Bidar News: ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ, ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ಮನವಿ
ಕನ್ನಡ ಸುದ್ದಿ  /  ಕರ್ನಾಟಕ  /  Bidar News: ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ, ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ಮನವಿ

Bidar News: ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ, ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ಮನವಿ

ಬೀದರ್‌ ಜಿಲ್ಲೆಯ ಜೀವನದಿಯಾಗಿರುವ ಕಾರಂಜಾದ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿದ್ದು, ನದಿ ದಂಡೆ ನಿವಾಸಿಗಳು ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಅದೇ ರೀತಿ, ಯಾದಗಿರಿ ಜಿಲ್ಲೆಯಲ್ಲಿ ಕಾಲುವೆಗೆ ನೀರು ಹರಿಸುವ ಚಾಲೂ- ಬಂದ್‌ ಪದ್ಧತಿ ಪರಿಷ್ಕರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ಕಾರಂಜಾ ಜಲಾಶಯ
ಕಾರಂಜಾ ಜಲಾಶಯ

ಬೀದರ್‌: ಜಿಲ್ಲೆಯ ರೈತರ ಜೀವ ನದಿಯಾಗಿರುವ ಕಾರಂಜಾ ಜಲಾಶಯದಿಂದ ಜಮೀನುಗಳಿಗೆ ನೀರು ಹರಿಸಲಾಗುತ್ತಿದ್ದು, ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವುದರ ಜತೆಗೆ ಎಚ್ಚರಿಕೆಯಿಂದ ಇರಬೇಕೆಂದು ಜಲಾಶಯದ ಇಂಜಿನಿಯರ್‌ ಮನವಿ ಮಾಡಿದ್ದಾರೆ.

ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ತೊಗರಿ ಬೆಳೆ, ಜೋಳ, ಕಡಲಿ ಬಿತ್ತಿದ್ದು ಮೊಳಕೆ ಬಂದಿರುವುದಿಲ್ಲ. ಇನ್ನೂ ಕೆಲವು ರೈತರು ಬಿತ್ತುತ್ತಿದ್ದಾರೆ. ಕಾರಣ ಅವರುಗಳ ಜಮೀನುಗಳಿಗೆ ನೀರುಣಿಸಲು ಕಾಲುವೆ ಮುಖಾಂತರ ನೀರು ಬಿಡಲು ಕೋರಿರುವುದರಿಂದ ಬಲದಂಡೆ, ಎಡದಂಡೆ ಕಾರಂಜಾ ಏತ ನೀರಾವರಿ ಹಾಗೂ ಅತಿವಾಳ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲಾಗಿದೆ ಹಾಗೂ ತೈರ ಬೇಡಿಕೆಗೆ ಅನುಗುಣವಾಗಿ ಹಂತಹಂತವಾಗಿ ನೀರು ಹರಿಸಲಾಗುವುದು. ಪ್ರಯುಕ್ತ ಕಾಲುವೆಯ ಹತ್ತಿರ ಅಕ್ಕಪಕ್ಕದ ಜನರು, ಸಾರ್ವಜನಿಕರು ಇಳಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಈಜುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು ಎಂದು ಬೀದರ ಕೆಪಿಸಿ ವಿಭಾಗ ನಂ.1 ಕನೀನಿನಿ ಕಾರ್ಯಪಾಲಕ ಇಂಜಿನಿಯರ್‌ ತಿಳಿಸಿದ್ದಾರೆ.

