ಗುತ್ತಿಗೆದಾರ ಆತ್ಮಹತ್ಯೆ; ಬೆಂಬಲಿಗನಿಂದ ಕಲಬುರಗಿ ಬಿಜೆಪಿ ಶಾಸಕನ ಹತ್ಯೆಗೆ ಸಂಚು ಆರೋಪ, ಪ್ರಕರಣ ದಾಖಲು, ಸಚಿವ ಪ್ರಿಯಾಂಕ್ ಖರ್ಗೆಗೆ ಸಂಕಷ್ಟ
ಕಲಬುರಗಿಯ ಮಹಾನಗರ ಪಾಲಿಕೆ ಮಾಜಿ ಸದಸ್ಯ, ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜುಕಪನೂರು ವಿರುದ್ದ ಪ್ರಕರಣ ದಾಖಲಾಗಿದೆ. ಬಿಜೆಪಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಹೋರಾಟ ನಡೆಸಲು ಅಣಿಯಾಗಿದೆ.
ಬೆಂಗಳೂರು: ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಹಾಗೂ ಅವರ ಆಪ್ತರ ಹತ್ಯೆಗೆ ಸಂಚು ರೂಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸಹಿತ ಹಲವರ ವಿರುದ್ದ ಕಲಬುರಗಿಯಲ್ಲಿ ಪ್ರಕರಣ ದಾಖಲಾಗಿದೆ. ಗುತ್ತಿಗೆ ವಿಚಾರದಲ್ಲಿ ನಡೆದಿದೆ ಎನ್ನಲಾದ ಸಂಘರ್ಷದ ವಿಚಾರವಾಗಿ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಪ್ರಿಯಾಂಕ್ ಆಪ್ತ ರಾಜುಕಪನೂರ ಎಂಬುವವರ ವಿರುದ್ದ ದೂರು ನೀಡಲಾಗಿತ್ತು. ಅದರಲ್ಲೂ ಬೀದರ್‌ನ ಗುತ್ತಿಗೆದಾರ ಸಚಿನ ಪಾಂಚಾಳ ಎಂಬಾತ ಆತ್ಮಹತ್ಯೆ ಮಾಡಿಕೊಂಡು ಹತ್ಯೆ ಸಂಚಿನ ವಿವರವನ್ನು ಡೆತ್ ನೋಟ್‌ನಲ್ಲಿ ದಾಖಲಿಸಿದ್ದ. ಇದನ್ನು ಆಧರಿಸಿ ದೂರು ದಾಖಲಿಸಲಾಗಿದೆ. ಇದನ್ನೇ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸೋಮವಾರ ಡಿ. 30ರಿಂದ ಕಲಬುರಗಿಯಲ್ಲಿ ಹೋರಾಟ ಆರಂಭಿಸುವುದಾಗಿ ಹೇಳಿದೆ.
ಹೆಚ್ಚುತ್ತಿರುವ ರಾಜೀನಾಮೆ ಒತ್ತಡದ ಮಧ್ಯೆ, ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸ 'ಕಾವೇರಿ'ಯಲ್ಲಿ ಭೇಟಿಯಾದರು. ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳೊಂದಿಗೆ ಸುಮಾರು 10 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಚರ್ಚೆಯ ವಿವರಗಳು ತಿಳಿದಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಪ್ರಕರಣ ದಾಖಲು
ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಮತ್ತು ಇತರ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮತ್ತಿಮಡು, ಆಂದೋಲಾ ಮಠದ ಸಿದ್ದಲಿಂಗ ಸ್ವಾಮಿ, ಬಿಜೆಪಿ ಮುಖಂಡರಾದ ಮಣಿಕಾಂತ್ ರಾಥೋಡ್ ಮತ್ತು ಚಂದು ಪಾಟೀಲ್ ಅವರ ಹತ್ಯೆಗೆ ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದಾರೆ ಎಂದು ಸಿವಿಲ್ ಗುತ್ತಿಗೆದಾರ ಸಚಿನ್ ಪಾಂಚಾಳ ಬರೆದಿರುವ ಆತ್ಮಹತ್ಯೆ ಪತ್ರದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬೀದರ್ ಮೂಲದ ಗುತ್ತಿಗೆದಾರ ಪಾಂಚಾಳ ಗುರುವಾರ ರೈಲಿನ ತಲೆ ಕೊಟ್ಟುಆತ್ಮಹತ್ಯೆ ಮಾಡಿಕೊಂಡಿದ್ದರು. ಕಪನೂರು ಮತ್ತು ಅವರ ಸಹಚರರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅವರು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಆರೋಪಿಸಿದ್ದರು. ಆದರೆ ಆರಂಭದಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸಿರಲಿಲ್ಲ. ಬಿಜೆಪಿ ಹಿರಿಯ ನಾಯಕರ ಆರೋಪದ ನಂತರ ಮೊಕದ್ದಮೆ ಭಾನುವಾರ ದಾಖಲಾಗಿದೆ.
