Bird Flu in Karnataka: ಕರ್ನಾಟಕದ ಕೋಳಿಗಳಲ್ಲೂ ಹಕ್ಕಿ ಜ್ವರ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಬಳಿಕ ಅಲರ್ಟ್‌, ನಾಳೆ ಹಿರಿಯ ಅಧಿಕಾರಿಗಳ ಸಭೆ
ಕನ್ನಡ ಸುದ್ದಿ  /  ಕರ್ನಾಟಕ  /  Bird Flu In Karnataka: ಕರ್ನಾಟಕದ ಕೋಳಿಗಳಲ್ಲೂ ಹಕ್ಕಿ ಜ್ವರ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಬಳಿಕ ಅಲರ್ಟ್‌, ನಾಳೆ ಹಿರಿಯ ಅಧಿಕಾರಿಗಳ ಸಭೆ

Bird Flu in Karnataka: ಕರ್ನಾಟಕದ ಕೋಳಿಗಳಲ್ಲೂ ಹಕ್ಕಿ ಜ್ವರ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಬಳಿಕ ಅಲರ್ಟ್‌, ನಾಳೆ ಹಿರಿಯ ಅಧಿಕಾರಿಗಳ ಸಭೆ

Bird Flu in Karnataka: ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಕೋಳಿಗಳ ಸಾವಿನ ನಂತರ ಪರೀಕ್ಷೆ ನಡೆಸಿದಾಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರ ಇರುವುದು ಖಚಿತವಾಗಿದೆ. ಈ ಕಾರಣದಿಂದ ಪಶುಪಾಲನಾ ಇಲಾಖೆ ಹೈ ಅಲರ್ಟ್‌ ಆಗಿದೆ.

ಕರ್ನಾಟಕದಲ್ಲೂ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.
ಕರ್ನಾಟಕದಲ್ಲೂ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

ಬೆಂಗಳೂರು: ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಬಳಿಕ ಕರ್ನಾಟಕದಲ್ಲೂ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ಕಂಡು ಬಂದಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ಕೋಳಿಗಳು ಹಕ್ಕಿ ಜ್ವರದಿಂದಲೇ ಮೃತಪಟ್ಟಿರುವುದು ಖಚಿತವಾಗಿದೆ. ಇದಲ್ಲದೇ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲೂ ಕೋಳಿಗಳ ಸಾವಿನ ನಂತರ ಪ್ರಯೋಗಾಲಯ ವರದಿ ನೆಗೆಟಿವ್‌ ಬಂದಿದ್ದರೂ ಪಶುಪಾಲನಾ ಇಲಾಖೆ ಭಾರೀ ಮುನ್ನೆಚ್ಚರಿಕೆ ಕೈಗೊಂಡಿದೆ. ಕರ್ನಾಟಕದ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕೋಳಿಗಳ ಪರೀಕ್ಷೆ ಸಹಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಪ್ರತಿ ಜಿಲ್ಲೆಯಲ್ಲೂ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಹಾಗೂ ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಈ ಸಂಬಂಧ ಪಶುಪಾಲನಾ ಇಲಾಖೆ ಆಯುಕ್ತರಾದ ಶ್ರೀರೂಪಾ ಅವರು ಶುಕ್ರವಾರವೇ ಎಲ್ಲಾ 31 ಜಿಲ್ಲೆಗಳ ಉಪನಿರ್ದೇಶಕರ ಸಭೆಯನ್ನು ಕರೆದಿದ್ದಾರೆ.

ಕರ್ನಾಟಕದಲ್ಲಿ ಸುಮಾರು 18 ವರ್ಷದ ಹಿಂದೆ ಹಕ್ಕಿ ಜ್ವರ ಕೋಳಿಗಳಲ್ಲಿ ಕಾಣಿಸಿಕೊಂಡು ಭಾರೀ ನಷ್ಟವೇ ಸಂಭವಿಸಿತ್ತು. ಆಗ ಸಾವಿರಾರು ಕೋಳಿಗಳು ಮೃತಪಟ್ಟು ಕೋಳಿ ಮಾಂಸ ಸೇವನೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿತ್ತು. ಸಾವಿರಾರು ಕೋಳಿಗಳನ್ನು ನಾಶ ಮಾಡಲಾಗಿತ್ತು. ಇದಾದ ಬಳಿಕ ಹಕ್ಕಿಜ್ವರ ಕೋಳಿಗಳಲ್ಲಿ ಕೆಲವೊಮ್ಮೆ ಕಾಣಿಸಿಕೊಂಡರೂ ಅಂತಹ ಅನಾಹುತ ಆಗಿರಲಿಲ್ಲ, ಈಗಾಗಲೇ ಎರಡು ತಿಂಗಳಿನಿಂದ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಹಕ್ಕಿಜ್ವರದಿಂದ ಸಾವಿರಾರು ಕೋಳಿಗಳು ಮೃತಪಟ್ಟು ಪೌಲ್ಟ್ರಿ ಉದ್ಯಮ ನಲುಗಿದೆ. ಇದು ಮಹಾರಾಷ್ಟ್ರಕ್ಕೂ ಹಬ್ಬಿ ಅಲ್ಲಿ ತೀವ್ರ ಸ್ವರೂಪ ಪಡೆದಿದೆ. ಇದರ ನಡುವೆ ಕರ್ನಾಟಕದಲ್ಲೂ ಹಬ್ಬದಂತೆ ಮುನ್ನೆಚ್ಚರಿಕೆಯನ್ನು ಪಶುಪಾಲನಾ ಇಲಾಖೆ ವಹಿಸಿಕೊಂಡು ಬಂದಿತ್ತು.

