ಬೀದರ್ ಜನಿವಾರ ಪ್ರಕರಣ: ವಿದ್ಯಾರ್ಥಿಗೆ ತಮ್ಮದೇ ಎಂಜಿನಿಯರಿಂಗ್‌ ಕಾಲೇಜಲ್ಲಿ ಉಚಿತ ಸೀಟ್ ಘೋಷಿಸಿದ ಸಚಿವ ಈಶ್ವರ ಖಂಡ್ರೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೀದರ್ ಜನಿವಾರ ಪ್ರಕರಣ: ವಿದ್ಯಾರ್ಥಿಗೆ ತಮ್ಮದೇ ಎಂಜಿನಿಯರಿಂಗ್‌ ಕಾಲೇಜಲ್ಲಿ ಉಚಿತ ಸೀಟ್ ಘೋಷಿಸಿದ ಸಚಿವ ಈಶ್ವರ ಖಂಡ್ರೆ

ಬೀದರ್ ಜನಿವಾರ ಪ್ರಕರಣ: ವಿದ್ಯಾರ್ಥಿಗೆ ತಮ್ಮದೇ ಎಂಜಿನಿಯರಿಂಗ್‌ ಕಾಲೇಜಲ್ಲಿ ಉಚಿತ ಸೀಟ್ ಘೋಷಿಸಿದ ಸಚಿವ ಈಶ್ವರ ಖಂಡ್ರೆ

ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದರಿಂದ ಪರೀಕ್ಷೆ ಎದುರಿಸದ ವಿದ್ಯಾರ್ಥಿಗೆ ತಮ್ಮದೇ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಸೀಟ್‌ ನೀಡುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೀದರ್‌ನಲ್ಲಿ ವಿದ್ಯಾರ್ಥಿ ಹಾಗೂ ಪೋಷಕರನ್ನು ಭೇಟಿ ಮಾಡಿದ ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್‌
ಬೀದರ್‌ನಲ್ಲಿ ವಿದ್ಯಾರ್ಥಿ ಹಾಗೂ ಪೋಷಕರನ್ನು ಭೇಟಿ ಮಾಡಿದ ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್‌

ಬೀದರ್: ಜನಿವಾರ ತೆಗೆಯದ ಕಾರಣಕ್ಕೆ ಕೆಸಿಇಟಿ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿ ಸುಚಿವ್ರತ್ ಗೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯದಲ್ಲಿ ಉಚಿತ ಪ್ರವೇಶ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಸಚಿವ ರಹೀಂಖಾನ್ ಅವರ ಜೊತೆಯಲ್ಲಿ ಸುಚಿವ್ರತ್ ಕುಲಕರ್ಣಿ ಮನೆಗೆ ಭೇಟಿ ನೀಡಿ ವಿದ್ಯಾರ್ಥಿ ಹಾಗೂ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದ ಈಶ್ವರ ಖಂಡ್ರೆ, ಖಾಸಗಿ ಕಾಲೇಜಿನ ಸಿಬ್ಬಂದಿಯಿಂದ ಇಂತಹ ಲೋಪವಾಗಿದ್ದು, ಇದು ನೋವಿನ ಸಂಗತಿ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ. ಇಂತಹ ಒಂದು ಘಟನೆ ನಡೆಯಬಾರದಾಗಿತ್ತು. ಈ ಬಗ್ಗೆ ತಮ್ಮ ಗಮನಕ್ಕೆ ಬಂದ ಕೂಡಲೇ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ, ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವೂ ಆಗಿದೆ ಎಂದರು.

ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬುದು ಎಲ್ಲರ ಭಾವನೆ, ಹೀಗಾಗಿ ಭಾಲ್ಕಿಯ ತಮ್ಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟ್ ನೀಡುವುದಾಗಿ ಭರವಸೆ ನೀಡಿದರು. ಸುಚಿವ್ರತ್ ಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ಅವಕಾಶವಿದೆಯೇ ಎಂಬ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಈಶ್ವರ ಖಂಡ್ರೆ ವಿದ್ಯಾರ್ಥಿಗೆ ಕಾಮಡ್ ಕೆ ಪರೀಕ್ಷೆ ಬರೆಯಲೂ ವಿದ್ಯಾರ್ಥಿಗೆ ಅವಕಾಶವಿದೆ. ಆ ಸೀಟು ಲಭಿಸಿದರೂ ನೆರವು ನೀಡಲಾಗುವುದು, ಸರ್ಕಾರ ನೊಂದ ವಿದ್ಯಾರ್ಥಿ ಮತ್ತು ಕುಟಂಬದ ಸದಸ್ಯರೊಂದಿಗಿದೆ. ಎಂದೂ ತಿಳಿಸಿದರು.