ಸಚಿವಗೆ ಆಕ್ರೋಶದ ಬಿಸಿ
ಅರಣ್ಯ ಸಚಿವರೂ ಅಗಿರುವ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾಲ್ಕಿ ತಾಲ್ಲೂಕಿನ ಸಚಿನ್ ಪಾಂಚಾಳ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಧಿಕಾರಿಗಳು ಮನೆಗೆ ಭೇಟಿ ನೀಡಿದ ಕೂಡಲೇ, ಕೋಪಗೊಂಡ ಕುಟುಂಬ ಸದಸ್ಯರು ಪಾಂಚಾಳ ಸಾವಿಗೆ ಅವರೇ ಕಾರಣ ಎಂದು ಆರೋಪಿಸಿ ದೂರ ಹೋಗುವಂತೆ ಕೂಗಿದರು. ಅವರನ್ನು ಸಮಾಧಾನಪಡಿಸಿದ ಸಚಿವ ಖಂಡ್ರೆ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ನಂತರ ಸಚಿವರು ಪಾಂಚಾಳ ಅವರ ಕುಟುಂಬ ಸದಸ್ಯರಿಗೆ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದರು.
ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ನನಗೆ ದೂರು ನೀಡಿದ ಕುಟುಂಬ ಸದಸ್ಯರೊಂದಿಗೆ ನಾನು ಮಾತನಾಡಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವೆ. ಕೆಲವು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಆಕ್ರೋಶ
ಸಚಿವ ಪ್ರಿಯಾಂಕ್ ಖರ್ಗೆ ಅವರ ಬಲಗೈ ಬಂಟ ರಾಜು ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಬೀದರ್ ನ ಗುತ್ತಿಗೆದಾರ ಪಾಂಚಾಳ ಬರೆದಿರುವ ಡೆತ್ ನೋಟ್ ನಲ್ಲಿ ನಮ್ಮ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡರಾದ ಚಂದು ಪಾಟೀಲ್, ಮಣಿಕಂಠ ರಾಥೋಡ್ ಮತ್ತು ಆಂದೋಲಾ ಸ್ವಾಮಿ ಅವರ ಹತ್ಯೆಗೆ ಸುಪಾರಿ ನೀಡಿದ್ದಾಗಿ ಆತಂಕಕಾರಿ ಮತ್ತು ಗಂಭೀರ ಮಾಹಿತಿ ಬಹಿರಂಗವಾಗಿದೆ' ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯೇಂದ್ರ ಮತ್ತು ಹಿರಿಯ ಬಿಜೆಪಿ ಕಾರ್ಯಕರ್ತರು ಭಾನುವಾರ ಸಂಜೆ ಪಾಂಚಾಳ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು.
ಸೋಮವಾರ ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ ಸಚಿವ ಪ್ರಿಯಾಂಕ್ ರಾಜೀನಾಮೆಗೆ ಆಗ್ರಹಿಸಲು ಸಿದ್ದತೆ ಮಾಡಿಕೊಂಡಿದೆ. ಪ್ರಮುಖ ಬಿಜೆಪಿ ನಾಯಕರು ಕಲಬುರಗಿಗೆ ಆಗಮಿಸುವ ಸಾಧ್ಯತೆಗಳಿವೆ.