ಕನ್ನಡ ಸುದ್ದಿ  /  Karnataka  /   Bjp Government Is In Collusion With Bengaluru Land Grabbers Congress Leader Ramesh Babu Accusation

Govt Land Grabbers: ಬಿಜೆಪಿ ಸರ್ಕಾರ ಬೆಂಗಳೂರಿನ ಭೂಗಳ್ಳರ ಜೊತೆ ಶಾಮೀಲು; ಸರ್ಕಾರಿ ಜಾಗ ಕಬಳಿಸುವವರಿಗೆ ನೆರವು: ರಮೇಶ್ ಬಾಬು

ಸಿಡಿ ವಿಚಾರದಲ್ಲಿ ಸಚಿವ ಸುಧಾಕರ್, ಗೋಪಾಲಯ್ಯ, ಎಸ್ ಟಿ ಸೋಮಶೇಖರ್ ಸೇರಿದಂತೆ 13 ಸಚಿವರು ಜಾಮೀನು ಪಡೆದಿದ್ದಾರೆ. 13 ಶಾಸಕರ ಹೆಸರು ಕೂಡ ಇದೆ. ಸದಾನಂದಗೌಡರು ಕೂಡ ಈ ವಿಚಾರವಾಗಿ ಜಾಮೀನು ತೆಗೆದುಕೊಂಡಿದ್ದಾರೆ. ಮೈಸೂರು ಸಂಸದರು ಈ ವಿಚಾರದಲ್ಲಿ ನಾಲ್ಕು ಜಾಮೀನನ್ನು ತೆಗೆದುಕೊಂಡಿದ್ದಾರೆ. ನನ್ನ ಪ್ರಕಾರ ಅವರದು 26 ಸಂಚಿಕೆಗಳಿವೆ ಎಂದು ರಮೇಶ್ ಬಾಬು ಹೇಳಿದ್ದಾರೆ.

ಕೆಪಿಸಿಸಿ ವಕ್ತಾರ ರಮೇಶ್ ಬಾಬು (ಫೋಟೋ-File)
ಕೆಪಿಸಿಸಿ ವಕ್ತಾರ ರಮೇಶ್ ಬಾಬು (ಫೋಟೋ-File)

