ಬೀದರ್ ಎಟಿಎಂ ಹಣ ದರೋಡೆ ಪ್ರಕರಣ; ಆರೋಪಿಗಳ ಗುರುತು ಪತ್ತೆ, ಮೃತನ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ
ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನದಿಂದ ಹಣ ದರೋಡೆ ನಡೆದ ಪ್ರಕರಣ ಸಂಬಂಧ, ಈಗಾಗಲೇ ಆರೋಪಿಗಳ ಗುರುತು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಅತ್ತ, ದರೋಡೆಕಾರರ ಗುಂಡಿನ ದಾಳಿಗೆ ಬಲಿಯಾದ ಸಿಬ್ಬಂದಿ ಗಿರಿ ವೆಂಕಟೇಶ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದೆ.

ಬೀದರ್‌ನ ಎಸ್‌ಬಿಐ ಬ್ಯಾಂಕ್ ಶಾಖೆ ಸಮೀಪ ಎಟಿಎಂಗೆ ಹಣ ತುಂಬಲು ಒಯ್ಯುತ್ತಿದ್ದ ವಾಹನದಿಂದ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಲಭ್ಯ ಮಾಹಿತಿಯಂತೆ 93 ಲಕ್ಷ ರೂಪಾಯಿ ಹಣ ದೋಚಿದ ಆರೋಪಿಗಳು, ಬೀದರ್‌ನಿಂದ ಬೈಕ್‌ನಲ್ಲಿ ತೆಲಂಗಾಣಕ್ಕೆ ಪರಾರಿಯಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರಿಗೆ ಕರ್ನಾಟಕ ಹಾಗೂ ತೆಲಂಗಾಣ ಪೊಲೀಸರು ತಲಾಶ್ ಆರಂಭಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಪೊಲೀಸರ ತಂಡ ರಚಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಬಿಹಾರ ಮೂಲದವರು ಎಂದು ಹೇಳಲಾಗಿದೆ.
ದರೋಡೆ ನಡೆದಿದ್ದು ಜನವರಿ 16ರ ಗುರುವಾರ. ಪ್ರಕರಣ ಸಂಬಂಧ ಒಬ್ಬ ಆರೋಪಿಯ ಬಂಧನವಾಗಿದೆ. ಬೀದರ್‌ನ ಎಸ್‌ಬಿಐ ಎಟಿಎಂಗೆ ಹಣ ತುಂಬಲು ಬಂದಿದ್ದ ವಾಹನದಲ್ಲಿದ್ದ ಸಿಬ್ಬಂದಿ ಮೇಲೆ ಲೂಟಿಕೋರರು ಗುಂಡು ಹಾರಿಸಿ ಲಕ್ಷ ಲಕ್ಷ ಹಣ ದೋಚಿದ್ದರು. ಇಬ್ಬರಿಗೆ ಗುಂಡು ತಗುಲಿದ್ದರೆ, ಅವರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಬೀದರ್‌ನಲ್ಲಿ ಹಣ ಲೂಟಿ ಮಾಡಿದ ನಂತರ ಹೈದರಾಬಾದ್‌ನಲ್ಲಿ ಆರೋಪಿಗಳು ಕಾಣಿಸಿಕೊಂಡಿದ್ದರು. ಅಲ್ಲಿಂದ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಪರಾರಿಯಾಗಲು ಬಸ್ ಬುಕ್ ಮಾಡಿದರು. ಆರೋಪಿಗಳ ಬ್ಯಾಗ್‌ನಲ್ಲಿ ಹಣ ಇದ್ದುದನ್ನು ಸಾರಿಗೆ ಸಂಸ್ಥೆ ಮ್ಯಾನೇಜರ್ ಗಮನಿಸಿದ್ದರು. ಹೀಗಾಗಿ ಅವರ ಮೇಲೂ ಗುಂಡು ಹಾರಿಸಿದ್ದರು. ಈ ನಡುವೆ ಪೊಲೀಸರು ಬಂದು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಹೈದರಾಬಾದ್ ಪೊಲೀಸರ ಜೊತೆಗೆ ಬೀದರ್ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಕೂಡಾ ಸೇರಿಕೊಂಡು ತನಿಖೆ ಮುಂದುವರೆಸಿದ್ದಾರೆ. ಬೀದರ್ ಪೊಲೀಸರ 10 ತಂಡ ರಾಜ್ಯಾದ್ಯಂತ ಶೋಧ ನಡೆಸುತ್ತಿದ್ದರೆ, ಹೈದರಾಬಾದ್ ಹಾಗೂ ಛತ್ತೀಸಗಢ ಪೊಲೀಸರೂ ಎಚ್ಚರದಿಂದಿದ್ದಾರೆ.
