ಬೀದರ್ ಭಾಗದವರಿಗೆ ಖುಷಿಯ ವಿಚಾರ, ಒಂದೂವರೆ ವರ್ಷದ ಬಳಿಕ ಮತ್ತೆ ಬೆಂಗಳೂರು ವಿಮಾನ ಸೇವೆ ನಾಳೆಯಿಂದ ಪುನಾರಂಭ
ಬೀದರ್ ಹಾಗೂ ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಿಮಾನ ಸೇವೆ ಗುರುವಾರದಿಂದ ಪುನಾರಂಭಗೊಳ್ಳಲಿದೆ. ಬುಧವಾರವೇ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದಾರೆ.

ಬೀದರ್ : ಕರ್ನಾಟಕದ ಗಡಿ ಜಿಲ್ಲೆಯಾದ ಬೀದರ್ ಭಾಗದ ಜನರಿಗೆ ಸಂತಸದ ವಿಚಾರ ಇಲ್ಲಿದೆ. ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನಿಂದ ಬೀದರ್ ನಡುವೆ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಪುನಾರಂಭಗೊಳ್ಳಲಿದೆ. ಬುಧವಾರದಂದು ಬೆಂಗಳೂರು ಹಾಗೂ ಬೀದರ್ ನಡುವಿನ ವಿಮಾನ ಸಂಚಾರ ಸೇವೆಗೆ ಚಾಲನೆ ನೀಡಲಾಗುತ್ತಿದ್ದು. ಗುರುವಾರಿಂದ ಅಧಿಕೃತವಾಗಿಯೇ ಪ್ರಯಾಣ ಪುನಾರಂಭಗೊಳ್ಳಲಿದೆ. ಕೇಂದ್ರ ಸರ್ಕಾರ ಉಡಾನ್ ಸಬ್ಸಿಡಿ ನಿಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬೀದರ್- ಬೆಂಗಳೂರು ನಾಗರಿಕ ವಿಮಾನಯಾನ ಪುನಾರಂಭಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದ ಮಂಡಳಿ ಅನುದಾನ ಒದಗಿಸಿರುವುದರಿಂದ ಅದನ್ನು ಬಳಕೆ ಮಾಡಿಕೊಂಡು ಮತ್ತೆ ವಿಮಾನ ಸೇವೆ ಆರಂಭಿಸುತ್ತಿರುವುದು ವಿಶೇಷ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಜನತೆ ಬೀದರ್‌ನಿಂದ ಬೆಂಗಳೂರಿಗೆ ವಿಮಾನ ಸೇವೆ ಪಡೆದು ಬೇಗ ತಲುಪಲು ಸಹಕಾರಿಯಾಗಲಿದೆ.
ಏಪ್ರಿಲ್ 16ರ ಬುಧವಾರ ಸಂಜೆ 4 ಗಂಟೆಗೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಮಾನ ನಿಲ್ದಾಣದ ಹೊರಗೆ ನಡೆಯುವ ಕಾರ್ಯಕ್ರಮದಲ್ಲಿ 17ರಂದು ಬೆಳಗ್ಗೆ ಬೀದರ್ ನಿಂದ ಬೆಂಗಳೂರಿಗೆ ತೆರಳಲಿರುವ ಆಯ್ದ 5 ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ವಿತರಿಸುವ ಮೂಲಕ ನಾಗರಿಕ ವಿಮಾನಯಾನ ಸೇವೆಯ ಪುನಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದ ಮಂಡಳಿ(ಕೆಕೆಆರ್‌ಡಿಬಿ) ಯಿಂದ ಈ ವರ್ಷ 14 ಕೋಟಿ ಮೀಸಲಿಟ್ಟು ಅನುದಾನ ಒದಗಿಸುತ್ತಿರುವುದರಿಂದ ವಿಮಾನ ಸಂಚಾರ ಪುನಃ ಆರಂಭ ಸಾಧ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಕರುನಾಡಿಗೆ ಕಿರೀಟಪ್ರಾಯವಾಗಿರುವ ಬೀದರ್ ಜಿಲ್ಲೆ, ಸರ್ವಧರ್ಮಸಮನ್ವಯದ ನಾಡು. ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಬಸವಕಲ್ಯಾಣದ ಅನುಭವಮಂಟಪ, ಝರಣಿ ನರಸಿಂಹಸ್ವಾಮಿ ಕ್ಷೇತ್ರ, ಪಾಪನಾಶ, ನಾನಕ್ ಝೀರಾ ಗುರುದ್ವಾರ, ಮಹಮದ್ ಗವಾನ್ ಮದರಸಾ ಹಾಗೂ ಮೆಥೋಡಿಸ್ಟ್ ಚರ್ಚ್ ಇದೆ. ಈಗ ಹೊನ್ನಿಕೇರಿ ಅರಣ್ಯ ಪ್ರದೇಶವನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸುತ್ತಿದ್ದು, ಬೀದರ್ ನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಹೀಗಾಗಿ ಈ ವಿಮಾನಯಾನ ಸೇವೆ ಮುಂದಿನ ದಿನಗಳಲ್ಲಿ ದೇಶ ವಿದೇಶಗಳ ಪ್ರವಾಸಿಗರಿಗೆ ನೆರವಾಗಲಿದೆ.
