ಬೀದರ್ ಎಸ್‌ಬಿಐ ಎಟಿಎಂ ದರೋಡೆ; ಡಕಾಯಿತರಿಬ್ಬರು, ಮ್ಯಾನೇಜರ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್, ಎಡಿಜಿಪಿ ಪಿ ಹರಿಶೇಖರನ್ ಸುದ್ಧಿಗೋಷ್ಠಿ
Bidar SBI ATM Robbery: ಬೀದರ್ ಎಸ್‌ಬಿಐ ಎಟಿಎಂ ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಪಿ ಹರಿಶೇಖರನ್ ಸುದ್ಧಿಗೋಷ್ಠಿ ನಡೆಸಿದ್ದು, ಕೇಸ್‌ಗೆ ಸಂಬಂಧಿಸಿದ ಸ್ಪಷ್ಟ ಚಿತ್ರಣ ನೀಡಿದರು. ಬೀದರ್ ಎಸ್‌ಬಿಐ ಎಟಿಎಂ ದರೋಡೆ ಸಂಬಂಧ ಡಕಾಯಿತರಿಬ್ಬರು, ಮ್ಯಾನೇಜರ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Bidar SBI ATM Robbery: ಬೀದರ್‌ನ ಎಸ್‌ಬಿಐ ಬ್ಯಾಂಕ್ ಶಾಖೆ ಸಮೀಪ ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 83 ಲಕ್ಷ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಡಕಾಯಿತರ ವಿರುದ್ಧ ಹಾಗೂ ಎಸ್‌ಬಿಐ ಶಾಖಾ ಮ್ಯಾನೇಜರ್ ಮತ್ತು ಸಿಎಂಎಸ್ ಸಂಸ್ಥೆ ಮುಖ್ಯಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ದುಡ್ಡು ದೋಚಿದ ಇಬ್ಬರು ಎ1 ಆರೋಪಿಗಳಾದರೆ, ಎಸ್‌ಬಿಐ ಶಾಖಾ ಮ್ಯಾನೇಜರ್ ಎ2 ಮತ್ತು ಸಿಎಂಎಸ್ ಸಂಸ್ಥೆ ಮುಖ್ಯಸ್ಥ ಎ3 ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಪೊಲೀಸರು ನಮೂದಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಮಹಾರಾಷ್ಟ್ರ- ತೆಲಂಗಾಣ ಪೊಲೀಸರ ಸಾಥ್
ಬೀದರ್ ಎಟಿಎಂ ದರೋಡೆ ಆರೋಪಿಗಳನ್ನು ಗುರುತು ಪತ್ತೆಯಾಗಿದೆ. ಹೈದರಾಬಾದ್‌ನಲ್ಲೂ ಆರೋಪಿಗಳು ಫೈರಿಂಗ್ ಮಾಡಿರುವ ಕಾರಣ, ಎರಡೂ ರಾಜ್ಯಗಳ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುತ್ತದೆ ಎಂದು ಅಪರಾಧ ವಿಭಾಗದ ಎಡಿಜಿಪಿ ಪಿ.ಹರಿಶೇಖರನ್ ಹೇಳಿದರು.
ದರೋಡೆಗೆ ಸಂಬಂಧಿಸಿ ಬೀದರ್ ಎಸ್‌ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೈದರಾಬಾದ್‌ನಲ್ಲೂ ಒಂದು ಪ್ರಕರಣ ದಾಖಲಾಗಿದ್ದು, ಕರ್ನಾಟಕ-ತೆಲಂಗಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಲಾಗುತ್ತದೆ. ಪೊಲೀಸರ ಎಂಟು ತಂಡಗಳು ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿವೆ. ಆರೋಪಿಗಳು ಈಗಾಗಲೇ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.