ಬೆಂಗಳೂರು: ಬಿಜೆಪಿಯ 40 ಪರ್ಸೆಂಟ್ ಸರ್ಕಾರ ಬೆಂಗಳೂರಿನ ಭೂಗಳ್ಳರ ಜೊತೆಯು ಶಾಮೀಲಾಗಿದೆ. ಸರ್ಕಾರಿ ಜಾಗವನ್ನು ಕಬಳಿಸುವವರಿಗೆ ಇಲಾಖೆಯೇ ಹಸಿರು ನಿಶಾನೆ ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಬಗ್ಗೆ ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಸರ್ಕಾರ ಭೂಗಳ್ಳರ ಜೊತೆಯೂ ಶಾಮೀಲಾಗಿದೆ ಎಂಬುದಕ್ಕೆ ಉದಾಹರಣೆ ಬಿ ಟಿ ಎಂ ಲೇಔಟ್ ಗೆ ಸಂಬಂಧಿಸಿದ ಸಿಎ ನಿವೇಶನ 12/1. ಇದನ್ನು 2019ರಲ್ಲಿ ಬಿಡಿಎ ನಿಯಮಾನುಸಾರ ಕೇಂದ್ರ ಸರ್ಕಾರ ಸ್ವಾಮ್ಯಕ್ಕೆ ಒಳಪಟ್ಟಂತಹ ಭಾರತ್ ಆಯಿಲ್ ಕಾರ್ಪೊರೇಷನ್ ಗೆ ಹಂಚಿಕೆ ಮಾಡುತ್ತಾರೆ. ಈ ಕಂಪನಿ ಅಲ್ಲಿ ಕೆಲಸ ಮಾಡಲು ಹೋದಾಗ ಸ್ಥಳೀಯರು ಬಿಜೆಪಿ ನಾಯಕರು ಅದಕ್ಕೆ ಅಡ್ಡಿಪಡಿಸುತ್ತಾರೆ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ಇದ್ದರೂ ಕೂಡ ಈ ನಿವೇಶನವನ್ನು ಈ ಸಂಸ್ಥೆಗೆ ನೀಡಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಡಬಲ್ ಇಂಜಿನ್ ಎನ್ನುವ ಸರ್ಕಾರ ಕಮಿಷನ್ ಸಿಗುತ್ತದೆ ಎಂದರೆ ಯಾವುದಕ್ಕೂ ಆದ್ಯತೆ ನೀಡುವುದಿಲ್ಲ. ಕೇಂದ್ರ ಸರ್ಕಾರದ ಸಂಸ್ಥೆಗೆ ಹಂಚಿಕೆಯಾಗಿರುವ ಸಿಎನಿವೇಶನ ಎರಡು ಮೂರು ವರ್ಷವಾದರೂ ನೀಡುವುದಿಲ್ಲ ಎಂದರೆ ಭೂಗಳ್ಳರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದರ್ಥ. ಇವರಿಂದ ಸಂಸ್ಥೆ ಗೆ ಸೇರಬೇಕಾದ ಜಾಗ ರಕ್ಷಣೆ ಮಾಡುತ್ತಿಲ್ಲ ಎಂದರೆ, ಕೇಂದ್ರವನ್ನು ಲೆಕ್ಕಿಸದೆ ಕಮಿಷನ್ ಧಂದೆಗೆ ಇಳಿದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಜುಲೈ 28 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ವಿಚಾರವನ್ನು ಗಮನಕ್ಕೆ ತಂದಿದ್ದೆ. ನಂತರ ಈ ಪತ್ರವನ್ನು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಿ ಕ್ರಮ ಕೈಗೊಳ್ಳುವಂತೆ ಹೆಸರಿಗಷ್ಟೇ ಸೂಚಿಸುತ್ತಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಯಿಲ್ ಕಾರ್ಪೊರೇಷನ್ ಅಧಿಕಾರಿಗಳು ಪೊಲೀಸ್ ಕಮಿಷನರ್, ಬಿಡಿಎ ಆಯುಕ್ತರು, ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದರು ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿಯವರು ಮಾತೆತ್ತಿದರೆ ದಾಖಲೆ ನೀಡಿ ಎಂದು ಕೇಳುತ್ತಾರೆ.

ಮತದಾರರ ಮಾಹಿತಿ ಕಳವು ಪ್ರಕರಣದಲ್ಲೂ ಕೂಡ ಬಿಜೆಪಿ ನಾಯಕರು ದಾಖಲೆ ನೀಡಿ ಎಂದು ಹಾರಿಕೆ ಉತ್ತರ ನೀಡಿದ್ದರು. ಆದರೆ ಈಗ ಇಬ್ಬರು ಐಎಎಸ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೆಳವಣಿಗೆ ನಡೆದಿದೆ. 40 ಪರ್ಸೆಂಟ್ ಕಮಿಷನ್ ದಂಧೆಗಾಗಿ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಲಾಗಿದೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳು ಬಾಯಿ ಮಾತಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿದರೆ ಆಗುವುದಿಲ್ಲ. 40 ಪರ್ಸೆಂಟ್ ಕಮಿಷನ್ ಗಾಗಿ ಸರ್ಕಾರವನ್ನೇ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಬೇಡಿ. ಕೇಂದ್ರ ಸರ್ಕಾರದ ಸಮಯದ ಕಂಪನಿಗೆ ಅಡ್ಡಿಪಡಿಸುತ್ತಿರುವ ಅಧಿಕಾರಿಗಳು ಹಾಗೂ ಭೂಗಳ್ಳರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಪಕ್ಷದ ನಾಯಕರು ಏನು ಮಾತನಾಡಬೇಕು ಎಂದು ಬಿಜೆಪಿಯರೇ ಭಾಷಣ ಬರೆದುಕೊಟ್ಟರೆ ಚೆನ್ನಾಗಿರುತ್ತೆ

ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುವಾಗ ರಾವಣ ಎಂಬ ಪದವನ್ನು ಬಳಸಿದ್ದಾರೆ. ಇನ್ನು ಮುಂದೆ ಬಿಜೆಪಿಯವರೇ ವಿರೋಧ ಪಕ್ಷದ ನಾಯಕರು ಏನು ಮಾತನಾಡಬೇಕು ಎಂದು ಭಾಷಣ ಬರೆದುಕೊಟ್ಟರೆ ಚೆನ್ನಾಗಿರುತ್ತದೆ.

