Bidar Robbery: ಹಣದ ಬಾಕ್ಸ್‌ನಿಂದ ಕಟ್ಟು ಬಿದ್ದರೂ ತುಂಬಿಕೊಂಡು ಪರಾರಿಯಾದರು; ಬೀದರ್ ಪ್ರಕರಣ ಹಿಂದೆ ಮಹಾರಾಷ್ಟ್ರ ದರೋಡೆಕೋರರ ಕೈವಾಡ ಶಂಕೆ
ಬೀದರ್‌ನಲ್ಲಿ ಹಾಡಹಗಲೇ ಎಸ್‌ಬಿಐ ಎಟಿಎಂ ಹಣ ಹಾಕುವ ವೇಳೆ ನಡೆದ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರದವರ ಕೈವಾಡ ಇರಬೇಕು ಎಂದು ಪೊಲೀಸರು ತನಿಖೆ ಚುರುಕುಗೊಳಿಸಿದಾರೆ.

ಬೀದರ್: ಬೀದರ್‌ನ ಜನನಿಬಿಡ ಶಿವಾಜಿ ಸರ್ಕಲ್ ಬಳಿ ಜಿಲ್ಲಾಧಿಕಾರಿ ಕಚೇರಿ. ಸಮೀಪದಲ್ಲೇ ನ್ಯಾಯಾಲಯವೂ ಇದೆ. ಎಸ್‌ಬಿಐ ಶಾಖೆಯ ಎಟಿಎಂಗೆ ಇಲ್ಲಿ ಬೇಡಿಕೆಗೆ ಅನುಗುಣವಾಗಿ ಹಣ ತುಂಬಲಾಗುತ್ತದೆ. ಜನ ಇರುವ ಸ್ಥಳದಲ್ಲೇ ದರೋಡೆಕೋರರು ಸಿಬ್ಬಂದಿಯನ್ನೇ ಕೊಂದು ಹಣ ದೋಚಿಕೊಂಡು ಹೋದರು. ಅದೂ ಹಣದ ಬಾಕ್ಸ್ ಅನ್ನು ಕಿತ್ತುಕೊಂಡಾ ನೋಟಿನ ಕಟ್ಟುಗಳು ಬಿದ್ದವು. ಅವನ್ನೂ ಬಿಡದೇ ಹಣ ಪಡೆದು ಬೈಕ್‌ನಲ್ಲೇ ಓಡಿದರು. ಕಲ್ಲು ಬೀಸಿದರೂ ಅದು ತಾಗಲಿಲ್ಲ. ಕ್ಷಣ ಮಾತ್ರದಲ್ಲಿ ಇಬ್ಬರು ಬೈಕ್‌ನಲ್ಲಿ ಪರಾರಿಯಾದರು,. ಇದನ್ನು ನೋಡಿದರೆ ಅವರು ಯೋಜಿಸಿಕೊಂಡೇ ಈ ಕೃತ್ಯ ಎಸಗಿದ್ದಾರೆ. ಯಾವ ಸಮಯಕ್ಕೆ ಬರುತ್ತಾರೆ. ಯಾವ ರೀತಿ ನಾವು ಕೃತ್ಯ ಎಸಗಬಹುದು ಎನ್ನುವ ಲೆಕ್ಕಾಚಾರದೊಂದಿಗೆ ದರೋಡೆ ನಡೆಸಿದ್ದಾರೆ.
ಹೀಗೆ ಘಟನೆಯನ್ನು ನೋಡಿದ ಕೆಲವರು ಬೀದರ್‌ನ ಪೊಲೀಸರಿಗೆ ಮಾಹಿತಿ ನೀಡುತ್ತಲೇ ಇದ್ದರು. ಬೆಳಿಗ್ಗೆ 11.15 ರ ಸುಮಾರಿನಲ್ಲಿ ನಡೆದ ದರೋಡೆ ಪ್ರಕರಣದ ವೇಳೆ ಗುಂಡಿನ ಸದ್ದು, ಹಣ ಕಿತ್ತುಕೊಳ್ಳುವಾಗ ಕೂಗಾಟ, ಚೀರಾಟ ಶಬ್ದವೂ ಜೋರಾಗಿತ್ತು. ಇದರ ನಡುವೆ ಇಬ್ಬರು ಬೈಕ್ ಏರಿ ಪರಾರಿಯಾಗಿದ್ದನ್ನು ನೋಡಿದೆವು. ಕ್ಷಣ ಮಾತ್ರದಲ್ಲೇ ಘಟನೆ ನಡೆದು ಹೋಯಿತು ಎಂದು ವಿವರಿಸುತ್ತಲೇ ಇದ್ದರು.
