Bidar Crime: ಕಲುಷಿತ ನೀರು ಕುಡಿದು ಆಣದೂರು ಗ್ರಾಮಸ್ಥರು ಅಸ್ವಸ್ಥ, ಓವರ್‌ಹೆಡ್‌ ಟ್ಯಾಂಕ್‌ನಲ್ಲಿತ್ತು 28 ವರ್ಷದ ಯುವಕನ ಶವ
ಕನ್ನಡ ಸುದ್ದಿ  /  ಕರ್ನಾಟಕ  /  Bidar Crime: ಕಲುಷಿತ ನೀರು ಕುಡಿದು ಆಣದೂರು ಗ್ರಾಮಸ್ಥರು ಅಸ್ವಸ್ಥ, ಓವರ್‌ಹೆಡ್‌ ಟ್ಯಾಂಕ್‌ನಲ್ಲಿತ್ತು 28 ವರ್ಷದ ಯುವಕನ ಶವ

Bidar Crime: ಕಲುಷಿತ ನೀರು ಕುಡಿದು ಆಣದೂರು ಗ್ರಾಮಸ್ಥರು ಅಸ್ವಸ್ಥ, ಓವರ್‌ಹೆಡ್‌ ಟ್ಯಾಂಕ್‌ನಲ್ಲಿತ್ತು 28 ವರ್ಷದ ಯುವಕನ ಶವ

ಬೀದರ್ ತಾಲೂಕು ಆಣದೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಗ್ರಾಮಸ್ಥರು ಅಸ್ವಸ್ಥರಾಗಿದ್ದರು. ಸತತ ಮೂರು ನಾಲ್ಕು ದಿನಗಳಿಂದ ಈ ರೀತಿ ಆಗುತ್ತಿದ್ದ ಕಾರಣ ಹಲವಾರು ಅನುಮಾನಗಳು ಉಂಟಾಗಿದ್ದವು. ಪರಿಶೀಲಿಸಿದಾಗ ಓವರ್‌ಹೆಡ್ ಟ್ಯಾಂಕ್‌ನಲ್ಲಿತ್ತು 28 ವರ್ಷದ ಯುವಕನ ಶವ. ಈ ಪ್ರಕರಣದ ವಿವರ ಇಲ್ಲಿದೆ.

ಓವರ್‌ಹೆಡ್‌ ಟ್ಯಾಂಕ್‌ (ಸಾಂಕೇತಿಕ ಚಿತ್ರ)
ಓವರ್‌ಹೆಡ್‌ ಟ್ಯಾಂಕ್‌ (ಸಾಂಕೇತಿಕ ಚಿತ್ರ)

ಬೀದರ್: ತಾಲೂಕಿನ ಆಣದೂರು ಗ್ರಾಮದ ಜನ ಮೂರು ನಾಲ್ಕು ದಿನಗಳಿಂದ ನೀರು ಕುಡಿದ ಕೂಡಲೇ ಅಸ್ವಸ್ಥರಾಗುತ್ತಿದ್ದರು. ಇದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪರಿಶೀಲಿಸಿದಾಗ ಓವರ್‌ಹೆಡ್‌ ಟ್ಯಾಂಕ್‌ನಲ್ಲಿತ್ತು 28 ವರ್ಷದ ಯುವಕನ ಶವ.

ಮೃತ ಯುವಕನನ್ನು ರಾಜ್‌ಕುಮಾರ್ (28) ಎಂದು ಗುರುತಿಸಲಾಗಿದೆ. ಓವರ್‌ಹೆಡ್ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಕುರಿತು ಪೊಲೀಸ್ ಕೇಸ್ ದಾಖಲಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಟ್ಯಾಂಕ್‌ ಸ್ವಚ್ಛತಾ ಕಾರ್ಯ ನಡೆಸಿದೆ. ಜಿಲ್ಲಾ ವೈದ್ಯಾಧಿಕಾರಿಗಳ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಗ್ರಾಮಸ್ಥರ ಆರೋಗ್ಯ ಕಾಳಜಿ ಮುನ್ನೆಲೆಗೆ ಬಂದಿದ್ದು, ಕಲುಷಿತ ನೀರು ಕುಡಿದು ಅಸ್ವಸ್ಥರಾದ ಗ್ರಾಮಸ್ಥರು ವಾಂತಿ ಬೇಧಿಗೆ ಒಳಗಾಗಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ಎಲ್ಲರೂ ಮನಸ್ಸಿನಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಆಣದೂರು ಓವರ್‌ಹೆಡ್ ಟ್ಯಾಂಕ್‌ನಲ್ಲಿ ಯುವಕನ ಶವ ಪತ್ತೆ

