ಕನ್ನಡ ಸುದ್ದಿ  /  ಕರ್ನಾಟಕ  /  Cm Bommai: ಸಿಎಂ ಬೊಮ್ಮಾಯಿ ಇಂದು ಬೆಳಗಾವಿ ಪ್ರವಾಸ; ಬಿಡ್, ಇ-ಟೆಂಡರ್ ಪೂರ್ಣಗೊಳ್ಳದ ಯೋಜನೆ ಸೇರಿ ವಿವಿಧ ಕಾಮಗಾರಿಗಳ ಉದ್ಘಾಟನೆ!

CM Bommai: ಸಿಎಂ ಬೊಮ್ಮಾಯಿ ಇಂದು ಬೆಳಗಾವಿ ಪ್ರವಾಸ; ಬಿಡ್, ಇ-ಟೆಂಡರ್ ಪೂರ್ಣಗೊಳ್ಳದ ಯೋಜನೆ ಸೇರಿ ವಿವಿಧ ಕಾಮಗಾರಿಗಳ ಉದ್ಘಾಟನೆ!

ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಕಲಬುರಗಿ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಗೆ ಭೇಟಿ ನೀಡುತ್ತಿದ್ದು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಇನ್ನೂ ಬಿಡ್, ಇ-ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಯೋಜನೆಗಳು ಸೇರಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಫೋಟೋ-ಫೈಲ್)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಫೋಟೋ-ಫೈಲ್)

