ಬೈಕ್ ಓಡಿಸುತ್ತಿದ್ದಾಗಲೇ ಹೃದಯಾಘಾತ: ಪ್ರಜ್ಞೆ ತಪ್ಪಿ ತಡೆಗೋಡೆಗೆ ಗುದ್ದಿ ವ್ಯಕ್ತಿ ಸಾವು; ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ನೋಡಿ
ಹೃದಯಾಘಾತದಿಂದ ಕುಳಿತವರು ಮಾತ್ರವಲ್ಲದೇ ವಾಹನ ಚಲಾಯಿಸುತ್ತಿರುವವರೂ ಮೃತಪಡುತ್ತಿರುವ ಪ್ರಕರಣ ವರದಿಯಾಗುತ್ತಿವೆ. ಮೈಸೂರಿನಲ್ಲಿಯೂ ಬೈಕ್ ಓಡಿಸಿಕೊಂಡು ಹೊರಟಿದ್ದ ವ್ಯಕ್ತಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೈಸೂರು: ಅವರು ಬೈಕ್‌ನಲ್ಲಿ ಸಹಜವಾಗಿಯೇ ಹೋಗುತ್ತಿದ್ದರು. ಪಕ್ಕದಲ್ಲಿ ಒಬ್ಬರು ಬೈಕ್‌ನಲ್ಲಿಯೇ ಬರುತ್ತಿದ್ದರು. ಬೈಕ್ ಸಂಚರಿಸುತ್ತಿರುವಾಗಲೇ ಏಕಾಏಕಿ ಸವಾರನ ನಿಯಂತ್ರಣವನ್ನು ಕಳೆದುಕೊಂಡಿತು. ಬೈಕ್ ರಭಸವಾಗಿ ನುಗ್ಗಿ ಸವಾರ ಬಿದ್ದೇ ಬಿಟ್ಟರು. ನೋಡ ನೋಡುತ್ತಲೇ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು. ವಾಹನ ಚಾಲನೆ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ಆ ವ್ಯಕ್ತಿ ಮೃತಪಟ್ಟರು. ಈ ಘಟನೆ ನಡೆದಿರುವುದು ಮೈಸೂರಿನ ಹೊರ ವರ್ತುಲ ರಸ್ತೆಯಲ್ಲಿ. ಕೆಲಸಕ್ಕೆಂದು ಹೊರಟಿದ್ದ ವ್ಯಕ್ತಿ ಹೃದಯಸ್ಥಂಭನದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆಯಿದು. ಈ ಕುರಿತು ಮೈಸೂರಿನ ಕುವೆಂಪುನಗರ ಸಂಚಾರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಆಗಿದ್ದಾದರೂ ಏನು
ಚಾಮರಾಜನಗರ ತಾಲೂಕಿನ ನಂಜೆದೇವನಪುರ ಗ್ರಾಮದ ರವಿ (40) ಎಂಬುವವರು ಬೈಕ್ ನಲ್ಲಿ ಹೊರಟಿದ್ದರು. ಮೈಸೂರಿನ ಬೋಗಾದಿ ಹೊರ ವರ್ತುಲ ರಸ್ತೆಯಲ್ಲಿ ಬೈಕ್ ಓಡಿಸಿಕೊಂಡು ಹೊರಟಿದ್ದರು.
ಮನೆಯಿಂದ ಸಹಜವಾಗಿಯೇ ಓಡಿಸಿಕೊಂಡು ಬಂದು ಹೊರ ವರ್ತುಲ ರಸ್ತೆಯಲ್ಲಿ ಹೋಗುವಾಗ ಅವರ ನಿಯಂತ್ರಣವನ್ನು ತಪ್ಪಿ ಬೈಕ್ ಅಡ್ಡಾದಿಡ್ಡಿಯಾಗಿ ಓಡಿತು. ಅಲ್ಲದೇ ಉರುಳಿ ಬಿದ್ದ ರವಿ ತೀವ್ರವಾಗಿ ಗಾಯಗೊಂಡರು. ಬೈಕ್ ಗೋಡೆಗೆ ಡಿಕ್ಕಿ ಹೊಡೆದಿತ್ತು.