ಆಣದೂರು ಓವರ್‌ಹೆಡ್‌ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾದ ಯುವಕ ರಾಜ್‌ ಕುಮಾರ್ ವಿವಾಹಿತ. ಅನೈತಿಕ ಸಂಬಂಧ ಕಾರಣ ಆತನ ಪತ್ನಿ ಬೇರೊಬ್ಬನನ್ನು ವಿವಾಹವಾಗಿದ್ದಳು. ಇದರಿಂದ ನೊಂದಿದ್ದ ಆತ ಮದ್ಯಸೇವನೆ ಹೆಚ್ಚು ಮಾಡಿಕೊಂಡಿದ್ದ. ಕುಡಿತದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಆತ ಆತ್ಮಹತ್ಯೆ ಮಾಡಿಕೊಂಡು ಮೂರು ದಿನಗಳಾಗಿದ್ದು, ಓವರ್‌ಹೆಡ್ ಟ್ಯಾಂಕ್‌ನಲ್ಲಿ ಆತನ ಶವ ಇದೆ ಎಂಬುದು ಗ್ರಾಮಸ್ಥರ ಅರಿವಿಗೆ ಬಂದಿರಲಿಲ್ಲ. ಮೂರು ದಿನಗಳಿಂದ ಗ್ರಾಮಸ್ಥರು ಅದೇ ಓವರ್‌ಹೆಡ್ ಟ್ಯಾಂಕ್‌ನ ನೀರನ್ನೇ ಬಳಸಿದ್ದಾರೆ. ಮೂರನೇ ದಿನವಾದ ನಿನ್ನೆ (ಶುಕ್ರವಾರ ಮಾರ್ಚ್ 29) ನೀರು ವಾಸನೆ ಬರಲಾರಂಭಿಸಿದ್ದು, ಈ ಬಗ್ಗೆ ದೂರು ನೀಡಿದ್ದರು.

ನೀರಿನಲ್ಲಿ ಕೂದಲು ಮತ್ತು ಚರ್ಮದ ತುಣಕುಗಳು ಬಂದಿದ್ದವು. ಹೀಗಾಗಿ, ಓವರ್‌ಹೆಡ್ ಟ್ಯಾಂಕ್ ಪರಿಶೀಲಿಸಿದಾಗ ಅಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಶವ ಇರುವ ಟ್ಯಾಂಕಿನ ನೀರು ಸೇವಿಸಿರುವ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ.

ಆಣದೂರು ಗ್ರಾಮಕ್ಕೆ ಆಗಮಿಸಿದ ಜಿಲ್ಲಾಡಳಿತ

ಆಣದೂರು ಓವರ್‌ಹೆಡ್ ಟ್ಯಾಂಕ್‌ನಲ್ಲಿ ಯುವಕನ ಶವ ಪತ್ತೆಯಾಗಿದ್ದು, ಗ್ರಾಮಸ್ಥರು ಅಸ್ವಸ್ಥರಾಗಿರುವ ವಿಚಾರ ಸುದ್ದಿಯಾಗುತ್ತಲೇ ಜಿಲ್ಲಾಡಳಿತ ಗ್ರಾಮಕ್ಕೆ ಆಗಮಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಓವರ್‌ಹೆಡ್ ಟ್ಯಾಂಕ್‌ನಿಂದ ಯುವಕನ ಶವ ಹೊರತೆಗೆದಿದೆ. ಜನವಾಡಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದರು.

ಇನ್ನೊಂದೆಡೆ, ಆರೋಗ್ಯ ಇಲಾಖೆ ಸಿಬ್ಬಂದಿ ಉಸ್ತುವಾರಿ ಟ್ಯಾಂಕ್ ಸ್ವಚ್ಛತಾ ಕಾರ್ಯ ಮತ್ತು ಗ್ರಾಮಸ್ಥರ ಆರೋಗ್ಯ ತಪಾಸಣೆ ಕಾರ್ಯ ನಡೆಯಿತು. ಬಹುತೇಕ ಗ್ರಾಮಸ್ಥರು ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಇಡೀ ಗ್ರಾಮಕ್ಕೆ ಅದೊಂದೇ ಓವರ್‌ಹೆಡ್ ಟ್ಯಾಂಕ್ ಆದ ಕಾರಣ ಈಗ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

-----------

Whats_app_banner