ಎಸ್‌ಬಿಐ ಎಟಿಎಂ ವಾಹನದಿಂದ ದರೋಡೆಕೋರರು ದೋಚಿದ್ದು 87 ಲಕ್ಷ ರೂಪಾಯಿ ಇದ್ದ ಬಾಕ್ಸ್ ಅನ್ನು. ಅಲ್ಲಿ ನಾಲ್ಕು ಲಕ್ಷ ರೂಪಾಯಿ ಬೀಳಿಸಿ ಹೋಗಿದ್ದು, 83 ಲಕ್ಷ ರೂಪಾಯಿ ರಿಕವರಿ ಮಾಡಬೇಕಾಗಿದೆ ಎಂದು ಹರಿಶೇಖರನ್ ಸ್ಪಷ್ಟಪಡಿಸಿದರು.
ನಿನ್ನೆ (ಜನವರಿ 16) ಬೆಳಗ್ಗೆ 10-55 ರಿಂದ 11 ಗಂಟೆಯ ಒಳಗೆ ಶಿವಾಜಿ ಸರ್ಕಲ್‌ನಲ್ಲಿ ನಿಂತಿದ್ದ ಎಟಿಎಂ ವ್ಯಾನ್‌ನಿಂದ ಹಣ ದೋಚಿಕೊಂಡು ಹೋಗಿದ್ದಾರೆ. ಎಟಿಎಂಗೆ ಹಣ ತುಂಬಿಸುವ ಸಿಎಂಎಸ್ ಎಜೆನ್ಸಿ ವ್ಯಾನ್‌ಗೆ ಹಣ ತುಂಬಿಸುವುದಕ್ಕಾಗಿ ಎಸ್‌ಬಿಐ ಶಾಖೆ ಎದುರು ನಿಲ್ಲಿಸಿದ್ದಾಗ ಈ ಘಟನೆ ನಡೆದಿತ್ತು. ಇದೇ ವೇಳೆ ಅವರು ಗುಂಡಿನ ದಾಳಿ ನಡೆಸಿದ ಕಾರಣ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಕುಮಾರ್ ಎಂಬ ವ್ಯಕ್ತಿ ಗಂಭಿರವಾಗಿ ಗಾಯಗೊಂಡಿರುವುದಾಗಿ ಹರಿಶೇಖರನ್ ತಿಳಿಸಿದ್ದಾರೆ
ಬೀದರ್ ಎಟಿಎಂ ದರೋಡೆ; ಡಕಾಯಿತರ ದಾಳಿಗೆ ಮೃತಪಟ್ಟ ಗಿರಿ ವೆಂಕಟೇಶ್ ಮನೆಗೆ ಸಚಿವರ ಭೇಟಿ
ಬೀದರ್‌ನಲ್ಲಿ ನಡೆದ ಎಸಬಿಐ ಬ್ಯಾಂಕ್ ದರೋಡೆ ದಾಳಿಯಲ್ಲಿ ಹತ್ಯೆಗೀಡಾದ ಭದ್ರತಾ ಸಿಬ್ಬಂದಿ ಗಿರಿ ವೆಂಕಟೇಶ್ ಅವರ ಬೇಮಳಖೇಡ್ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಸಚಿವರು, ಗಿರಿ ವೆಂಕಟೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು ಮತ್ತು ಕುಟುಂಬಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು.
ಮೃತರ ಕುಟುಂಬಕ್ಕಾಗಿ ಸಮಗ್ರ ಪರಿಹಾರ ಘೋಷಿಸಿದ ಅವರು, ಸಮಾಜ ಕಲ್ಯಾಣ ಇಲಾಖೆಯಿಂದ 8 ಲಕ್ಷ ರೂಪಾಯಿ ಪರಿಹಾರ ಮತ್ತು ಹೆಚ್ಚುವರಿಯಾಗಿ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ, ಪಿಂಚಣಿ ಮತ್ತು ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತತ್‌ಕ್ಷಣದ ಸನ್ನಿವೇಶ ನಿಭಾಯಿಸುವುದಕ್ಕಾಗಿ ಕುಟುಂಬಕ್ಕೆ ತಾತ್ಕಾಲಿಕ ಉದ್ಯೋಗ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
