Bidar News:ಬೀದರ್‌ ಜಿಲ್ಲೆಗೆ ಸೈನಿಕ ಶಾಲೆ ಮಂಜೂರು: ಕರ್ನಾಟಕದಲ್ಲಿ ಐದನೇ ಶಾಲೆ
ಕನ್ನಡ ಸುದ್ದಿ  /  ಕರ್ನಾಟಕ  /  Bidar News:ಬೀದರ್‌ ಜಿಲ್ಲೆಗೆ ಸೈನಿಕ ಶಾಲೆ ಮಂಜೂರು: ಕರ್ನಾಟಕದಲ್ಲಿ ಐದನೇ ಶಾಲೆ

Bidar News:ಬೀದರ್‌ ಜಿಲ್ಲೆಗೆ ಸೈನಿಕ ಶಾಲೆ ಮಂಜೂರು: ಕರ್ನಾಟಕದಲ್ಲಿ ಐದನೇ ಶಾಲೆ

Bidar Sainik school ಕರ್ನಾಟಕದ ಬೀದರ್‌ನಲ್ಲೂ ಸೈನಿಕ ಶಾಲೆ ಆರಂಭಕ್ಕೆ ಅನುಮತಿ ದೊರೆತಿದೆ. ಈ ಮೂಲಕ ಕರ್ನಾಟಕದಲ್ಲಿ ಐದನೇ ಸೈನಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ.

ಬೀದರ್‌ನಲ್ಲಿ ಸೈನಿಕ ಶಾಲೆ ಮಂಜೂರು ಮಾಡಿದ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರಿಗೆ ಸಚಿವ ಭಗವಂತ ಖೂಬಾ ಅಭಿನಂದನೆ ಸಲ್ಲಿಸಿದರು.
ಬೀದರ್‌ನಲ್ಲಿ ಸೈನಿಕ ಶಾಲೆ ಮಂಜೂರು ಮಾಡಿದ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರಿಗೆ ಸಚಿವ ಭಗವಂತ ಖೂಬಾ ಅಭಿನಂದನೆ ಸಲ್ಲಿಸಿದರು.

ಬೀದರ್:‌ ಕರ್ನಾಟಕದ ಗಡಿ ಜಿಲ್ಲೆ ಬೀದರ್‌ಗೆ ಕೊನೆಗೂ ಸೈನಿಕ ಶಾಲೆ ಮಂಜೂರಾಗಿದೆ.

ಈ ಮೂಲಕ ರಾಜ್ಯದಲ್ಲಿ ಐದನೇ ಸೈನಿಕ ಶಾಲೆ ಬೀದರ್‌ ಜಿಲ್ಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದ್ದು, ಗುಣಮಟ್ಟದ ಹಾಗೂ ಕೇಂದ್ರೀಯ ಶಿಕ್ಷಣವನ್ನು ಪಡೆಯಲು ಬೀದರ್‌ ಜಿಲ್ಲೆಯ ಮಕ್ಕಳಿಗೂ ನೆರವಾಗಲಿದೆ.

ಈಗಾಗಲೇ ಕರ್ನಾಟಕದಲ್ಲಿ ವಿಜಯಪುರ ಹಾಗೂ ಕೊಡಗಿನಲ್ಲಿ ಸೈನಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ಮೈಸೂರು ಜಿಲ್ಲೆ ಸರಗೂರಿನಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಸೈನಿಕ ಶಾಲೆಗಳು ಆರಂಭವಾಗಿವೆ. ವಿಜಯಪುರ ಸೈನಿಕ ಶಾಲೆ ಅರವತ್ತು ವರ್ಷಗಳನ್ನು ಪೂರೈಸಿದ್ದು, ಕೊಡಗಿನ ಶಾಲೆ ಒಂದೂವರೆ ದಶಕದ ಹಿಂದೆ ಆರಂಭಗೊಂಡಿದೆ.

ಉತ್ತರ ಕರ್ನಾಟಕದಲ್ಲಿ ಮೂರನೇ ಹಾಗೂ ಕಲ್ಯಾಣ ಕರ್ನಾಟಕದ ಮೊದಲ ಸೈನಿಕ ಶಾಲೆಯಾಗಿ ಬೀದರ್‌ನಲ್ಲಿ ಆರಂಭಿಸಲು ಅನುಮತಿ ನೀಡಿರುವುದು ವಿಶೇಷ.

ಬಹುದಿನಗಳ ಬೇಡಿಕೆ

ಬೀದರ್‌ ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿರುವ ದೇಶದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ಸೈನಿಕ ಶಾಲೆ ಕೇಂದ್ರ ಸರಕಾರ ಮಂಜೂರು ಮಾಡಿದೆ.

