ಬೀದರ್ ಎಸ್‌ಬಿಐ ಎಟಿಎಂ ವಾಹನದಿಂದ ಹಣ ದೋಚಿದ ಪ್ರಕರಣದ ಆರೋಪಿಗಳ ಬಂಧನವಾಯಿತಾ, ಇದುವರೆಗೆ ಏನೇನಾಯಿತು 5 ಮುಖ್ಯ ಅಂಶಗಳಿವು
Bidar SBI ATM Robbery: ಬೀದರ್‌ನ ಎಸ್‌ಬಿಐ ಎಟಿಎಂ ಡಕಾಯಿತಿ ಕೇಸ್ ನಿಗೂಢವಾಗಿ ಉಳಿದಿದೆ. ಈ ಪ್ರಕರಣದ ಆರೋಪಿಗಳ ಬಂಧನವಾಯಿತಾ, ಇದುವರೆಗೆ ಏನೇನಾಯಿತು ಎಂಬ ಕುತೂಹಲ ಸಹಜ. ಹೀಗಾಗಿ ಈ ಕೇಸ್‌ಗೆ ಸಂಬಂಧಿಸಿದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

Bidar SBI ATM Robbery: ಬೀದರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಎಟಿಎಂಗಳಿಗೆ ಹಣ ತುಂಬುವ ವಾಹನಕ್ಕೆ ಹಣ ತುಂಬಿಸುವಾಗ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿ ಹಣದ ಬಾಕ್ಸ್ ಅನ್ನು ದೋಚಿಕೊಂಡು ಹೋದ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಹೈದರಾಬಾದ್ ಸಮೀಪ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಅಫ್ಜಲ್ ಗಂಜ್ ಪೊಲೀಸರ ಕಸ್ಟಡಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬೀದರ್ ಪೊಲೀಸ್ ಮೂಲಗಳು ಮಾತ್ರ ಇದುವರೆಗೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿದಿದೆ ಎಂದು ಇಂದು (ಜನವರಿ 17) ತಿಳಿಸಿವೆ. ಆರೋಪಿಗಳು ಹೈದರಾಬಾದ್ ಕಡೆಗೆ ಪರಾರಿಯಾಗಿದ್ದು, ಅಲ್ಲಿಂದ ರಾಯ್‌ಪುರ ಕಡೆಗೆ ಹೋಗುವುದಕ್ಕೆ ಅಫ್ಜಲ್‌ಗಂಜ್ ಎಂಬಲ್ಲಿ ಬಸ್ ಟಿಕೆಟ್ ಬುಕ್ ಮಾಡಲು ತೆರಳಿದ್ದರು. ಅಲ್ಲಿ ಬ್ಯಾಗ್ ತೂಕ ಮಾಡುವಾಗ ಫೈರಿಂಗ್ ಆಗಿರುವುದು ನಿಜ. ಆದರೆ ಅಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಬೀದರ್ ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಬೀದರ್ ಎಸ್‌ಬಿಐ ಎಟಿಎಂ ವಾಹನ ಡಕಾಯಿತಿ ಪ್ರಕರಣ; ಅಧಿಕೃತ ಹೇಳಿಕೆ ಇದುವರೆಗೂ ಇಲ್ಲ
