ಮಹಾರಾಷ್ಟ್ರ, ಆಂಧ್ರ, ತೆಲಂಗಾಣಗಳಲ್ಲಿ ಹಕ್ಕಿ ಜ್ವರ; ಬೆಂಗಳೂರಲ್ಲಿ, ಕರ್ನಾಟಕದಲ್ಲಿ ಚಿಕನ್ ತಿಂದ್ರೆ ತೊಂದರೆ ಇಲ್ವ, ಡಾಕ್ಟರ್ ಹೇಳಿರುವುದಿಷ್ಟು
ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಸದ್ಯ ಬೆಂಗಳೂರು, ಕರ್ನಾಟಕ ಸೇಫ್ ಆಗಿದೆ. ಆದಾಗ್ಯೂ, ಬೇಯಿಸದ, ಅರೆ ಬೆಂದ ಚಿಕನ್ ತಿನ್ನಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ಕೆಲವು ರಾಜ್ಯಗಳಲ್ಲಿ ಕೋಳಿಗಳನ್ನು ನಾಶಪಡಿಸಲಾಗುತ್ತಿದೆ ಮತ್ತು ವೈದ್ಯರು ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವಂತೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರದೇಶದಲ್ಲಿ ಕೋಳಿ ಜ್ವರ ಕಾಣಿಸಿಕೊಂಡಿದೆ.
ಕರ್ನಾಟಕ ಸೇರಿದಂತೆ ಮತ್ತಾವುದೇ ರಾಜ್ಯಗಳ್ಲಿ ಕೋಳಿ ಜ್ವರ ಕಾಣಸಿಕೊಂಡಿಲ್ಲವಾದರೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ವರ್ಷದ ಒಂದೂವರೆ ತಿಂಗಳಲ್ಲಿ ಮಹಾರಾಷ್ಟ್ರದ ಕೋಳಿ ಜ್ವರದ ಕೇಂದ್ರಬಿಂದು ಎಂದೇ ಕರೆಯಲಾಗುವ ಏಳು ಜಿಲ್ಲೆಗಳಲ್ಲಿ 7,200 ಕೋಳಿಗಳನ್ನು ಮತ್ತು 2,230 ಮೊಟ್ಟೆಗಳನ್ನು ನಾಶಪಡಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಪೌಲ್ಟ್ರಿ ಮಾಲೀಕರಿಗೆ ಪರಿಹಾರವನ್ನೂ ನೀಡಲಾಗಿದೆ.
ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ ಕೋಳಿ ಜ್ವರ ಕಾಣಿಸಕೊಂಡಿದೆ. ಕೇವಲ ಕೋಳಿಗಳಲ್ಲಿ ಮಾತ್ರವಲ್ಲದೆ ಹುಲಿ, ಚಿರತೆ ಮತ್ತು ಕಾಗೆಗಳಲ್ಲೂ ಹಕ್ಕಿಜ್ವರ ಕಾಣಿಸಿಕೊಂಡಿದೆ. ಕಲೆವು ಕಡೆ ಕಾಗೆಗಳೂ ಮೃತಪಟ್ಟಿವೆ. ಮಹಾರಾಷ್ಟ್ರದ ಜತೆಗೆ ಆಂಧ್ರಪ್ರದೇಶದಲ್ಲೂ ಹಕ್ಕಿಜ್ವರ ಕಾಣಿಸಕೊಂಡಿದೆ. ಅಲ್ಲಿನ ಗೋದಾವರಿ ಜಿಲ್ಲೆಯಲ್ಲಿ H5N1 ವೈರಸ್ ಕಾಣಿಸಿಕೊಂಡಿದೆ. ಇದೇ ವೈರಸ್ ಕಾರಣಕ್ಕೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೋಳಿಗಳು ಸಾಯುತ್ತಿವೆ. ಖಮ್ಮಂ, ಶಾತುಪಲ್ಲಿ ಮತ್ತು ಎಳೂರು ಜಿಲ್ಲೆಗಳಲ್ಲಿ ಕೋಳಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಬಾದಾಂಪುರಿ ಮತ್ತು ಉಂಗಟೂರು ಎಂಬಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೋಳಿಗಳು ಸತ್ತಿವೆ. ಮಧ್ಯಪ್ರದೇಶದ ಕಲವು ಬಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಕೊಂಡಿದ್ದು, ಕೋಳಿಗಳು ಮತ್ತು ಬೆಕ್ಕು ಸಾವನ್ನಪ್ಪಿವೆ.
ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ?
ರಾಜ್ಯದ ನೆರೆಯ ಜಿಲ್ಲೆಗಳಾದ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕೋಳಿ ಜ್ವರ ಕಾಣಿಸಿಕೊಂಡಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ. ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಆಂಧ್ರಪ್ರದೇಶದ ಕೋಳಿ ಫಾರಂಗಳಿಂದ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಕೋಳಿ ಸರಬರಾಜು ಆಗುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಹ್ಕಕಿಜ್ವರ ಕಾಣಸಿಕೊಳ್ಳುವ ಭೀತಿ ಆವರಿಸಿದೆ. ವಿಶೇಷವಾಗಿ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಂತಿರುವ ಜಿಲ್ಲೆಗಳಲ್ಲಿ ಕೋಳಿ ಮಾಂಸ ಮಾರಾಟ ವ್ಯವಹಾರ ತೀವ್ರವಾಗಿ ಕುಸಿಯುವ ಸಾಧ್ಯತೆಗಳಿವೆ. ನೆರೆಯ ಜಿಲ್ಲೆಗಳಿಂದ ಕೋಳಿ ಸರಬರಾಜಾಗದಂತೆ ತಡೆಯಲು ಪಶುಸಂಗೋಪನಾ ಇಲಾಖೆ ಕ್ರಮ ಕೈಗೊಳ್ಳು ಬಗ್ಗೆ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಸದ್ಯಕ್ಕೆ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲವಾದ್ದರಿಂದ ಯಾವುದೇ ಭೀತಿಯಿಲ್ಲ. ಆದರೂ, ಆಂಧ್ರಪ್ರದೇಶಕ್ಕೆ ಸಮೀಪವಿರುವ ರಾಯಚೂರು, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೀದರ್, ಕಲಬುರಗಿ, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಎಚ್ಚರ ವಹಿಸುವ ಅವಶ್ಯಕತೆ ಇದೆ. ಇನ್ನು ಬೆಂಗಳೂರಿಗೆ ಆಂಧ್ರ ಅಥವಾ ಮಹಾರಾಷ್ಟ್ರದಿಂದ ಕೋಳಿ ಸರಬರಾಜಾಗುವುದಿಲ್ಲವಾದ್ದರಿಂದ ಅಷ್ಟರ ಮಟ್ಟಿಗೆ ಸೇಫ್!
ರಂಗನತಿಟ್ಟು, ನೆಲಮಂಗಲ ಮುಂತಾದ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೋಳಿ ಫಾರಂಗಳಿದ್ದು ಈ ಭಾಗದಿಂದಲೇ ರಾಜ್ಯ ರಾಜಧಾನಿಗೆ ಸರಬರಾಜಾಗುತ್ತದೆ. ಪ್ರತಿಷ್ಠಿತ ಸುಗುಣ ಮೊದಲಾದ ಕಂಪನಿಗಳು ಕೋಳಿ ಮರಿಗಳನ್ನು ಕೋಳಿಫಾರಂಗಳಿಗೆ ಪೂರೈಕೆ ಮಾಡುತ್ತವೆ. ಹಾಗಾಗಿ, ಬೆಂಗಳೂರಿಗೆ ಸದ್ಯದ ಮಟ್ಟಿಗೆ ಹಕ್ಕಿ ಜ್ವರದ ಭೀತಿಯಿಲ್ಲ ಎಂದು ಕೋಳಿ ಡೀಲರ್ ಗಳು ಅಭಿಪ್ರಾಯಪಡುತ್ತಾರೆ. 2020ರಲ್ಲಿ ರಂಗನತಿಟ್ಟುವಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿತ್ತು. ಒಂದುವೇಳೆ ಬೆಂಗಳೂರಿನ ಸುತ್ತಮುತ್ತಲಿನ ಕೋಳಿ ಫಾರಂಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡರೆ ಬೆಂಗಳೂರಿನ ಕೋಳಿ ಮಾಂಸ ಮಾರಾಟ ಉದ್ಯಮದ ಮೇಲೆ ನಿಶ್ಚಿತವಾಗಿ ಹೊಡೆತ ಬೀಳಲಿದೆ ಎಂದು ಕೋಳಿ ಮಾರಾಟಗಾರೊಬ್ಬರು ಅಭಿಪ್ರಾಯಪಡುತ್ತಾರೆ.
