Bidar News: ದಸರಾ ರಜೆಗೆಂದು ಊರಿಗೆ ಬಂದ ಕಾರ್ಮಿಕರಿಬ್ಬರು ಹೊಂಡದಲ್ಲಿ ಬಿದ್ದು ಸಾವು
Bidar News ಬೀದರ್ ಜಿಲ್ಲೆಯ ಚಿಟಗುಪ್ಪಿ ಠಾಣೆ ವ್ಯಾಪ್ತಿಯಲ್ಲಿ ಕಲ್ಲು ಗಣಿ ಗುಂಡಿಯಲ್ಲಿ ಈಜಲು ಹೋದ ಇಬ್ಬರು ಕೂಲಿಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ.
ಬೀದರ್: ಅವರು ಬಂದಿದ್ದು ದಸರಾ ಹಬ್ಬದ ರಜೆಗೆಂದು. ಆದರೆ ಆಗಿದ್ದೇ ಬೇರೆ. ದೂರದಲ್ಲೆಲ್ಲೋ ಕೆಲಸ ಮಾಡುತ್ತಾ ರಜೆ ಕಳೆಯಲು ಊರಿಗೆ ಬಂದವರು ಮೃತಪಟ್ಟ ಹೃದಯವಿದ್ರಾವಕ ಘಟನೆಯಿದು.
ಇದು ನಡೆದಿರುವುದು ಬೀದರ್ ಜಿಲ್ಲೆಯಲ್ಲಿ.
ಕಲ್ಲು ಗಣಿ ಹೊಂಡದಲ್ಲಿ ಮುಳುಗಿ ಇಬ್ಬರು ಕಾರ್ಮಿಕರು ಧಾರುಣವಾಗಿ ಸಾವಿಗೀಡಾದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಫಾತ್ಮಾಪುರ ಗ್ರಾಮದಲ್ಲಿ ನಡೆದಿದೆ.
ಫಾತ್ಮಾಪುರ ಗ್ರಾಮದ ಸೈಯದ್ ಸಮೀರ್ (20) ಮತ್ತು ಮಹ್ಮದ್ ಖಾಜಾ ಯೂಸೂಫ್ (20) ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರು ಕಾರ್ಮಿಕರು ಪಕ್ಕದ ತೆಲಂಗಾಣ ರಾಜ್ಯದ ಹೈದ್ರಾಬಾದ್ ನಗರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತ ಅಲ್ಲಿಯೇ ನೆಲೆಸಿದ್ದರು. ದಸರಾ ಹಬ್ಬದ ಹಿನ್ನೆಲೆಯಲ್ಲಿ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು.
ಬೆಳಗ್ಗೆ ಇಬ್ಬರು ಈಜಾಡಲು ಹೋಗೋಣವೆಂದು ನಿರ್ಧರಿಸಿ ತಮ್ಮ ಗ್ರಾಮದಲ್ಲಿಯೇ ಇರುವ ಕಲ್ಲು ಗಣಿ ಹೊಂಡದಲ್ಲಿ ಈಜಲು ಹೋಗಿದ್ದಾರೆ. ಮೇಲಿಂದ ಕೆಳಗೆ ಜಿಗಿದು ಈಜಾಡಲು ಆರಂಭಿಸಿದ್ದಾರೆ. ಇದನ್ನು ಗ್ರಾಮದ ಕೆಲವು ನಿವಾಸಿಗಳು ಗಮನಿಸಿದ್ದಾರೆ.
ಹಲವಾರು ಗಂಟೆಗಳ ಕಾಲ ಆಚೆ ಬರದೆ ಇರುವುದನ್ನು ನೋಡಿದ ಗ್ರಾಮಸ್ಥರು ತಕ್ಷಣ ಜಿಲ್ಲೆಯ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಕಲ್ಲು ಗಣಿ ಹೊಂಡಕ್ಕೆ ಇಳಿಯುತ್ತಿದ್ದಂತೆ ಎರಡು ಮೃತ ದೇಹಗಳು ಮೇಲೆ ತೇಲಿರುವುದು ಕಂಡು ಬಂದಿದೆ. ಎರಡು ಮೃತ ದೇಹಗಳನ್ನು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲಿನಿಂದ ಜಿಗಿದಾಗ ನೀರಿನೊಳಗೆ ಸಿಲುಕಿ ಮೃತಪಟ್ಟಿರುವುದು ಕಂಡು ಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಕ್ರಮ ಕೈಗೊಂಡಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.