ಬೀದರ್ ಎಟಿಎಂ ವಾಹನ ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಗುರುತು ಪತ್ತೆ; ಖಚಿತ ಮಾಹಿತಿ ಕೊಟ್ರು ಗೃಹ ಸಚಿವ ಜಿ ಪರಮೇಶ್ವರ
Bidar SBI ATM Robbery: ಬೀದರ್ ಎಟಿಎಂ ವಾಹನ ದರೋಡೆ ಮಾಡಿದ ಆರೋಪಿಗಳ ಗುರುತು ಪತ್ತೆಯಾಗಿದೆ. ಅವರನ್ನು ಪತ್ತೆ ಹಚ್ಚಿ ಬಂಧಿಸುವುದಕ್ಕೆ ಪೊಲೀಸ್ ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದು ಗೃಹ ಸಚಿವ ಜಿ ಪರಮೇಶ್ವರ ಮಾಹಿತಿ ನೀಡಿದರು.

Bidar SBI ATM Robbery: ಬೀದರ್ ನಗರದ ಕೇಂದ್ರ ಭಾಗದಲ್ಲಿ ಹಾಡುಹಗಲೇ ಎಸ್‌ಬಿಐ ಎಟಿಎಂಗಳಿಗೆ ಹಣ ತುಂಬಿಸಲು ನಗದು ಹಣ ಕೊಂಡೊಯ್ಯ ಬಂದ ಸಿಎಂಎಸ್ ವ್ಯಾನ್ ಮೇಲೆ ದಾಳಿ ನಡೆಸಿ 93 ಲಕ್ಷ ರೂಪಾಯಿ ಹಣ ದೋಚಿಕೊಂಡು ಹೋದ ಆರೋಪಿಗಳ ಗುರುತು ಪತ್ತೆಯಾಗಿದೆ. ಇಬ್ಬರು ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ಆರೋಪಿಗಳನ್ನು ಗುರುತಿಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಬೀದರ್ ಎಟಿಎಂ ವಾಹನ ದರೋಡೆ ಆರೋಪಿಗಳ ಗುರುತು ಪತ್ತೆ; ಗೃಹ ಸಚಿವರ ಹೇಳಿದ್ದಿಷ್ಟು
ಬೀದರ್ ಎಟಿಎಂ ವಾಹನ ದರೋಡೆ ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದ್ದು, ಅವರನ್ನು ಬಂಧಿಸುವುದಕ್ಕೆ ಪೊಲೀಸ್ ತಂಡಗಳು ಶೋಧ ನಡೆಸಿವೆ. ಮಧ್ಯ ಪ್ರದೇಶದ ಇಂಧೋರ್ ಮತ್ತು ಡಕಾಯಿತರು ಹೋಗಿರಬಹುದಾದ ಸ್ಥಳಗಳಲ್ಲಿ ಪೊಲೀಸ್ ತಂಡ ಶೋಧ ಮುಂದುವರಿಸಿವೆ. ದರೋಡೆಕೋರರು ಬಹುಕಾಲದಿಂದ ಬೀದರ್‌ನ ಎಸ್‌ಬಿಐ ಎಟಿಎಂ ಹಣ ತುಂಬಿಸುವ ಕಾರ್ಯವನ್ನು ಗಮನಿಸುತ್ತಿದ್ದರು ಎಂಬುದು ತನಿಖೆ ವೇಳೆ ಖಚಿತವಾಗಿದೆ ಎಂದು ಸಚಿವ ಜಿ ಪರಮೇಶ್ವರ್ ಶುಕ್ರವಾರ (ಜನವರಿ 17) ತಿಳಿಸಿದ್ದಾರೆ.
ಬೀದರ್ ಎಸ್‌ಬಿಐ ಶಾಖೆ ಎದುರು ಎಟಿಎಂ ವಾಹನಕ್ಕೆ ತುಂಬಿಸಿದ ಹಣ ದೋಚಿಕೊಂಡ ಆರೋಪಿಗಳು ಬೈಕ್‌ನಲ್ಲೇ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಅವರು ಹೈದರಾಬಾದ್ ಕಡೆಗೆ ಪರಾರಿಯಾದರು. ಪೊಲೀಸರು ಆರೋಪಿಗಳನ್ನು ಹಿಂಬಾಲಿಸುತ್ತಿದ್ದು, ಅವರ ಜಾಡನ್ನು ಹಿಡಿದು ಹೋಗುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್ ಸೇರಿ ವಿವಿಧ ಪ್ರದೇಶಗಳಿಗೆ ಪೊಲೀಸರ ತಂಡ ತೆರಳಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಚಿವ ಪರಮೇಶ್ವರ್ ಹೇಳಿದರು.