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ರಾಜ್ಯ ಸರ್ಕಾರ ಹಲವು ಯೋಜನೆಗಳಿಗೆ ತರಾತುರಿಯಲ್ಲಿ ಟೆಂಡರ್ ಕರೆಯುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ಇಂದು ಬೆಳಗಾವಿಗೆ ಭೇಟಿ ನೀಡಲಿರುವ ಸಿಎಂ ಬಸವರಾಜ ಬೊಮ್ಮಾಯಿ, ಅಥಣಿ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿಎಂ ಬೊಮ್ಮಾಯಿ ಅವರು ಬೆಳಗಾವಿಯ ಅಥಣಿ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗೆ ಇಂದು (ಮಾರ್ಚ್ 28. ಮಂಗಳವಾರ) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕ ನೀರವಾರಿ ನಿಗಮ ಲಿಮಿಟೆಡ್ -ಕೆಎನ್‌ಎನ್‌ಎಲ್ ಮಾರ್ಚ್ 18 ರಂದು ಈ 744 ಕೋಟಿ ರೂಪಾಯಿಗಳ ಯೋಜನೆಗೆ ಅಲ್ಪಾವಧಿಯ ಟೆಂಡರ್ ಅಧಿಸೂಚನೆಯನ್ನು ಹೊರಡಿಸಿತ್ತು. ಜುಂಜರವಾಡ ಗ್ರಾಮದ ಕೃಷ್ಣಾ ನದಿಯಲ್ಲಿ ಅಮ್ಮಾಜೇಶ್ವರಿ ಲಿಫ್ಟ್ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ನೋಂದಾಯಿತ ಪ್ರಥಮ ದರ್ಜೆ ಕರ್ನಾಟಕ ಲೋಕೋಪಯೋಗಿ ಇಲಾಖೆ-ಕೆಪಿಡಬ್ಲ್ಯೂಡಿ ಗುತ್ತಿಗೆದಾರರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನವಾಗಿತ್ತು ಎಂದು ಕೆಎನ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಧಿಕಾರವು ಅರ್ಜಿದಾರರೊಂದಿಗೆ ಪೂರ್ವ ಬಿಡ್ ಸಭೆ ನಡೆಸಿದ್ದಾರೆ. ಅದೇ ದಿನದಂದು, ಬಿಡ್ ದಾರರಿಂದ ಇ-ಟೆಂಡರಿಂಗ್ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ನೀರಾವರಿ ನಿಗಮವು ಇವತ್ತು ( ಮಾರ್ಚ್ 28) ತಾಂತ್ರಿಕ ಬಿಡ್‌ಗಳನ್ನು ತೆರೆಯಲಿದ್ದು, ನಾಳೆ (ಮಾರ್ಚ್ 29) ಅಂತಿಮ ಬಿಡ್ ಕರೆಯುತ್ತದೆ. ಯಶಸ್ವಿ ಬಿಡ್‌ದಾರರ ದಾಖಲೆಗಳನ್ನು ಇದೇ ದಿನಾಂಕದಂದು ಪರಿಶೀಲಿಸಲಾಗುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಯಶಸ್ವಿ ಬಿಡ್ದಾರರು ಕೆಲಸದ ಆದೇಶವನ್ನು ನೀಡಿದ ದಿನಾಂಕದಿಂದ 24 ತಿಂಗಳೊಳಗೆ ಯೋಜನೆಯನ್ನು ಪೂರ್ಣಗೊಳಿಸಬೇಕು. ಯೋಜನೆ ಪೂರ್ಣಗೊಂಡ ನಂತರ ಜುಂಜರವಾಡಕ್ಕೆ ಹೊಂದಿಕೊಂಡಿರುವ ಹತ್ತು ಗ್ರಾಮಗಳಿಗೆ ನೀರಾವರಿ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಗೋಕಾಕ ಪಟ್ಟಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಗದಿತ ಕಾರ್ಯಕ್ರಮವನ್ನು ಜಾರಕಿಹೊಳಿ ಅವರ ತವರು ಗೋಕಾಕಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಮುಖ್ಯಮಂತ್ರಿಗಳು ಬಟನ್ ಒತ್ತುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಇದಕ್ಕೂ ಮುನ್ನ ಅಥಣಿ ತಾಲೂಕಿನ ಜುಂಜರವಾಡ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಲು ಉದ್ದೇಶಿಸಲಾಗಿತ್ತು. ಆದರೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಸ್ಥಳೀಯ ಬಿಜೆಪಿ ನಾಯಕ ಲಕ್ಷ್ಮಣ ಸವದಿ ನಡುವಿನ ಜಟಾಪಟಿಯಿಂದ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಅಥಣಿಯು ಸವದಿಯವರ ತವರೂರು ಆಗಿದ್ದು, ಅಲ್ಲಿ ಯೋಜನೆಯ ಉದ್ಘಾಟನೆಗಾಗಿ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಜಿಸಿದ್ದಾರೆ. ಇನ್ನೂ ಅಲ್ಪಾವಧಿ ಟೆಂಡರ್‌ ಬಗ್ಗೆ ಪ್ರತಿಕ್ರಿಯಿಸಲು ಅಥಣಿಯ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಎಸ್‌ಬಿ ಬಾಗಿ ನಿರಾಕರಿಸಿದ್ದಾರೆ.

ಗುತ್ತಿಗೆದಾರರಿಗೆ ಅರ್ಜಿ ಸಲ್ಲಿಸಲು ಕೆಎನ್‌ಎನ್‌ಎಲ್ ಕೇವಲ ಒಂದು ವಾರ ಕಾಲಾವಕಾಶ ನೀಡಿದ್ದು, 744 ಕೋಟಿ ವೆಚ್ಚದ ಯೋಜನೆಯ ಸಂಪೂರ್ಣ ಟೆಂಡರ್ ಪ್ರಕ್ರಿಯೆ 11 ದಿನಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಇ-ಟೆಂಡರ್ ನೋಟಿಸ್‌ಗಳನ್ನು ಆಹ್ವಾನಿಸುವುದು ನನ್ನ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಬೆಂಗಳೂರಿನಲ್ಲಿರುವ ಕೆಎನ್‌ಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಇದನ್ನು ನೋಡಿಕೊಳ್ಳುತ್ತಾರೆ ಎಂದು ಹೆಚ್‌ಟಿಗೆ ತಿಳಿಸಿದ್ದಾರೆ. ಅಥಣಿಯಲ್ಲಿರುವ ಕಚೇರಿಯು ಯೋಜನೆಯ ಮೇಲ್ವಿಚಾರಣೆ ಮಾಡಿ ಉನ್ನತಾಧಿಕಾರಿಗಳಿಗೆ ವರದಿ ಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯಶಸ್ವಿ ಬಿಡ್ ದಾರರು ಸಮೀಕ್ಷೆ, ತನಿಖೆ, ವಿನ್ಯಾಸ, ಸ್ಥಾಪನೆ, ಪರೀಕ್ಷೆ, ಸರಬರಾಜು ಮತ್ತು ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಎಸ್‌ಬಿ ಬಾಗಿ ಹೇಳಿದ್ದಾರೆ.