ಬೀದರ್ ಎಸ್‌ಬಿಐ ಎಟಿಎಂ ವಾಹನ ಡಕಾಯಿತಿ ನಡೆದು ಒಂದು ದಿನ ಕಳೆದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬೀದರ್ ಜಿಲ್ಲಾ ಪೊಲೀಸರಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಡಕಾಯಿತಿಗೊಳಗಾದ ವಾಹನದಿಂದ ಎಷ್ಟು ಹಣ ನಷ್ಟವಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಘಟನೆ ಏನಾಯಿತು ಎಂಬ ಬಗ್ಗೆಯೂ ವಿವರ ಇಲ್ಲ. ಈ ಬಗ್ಗೆ ಸಿಎಂಎಸ್ ಕಂಪನಿ, ಬ್ಯಾಂಕ್‌ಗಳಿಂದ ದೂರು ದಾಖಲಾಗಿದೆಯೇ, ಏನು ದೂರು ದಾಖಲಾಗಿದೆ ಎಂಬಿತ್ಯಾದಿ ವಿವರವೂ ಬಹಿರಂಗವಾಗಿಲ್ಲ. ಸಾಮಾನ್ಯವಾಗಿ ಈ ರೀತಿ ಕೇಸ್‌ಗಳಾದ ಕೂಡಲೇ ಎಫ್‌ಐಆರ್‌ನಲ್ಲಿ ಏನೇನಿದೆ ಎಂಬಿತ್ಯಾದಿ ವಿವರಗಳು ಬಹಿರಂಗವಾಗುತ್ತವೆ. ಬ್ಯಾಂಕ್ ಕೂಡ ಹೇಳಿಕೆ ನೀಡುತ್ತದೆ. ಆದರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ ಎಂದು ಬೀದರ್ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಬೀದರ್ ಎಸ್‌ಬಿಐ ಎಟಿಎಂ ವಾಹನ ಡಕಾಯಿತಿ ಪ್ರಕರಣ; ಗಮನಸೆಳೆದ 5 ಮುಖ್ಯ ಅಂಶಗಳು
1) ಬೀದರ್ ಎಸ್‌ಬಿಐ ಎಟಿಎಂ ವಾಹನ ದರೋಡೆ: ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯದ ಸಮೀಪದಲ್ಲೇ ಬೀದರ್‌ನ ಕೇಂದ್ರ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆ ಎದುರೇ ಗುರುವಾರ (ಜನವರಿ 16) ಎಟಿಎಂ ವಾಹನ ಡಕಾಯಿತಿ ನಡೆದಿದೆ. ಡಕಾಯಿತಿ ನಡೆಸಲು ಬಂದವರು ಇಬ್ಬರು ಮಾತ್ರ. ಬೈಕ್‌ನಲ್ಲಿ ಬಂದು ಕೃತ್ಯವೆಸಗಿದ್ದಾರೆ. ಹೆಲ್ಮೆಟ್ ಧರಿಸಿಕೊಂಡ ದುಷ್ಕರ್ಮಿಗಳು ತಮ್ಮ ಗುರುತು ಮರೆಮಾಚಿಕೊಂಡಿದ್ದರು.
2) ದರೋಡೆ ಸನ್ನಿವೇಶ ಹೀಗಿತ್ತು: ಬ್ಯಾಂಕ್‌ನಿಂದ ಹಣದ ಪೆಟ್ಟಿಗೆಯನ್ನು ವಾಹನಕ್ಕೆ ತುಂಬುವಾಗ ಸ್ಥಳದಲ್ಲಿ ಹೊಂಚು ಹಾಕಿ ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು, ಸಿಎಂಎಸ್ (ಕ್ಯಾಶ್ ಮ್ಯಾನೇಜ್‌ಮೆಂಟ್ ಸರ್ವೀಸ್) ಕಂಪನಿಯ ಸಿಬ್ಬಂದಿ ಕಣ್ಣಿಗೆ ಕಾರದಪುಡಿ ಎರಚಿದ್ದಾರೆ. ಕ್ಯಾಶ್ ಬಾಕ್ಸ್ ಹಿಡಿದು ಬೈಕ್ ಬಳಿ ಓಡಿದ್ದಾರೆ. ಅಲ್ಲಿ ಕ್ಯಾಶ್ ಬಾಕ್ಸ್ ಬಿದ್ದಿದೆ. ಅದರಿಂದ ಹಣವೂ ಬಿದ್ದಿದೆ. ಕ್ಯಾಶ್ ಬಾಕ್ಸ್‌ನಲ್ಲಿ 93 ಲಕ್ಷ ರೂಪಾಯಿ ಇತ್ತು ಎಂದು ಹೇಳಲಾಗುತ್ತಿದೆ. ಆದಾಗ್ಯೂ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬ್ಯಾಂಕ್ ಕೊಟ್ಟಿಲ್ಲ.