ಕಳೆದ ವಾರ ಸಿಇಟಿ ಪರೀಕ್ಷೆ ಬರೆಯುವ ವೇಳೆ ಜನಿವಾರ ಧರಿಸಿದ್ದ ಕಾರಣದಿಂದ ವಿದ್ಯಾರ್ಥಿಯನ್ನು ಬೀದರ್‌ನಲ್ಲಿ ಒಳ ಹೋಗಲು ಬಿಟ್ಟಿರಲಿಲ್ಲ. ಇದರಿಂದ ಗಣಿತ ಪರೀಕ್ಷೆಯನ್ನು ಎದುರಿಸಿರಲಿಲ್ಲ. ಜನಿವಾರ ತೆಗೆಯಲು ವಿದ್ಯಾರ್ಥಿ ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ತನಿಖೆಗೆ ಆದೇಶಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವರದಿ ನೀಡುವಂತೆ ಬೀದರ್‌ ಡಿಸಿಗೆ ಸೂಚಿಸಿತ್ತು. ಪ್ರಾಧಿಕಾರ ಬ್ರಾಹ್ಮಣ ಸಮುದಾಯ ಹಾಗೂ ವಿದ್ಯಾರ್ಥಿಯ ಕ್ಷಮೆಯನ್ನೂ ಕೇಳಿತ್ತು. ಬಳಿಕ ನಿರ್ಲಕ್ಷ್ಯ ತೋರಿದ ಬೀದರ್‌ ಕಾಲೇಜಿನ ಪ್ರಾಂಶುಪಾಲ, ಕಚೇರಿ ಸಿಬ್ಬಂದಿಯನ್ನು ವಜಾಗೊಳಿಸಿತ್ತು. ಇದೇ ರೀತಿ ಶಿವಮೊಗ್ಗದಲ್ಲೂ ಜನಿವಾರ ವಿವಾದವಾದರೂ ವಿದ್ಯಾರ್ಥಿ ಪರೀಕ್ಷೆ ಎದುರಿಸಿದ್ದ. ಶಿವಮೊಗ್ಗದಲ್ಲಿ ನಿರ್ಲಕ್ಷ್ಯ ತೋರಿದ್ದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು.

ಸುಚಿವ್ರತ್ ಗೆ ಉಚಿತ ಸೀಟ್ ಘೋಷಿಸಿದ ಈಶ್ವರ ಖಂಡ್ರೆಗೆ ಬ್ರಾಹ್ಮಣ ಸಭಾ ಅಭಿನಂದನೆ

ಜನಿವಾರ ತೆಗೆಯದ ಕಾರಣಕ್ಕೆ ಕೆಸಿಇಟಿ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿಗೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯ (ಬಿಕೆಐಟಿ)ದಲ್ಲಿ ಉಚಿತ ಪ್ರವೇಶ ನೀಡುವುದಾಗಿ ಘೋಷಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಅವರ ಔದಾರ್ಯಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದನೆ ಸಲ್ಲಿಸಿದೆ.

ಇಂದು ಬೆಳಗ್ಗೆ ಬೀದರ್ ನ ಸುಚಿವ್ರತ್ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದ ಹಾಗೂ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಸಚಿವರಿಗೆ ಎ.ಕೆ.ಬಿ.ಎಂ.ಎಸ್. ಮಹಾಸಭಾಧ್ಯಕ್ಷರಾದ ಎಸ್.ರಘುನಾಥ್ ಹೃದಯಾಂತರಾಳದ ಅಭಿನಂದನೆ ಸಲ್ಲಿಸಿದ್ದಾರೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.