ಬೀದರ್‌ನ ಎಸ್‌ಬಿಐ ಮುಖ್ಯ ಶಾಖೆ ಸದಾ ಗ್ರಾಹಕರು ಇರುವ ಕೇಂದ್ರ. ಇಬ್ಬರು ಮೂವರು ಭದ್ರತಾ ಸಿಬ್ಬಂದಿ ಸದಾ ಅಲ್ಲೇ ಇದ್ದೇ ಇರುತ್ತಾರೆ. ಎಟಿಎಂಗೆ ಹಣ ಪಡೆಯುವವರೂ ಬರುತ್ತಲೇ ಇರುತ್ತಾರೆ. ಇಂದು ಕೂಡ ಸಿಬ್ಬಂದಿ ಹಣವನ್ನು ತೆಗದುಕೊಂಡು ಬಂದು ಎಟಿಎಂ ಬಳಿ ಸಿಎಂಎಸ್ ಘಟಕದವರು ಹಾಕುತ್ತಿದ್ದರು. ಹಣವನ್ನು ವಾಹನದಿಂದ ತೆಗೆದುಕೊಂಡು ಎಟಿಎಂಗೆ ಹಾಕಲು ಒಯ್ಯುವಾಗಲೇ ಮುಸುಕುಧಾರಿಯಾಗಿದ್ದ ಒಬ್ಬಾತ ಏಕಾಏಕಿ ಎಂಟು ಸುತ್ತು ಗುಂಡುಗಳನ್ನು ಹಾರಿಸಿದ. ಹಣ ಹಾಕುವ ಸಿಬ್ಬಂದಿ ಬೀದರ್ ಚಿಟಗುಪ್ಪದ ಗಿರಿವೆಂಕಟೇಶ್ ಎಂಬಾತನ ತಲೆ, ಎದೆಗೆ ಎರಡು ಗುಂಡು ನೇರವಾಗಿ ಅಪ್ಪಳಿಸಿವೆ. ಇದರಿಂದ ಆತ ಆಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಮತ್ತೊಬ್ಬ ಶಿವಕುಮಾರ್ ಎಂಬಾತ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ಆತನ ಮೇಲೂ ಗುಂಡು ಹಾರಿಸಿದ್ದು ಎದೆ ಭಾಗಕ್ಕೆ ಗುಂಡು ಹೊಕ್ಕು ತೀವ್ರವಾಗಿ ಅಸ್ವಸ್ಥಗೊಂಡು ಕುಸಿತು ಬಿದ್ದಿದ್ದಾನೆ.
ಈ ವೇಳೆ ಹಣದ ಬಾಕ್ಸ್ ಅನ್ನು ಕಿತ್ತುಕೊಂಡು ಮುಸುಕುಧಾರಿ ಓಡಿ ಬಂದಿದ್ದು. ಸಮೀಪದಲ್ಲಿ ಬೈಕ್ ನಲ್ಲಿ ನಿಂತಿದ್ದ ಇನ್ನೊಬ್ಬಾತ ಕೂಡಲೇ ಆತನೊಂದಿಗೆ ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ನೋಟಿನ ಕಟ್ಟುಗಳು ಬಿದ್ದರೂ ಅದನ್ನು ಎತ್ತಿಕೊಂಡು ಓಡಿದ್ದಾರೆ. ಸಮೀಪದಲ್ಲಿಯೇ ಇದನ್ನು ಗಮನಿಸುತ್ತಿದ್ದವರು ಕೂಗಿಕೊಂಡಿದ್ದು ಕಲ್ಲು ಕೂಡ ತೂರಿದ್ದಾರೆ. ಆದರೆ ಇಬ್ಬರು ಕ್ಷಣ ಮಾತ್ರದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯ ವಿವರಗಳನ್ನು ಪೊಲೀಸರಿಗೆ ಅಲ್ಲಿದ್ದವರು ವಿವರಿಸಿದ್ದಾರೆ.
