Bidar Ganja News: ಅಕ್ರಮ ಗಾಂಜಾ ಸಾಗಾಟ; ಇಬ್ಬರು ಆರೋಪಿಗಳ ಬಂಧನ, ಕೋಟಿ ಮೌಲ್ಯದ 118 ಕೆಜಿ ಗಾಂಜಾ ವಶ
Bidar police seize ganja: ಜೂನ್ 24 ರಂದು ಬೆಳಗ್ಗೆ ಬೀದರ್ನಿಂದ ಹುಮನಾಬಾದ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಇಳಿದ ಪೊಲೀಸರು ಹುಮನಾಬಾದ್ ಪಟ್ಟಣದ ರಾಮನರಾಜ ಕಾಲೇಜಿನ ಬಳಿ ಆರೋಪಿಗನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀದರ್: ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ಡ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 1.23 ಕೋಟಿ ಮೌಲ್ಯದ 118 ಕೆಜಿ ಗಾಂಜಾ, ಒಂದು ಮಾರುತಿ ಸುಜುಕಿ ಕಾರ್, 3 ಮೊಬೈಲ್, ಹಾಗೂ 15 ಸಾವಿರ ರೂಪಾಯಿ ನಗದು ಹಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಚನ್ನಬಸವಣ್ಣ, ಜೂನ್ 24 ರಂದು ಬೆಳಗ್ಗೆ ಬೀದರ್ನಿಂದ ಹುಮನಾಬಾದ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಇಳಿದ ಪೊಲೀಸರು ಹುಮನಾಬಾದ್ ಪಟ್ಟಣದ ರಾಮನರಾಜ ಕಾಲೇಜಿನ ಬಳಿ ಆರೋಪಿಗನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪೈಕಿ ಓರ್ವ ಕರ್ನಾಟಕ ಮೂಲದವನು, ಇನ್ನೊರ್ವ ಉತ್ತರ ಪ್ರದೇಶ ಮೂಲದ ಮಹಾರಾಷ್ಟ್ರ ನಿವಾಸಿಯಾಗಿದ್ದಾನೆ ಎಂದರು.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದು ಇವರ ಕಾರ್ಯವನ್ನು ಮೆಚ್ಚಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಬಹುಮಾನ ವಿತರಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಿಂದ ಅಂತರರಾಜ್ಯ ಗಾಂಜಾ ಸಾಗಾಣಿಕೆ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 16 ಅಕ್ರಮ ಗಾಂಜಾ ಸಾಗಾಣಿಕೆಯ ಪ್ರಕರಣ ಭೇದಿಸಿ 10.17 ಕೋಟಿ ಮೌಲ್ಯದ 1017 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದರು.
ಮಫ್ತಿಯಲ್ಲಿ ಪೊಲೀಸ್ ಠಾಣೆಯ ಕಾರ್ಯವೈಖರಿ ಪರಿಶೀಲನೆ:
ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೋ ಇಲ್ಲವೋ ಎನ್ನುವ ಮಾಹಿತಿ ಪಡೆಯಲು 29 ಪೊಲೀಸ್ ಸಿಬ್ಬಂದಿಯನ್ನು ಜಿಲ್ಲೆಯ 29 ವಿವಿಧ ಪೊಲೀಸ್ ಠಾಣೆಗೆ ತೆರಳಿ ವಿವಿಧ ರೀತಿಯ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಲಾಗಿತ್ತು. ಇವರು ತೆರಳಿದ 29 ಠಾಣೆಗಳಲ್ಲಿ 20 ಠಾಣೆಯ ಸಿಬ್ಬಂದಿ ಉತ್ತಮವಾಗಿ ಸ್ಪಂದಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದರೆ ಉಳಿದ 9 ಠಾಣೆಗಳಲ್ಲಿ ಸಿಬ್ಬಂದಿ ಪ್ರಕರಣ ದಾಖಲಿಸಲು ನಿರಾಕರಿಸಿದರು. ಅವರಿಗೆ ಎಎಸ್ಪಿ ಹಾಗೂ ಡಿಎಸ್ಪಿ ಅವರಿಂದ ತಿಳುವಳಿಕೆ ನೀಡಲಾಗಿದೆ ಎಂದು ಹೇಳಿದರು.
ಸಂಚಾರ ಸುವ್ಯವಸ್ಥೆಗೆ ಕ್ರಮ:
ಜಿಲ್ಲೆ ಜನರಿಗೆ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ಸಂಚಾರ ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆ, ನಗರಸಭೆ, ಪಿಡಬ್ಲೂಡಿ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಈಗಾಗಲೇ ಸಂಚಾರ ಸುವ್ಯವಸ್ಥೆಗಾಗಿ ಯಾವ ಇಲಾಖೆಯಿಂದ ಏನೆಲ್ಲಾ ಕೆಲಸ ಕಾರ್ಯಗಳು ನಡೆಯಬೇಕು ಎನ್ನುವ ಮಾಹಿತಿ ಪಡೆಯಲು ಜಂಟಿಯಾಗಿ ಸಿಟಿ ರೌಂಡ್ಸ್ ನಡೆಸಲಾಗಿದೆ ಎಂದ ಅವರು ರಸ್ತೆ ಮೇಲೆ ಓಡಾಡುವ ಬಿಡಾಡಿ ಗೋವುಗಳಿಗೆ ವೆಟರನರಿ ಇಲಾಖೆ ಸಹಾಯದಿಂದ ಅವುಗಳಿಗೆ ಗೋಶಾಲೆಗಳಲ್ಲಿ ಬೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹುಮನಾಬಾದ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಾಜಪುತ್, ಹುಮನಾಬಾದ್ ಸಿಪಿಐ ಶರಣಬಸಪ್ಪಾ ಕೋಡ್ಲಾ, ಪಿಎಸ್‌ಐಗಳಾದ ಸುರೇಶ್ ಹಜ್ಜರಗಿ, ಬಸವರಾಜ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಬಿ ಎಸ್ ರೆಡ್ಡಿ