ಇದನ್ನು ಗಮನಿಸಿದ ಎದುರಿನಿಂದ ಬರುತ್ತಿದ್ದವರು, ಹಿಂದೆ ಬರುತ್ತಿದ್ದ ಸವಾರರು ಕೂಡಲೇ ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಅಸ್ವಸ್ಥರಾಗಿದ್ದರು. ಗಾಯ ಕೂಡ ಆಗಿತ್ತು. ಆನಂತರ ವೈದ್ಯರಿಗೆ ಮಾಹಿತಿ ನೀಡಿ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಆಗಲೇ ರವಿಗೆ ಚಿಕಿತ್ಸೆ ನೀಡಿದರೂ ಕೆಲ ಹೊತ್ತಿನಲ್ಲೇ ಮೃತಪಟ್ಟರು. ವಾಹನ ಚಲಾಯಿಸುವಾಗಲೇ ಹೃದಯಾಘಾತವಾಗಿದ್ದು. ನಿಯಂತ್ರಣ ತಪ್ಪಿ ಬಿದ್ದಿದ್ದಾರೆ ಎಂದು ವೈದ್ಯರು ಹೇಳಿದರು.
ಸಿಸಿಟಿವಿ ಪರಿಶೀಲನೆ
ಕೂಡಲೇ ಸ್ಥಳಕ್ಕೆ ಧಾವಿಸಿ ರವಿ ಅವರಿಗೆ ಯಾರಾದರೂ ಡಿಕ್ಕಿ ಹೊಡೆದಿದ್ದಾರೆಯೇ ಅಥವಾ ಬೇರೆ ರೀತಿಯಲ್ಲಿ ಅಪಘಾತವಾಗಿದೆಯೇ ಎನ್ನುವುದನ್ನು ಕುವೆಂಪುನಗರ ಸಂಚಾರ ಪೊಲೀಸರು ಮುಂದಾದರು. ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ವಾಹನ ಚಲಾಯಿಸುವಾಗ ಏಕಾಏಕಿ ನಿಯಂತ್ರಣ ತಪ್ಪಿ ಅಪಘಾತವಾಗಿ ಮೃತಪಟ್ಟಿರುವುದು ಖಚಿತವಾಯಿತು. ನಂತರ ಕುಟುಂಬದವರಿಗೆ ಮಾಹಿತಿ ನೀಡಿ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಇಬ್ಬರ ದುರ್ಮರಣ
ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಘವಿಸಿ ಇಬ್ಬರು ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಚೌಡೇನಹಳ್ಳಿ ಬಳಿಯ ಬಿ ಎಂ ರಸ್ತೆಯಲ್ಲಿ ನಡೆದಿದೆ.
ಮುಖ್ಯ ರಸ್ತೆಯಲ್ಲಿ ಬರುವಾಗ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಪಿರಿಯಾಪಟ್ಟಣ ತಾಲೂಕು ಕೋಗಿಲೂರು ಗ್ರಾಮದ ಶಿವಾನಂದ (31) ಸ್ಥಳದಲ್ಲೇ ಮೃತಪಟ್ಟಿದ್ದು. ಜೊತೆಯಲ್ಲಿದ್ದ ಅಂಬರೀಶ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಅವರನನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೊಂದು ಕಡೆಯಿಂದ ಬರುತ್ತಿದ್ದ ಇನ್ನೊಂದು ಬೈಕ್‌ನಲ್ಲಿದ್ದು ಮೃತಪಟ್ಟವರ ಮಾಹಿತಿ ಲಭ್ಯವಾಗಿಲ್ಲ.
ಘಟನಾ ಸ್ಥಳಕ್ಕೆ ಪಿರಿಯಾಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.