ಬೆಳಿಗ್ಗೆ 7.45ಕ್ಕೆ ಬೆಂಗಳೂರಿನಿಂದ ಬೀದರ್ ಕಡೆಗೆ ವಿಮಾನ ಸಂಚರಿಸಲಿದೆ. ಅದೇ ದಿನ ಬೆಳಿಗ್ಗೆ 9.30ಕ್ಕೆ ಬೀದರ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ವಿಮಾನದ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದ್ದು. ಗುರುವಾರದಿಂದ ಸೇವೆ ಇರಲಿದೆ.
2020ರ ಫೆ.7ರಂದು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಿದ್ದರು. 5 ವರ್ಷಗಳಲ್ಲಿಎರಡು ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆ ನೀಡಿದರೂ ನಂತರದ ದಿನಗಳಲ್ಲಿ ಪ್ರಯಾಣಿಕರ ಕೊರತೆ ನೀಡಿ ಸ್ಥಗಿತಗೊಳಿಸಿವೆ. ಈಗಂತೂ ವಿಮಾನ ಸೇವೆ ಇಲ್ಲಿಗೆ ಇಲ್ಲ. ಖಾಸಗಿಯಾಗಿ ಬರುವ ವಿಮಾನಗಳ ಬಳಕೆಗೆ ಮಾತ್ರ ಅವಕಾಶವಿದೆ. ಬೀದರ್‌ನಿಂದ ಬೆಂಗಳೂರು, ದೆಹಲಿ ಮುಂತಾದ ನಗರಗಳಿಗೆ ಹಾರಾಟ ನಡೆಸಬೇಕೆಂಬ ಜನರ ಬೇಡಿಕೆ ಇದ್ದರೂ ಬೆಂಗಳೂರಿಗೆ ವಿಮಾನ ಸೇವೆ ಇಲ್ಲದಾಗಿದೆ. ಬೀದರ್‌ನಲ್ಲಿ ವಿಮಾನ ನಿಲ್ದಾಣವಿದ್ದರೂ ವಿಮಾನ ಸೇವೆ ಇಲ್ಲದೇ ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಪಕ್ಕದ ರಾಜ್ಯದ ಹೈದರಾಬಾದ್, ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು, ಮುಂಬಯಿ ಸಹಿತ ಇತರೆ ನಗರಗಳಿಗೆ ಪ್ರಯಾಣ ಬೆಳೆಸುವ ಸ್ಥಿತಿಯಿದೆ. ಆದರೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಈಶ್ವರ ಖಂಡ್ರೆ ಅವರ ವಿಶೇಷ ಮುತುವರ್ಜಿಯಿಂದ ಈಗ ಮತ್ತೆ ವಿಮಾನ ಸೇವೆ ಶುರುವಾಗುವ ಹಂತಕ್ಕೆ ಬಂದಿದೆ.

ವಿಭಾಗ