ಗೃಹ ಸಚಿವರು ಹೇಳಿದ್ದೇನು?
ಬ್ಯಾಂಕ್ ಹಣ ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಗುರುತು ಪತ್ತೆಯಾಗಿದೆ. ಶೀಘ್ರದಲ್ಲೇ ದರೋಡೆಕೋರರ ಬಂಧನವಾಗಲಿದೆ ಎಂದು ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ. ಆರೋಪಿಗಳು ಕೆಲವು ದಿನಗಳಿಂದ ಎಟಿಎಂಗೆ ಹಣ ತುಂಬುವ ಸಿಬ್ಬಂದಿಯನ್ನು ಹಿಂಬಾಲಿಸಿರುವಂತಿದೆ. ದರೋಡೆ ನಡೆದ ಬ್ಯಾಂಕ್, ಹೈದಾರಾಬಾದ್ ಕಂಪನಿಗೆ ಎಟಿಎಂಗೆ ಹಣ ತುಂಬುವ ಗುತ್ತಿಗೆ ಕೊಟ್ಟಿದೆ. ವಾಹನದಲ್ಲಿ ಗನ್‌ಮ್ಯಾನ್ ಇಲ್ಲದ್ದನ್ನು ನೋಡಿಕೊಂಡು ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಸಚಿವರು ಹೇಳಿದ್ದಾರೆ.
ದರೋಡೆಕೋರರ ಬಂಧನಕ್ಕೆ 8 ವಿಶೇಷ ತಂಡ: ಎಡಿಜಿಪಿ
ದರೋಡೆ ಪ್ರಕರಣದ ಆರೋಪಿಗಳ ಗುರುತು ಪತ್ತೆಯಾಗಿದೆ. ಕರ್ನಾಟಕದ ಜತೆಗೆ ತೆಲಂಗಾಣ ಹಾಗೂ ಮಹಾರಾಷ್ಟ್ರ ಪೊಲೀಸರ ಸಹಕಾರದಿಂದ ಶೀಘ್ರದಲ್ಲಿ ದುಷ್ಕರ್ಮಿಗಳನ್ನು ಬಂಧಿಸಲಾಗುವದು ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಅಪರಾಧ ವಿಭಾಗ) ಪಿ.ಹರಿಶೇಖರನ್ ತಿಳಿಸಿದರು.
ಮೃತನ ಕುಟುಂಬಕ್ಕೆ 8 ಲಕ್ಷ ಪರಿಹಾರ
ಎಟಿಎಂ ಹಣ ಲೂಟಿಮಾಡಿದ ದರೋಡೆಕೋರರ ಗುಂಡೇಟಿಗೆ ಬಲಿಯಾದ ಬೆಮಳಖೇಡ ಗ್ರಾಮದ ಗಿರಿ ವೆಂಕಟೇಶ ಎಂಬವರ ಮನೆಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದ್ದಾರೆ. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಸಮಾಜ ಕಲ್ಯಾಣ ಇಲಾಖೆಯಿಂದ ಕುಟುಂಬ ಸದಸ್ಯರಿಗೆ 8 ಲಕ್ಷ ರೂ. ಪರಿಹಾರ ಹಣ ಕೊಡಿಸುವುದಾಗಿ ಹೇಳಿದರು. ಮೃತನ ತಾಯಿಗೆ 5 ಸಾವಿರ ಮಾಸಾಶನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿದರು.
