R Ashok vs DK Shivakumar: ಡಿಕೆ ಶಿವಕುಮಾರ್ ಮಣಿಸಲು ಕೇಸರಿ ನಾಯಕರ ಪಣ!; ಕನಕಪುರದಲ್ಲಿ ಆರ್ ಅಶೋಕ್ ಗೆ ಬಿಜೆಪಿ ಟಿಕೆಟ್ ಘೋಷಣೆ
ಕನಪುರದಲ್ಲಿ ಡಿಕೆ ಶಿವಕುಮಾರ್ ಮಣಿಸೋಕೆ ಬಿಜೆಪಿ ರಣತಂತ್ರಗಳನ್ನು ರೂಪಿಸಿದೆ. ಡಿಕೆಶಿಗೆ ಪ್ರತಿಸ್ಪರ್ಧಿಯಾಗಿ ಆರ್ ಅಶೋಕ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Assembly Elections) ಬಿಜೆಪಿ (BJP) ಬಹು ನಿರೀಕ್ಷಿತ 189 ಅಭ್ಯರ್ಥಿಗಳ ಮೊದಲ ಪಟ್ಟಿ (First list of candidates) ಬಿಡುಗಡೆ ಮಾಡಿದ್ದು, ಕಾಂಗ್ರೆಸ್ (Congress) ನ ಪ್ರಭಾವಿ ನಾಯಕರು, ಸಿಎಂ ರೇಸ್ ನಲ್ಲಿ ಇರುವವರನ್ನೇ ಮಣಿಸಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಕನಕಪುರದಲ್ಲಿ (Kanakapur) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Sivakumar) ಅವರಿಗೆ ಪ್ರಬಲ ಪೈಪೋಟಿ ನೀಡಲು ಕಂದಾಯ ಸಚಿವ ಆರ್ ಅಶೋಕ್ (Revenue Minister R Ashok) ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಅಶೋಕ್ ಅವರಿಗೆ ಪ್ರಸ್ತುತ ಇರುವ ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಜೊತೆಗೆ ಕನಕಪುರದಲ್ಲೂ ಟಿಕೆಟ್ ನೀಡಲಾಗಿದೆ.
ಆರ್ ಅಶೋಕ್ ಅವರಿಗೆ ಇದೇ ಮೊದಲ ಬಾರಿಗೆ ಎರಡು ಕಡೆ ಸ್ಪರ್ಧಿಸಲು ಅವಕಾಶ ನೀಡಿದೆ. ಕನಕಪುರದ ಬಂಡೆಯನ್ನು ಶತಾಯಗತಾಯ ಕಟ್ಟಿಹಾಕಲೇ ಬೇಕೆಂದು ಪಣತೊಟ್ಟಿರುವ ಬಿಜೆಪಿ ಹೈಕಮಾಂಡ್ ಅಶೋಕ್ ಅವರನ್ನು ಡಿಕೆಶಿ ವಿರುದ್ಧ ಕಣಕ್ಕಿಳಿಸುತ್ತಿದೆ. ಆರ್ ಅಶೋಕ್ ಮತ್ತು ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಿದ್ದಾರೆ.
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಚಾರ ನೋಡುವುದಾದರೆ ಇಲ್ಲಿ 1,10,000 ಒಕ್ಕಲಿಗ ಮತದಾರರು ಇದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು 45 ಸಾವಿರ ಇದ್ದಾರೆ. ಮುಸ್ಲಿಂಮರು 15 ಸಾವಿರ, ಲಿಂಗಾಯತರು 10 ಸಾವಿರ, ಕುರುಬರು 6 ಸಾವಿರ, ಕ್ರಿಶ್ಚಿಯನ್ 4 ಸಾವಿರ, ಲಂಬಾಣಿ 5 ಸಾವಿರ, ಕುಂಬಾರ 4 ಸಾವಿರ, ಬಣಜಿಗ- 3 ಸಾವಿರ ಹಾಗೂ ಇತರೆ 20 ಸಾವಿರ ಮತದಾರರಿದ್ದಾರೆ.
ಕನಕಪುರ ಕ್ಷೇತ್ರದಲ್ಲಿ ಒಟ್ಟು 1,09,290 ಪುರುಷ ಮತದಾರರು, 1,12.136 ಮಹಿಳಾ ಮತದಾರರು ಇದ್ದಾರೆ. 4 ಇತರ ಮತದಾರರು ಸೇರಿ ಒಟ್ಟು 2,21,430 ಮತದಾರರಿದ್ದಾರೆ.
ಅಭ್ಯರ್ಥಿಗಳ ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿ
ಪಕ್ಷದ ವತಿಯಿಂದ ಬಿಡುಗಡೆ ಮಾಡಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
ಎಚ್ ಎ ಎಲ್ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 189 ಅಭ್ಯರ್ಥಿಗಳಲ್ಲಿ ಹೊಸ ಮುಖ ತರುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೊದಲ ಪಟ್ಟಿ ನೋಡಿದರೆ ಈ ಬಾರಿ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವ ದಿಕ್ಸೂಚಿ ಆಗಿದೆ ಎಂದಿದ್ದಾರೆ.
ಟಿಕೆಟ್ ಕೈ ತಪ್ಪಿದವರು ಬಂಡಾಯ ಏಳುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೈ ತಪ್ಪುವ ಬಗ್ಗೆ ಆಗಾಗ್ಲೇ ಹೇಳಿದ್ದೇವೆ. ಒಟ್ಟು 3 ದಿನ ಚರ್ಚೆ ಮಾಡಿ ಈ ನಿರ್ಧಾರ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಇನ್ನೂ 34 ಕ್ಷೇತ್ರಗಳ ಪಟ್ಟಿ ಎರಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.