ಕಾಲುವೆಗೆ ನೀರು ಹರಿಸುವ ಚಾಲೂ-ಬಂದ್ ಪದ್ದತಿ ಪರಿಷ್ಕರಣೆ

ಯಾದಗಿರಿ ವ್ಯಾಪ್ತಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ 2023-24ರ ಮುಂಗಾರು ಹಂಗಾಮಿಗಾಗಿ ನೀರು ಹರಿಸುವ ಚಾಲೂ-ಬಂದ್ ಪದ್ದತಿಯನ್ನು ಪರಿಷ್ಕರಿಸಲಾಗಿದೆ ಎಂದು ಭೀಮರಾಯನಗುಡಿ ಕೃಭಾಜನಿನಿ, ಜೆಬಿಸಿ ವೃತ್ತ ಅಧೀಕ್ಷಕ ಅಭಿಯಂತರ ಸತೀಶ್ ಆರ್ ಹಾಗೂ ಭೀಮರಾಯನಗುಡಿ ಕೃಭಾಜನಿನಿ ಕಾಲುವೆ ವಲಯ ಸಂಖ್ಯೆ.1ರ ಮುಖ್ಯ ಇಂಜಿನಿಯರ್ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಅಕ್ಟೋಬರ್ 14 ರಿಂದ ನವೆಂಬರ್ 18ರ ವೆರೆಗೆ, ನವೆಂಬರ್ 27 ರಿಂದ ಡಿಸೆಂಬರ್ 04ರ ವರೆಗೆ ಕಾಲುವೆ ಚಾಲು ಇರಲಿದ್ದು, ನವೆಂಬರ್ 19 ರಿಂದ 26ರ ವೆರೆಗೆ ಕಾಲುವೆ ಬಂದ್ ಅನುಸರಿಸುವ ಪದ್ದತಿ ಪರಿಷ್ಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಸರಾ ಹಬ್ಬಕ್ಕೆಂದು ಸ್ವಗ್ರಾಮಕ್ಕೆ ಬಂದ ಇಬ್ಬರು ಕಲ್ಲು ಗಣಿ ಹೊಂಡಕ್ಕೆ ಬಿದ್ದು ದುರ್ಮರಣ

ಬೀದರ್:‌ ಕಲ್ಲು ಗಣಿ ಹೊಂಡದಲ್ಲಿ ಮುಳುಗಿ ಇಬ್ಬರು ಕಾರ್ಮಿಕರು ದಾರುಣವಾಗಿ ಸಾವಿಗೀಡಾದ ಘಟನೆ ಬೀದರ್‌ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಫಾತ್ಮಾಪುರ ಗ್ರಾಮದಲ್ಲಿ ನಡೆದಿದೆ.

ಫಾತ್ಮಾಪುರ ಗ್ರಾಮದ ಸೈಯದ್‌ ಸಮೀರ್‌ (20) ಮತ್ತು ಮಹ್ಮದ್‌ ಖಾಜಾ ಯೂಸೂಫ್‌ (20) ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರು ಕಾರ್ಮಿಕರು ಪಕ್ಕದ ತೆಲಂಗಾಣ ರಾಜ್ಯದ ಹೈದ್ರಾಬಾದ್‌ ನಗರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತ ಅಲ್ಲಿಯೇ ನೆಲೆಸಿದ್ದರು. ದಸರಾ ಹಬ್ಬದ ಹಿನ್ನೆಲೆಯಲ್ಲಿ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಇಬ್ಬರು ಈಜಾಡಲು ಹೋಗೋಣವೆಂದು ನಿರ್ಧರಿಸಿ ತಮ್ಮ ಗ್ರಾಮದಲ್ಲಿಯೇ ಇರುವ ಕಲ್ಲು ಗಣಿ ಹೊಂಡದಲ್ಲಿ ಈಜಲು ಹೋಗಿದ್ದಾರೆ.

ಮೇಲಿಂದ ಕೆಳಗೆ ಜಿಗಿದು ಈಜಾಡಲು ಆರಂಭಿಸಿದ್ದಾರೆ. ಇದನ್ನು ಗ್ರಾಮದ ಕೆಲವು ನಿವಾಸಿಗಳು ಗಮನಿಸಿದ್ದಾರೆ. ಹಲವಾರು ಗಂಟೆಗಳ ಕಾಲ ಆಚೆ ಬರದೆ ಇರುವುದನ್ನು ನೋಡಿದ ಗ್ರಾಮಸ್ಥರು ತಕ್ಷಣ ಜಿಲ್ಲೆಯ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಕಲ್ಲು ಗಣಿ ಹೊಂಡಕ್ಕೆ ಇಳಿಯುತ್ತಿದ್ದಂತೆ ಎರಡು ಮೃತ ದೇಹಗಳು ಮೇಲೆ ತೇಲಿರುವುದು ಕಂಡು ಬಂದಿದೆ. ಎರಡು ಮೃತ ದೇಹಗಳನ್ನು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಚಿಟಗುಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner