ಕನ್ನಡ ಸುದ್ದಿ  /  Karnataka  /  Bidar News: Karnataka High Court Orders Separate Housing Facility For Second Wife Of Bidar Person Said Report

Bidar News: ಎರಡನೇ ಪತ್ನಿಯೂ ನಿಮ್ಮ ಮೊದಲ ಪತ್ನಿ‌ ಜತೆಗೆ ಒಂದೇ ಮನೆಯಲ್ಲಿದರೆ ಕಷ್ಟ; 2ನೇ ಪತ್ನಿಗೆ ಬೇರೆ ವಸತಿ ವ್ಯವಸ್ಥೆ ಮಾಡಿಕೊಡಿ-ಕೋರ್ಟ್‌

Court News: ಇದು ಬೀದರ್‌ ಜಿಲ್ಲೆಯ ವ್ಯಕ್ತಿಯೊಬ್ಬರ ಕುಟುಂಬದ ಸಮಸ್ಯೆ. ಅವರ ಮೊದಲ ಪತ್ನಿ ಮತ್ತು ಕುಟುಂಬ ಸದಸ್ಯರು ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌ (HT Kannada File photo)

ಎರಡನೇ ಪತ್ನಿಯೂ ನಿಮ್ಮ ಮೊದಲ ಪತ್ನಿಯ ಜತೆಗೆ ಒಂದೇ ಮನೆಯಲ್ಲಿದ್ದರೆ ಕಷ್ಟವಾದೀತು. ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಕ್ಕೂ ಕಾರಣವಾದೀತು. ಆದ್ದರಿಂದ ಎರಡನೇ ಪತ್ನಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿಕೊಡಬೇಕು. ಅದಕ್ಕಾಗಿ ಆಕೆಗೆ ಪ್ರತಿ ತಿಂಗಳು 5,000 ರೂಪಾಯಿ ನೀಡಬೇಕು ಎಂದು ರಾಜ್ಯ ಹೈಕೋರ್ಟ್‌ ತೀರ್ಪು ನೀಡಿದೆ.

ಇದು ಬೀದರ್‌ ಜಿಲ್ಲೆಯ ವ್ಯಕ್ತಿಯೊಬ್ಬರ ಕುಟುಂಬದ ಸಮಸ್ಯೆ. ಅವರ ಮೊದಲ ಪತ್ನಿ ಮತ್ತು ಕುಟುಂಬ ಸದಸ್ಯರು ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಈ ತೀರ್ಪು ನೀಡಿದ್ದಾರೆ. ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಈ ನ್ಯಾಯಪೀಠ ಮಾರ್ಪಾಡು ಮಾಡಿ ತೀರ್ಪು ನೀಡಿದೆ ಎಂದು ವಿಜಯವಾಣಿ ವರದಿ ಹೇಳಿದೆ.

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣಾ ಕಾಯ್ದೆ ಪ್ರಕಾರ, ವ್ಯಕ್ತಿಯ ಎರಡನೇ ಪತ್ನಿ ಕೇಸ್‌ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು, ಆಕೆಗೆ ಪ್ರತಿ ತಿಂಗಳು 6,000 ರೂಪಾಯಿ ಜೀವನಾಂಶ ನೀಡಬೇಕು. ಮೊದಲ ಪತ್ನಿ ಮತ್ತು ಕುಟುಂಬದವರು ಇರುವಂತಹ ಮನೆಯಲ್ಲೇ ಒಂದು ಕೊಠಡಿಯಲ್ಲಿ ಈಕೆಗೂ ವಸತಿ ವ್ಯವಸ್ಥೆ ಮಾಡಬೇಕು ಎಂದು ಪತಿಗೆ (ಬೀದರ್‌ ಜಿಲ್ಲೆಯ ವ್ಯಕ್ತಿ) ಆದೇಶ ನೀಡಿತ್ತು.

ಈ ವಿದ್ಯಮಾನವು ಮೊದಲ ಪತ್ನಿ ಮತ್ತು ಕುಟುಂಬದವರ ನೆಮ್ಮದಿ ಕೆಡಿಸಿತು. ಅವರು ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್‌ ನ್ಯಾಯಪೀಠ ಹೇಳಿದ್ದೇನು?

