Bidar Crime: ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಬೀದರ್ ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ಪೊಲೀಸರ ವಶಕ್ಕೆ
ಬೀದರ್ ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ ಬಾಲಕಿಯರಿಗೆ ಅಲ್ಲಿನ ಪ್ರಾಂಶುಪಾಲರು ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಪ್ರಾಥಮಿಕ ವರದಿಯನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂರಿನ ಹಿನ್ನೆಲೆಯಲ್ಲಿ ಪ್ರಾಂಶುಪಾಲರನ್ನು ಬಂಧಿಸಿ, ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬೀದರ್: ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ ಬಾಲಕಿಯರಿಗೆ ಅಲ್ಲಿನ ಪ್ರಾಂಶುಪಾಲರು ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಪ್ರಾಥಮಿಕ ವರದಿಯನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂರಿನ ಹಿನ್ನೆಲೆಯಲ್ಲಿ ಪ್ರಾಂಶುಪಾಲ ನಾಗಶೆಟ್ಟಿ ಕುಲಕರ್ಣಿ ಅವರನ್ನು ಗುರುವಾರ ರಾತ್ರಿ ಬಂಧಿಸಿರುವ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರಾಂಶುಪಾಲರು ನಮ್ಮ ಮೈ ಮುಟ್ಟುವುದು, ಮುತ್ತು ಕೊಡುವುದು, ಫೋಟೋ ತೆಗೆಸಿಕೊಳ್ಳುವುದು ಸೇರಿದಂತೆ ಮತ್ತಿತರ ಅಸಭ್ಯ ವರ್ತನೆ ತೋರಿದ್ದಾರೆ. ಹಲವು ವಿದ್ಯಾರ್ಥಿನಿಯರು ಇವರ ಕೆಟ್ಟದೃಷ್ಟಿಯಿಂದ ಬಳಲಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮವಾಗಲಿ ಎಂದು ವಿದ್ಯಾರ್ಥಿನಿಯರು ಆರೋಪಿಸಿ ಪತ್ರ ಬರೆದು ಆಗ್ರಹಿಸಿದ್ದರು.
ಈ ಕುರಿತಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನೇತೃತ್ವದಲ್ಲಿ 5 ಜನ ಮಹಿಳಾ ಅಧಿಕಾರಿಗಳ ತಂಡ ರಚಿಸಿ ವಸತಿ ಶಾಲೆಗೆ ಕಳುಹಿಸಿದ್ದರು. ಈ ತಂಡ ನೀಡಿದ ಪರಿಶೀಲನಾ ವರದಿ ಆಧಾರದ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನೀಡಿದ ದೂರಿನ ಹಿನ್ನೆಲೆ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಾಗಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಬಂಧನದ ಹಿನ್ನೆಲೆ ಇಲಾಖೆ ಪ್ರಾಂಶುಪಾಲರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ಗುರುವಾರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರಾದರೂ ಇದಕ್ಕೂ 10 ದಿನಗಳ ಮೊದಲು ವಸತಿ ಶಾಲೆಯ ಸ್ಟಾಫನರ್ಸ್, ಎಪ್‌ಡಿಸಿ ಹಾಗೂ ಶಿಕ್ಷಕರಿಗೆ ವಿದ್ಯಾರ್ಥಿನಿಯರು ತಮಗಾಗುತ್ತಿರುವ ಕಿರುಕುಳ ಕುರಿತಂತೆ ತಿಳಿಸಿದ್ದು, ಅದನ್ನು ಮರೆಮಾಚುವ ಯತ್ನ ನಡೆದಿರುವುದು ಪ್ರಾಂಶುಪಾಲನ ವಿರುದ್ಧ ದೂರು ದಾಖಲಾಗಲು ಆಗಿರುವ ವಿಳಂಬ ಸ್ಪಷ್ಟಪಡಿಸುತ್ತದೆ.
ಹೀಗಾಗಿ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲನ ವಿರುದ್ಧ 10 ದಿನಗಳಾದರೂ ಶಿಸ್ತು ಕ್ರಮವಹಿಸುವ ಜವಾಬ್ದಾರಿಯನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳಿಂದ ನಡೆದಿಲ್ಲ ಎಂಬುವುದು ಅತ್ಯಂತ ವಿಷಾದಕರ ಸಂಗತಿ. ಅಲ್ಲದೆ ವಿದ್ಯಾರ್ಥಿನಿಯರ ಈ ಸಮಸ್ಯೆ ಕುರಿತಂತೆ ಅಲ್ಲಿನ ಇತರ ಜವಾಬ್ದಾರಿಯುತ ಸಿಬ್ಬಂದಿ ಕೂಡ ಬಾಯಿಬಿಡದಿರುವುದು ಬೇಸರದ ಸಂಗತಿ. ಹೀಗಾಗಿ ಆರೋಪಿ ಪ್ರಾಂಶುಪಾಲನಷ್ಟೇ ಅಲ್ಲ, ಸಂಬಂಧಿತ ಹಿರಿಯ ಅಧಿಕಾರಿಗಳೆಲ್ಲರೂ ತಪ್ಪಿನಲ್ಲಿ ಭಾಗಿದಾರರು ಎಂಬುವುದು ಸ್ಪಷ್ಟ. ಇವರ ವಿರುದ್ಧವೂ ಶಿಸ್ತು ಕ್ರಮವಾಗಬೇಕು ಎಂಬುದು ವಿದ್ಯಾರ್ಥಿನಿಯರ ಒತ್ತಾಯ.