ಹಲವಾರು ಬಾರಿ ಜಿಲ್ಲೆಗೆ ಸೈನಿಕ ಶಾಲೆ ಮಂಜೂರು ಮಾಡುವಂತೆ ಕೇಂದ್ರದ ರಕ್ಷಣಾ ಖಾತೆ ಸಚಿವ ರಾಜನಾಥ ಸಿಂಗ್‌ ಅವರಿಗೆ ಮನವಿ ಮಾಡಲಾಗಿತ್ತು. ಇದೀಗ ಸಚಿವರು ಜಿಲ್ಲೆಗೆ ಸೈನಿಕ ಶಾಲೆ ಮಂಜೂರು ಮಾಡಿದ್ದಾರೆ ಎಂದು ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಮುಂದಿನ ವರ್ಷ ಶುರು

ಆದಷ್ಟೂ ಬೇಗ ಸೈನಿಕ ಶಾಲೆಯ ನಿರ್ಮಾಣ ಕಾಮಗಾರಿ ಹಾಗೂ ತರಗತಿಗಳ ಪ್ರಾರಂಭಕ್ಕೆ ಅವಶ್ಯಕವಾಗಿರುವ ಎಲ್ಲಾ ಪ್ರಕ್ರಿಯೆಗಳು ಮುಗಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಸಚಿವ ರಾಜನಾಥ ಸಿಂಗ್‌ ಅವರಿಗೆ ಮನವಿ ಮಾಡಿದಾಗ, ರಕ್ಷಣಾ ಸಚಿವರು ಬರುವ ವರ್ಷದಿಂದ ತರಗತಿಗಳು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಖೂಬಾ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸೈನಿಕ ಶಾಲೆಯೂ ಕೇಂದ್ರ ಸರ್ಕಾರದಿಂದ ನೀಡಿರುವ ಬಹುಮೂಲ್ಯ ಕೊಡುಗೆಯಾಗಿದೆ ಎಂದರೆ ತಪ್ಪಾಗಲಾರದು, ಸೈನಿಕ ಶಾಲೆಗಾಗಿ ಎಲ್ಲಾ ರಾಜ್ಯದವರು ನಿರಂತರವಾಗಿ ಪ್ರಯತ್ನ ಮಾಡುತ್ತಾರೆ. ಆದರೆ ಈ ಸಾಲಿನಲ್ಲಿ ನಾನು ಎಲ್ಲರಿಗಿಂತ ಮೊದಲಿಗನಾಗಿ ಯಶಸ್ವಿಯಾಗಿದ್ದೇನೆ, ನಮ್ಮ ಸರ್ಕಾರ ಯಾವಾಗಲೂ ಬೀದರ್ ಜಿಲ್ಲೆಯ ಮೇಲೆ ವಿಶೇಷ ಕಾಳಜಿ ಇಟ್ಟಿದ್ದಾರೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ ಎಂದು ಸಚಿವ ಖೂಬಾ ಬಣ್ಣಿಸಿದ್ದಾರೆ.

ಎಷ್ಟು ಮಕ್ಕಳಿಗೆ ಅವಕಾಶ

ಸೈನಿಕ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೂ ಶಿಕ್ಷಣ ಪಡೆಯಲು ಅವಕಾಶವಿದೆ. ಶಿಸ್ತಿನ ಶಿಕ್ಷಣಕ್ಕೆ ಸೈನಿಕ ಶಾಲೆಗಳು ಹೆಸರುವಾಸಿ. ಪಠ್ಯಕ್ರಮದ ಜತೆಗೆ ಪಠ್ಯೇತರ ವಿಚಾರದಲ್ಲೂ ಇಲ್ಲಿ ಕಟ್ಟುನಿಟ್ಟು. ಇಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಮುಂದೆ ಸೇನೆ ಸೇರಲು ಉತ್ತೇಜಿಸಲಾಗುತ್ತದೆ. ಇದೇನೂ ಕಡ್ಡಾಯವಲ್ಲದೇ ಇದ್ದರೂ ಆಸಕ್ತಿ ಇದ್ದವರು ಸೇನೆ ಸೇರಲು ಅವಕಾಶವಿದೆ. ಸೈನಿಕ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬಹುತೇಕ ಉನ್ನತ ಹುದ್ದೆಯಲ್ಲಿದ್ದಾರೆ. ಸೈನಿಕ ಶಾಲೆಗೆ ಪ್ರತಿ ತರಗತಿಗೆ ಅರವತ್ತು ಮಕ್ಕಳ ಪ್ರವೇಶಕ್ಕೆ ಅವಕಾಶವಿದ್ದು, ಪರಿಸ್ಥಿತಿ ನೋಡಿಕೊಂಡು ಹೆಚ್ಚಿಸಲು ಅವಕಾಶವಿದೆ. ಮಕ್ಕಳು ಸೈನಿಕ ಶಾಲೆ ಸೇರಲು ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಅವಕಾಶ. ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೂ ಸೈನಿಕ ಶಾಲೆಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner