Bidar News: ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ನಾಲ್ವರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Bidar News: ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ನಾಲ್ವರ ಬಂಧನ

Bidar News: ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ನಾಲ್ವರ ಬಂಧನ

Bidar Crime News ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನಲ್ಲಿ ಮಸೀದಿಯೊಂದರ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ ಘಟನೆ ನಡೆದಿದ್ದು, ಈ ಸಂಬಂಧ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ  ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ನಾಲ್ವರನ್ನು ಬಂಧಿಸಲಾಗಿದೆ
ಬೀದರ್‌ ಜಿಲ್ಲೆಯಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ನಾಲ್ವರನ್ನು ಬಂಧಿಸಲಾಗಿದೆ

ಬೀದರ್:‌ ಐದು ದಿನದ ಹಿಂದೆ ಬೀದರ್‌ ಜಿಲ್ಲೆಯ ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಹಾರಿಸಿದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅದೇ ಗ್ರಾಮದ ಯುವಕರು ಈ ಕೃತ್ಯ ಎಸಗಿರುವುದು ತನಿಖೆ ವೇಳೆ ಬಯಲಾಗಿದೆ.

ಕಳೆದ ಸೆಪ್ಟೆಂಬರ್‌ 21ರ ತಡರಾತ್ರಿ ಜಿಲ್ಲೆಯ ಬಸವಕಲ್ಯಾಣ ಧನ್ನೂರ್‌ ಕೆ ಗ್ರಾಮದಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಗ್ರಾಮೀಣ ಪೊಲೀಸ್‌ ಠಾಣೆಯ ತೀವ್ರ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಗ್ರಾಮದ ಅಭಿಷೇಕ ಚಂದ್ರಕಾಂತ (19), ಸುನೀಲ ಶಿವಕುಮಾರ ಬಿರಾದಾರ (19), ಕಲ್ಯಾಣಿ ರಾಜಕುಮಾರ ಸೂರ್ಯ (20) ಮತ್ತು ವೀರೇಶ ಶಿವಕುಮಾರ ಸೂರ್ಯ ಬಂಧಿತರು.

ಸೆ. 21 ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಈ ನಾಲ್ವರು ಯುವಕರು ಮದ್ಯ ಕುಡಿದು ಗ್ರಾಮದಲ್ಲಿರುವ ಶ್ರೀ ಹನುಮಾನ ದೇವಸ್ಥಾನದ ಮೇಲಿರುವ ಕೇಸರಿ ಧ್ವಜತೆಗೆದುಕೊಂಡಿದ್ದಾರೆ. ಆ ಬಳಿಕ ಮಸೀದಿ ಮೇಲೆ ಕಟ್ಟಿದ್ದಾರೆ. ಆಗ ಮಸೀದಿಗೆ ನಮಾಜ್‌ ಮಾಡಲು ಬಂದ್ ಇಸ್ಮಾಯಿಲ್ ಕೇಸರಿ ಬಾವುಟ ನೋಡಿ ತಕ್ಷಣ ಇತರರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಹುಮನಾಬಾದ್ ಡಿವೈಎಸ್ಪಿ ಜೆ.ಎಸ್ ನ್ಯಾಮೇಗೌಡರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಸಾಕ್ಷಿಧಾರಗಳನ್ನು ಆಧಾರಿಸಿ ಮತ್ತು ಸಿಸಿ ಟಿವಿ ದೃಶ್ಯಾವಳಿಯ ಸಹಾಯದಿಂದ ಕೃತ್ಯ ವೆಸಗಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಡಿದ ಮತ್ತಿನಲ್ಲಿ ಯುವಕರು ಈ ಕೃತ್ಯ ಎಸಗಿದ್ದಾರೆ. ತಕ್ಷಣವೇ ದೂರು ನೀಡಿದ್ದರಿಂದ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ತನಿಖೆ ನಡೆದಿದೆ. ಯಾವುದೇ ಅಹಿತಕರ ಘಟನೆ ಈ ವಿಚಾರವಾಗಿ ನಡೆದಿಲ್ಲ. ಶಾಂತಿಯುತ ವಾತಾವರಣ ಗ್ರಾಮದಲ್ಲಿದೆ ಎಂದು ಬೀದರ್‌ ಎಸ್ಪಿ ಚನ್ನಬಸವಣ್ಣ ತಿಳಿಸಿದ್ದಾರೆ.

Whats_app_banner