3) ಸಿಎಂಎಸ್ ಸಿಬ್ಬಂದಿ ಸಾವು: ಈ ಸಂಘರ್ಷದಲ್ಲ ಸಿಎಂಎಸ್ (ಕ್ಯಾಶ್ ಮ್ಯಾನೇಜ್‌ಮೆಂಟ್ ಸರ್ವೀಸ್) ಕಂಪನಿಯ ಸಿಬ್ಬಂದಿ ಗಿರೀಶ್ ವೆಂಕಟ್ (42) ಮೃತಪಟ್ಟಿದ್ದಾರೆ. ದುಷ್ಕರ್ಮಿಗಳು ಹಾರಿಸಿದ ಆರು ಗುಂಡುಗಳು ಇವರಿಗೆ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ಸಿಬ್ಬಂದಿ ಶಿವಕುಮಾರ ಗುನ್ನಳ್ಳಿಗೆ ಗುಂಡೇಟು ಎದೆಗೆ ತಗುಲಿದ್ದು, ಆಸ್ಪತ್ರೆಗೆ ಚಿಕಿತ್ಸೆಗೊಳಪಟ್ಟಿದ್ದಾರೆ. ಇಂದು ಎಡಿಜಿಪಿ ಬೀದರ್‌ಗೆ ಭೇಟಿ ನೀಡುತ್ತಿದ್ದು, ಚಿಕಿತ್ಸೆಗೊಳಗಾದ ಸಿಎಂಎಸ್ ಸಿಬ್ಬಂದಿಯನ್ನು ಭೇಟಿ ಮಾಡುವ ನಿರೀಕ್ಷೆ ಇದೆ.
4) ಹಣ ತುಂಬಿಸುವಾಗ ಗನ್ ಮ್ಯಾನ್ ಇರಲಿಲ್ಲ: ಎಸ್‌ಬಿಐ ಶಾಖೆಯಿಂದ ವಾಹನಕ್ಕೆ ಹಣ ತುಂಬಿಸುವ ಸಂದರ್ಭದಲ್ಲಿ ಜತೆಗೆ ಗನ್ ಮ್ಯಾನ್ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಬ್ಯಾಂಕ್‌ನಲ್ಲಿ ಗನ್‌ಮ್ಯಾನ್ ಒಬ್ಬ ಇದ್ದು, ಆತನ ಪಹರೆಯೊಂದಿಗೆ ಹಣ ಸಾಗಿಸುವುದು ವಾಡಿಕೆ. ಆದರೆ, ಬೀದರ್‌ನಲ್ಲಿ ಶಾಖಾ ಮ್ಯಾನೇಜರ್ ಮತ್ತು ಗನ್‌ಮ್ಯಾನ್ ಈ ವಾಡಿಕೆಯನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
5) ಸಿಎಂಎಸ್ ಭದ್ರತಾ ಸಿಬ್ಬಂದಿ ಜಾಗೃತರಾಗಿರಲಿಲ್ಲ: ಸಿಎಂಎಸ್ ವಾಹನದಲ್ಲಿ ಗನ್ ಮ್ಯಾನ್ ಇರಬೇಕಾಗಿದ್ದು, ಅವರೂ ಜಾಗೃತ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಬೀದರ್‌ನಲ್ಲಿ ಯಾರು ಹಣ ದೋಚಿಕೊಂಡು ಹೋಗುತ್ತಾರೆ ಎಂಬ ಉದಾಸೀನ ಭಾವ ಎಲ್ಲರಲ್ಲೂ ಇತ್ತು ಎಂಬ ಆರೋಪ ಕೇಳಿಬಂದಿದೆ.
ಆರೋಪಿಗಳನ್ನು ಬಂಧಿಸಿದ ಕೂಡಲೇ ಬೀದರ್ ಪೊಲೀಸರು ಪತ್ರಿಕಾಗೋಷ್ಠಿ ಕರೆದು ಎಲ್ಲ ವಿವರ ನೀಡುವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