ಈ ನಡುವೆ ಮೂರ್ನಾಲ್ಕು ದಿನದ ಹಿಂದೆ ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿ ಎಂಬಲ್ಲಿ ಕೋಳಿಗಳು ಸತ್ತಿದ್ದವು. ಎರಡು ದಿನದಲ್ಲಿ ಇದು ನೂರನ್ನು ದಾಟಿದ್ದರಿಂದ ಆತಂಕಗೊಂಡ ಗ್ರಾಮಸ್ಥರು ಪಶುಪಾಲನಾ ಇಲಾಖೆಗೆ ಮಾಹಿತಿ ನೀಡಿದ್ದರು. ಇದಲ್ಲದೇ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲೂ ಕೋಳಿಗಳು ಸತ್ತಿದ್ದರಿಂದ ಎರಡೂ ಕಡೆಯಿಂದಲೂ ಆಯಾ ಜಿಲ್ಲೆಗಳ ಪಶುಪಾಲನಾ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶದ ಭೋಪಾಲ್‌ ಪ್ರಯೋಗಾಲಯಕ್ಕೆ ತಪಾಸಣೆಗೆಂದು ಕಳುಹಿಸಿದ್ದರು. ಈಗ ಎರಡು ಕಡೆಯ ವರದಿ ಬಂದಿವೆ. ಚಿಕ್ಕಬಳ್ಳಾಪುರದಲ್ಲಿನ ವರದಿ ಪಾಸಿಟಿವ್‌ ಇದ್ದರೆ, ರಾಯಚೂರು ಜಿಲ್ಲೆಯ ವರದಿ ನೆಗೆಟಿವ್‌ ಇದೆ.

ಈ ಕಾರಣದಿಂದ ಹೈ ಅಲರ್ಟ್‌ ಆದ ಪಶುಪಾಲನಾ ಇಲಾಖೆ ಆಯುಕ್ತರಾದ ಶ್ರೀರೂಪಾ ಅವರು ಈಗಾಗಲೇ ಎಲ್ಲಾ ಜಿಲ್ಲೆಗಳ ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ನಿರ್ದಿಷ್ಟ ಸೂಚನೆ ಆಧರಿಸಿ ಬುಲೆಟಿನ್‌ ಹೊರಡಿಸಿದ್ದಾರೆ. ಎಲ್ಲಾ ಜಿಲ್ಲೆಗಳ ಗಡಿ ಭಾಗದಲ್ಲಿ ತಪಾಸಣೆ ಚುರುಕುಗೊಳಿಸಬೇಕು. ವಿಶೇಷವಾಗಿ ಮಹಾರಾಷ್ಟ್ರ, ಆಂಧ್ರ ಹಾಗೂ ತೆಲಂಗಾಣ ಭಾಗದಿಂದ ಬರುವ ಕೋಳಿಗಳ ತಪಾಸಣೆ ನಡೆಸಬೇಕು. ಕೋಳಿಗಳು ಅನಿರೀಕ್ಷಿತವಾಗಿ ಸಾವನ್ನಪ್ಪಿದರೆ ಮಾಹಿತಿ ಪಡೆಯಬೇಕು. ಕೋಳಿಗಳು ಸತ್ತ ಭಾಗವನ್ನು ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು ಎನ್ನುವುದು ಸೇರಿದಂತೆ ಹಲವು ಸೂಚನೆ ನೀಡಿದ್ದಾರೆ. ಜನರೂ ಭಯಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸುವಂತೆಯೂ ಸೂಚಿಸಿದ್ದಾರೆ.

ಕರ್ನಾಟಕದಲ್ಲೂ ಹಕ್ಕಿ ಜ್ವರ ಇರುವುದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ. ಈ ಮಾಹಿತಿ ಆಧರಿಸಿಯೇ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಿಗೆ ಈಗಾಗಲೇ ಸೂಚನೆಗಳನ್ನೂ ನೀಡಲಾಗಿದೆ. ಶುಕ್ರವಾರವೇ ಎಲ್ಲಾ ಉಪನಿರ್ದೇಶಕರ ಸಭೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕರೆಯಲಾಗಿದೆ. ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ತೀವ್ರಗೊಂಡಿರುವುದರಿಂದ ಬೆಳಗಾವಿ, ಕಾರವಾರ, ವಿಜಯಪುರ, ಕಲಬುರಗಿ, ಬೀದರ್‌ ಸಹಿತ ಮಹಾರಾಷ್ಟ್ರ ಗಡಿ ಭಾಗ ಇರುವ ಜಿಲ್ಲೆಗಳ ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಒಂದೂವರೆ ದಶಕದ ಹಿಂದೆ ಕರ್ನಾಟಕದಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಇರುವುದು ತಿಳಿದಿತ್ತು. ಬೇಸಿಗೆ ವೇಳೆ ಹಕ್ಕಿಗಳ ವಲಸೆಯಿಂದ ಇದು ಕಂಡು ಬರುವುದು ಸಾಮಾನ್ಯವಾದರೂ ಹಬ್ಬಿದರೆ ಪೌಲ್ಟ್ರಿ ಉದ್ಯಮದ ಜತೆಗೆ ಇದನ್ನು ಸೇವಿಸುವವರಲ್ಲಿ ಗೊಂದಲ ಉಂಟಾಗಬಹುದು. ಇದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ ಎನ್ನುವುದು ಪಶುಪಾಲನಾ ಇಲಾಖೆ ಆಯುಕ್ತರಾದ ಶ್ರೀರೂಪಾ ಅವರ ಸ್ಪಷ್ಟನೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.