ಮಹಾರಾಷ್ಟ್ರ ಮೂಲದವರ ಕೃತ್ಯ ಶಂಕೆ
ಮಹಾರಾಷ್ಟ್ರದಿಂದ ಬಂದವರು ಈ ಕೃತ್ಯ ಶಂಕೆ ವ್ಯಕ್ತವಾಗಿದೆ. ಅವರು ಬಳಸಿರುವ ಬೈಕ್ ಮಹಾರಾಷ್ಟ್ರ ನೋಂದಣಿಯದ್ದು ಎನ್ನುವ ಮಾಹಿತಿಯಾಧರಿಸಿ ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್‌ಗಳನ್ನು ಬೀದರ್ ನಗರ ಪೊಲೀಸರು ಸಂಗ್ರಹಿಸಿದ್ದಾರೆ.
ಇದೇ ರೀತಿಯ ಪ್ರಕರಣಗಳು ಕರ್ನಾಟಕದ ವಿವಿಧ ಭಾಗಗಳು, ಮಹಾರಾಷ್ಟ್ರ, ತೆಲಂಗಾಣದಲ್ಲಿ ನಡೆದಿರುವ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ವೃತ್ತಿಪರ ದರೋಡೆಕೋರರ ತಂಡವೇ ಈ ಕೃತ್ಯ ಎಸಗಿರಬೇಕು ಎನ್ನುವ ಮಾಹಿತಿ ಆಧರಿಸಿ ತನಿಖೆಯನ್ನು ಎಲ್ಲ ಆಯಾಮದಲ್ಲಿ ಕೈಗೊಳ್ಳಲಾಗುತ್ತಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಯೊಬ್ಬರು ನೀಡಿದರು.
ಭದ್ರತೆ ವೈಫಲ್ಯ
ಬ್ಯಾಂಕ್‌ಗಳಿಗೆ ಹಾಗೂ ಎಟಿಎಂಗಳಿಗೆ ಹಣ ಸಾಗಿಸುವ ಸುಸಜ್ಜಿತ ವಾಹನ ಹಾಗೂ ಭದ್ರತಾ ಸಿಬ್ಬಂದಿ ಇರುತ್ತಾರೆ. ಅಲ್ಲದೇ ಬ್ಯಾಂಕ್ ಸಿಬ್ಬಂದಿಯೂ ಇರುತ್ತಾರೆ. ಗುರುವಾರ ಕೂಡ ಸಿಬ್ಬಂದಿಯೊಂದಿಗೆ ಹಣ ಹಾಕಲು ಬಂದಾಗ ಭದ್ರತೆ ಇದ್ದರೂ ಈ ರೀತಿ ಆಗಿರುವುದು ಭದ್ರತಾ ವೈಫಲ್ಯ ಎಂದೇ ಹೇಳಲಾಗುತ್ತಿದೆ. ಕೋಟಿಗಟ್ಟಲೇ ಹಣ ಸಾಗಿಸುವಾಗ ಇಲ್ಲವೇ ಹಾಕುವಾಗ ಅತೀ ಹೆಚ್ಚಿನ ಮುತುವರ್ಜಿಯನ್ನು ಸಿಬ್ಬಂದಿ ವಹಿಸುತ್ತಾರೆ. ಆದರೆ ಅದೆಲ್ಲವನ್ನೂ ಬೇಧಿಸಿ ಕೃತ್ಯ ಎಸಗಿರುವುದು ಆತಂಕಕ್ಕೂ ಕಾರಣವಾಗಿದೆ.
ಬ್ಯಾಂಕ್‌ನ ಅಧಿಕಾರಿಗಳ ಮಾಹಿತಿ ಪ್ರಕಾರ 93 ಲಕ್ಷ ರೂ.ಗಳನ್ನು ಎಟಿಎಂಗೆ ಹಾಕಲು ತರಲಾಗಿತ್ತು. ಮೊದಲು ಇಲ್ಲಿ ಹಾಕಿ ಆನಂತರ ಇತರೆ ಎಟಿಎಂಗಳಿಗೆ ತೆರಳಬೇಕಾಗಿತ್ತು. ಇದರಿಂದ ತಂದಿದ್ದ ಎಲ್ಲಾ ಮೊತ್ತವನ್ನು ದರೋಡೆಕೋರರು ಹೊತ್ತು ಪರಾರಿಯಾಗಿದ್ಧಾರೆ. ಈ ಕುರಿತಾಗಿಯೂ ಬ್ಯಾಂಕ್ ಹಾಗೂ ಸಿಎಂಎಸ್ ವಿಭಾಗದಲ್ಲೂ ವಿಚಾರಣೆ ನಡೆದಿದೆ.