ಸಧ್ಯಕ್ಕೆ ರಾಜ್ಯ ಮತ್ತು ಬೆಂಗಳೂರಿನಲ್ಲಿ ಕೋಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಹೋಟೆಲ್ ಗಳಲ್ಲಿ ಚಿಕನ್ ಖಾದ್ಯಗಳ ಮಾರಾಟ ಸಹಜವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಒಂದುವೇಳೆ ರಾಜ್ಯ ಅಥವಾ ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರ ವ್ಯಾಪಕವಾಗಿ ಹರಡಿದರೆ ಹೋಟೆಲ್ ಉದ್ಯಮದ ಮೇಲೆ ಹೊಡೆತ ಬೀಳಲಿದೆ.
ಹ್ಕಕಿ ಜ್ವರದ ಲಕ್ಷಣಗಳು ಮತ್ತು ಪರಿಹಾರ ಕ್ರಮಗಳು
ಕಣ್ಣಿನ ಬಣ್ಣ ಬದಲಾವಣೆ, ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು, ಸ್ನಾಯು ನೋವು, ವಾಂತಿಬೇಧಿ, ನೆಗಡಿ, ಉಸಿರಾಟದ ತೊಂದರೆ.
ಮುನ್ನೆಚ್ಚರಿಕೆ ಕ್ರಮಗಳು: ಕೋಳಿ ಮತ್ತು ಸಾಕು ಪ್ರಾಣಿಗಳ ಕೆಲಸ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಪ್ರಾಣಿ ಪಕ್ಷಿಗಳನ್ನು ನೋಡಿಕೊಳ್ಳುವವರು ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು. H5N1 ವೈರಸ್ ಇರುವ ಪ್ರಾಣಿಗಳ ಜತೆ ಕೆಲಸ ಮಾಡಬಾರದು. ಕಾಯಿಸದ ಹಾಲನ್ನು ಕುಡಿಯಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಕೋಳಿ ಮಾಂಸವನ್ನು ಸಮರ್ಪಕವಾಗಿ ಬೇಯಿಸಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನೀರು ಮತ್ತು ಆಹಾರದಲ್ಲಿ ಬೆಳೆಯುವ ಕ್ಯಾಂಪಿಲೋಬ್ಯಾಕ್ಟರ್ ಜಿಜುನಿ ಎಂಬ ಬ್ಯಾಕ್ಟೀರಿಯಾ ಈ ಸೋಂಕು ಹರಡಲು ಕಾರಣ. ಅರೆಬರೆ ಬೆಂದ ಕೋಳಿಯ ಆಹಾರ ಪದಾರ್ಥಗಳನ್ನು ಜನರು ಸೇವಿಸಬಾರದು. ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಆಹಾರವನ್ನು ಚೆನ್ನಾಗಿ ಬೇಯಿಸಿದ ನಂತರವೇ ತಿನ್ನಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
(ವರದಿ- ಎಚ್ ಮಾರುತಿ, ಬೆಂಗಳೂರು)