ಬೀದರ್‌ ಜಿಲ್ಲೆಯ ವ್ಯಕ್ತಿಯ ಮೊದಲ ಪತ್ನಿ ಮತ್ತು ಕುಟುಂಬ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್‌ ನ್ಯಾಯಪೀಠ, ವ್ಯಕ್ತಿಯ ಮೊದಲ ಪತ್ನಿ ಇರುವ ಮನೆಯಲ್ಲೀಯೇ ಪ್ರತ್ಯೇಕ ಕೊಠಡಿಯಲ್ಲಿ ಎರಡನೇ ಪತ್ನಿಯೂ ವಾಸಮಾಡುವುದು ಪ್ರಾಯೋಗಿಕವಾಗಿ ನೋಡಿದರೆ ಸಮಂಜಸವೆನಿಸದು. ಅದು ಕಾರ್ಯಸಾಧುವೂ ಅಲ್ಲ. ಈ ರೀತಿ ಮಾಡಿದಾಗ, ಕುಟುಂಬದ ಇತರ ಸದಸ್ಯರ ಜತೆಗೆ ಅಸಮಾಧಾನ ಉಂಟಾಗಿ ವಾಕ್ಸಮರ ಮತ್ತು ಇತರೆ ರಾದ್ಧಾಂತಗಳಿಗೆ ಕಾರಣವಾಗಬಹುದು. ಇದು ಸಿವಿಲ್‌ ಹಾಗೂ ಕ್ರಿಮಿನಲ್‌ ಕೇಸ್‌ಗಳಿಗೂ ವೇದಿಕೆಯಾಗಬಹುದು.

ಇವಿಷ್ಟನ್ನೂ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ದ್ವಿತೀಯ ಪತ್ನಿಗೆ ಪ್ರತ್ಯೇಕ ಸ್ಥಳದಲ್ಲಿ ವಸತಿ ವ್ಯವಸ್ಥೆ ಮಾಡಿಕೊಡುವುದು ಸೂಕ್ತವಾಗಿದೆ. ಇದಕ್ಕಾಗಿ ಪತಿಯು ಆಕೆಗೆ ಪ್ರತಿ ತಿಂಗಳು 5,000 ರೂಪಾಯಿ ನೀಡಬೇಕು. ಈ ಹಣ ಉಪಯೋಗಿಸಿಕೊಂಡು ಆಕೆ ಒಂದು ಕೊಠಡಿಗಿಂತ ದೊಡ್ಡದಾಗಿರುವ ಮನೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದನ್ನು ಪತಿ ಪಾಲಿಸಬೇಕಾಗಿದ್ದು, ವಿಚಾರಣಾ ನ್ಯಾಯಾಲಯ ನೀಡಿದ ಆದೇಶ ಪ್ರಕಾರ ಆಕೆಗೆ ಪ್ರತಿ ತಿಂಗಳ ಜೀವನಾಂಶವಾಗಿ 6,000 ರೂಪಾಯಿಯನ್ನೂ ಪಾವತಿಸಬೇಕಾದ್ದು ಕಡ್ಡಾಯ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.

ಗಮನಿಸಬಹುದಾದ ಸುದ್ದಿ

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ; ಹಿಜಾಬ್‌ ಧರಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಇಲ್ಲ

ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯು ಇಂದು ರಾಜ್ಯದ 5,716 ಕಾಲೇಜುಗಳ 1,109 ಪರೀಕ್ಷಾ ಕೇಂದ್ರಗಳಲ್ಲಿ ಶುರುವಾಗುತ್ತಿದೆ.ಈ ಕೇಂದ್ರಗಳಲ್ಲಿ 1,109 ಸಹ ಮುಖ್ಯಶಿಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ, 2373 ವಿಶೇಷ ಜಾಗೃತ ದಳದ ಸಿಬ್ಬಂದಿಯನ್ನು ಪರೀಕ್ಷಾ ನಿರ್ವಹಣೆಗಾಗಿ ನಿಯೋಜಿಸಲಾಗಿದೆ. ಇದಲ್ಲದೆ, ಸಿಸಿ ಟಿವಿ ಕ್ಯಾಮೆರಾ, ಪೊಲೀಸ್‌ ಬಂದೋಬಸ್ತ್‌ ಕೂಡ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