Bidar News: ನೆಡುವ ಸಸಿಗಳಿಗೆ ಅಡಿಟ್ ಜೊತೆಗೆ ಜಿಐ ಟ್ಯಾಗ್ ಮಾಡಲು ಕ್ರಮ; 2 ತಿಂಗಳಲ್ಲಿ 5 ಕೋಟಿ ಗಿಡ ನೆಡುವ ಗುರಿ; ಸಚಿವ ಈಶ್ವರ್ ಬಿ ಖಂಡ್ರೆ
Bidar News: ಮುಂಬರುವ 2 ತಿಂಗಳಿನಲ್ಲಿ ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ಮನವಿ ಮಾಡಿದರು.

ಬೀದರ್: ಗಾಳಿ, ಆಹಾರ ಮತ್ತು ನೀರು ಕಲುಷಿತವಾಗುತ್ತಿದೆ. ಪರಿಸರ ನಮ್ಮ ಉಸಿರು. ಹೆಚ್ಚಿನ ಸಸಿಗಳನ್ನು ನೆಡುವ ಮೂಲಕ ನಾಡನ್ನು ಹಸಿರಾಗಿಸಬೇಕು ಎಂದು ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದರು. ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ರೇಷ್ಮೆ ಇಲಾಖೆ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜುಲೈ 1 ರಿಂದ 7ರವರೆಗೆ ಒಂದು ವಾರ ವನ ಮಹೋತ್ಸವದಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಇಂದು 5 ಲಕ್ಷ ಹಾಗೂ ಒಂದು ವಾರದಲ್ಲಿ ರಾಜ್ಯದಲ್ಲಿ ಒಂದು ಕೋಟಿ ಸಸಿಗಳನ್ನು ನೆಡಲಾಗುವುದು. ಮುಂಬರುವ 2 ತಿಂಗಳಿನಲ್ಲಿ ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಳೆದ ಬಾರಿ ವನಮಹೋತ್ಸವ ಸಂದರ್ಭದಲ್ಲಿ ನೆಟ್ಟ ಸಿಸಿಗಳು ರಕ್ಷಣೆಯಾದ ಗಿಡ-ಮರಗಳ ಮಾಹಿತಿ ಇಲ್ಲ. ಆದರಿಂದ ಈ ಬಾರಿ ನೆಡುವ ಸಸಿಗಳಿಗೆ ಅಡಿಟ್ ಜೊತೆಗೆ ಜಿಐ ಟ್ಯಾಗ್ ಅಳವಡಿಸಲಾಗುವುದು. ಇದರಿಂದ ನೆಟ್ಟ ಎಷ್ಟು ಸಸಿಗಳ ರಕ್ಷಣೆಯಾಗಿದೆ ಎಂಬುದರ ಮಾಹಿತಿ ದೊರೆಯುತ್ತದೆ ಎಂದು ಹೇಳಿದರು.
ಬೀದರ್ ಜಿಲ್ಲೆಯ ಜನರು ಹಿಂದಿನಿಂದಲೂ ಗಿಡ-ಮರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾ ಬಂದಿದ್ದಾರೆ. ಆದರೆ ಇತ್ತಿಚೇಗೆ ನಗರವು ಬೆಳೆದಂತೆ ಮರ-ಗಿಡಗಳ ಪ್ರಮಾಣ ಕಡಿಮೆಯಾಗಿದೆ. ಆದರಿಂದ ಮತ್ತೊಮ್ಮೆ ಎಲ್ಲರೂ ವನಮಹೋತ್ಸವ ಯಶಸ್ವಿಯಾಗಲು ತಮ್ಮ ಕಚೇರಿ, ಶಾಲಾ-ಕಾಲೇಜುಗಳ ಆವರಣ, ರಸ್ತೆ ಬದಿಯಲ್ಲಿ ಹೀಗೆ ಎಲ್ಲಿ ಸಸಿಗಳನ್ನು ನೆಡಲು ಸಾಧ್ಯವೋ ಅಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಹೇಳಿದರು.
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವನ್ಯ ಮೃಗಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಕೃಷ್ಣ ಮೃಗಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಕೃಷ್ಣಮೃಗಗಳ ಸಂರಕ್ಷಿತ ಮೀಸಲು ವಲಯ ಸ್ಥಾಪಿಸಲಾಗುವುದು. ಬೀದರ್ನ ಕೋಳಾರ ಕೈಗಾರಿಕಾ ಪ್ರದೇಶ, ಹುಮನ್ನಾಬಾದ್ ಕೈಗಾರಿಕೆಗಳ ತ್ಯಾಜ್ಯವು, ಜನರು ಬಳಸುವ ಬಾವಿ ಹಾಗೂ ಕೊಳವೆ ಬಾವಿಗಳಿಗೆ ಸೇರುತ್ತಿವೆ. ಆದ್ದರಿಂದ ಅಂತಹ ಕೈಗಾರಿಕೆಗಳ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಬೀದರ್ ದಕ್ಷಿಣ ಶಾಸಕ ಶೈಲೇಂದ್ರ ಕೆ. ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಅರವಿಂದ್ ಕುಮಾರ ಅರಳಿ ಮತ್ತು ಚಂದ್ರಶೇಖರ ಬಿ. ಪಾಟೀಲ್ ಮಾತನಾಡಿದರು. ವನಮಹೋತ್ಸವದ ಉದ್ದೇಶ ಏನೆಂದು ವಿವರಿಸಿದರು.
ಸಸಿ ನೆಟ್ಟ ಸಚಿವರು, ಶಾಸಕರು
ವೇದಿಕೆ ಕಾರ್ಯಕ್ರಮ ಮುಕ್ತಾಯದ ನಂತರ ರೇಷ್ಮೆ ಇಲಾಖೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಪೌರಾಡಳಿತ ಸಚಿವರು, ಶಾಸಕರು, ವಿಧಾನ ಪರಿಷತ ಸದಸ್ಯರು ಹಾಗೂ ಅಧಿಕಾರಿಗಳು ಒಂದೊಂದು ಸಸಿಗಳನ್ನು ನೆಡುವ ಮೂಲಕ ಗಮನ ಸೆಳೆದರು. ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು, ಶಿಕ್ಷಕರು ಕೂಡ ಗಿಡ ನೆಟ್ಟರು.
ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಎನ್.ಪಾಟೀಲ್, ವಿಧಾನ ಪರಿಷತ ಸದಸ್ಯ ಭೀಮರಾವ ಬಿ. ಪಾಟೀಲ್, ಪ್ರಧಾನ ಅರಣ್ಯ ಸಂರಕ್ಷಣಾಧೀಕಾರಿ ( ಅರಣ್ಯ ಪಡೆ) ರಾಜೀವ್ ರಂಜನ್, ಪ್ರಧಾನ ಕಾರ್ಯದರ್ಶಿ (ಅರಣ್ಯ) ಡಾ. ಸಂಜಯ್ ಬಿಜ್ಜೂರ್ ಸೇರಿದಂತೆ ಹಲವರು ಇದ್ದರು.
ವರದಿ: ಎಸ್. ಬಿ.ರೆಡ್ಡಿ
