DK Shivakumar on BJP: ಕರ್ನಾಟಕದಲ್ಲಿ ಪ್ರಧಾನಿ ಮೋದಿ ಹೆಸರಲ್ಲಿ ಬಿಜೆಪಿಗರು ಚುನಾವಣೆಗೆ ಸ್ಪರ್ಧೆ; ರಾಜ್ಯವನ್ನ ಪ್ರಧಾನಿ ಮುನ್ನಡೆಸುತ್ತಾರಾ?
ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar On Bjp: ಕರ್ನಾಟಕದಲ್ಲಿ ಪ್ರಧಾನಿ ಮೋದಿ ಹೆಸರಲ್ಲಿ ಬಿಜೆಪಿಗರು ಚುನಾವಣೆಗೆ ಸ್ಪರ್ಧೆ; ರಾಜ್ಯವನ್ನ ಪ್ರಧಾನಿ ಮುನ್ನಡೆಸುತ್ತಾರಾ?

DK Shivakumar on BJP: ಕರ್ನಾಟಕದಲ್ಲಿ ಪ್ರಧಾನಿ ಮೋದಿ ಹೆಸರಲ್ಲಿ ಬಿಜೆಪಿಗರು ಚುನಾವಣೆಗೆ ಸ್ಪರ್ಧೆ; ರಾಜ್ಯವನ್ನ ಪ್ರಧಾನಿ ಮುನ್ನಡೆಸುತ್ತಾರಾ?

ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಪ್ರಧಾನಿ ಮೋದಿ ಹೆಸರಿನಲ್ಲಿ ಕಣಕ್ಕಿಳಿಯುತ್ತಾರೆ. ಈ ಪಕ್ಷಕ್ಕೆ ರಾಜ್ಯದಲ್ಲಿ ದೊಡ್ಡ ನಾಯಕರು ಇಲ್ಲ. ಭವಿಷ್ಯದಲ್ಲಿ ಕರ್ನಾಟಕವನ್ನ ಮೋದಿ ಅವರು ನಡೆಸುತ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು.

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸ್ಪರ್ಧಿಸಲಿದ್ದಾರೆ. ಅವರಿಗೆ ರಾಜ್ಯದಲ್ಲಿ ಹೇಳಿಕೊಳ್ಳುವಂತ ದೊಡ್ಡ ನಾಯಕರು ಇಲ್ಲ. ಕರ್ನಾಟಕವನ್ನು ಪ್ರಧಾನಿ ಮೋದಿ ಅವರು ಮುನ್ನಡೆಸುತ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆಶಿ, ಅಮಿತ್ ಶಾ ಅವರು ಪ್ರಧಾನಿ ಮೋದಿ ‘ಎಲೆಕ್ಷನ್ ಫೇಸ್’ ಎಂದಿದ್ದಾರೆ. ಅಂದರೆ ಇಲ್ಲಿ ಯಾವುದೇ ರೀತಿಯಲ್ಲಿ ರಾಜ್ಯ ನಾಯಕತ್ವ ಇರುವುದಿಲ್ಲ. ಪ್ರಧಾನಿ ಮೋದಿ ರಾಜ್ಯವನ್ನು ನಡೆಸುತ್ತಾರೆಯೇ? ನಮಗೆ ರಾಜ್ಯದಲ್ಲಿ ನಾಯಕ ಬೇಕು ಮತ್ತು ಕಾಂಗ್ರೆಸ್ ಸಾಮೂಹಿಕ ನಾಯಕತ್ವವನ್ನು ನೀಡುತ್ತದೆ ಎಂದಿದ್ದಾರೆ.

ಬಿಜೆಪಿ ನಾಯಕರ ಹೇಳಿಕೆಯನ್ನ ಇಡೀ ದೇಶ ಖಂಡಿಸುತ್ತೆ

ಬಿಜೆಪಿಗೆ ಭಾವನಾತ್ಮಕ ಅಜೆಂಡಾಗಳು ಬೇಕೇ ಹೊರತು ಅಭಿವೃದ್ಧಿಯ ಅಜೆಂಡಾ ಬೇಕಾಗಿಲ್ಲ. ಆದರೆ ಕಾಂಗ್ರೆಸ್ ಜನಸಾಮಾನ್ಯರ ಬದುಕಿನ ವಿಚಾರಕ್ಕೆ ಆದ್ಯತೆ ನೀಡುತ್ತದೆ. ಉದ್ಯೋಗವಿಲ್ಲದೆ, ಹಸಿವಿನಿಂದ ಬಳಲುತ್ತಿರುವವರ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತದೆ.

ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪಕ್ಷದ ಅಜೆಂಡಾ ಹೇಳಿದ್ದಾರೆ. ಬಿಜೆಪಿ ಅಜೆಂಡಾ ಜನರ ಮನಸ್ಸು ಕೆಡಿಸಿ ಸಮಾಜದ ಶಾಂತಿ ಕದಡಲು ಬಯಸುತ್ತದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡಿ ದೇಶದ ಜನರ ಮನಸ್ಸು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಜನಸಾಮಾನ್ಯರಲ್ಲಿ ಪರಸ್ಪರ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ನಾಯಕರ ಹೇಳಿಕೆಯನ್ನು ಇಡೀ ದೇಶ ಖಂಡಿಸುತ್ತದೆ. ಪಕ್ಷದ ಅಧ್ಯಕ್ಷನಾಗಿ ನಾನು ಕೂಡ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಬಡವರು ಆರ್ಥಿಕ ಸಬಲತೆ ಸಾಧಿಸುವುದು ಬೇಕಾಗಿಲ್ಲ!

ಕಾಂಗ್ರೆಸ್ ಪಕ್ಷ ಸದಾ ಅಭಿವೃದ್ಧಿಯ ಕಾರ್ಯಸೂಚಿ ಮೇಲೆ ಕೆಲಸ ಮಾಡುತ್ತಿದೆ. ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಅವರ ಬದುಕು ಕಟ್ಟಿಕೊಡುವತ್ತ ಗಮನಹರಿಸುತ್ತಿದೆ. ಬಿಜೆಪಿಗೆ ಬಡವರು ಆರ್ಥಿಕ ಸಬಲತೆ ಸಾಧಿಸುವುದು ಬೇಕಾಗಿಲ್ಲ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕೆಲವು ಮಾಧ್ಯಮಗಳಲ್ಲಿ ಪ್ರಿಯಾಂಕಾ ಗಾಂಧಿ ಅವರ ಆಗಮನದ ವಿಚಾರವಾಗಿ ವರದಿ ಬಂದಿದೆ. ಪ್ರಿಯಾಂಕಾ ಗಾಂಧಿ ಅವರು ಸದ್ಯ ಉತ್ತರ ಪ್ರದೇಶದಲ್ಲಿ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಯಾವಾಗ ರಾಜ್ಯಕ್ಕೆ ಬರುತ್ತಾರೆ ಎಂದು ಅಧಿಕೃತವಾಗಿ ದಿನಾಂಕ ತಿಳಿಸುತ್ತೇನೆ. ನಾನು ರಾಜ್ಯದ ಮಹಿಳೆಯರಿಗೆ ಈ ಮೂಲಕ ಒಂದು ಮನವಿ ಮಾಡುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ದೂರವಾಣಿ ಸಂಖ್ಯೆ ಹಾಗೂ ಇ ಮೇಲ್ ಅನ್ನು ಪ್ರಕಟಿಸುತ್ತೇನೆ. ರಾಜ್ಯದ ಮಹಿಳೆಯರು ತಮ್ಮ ಬದುಕು, ದೇಶ ಹಾಗೂ ರಾಜ್ಯದಲ್ಲಿ ಯಾವ ರೀತಿ ಬದಲಾವಣೆ ತರಬೇಕು ಎಂಬುದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲಿ.

ಕಾಂಗ್ರೆಸ್ ಪಕ್ಷದಿಂದ ಮಹಿಳೆಯರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿಯ ಬಯಸುತ್ತೇವೆ. ಯಾವುದೇ ಹೆಣ್ಣುಮಗಳು ಅವರ ಸಲಹೆ, ಅಭಿಪ್ರಾಯ ಹಾಗೂ ನೋವನ್ನು ಹೇಳಿಕೊಳ್ಳಬಹುದು. ನನ್ನ ಅಥವಾ ಪರಮೇಶ್ವರ್ ಅವರ ಹೆಸರಿಗೆ, ಕಾಂಗ್ರೆಸ್ ಕಚೇರಿ ವಿಳಾಸಕ್ಕೆ ಪತ್ರ ಬರೆಯಬಹುದು. ಅವರ ಸಲಹೆಗಳನ್ನು ಪರಿಶೀಲಿಸಿ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇದೊಂದು ನಾಚಿಕೆಗೇಡಿನ ವಿಚಾರ

ಬಿಜೆಪಿ ನಾಯಕರ ದ್ವೇಷದ ಹೇಳಿಕೆಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದಿಲ್ಲವೇ ಎಂದು ಕೇಳಿದಾಗ, ಇದೇ ಕಾರಣಕ್ಕೆ ರಾಜ್ಯದಲ್ಲಿ ಯಾವುದೇ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಲು ಮುಂದೆ ಬರುತ್ತಿಲ್ಲ. ಇದೊಂದು ನಾಚಿಕೆಗೇಡಿನ ವಿಚಾರ. ಇದೇ ಬಿಜೆಪಿಯ ನಿಜವಾದ ಮುಖ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Whats_app_banner