ಕಾಂಗ್ರೆಸ್, ಎಎಪಿ ಗರಂ

ಅರ್ಜಿ ಸಲ್ಲಿಸಲು ಕಡಿಮೆ ಸಮಯಾವಶಕಾಶ ನೀಡಿರುವುದನ್ನು ಕಾಂಗ್ರೆಸ್, ಎಎಪಿ ಪ್ರಶ್ನಿಸಿವೆ. ಟೆಂಡರ್ ಖರೀದಿ ಪ್ರಕ್ರಿಯೆಯಲ್ಲಿ ಇರುವಾಗಲೇ ಯೋಜನೆಗೆ ಅಡಿಗಲ್ಲು ಹಾಕುವ ಹಿಂದಿರುವ ಉದ್ದೇಶವೇನು ಎಂದು ಈ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಯಾವುದೇ ಕ್ಷಣದಲ್ಲಿ ರಾಜ್ಯಕ್ಕೆ ವಿಧಾನಸಭಾ ಚುನಾವಣೆ ಘೋಷಣೆಯಾಗಬಹುದು ಮತ್ತು ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ, ಅಧಿಕಾರ ಉಳಿಸಿಕೊಳ್ಳಲು ಸಿಎಂ ಬೊಮ್ಮಾಯಿ ಅವರು ಯೋಜನೆಗಳ ಉದ್ಘಾಟನೆಗೆ ಆತುರಪಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ದೂರಿದ್ದಾರೆ.

ಕೋರ್ಟ್ ಮೆಟ್ಟಿಲೇರುತ್ತೇನೆ - ಎಎಪಿ ಮುಖಂಡ

ಅಥಣಿ ಕ್ಷೇತ್ರ ಎಎಪಿ ಟಿಕೆಟ್ ಆಕಾಂಕ್ಷಿ ಸಂಪತ್‌ಕುಮಾರ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ನೀರಾವರಿ ಇಲಾಖೆಯನ್ನು ನಿರ್ವಹಿಸಿದ್ದಾರೆ. ಟೆಂಡರ್ ಖರೀದಿ ಪ್ರಕ್ರಿಯೆ ನಡೆಯುತ್ತಿರುವ ಯೋಜನೆಯನ್ನ ಉದ್ಘಾಟಿಸುವ ಮೂಲಕ ಕಾನೂನನ್ನು ಉಲ್ಲಂಘಿಸುತ್ತಿರುವುದು ದುರಾದೃಷ್ಟಕರ. ಚುನಾವಣಾ ಆಯೋಗ ಕೂಡಲೇ ಕ್ರಮಕೈಗೊಂಡು ನಿಗದಿತ ಕಾರ್ಯಕ್ರಮ ನಿಲ್ಲಿಸದಿದ್ದರೆ ಕೋರ್ಟ್ ಮೆಟ್ಟಿಲೇರುತ್ತೇನೆ ಎಂದಿದ್ದಾರೆ.

ಟೆಂಡರ್ ಪ್ರಕ್ರಿಯೆಯ ಅವಧಿಯನ್ನು ಕಡಿಮೆ ಮಾಡಿರುವುದು ಕಾನೂನುಬಾಹಿರ ಎಂದು ಕಾಂಗ್ರೆಸ್ ಮುಖಂಡ ಸುನಿಲ್ ಸಂಕ್ ವಿವರಿಸಿದ್ದು, ಈ ರೀತಿ ಹಿಂದೆ ಎಂದೂ ನಡೆದಿಲ್ಲ ಎಂದು ಹೇಳಿದ್ದಾರೆ.

IPL_Entry_Point