೀದರ್ ಜಿಲ್ಲಾ ಕೇಂದ್ರದಲ್ಲಿ ಘಟನೆ ಜರುಗಿದ ಬೆನ್ನಲ್ಲೇ ತಕ್ಷಣ ವಿಶೇಷ ತಂಡಗಳನ್ನು ರಚಿಸಲಾಯಿತು. ದರೋಡೆಕೋರರು ತಪ್ಪಿಸಿಕೊಂಡು ಹೈದರಾಬಾದ್ ತಲುಪಿದ ಬಗ್ಗೆ ಸ್ಪಷ್ಟ ಮಾಹಿತಿ ಪಡೆದ ಬೀದರ್ ಪೊಲೀಸರು, ಹೈದರಾಬಾದ್‌ನ ಪೊಲೀಸರ ಸಹಾಯ ಪಡೆದರು. ಪೊಲೀಸರು ಡಕಾಯಿತರ ಚಲನವಲನ ಪತ್ತೆ ಹಚ್ಚಿದರು. ಇನ್ನೇನು ಕಳ್ಳರನ್ನು ಹಿಡಿಯಬೇಕು ಎನ್ನುವಾಗ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪೊಲೀಸರೂ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ.
ತೂಕ ಹಾಕುವಾಗ ಸಿಕ್ಕಿಬಿದ್ದ ದರೋಡೆಕೋರರು
ಕಳ್ಳರು ರಾಯ್ಪುರಕ್ಕೆ ಟಿಕೆಟ್ ಬುಕ್ ಮಾಡಲೆಂದು ಖಾಸಗಿ ಟ್ರಾವೆಲ್ ಏಜೆನ್ಸಿಯ ಆಫೀಸ್ಗೆ ಹೋಗಿದ್ದರು. ಅಧಿಕೃತ ಮಾಹಿತಿಯೊಂದಿಗೆ ಅಲ್ಲಿ ಹೋಗಿದ್ದ ಪೊಲೀಸರನ್ನು ನೋಡಿದ ಕೂಡಲೇ ದರೋಡೆಕೋರರು ಫೈರಿಂಗ್ ಮಾಡಿದ್ದಾರೆ. ಆದರೆ, ಕಳ್ಳರ ಪಿಸ್ತೂಲಿನಿಂದ ಹಾರಿದ ಗುಂಡು ಟ್ರಾವೆಲ್ ಏಜೆನ್ಸಿಯ ಕಚೇರಿ ಮ್ಯಾನೇಜರ್ಗೆ ತಗುಲಿದೆ ಎಂದು ವರದಿಯಾಗಿದೆ. ಫೈರಿಂಗ್ ಮಾಡುತ್ತಿದ್ದಂತೆ ಅಲ್ಲಿದ್ದ ಜನರು ಓಡಿದ್ದಾರೆ. ಛತೀಸ್ಗಡದ ರಾಯ್ಪುರಕ್ಕೆ ಬಸ್ ಟಿಕೆಟ್ ಪಡೆದಿದ್ದ ದರೋಡೆಕೋರರು, ಬ್ಯಾಕ್ ತೂಕ ಹಾಕುವಾಗ ಸಿಕ್ಕಿ ಬಿದ್ದಿದ್ದಾರೆ.
ಬಸ್ಸು ಹತ್ತುವುದಕ್ಕೂ ಮುನ್ನ ಪ್ರಯಾಣಿಕರ ಲಗೇಜ್ ತೂಕ ಹಾಕುವ ನಿಯಮ ಜಾರಿಯಲ್ಲಿದ್ದು, ಅದರಂತೆ ಕಳ್ಳರ ಬ್ಯಾಗ್ ತೂಕ ಹಾಕುವಂತೆ ಹೇಳಿದ್ದಾರೆ. ಆದರೆ ಈ ವೇಳೆ ಬ್ಯಾಗ್ನಲ್ಲಿದ್ದ ಹಣದ ಬಂಡಲ್ ಅನ್ನು ತೆಗೆದುಕೊಂಡು ಟ್ರಾವೆಲ್ ಏಜೆನ್ಸಿ ಸಿಬ್ಬಂದಿಗೆ ಕೊಟ್ಟು ನೀವೇ ಇಟ್ಕೊಳ್ಳಿ ಎಂದು ಹೇಳಿದ್ದಾನೆ. ಇದು ಟ್ರಾವೆಲ್ ಸಿಬ್ಬಂದಿಗೆ ಅನುಮಾನ ಬಂತು. ನನಗೆ ಹಣ ಬೇಡ, ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮತ್ತೊಬ್ಬ ದರೋಡೆಕೋರ ತನ್ನಲ್ಲಿದ್ದ ಪಿಸ್ತೂಲ್ ತೆಗೆದು ಬ್ಯಾಗ್ ತೂಕ ಹಾಕದೇ ಬಸ್ನೊಳಗೆ ಹತ್ತಿಸಿಕೊಳ್ಳುವಂತೆ ಸೂಚಿಸಿದ್ದ. ಅಷ್ಟರಲ್ಲೇ ಪೊಲೀಸರು ಎಂಟ್ರಿಯಾಗಿದರು. ಆಗ ಇಬ್ಬರ ನಡುವೆ ಫೈರಿಂಗ್ ನಡೆದಿದೆ ಎಂದು ವರದಿಯಾಗಿದೆ.