ಸಿಎಂಎಸ್ ವಾಹನದಲ್ಲಿ ಗನ್‌ಮ್ಯಾನ್ ಇರಲಿಲ್ಲ
ಕ್ಯಾಶ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವಾಹನದಲ್ಲಿ ಗನ್‌ಮ್ಯಾನ್ ಇರುತ್ತಾರೆ. ನಿನ್ನೆ (ಜನವರಿ 16) ಬೀದರ್‌ನಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ ಹಣವನ್ನು ವಾಹನಕ್ಕೆ ತುಂಬಿಸುವ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿ ಹಣ ದೋಚಿದ್ದರು. ದುರದೃಷ್ಟವಶಾತ್ ನಿನ್ನೆ ಗನ್‌ಮ್ಯಾನ್ ವಾಹನದಲ್ಲಿ ಇರಲಿಲ್ಲ. ಬ್ಯಾಂಕ್ ಸಿಬ್ಬಂದಿ ಎಟಿಎಂ ವಾಹನಕ್ಕೆ ಹಣ ತುಂಬುವ ಕಾರ್ಯವಿಧಾನವನ್ನು ಬಹಳ ಸಮಯದಿಂದ ಗಮನಿಸಿದ ದುಷ್ಕರ್ಮಿಗಳು ಸಂಚು ರೂಪಿಸಿರುವಂತೆ ಕಾಣುತ್ತಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ಬೀದರ್ ಎಟಿಎಂ ವಾಹನ ದರೋಡೆ; ಏನಿದು ಘಟನೆ?
ಬೀದರ್‌ನ ಶಿವಾಜಿ ಚೌಕ್‌ನಲ್ಲಿರುವ ಎಸ್‌ಬಿಐ ಶಾಖೆಗೆ ಬೆಳಗ್ಗೆ 11:30ಕ್ಕೆ ಬಂದ ಸಿಎಂಎಸ್ ಸಿಬ್ಬಂದಿ ಎಟಿಎಂ ವಾಹನಕ್ಕೆ ಹಣ ತುಂಬಲು ಬಂದಿದ್ದಾಗ, ಘಟನೆ ನಡೆದಿದೆ. ದುಷ್ಕರ್ಮಿಗಳು ಒಟ್ಟು 8 ಸುತ್ತು ಗುಂಡು ಹಾರಿಸಿದ್ದರು. ಇಬ್ಬರು ಸಿಎಂಎಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕ್‌ನಿಂದ, ಸಿಎಂಎಸ್ ಸಂಸ್ಥೆಯಿಂದ ಅಧಿಕೃತ ಹೇಳಿಕೆ ಇಲ್ಲ
ಬೀದರ್ ಎಸ್‌ಬಿಐ ಎಟಿಎಂ ವಾಹನ ಡಕಾಯಿತಿ ನಡೆದು ಒಂದು ದಿನ ಕಳೆದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬೀದರ್ ಜಿಲ್ಲಾ ಪೊಲೀಸರಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಡಕಾಯಿತಿಗೊಳಗಾದ ವಾಹನದಿಂದ ಎಷ್ಟು ಹಣ ನಷ್ಟವಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಘಟನೆ ಏನಾಯಿತು ಎಂಬ ಬಗ್ಗೆಯೂ ವಿವರ ಇಲ್ಲ. ಈ ಬಗ್ಗೆ ಸಿಎಂಎಸ್ ಕಂಪನಿ, ಬ್ಯಾಂಕ್‌ಗಳಿಂದ ದೂರು ದಾಖಲಾಗಿದೆಯೇ, ಏನು ದೂರು ದಾಖಲಾಗಿದೆ ಎಂಬಿತ್ಯಾದಿ ವಿವರವೂ ಬಹಿರಂಗವಾಗಿಲ್ಲ. ಸಾಮಾನ್ಯವಾಗಿ ಈ ರೀತಿ ಕೇಸ್‌ಗಳಾದ ಕೂಡಲೇ ಎಫ್‌ಐಆರ್‌ನಲ್ಲಿ ಏನೇನಿದೆ ಎಂಬಿತ್ಯಾದಿ ವಿವರಗಳು ಬಹಿರಂಗವಾಗುತ್ತವೆ. ಬ್ಯಾಂಕ್ ಕೂಡ ಹೇಳಿಕೆ ನೀಡುತ್ತದೆ. ಆದರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ ಎಂದು ಬೀದರ್ ಜನ ಮಾತನಾಡಿಕೊಳ್ಳುತ್ತಿದ್ದಾರೆ.