ಮಂಗಳೂರಿನ ಭಾಗದ ಕಾಲೇಜಿನಲ್ಲಿ ಶಿಕ್ಷಕರು ಒಬ್ಬರು ವಿದ್ಯಾರ್ಥಿಗೆ ಕಸಬ್ ಎಂದು ಕರೆದಿದ್ದನ್ನು ಸಮರ್ಥಿಸಿಕೊಂಡ ಶಿಕ್ಷಣ ಸಚಿವರು ನಮ್ಮಲ್ಲಿ ಹಲವು ಬಾರಿ ರಾವಣ ಎಂಬ ಪದ ಪ್ರಯೋಗವನ್ನು ಮಾಡುತ್ತೇವೆ ಹೀಗಾಗಿ ಕಸಬ್ ಎಂದು ಹೇಳಿರುವುದು ತಪ್ಪೇನಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಅತ್ತ ಗುಜರಾತಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾವಣ ಎಂಬ ಪದ ಬಳಕೆಗೆ ಸಹಿಸಿಕೊಳ್ಳಲಾಗದ ಬಿಜೆಪಿಯವರು ಈ ದೇಶವನ್ನು ಯಾವ ಕಡೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬಿಜೆಪಿ ನಾಯಕರು ಖರ್ಗೆಯವರು ಕೊಟ್ಟಿರುವ ಹೇಳಿಕೆಯನ್ನು ಆರೋಗ್ಯಕರ ರೀತಿಯಲ್ಲಿ ಸ್ವೀಕರಿಸಬೇಕು. ಸಂಸದೀಯ ವ್ಯವಸ್ಥೆಯಲ್ಲಿ ಆರೋಗ್ಯಕರ ಟೀಕೆಗೆ ಅವಕಾಶ ಇರುತ್ತದೆ. ಖರ್ಗೆಯವರು ತಮ್ಮ ಸಂಸದೀಯ ಜೀವನದ ಹಾದಿಯಲ್ಲಿ ಇಂದಿಗೂ ಆ ಸಂಸದೀಯ ಪದದಿಂದ ಟೀಕೆ ಮಾಡಿದ ಉದಾಹರಣೆಗಳಿಲ್ಲ. ಪ್ರಧಾನಮಂತ್ರಿಗಳು ಇಂತಹ ಟೀಕೆಗಳನ್ನು ಸ್ವೀಕರಿಸಿ ರಾಜಕೀಯವಾಗಿ ಉತ್ತರ ನೀಡಬೇಕು. ಅದನ್ನು ಬಿಟ್ಟು ಹವಾ ಹೇಳನ ಮಾಡುವುದು ಒಳ್ಳೆಯ ರೀತಿಯ ಬೆಳವಣಿಗೆಯಲ್ಲ.

ಬಿಜೆಪಿ ಸೇರಲು ಒಂದಾಗಿರುವ 60 ಜನ ರೌಡಿಗಳ ಪಟ್ಟಿ ಇದೆಯೇ ಎಂಬ ಪ್ರಶ್ನೆಗೆ, 'ಈ ಬಗ್ಗೆ ನಮಗೆ ಮಾಹಿತಿ ಇದೆ. ಯಾವ ಜಿಲ್ಲೆಯಿಂದ ಎಷ್ಟು ಜನ ಸೇರುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಬೆಂಗಳೂರಿನಲ್ಲಿ 26 ಜನರಿದ್ದಾರೆ. ಈ ವಿಚಾರದಲ್ಲಿ ಕುತೂಹಲ ಹೀಗೆ ಇರಲಿ. ಸ್ಪೀಕರ್ ಸೇರಿದಂತೆ ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದವರು ಆರ್ ಎಸ್ ಎಸ್ ನಲ್ಲಿ ವ್ಯಕ್ತಿ, ವ್ಯಕ್ತಿತ್ವ ಹಾಗೂ ಸಂಸ್ಕೃತಿ, ದೇಶ ನಿರ್ಮಾಣ ಬೆಳವಣಿಗೆಗೆ ಅವಕಾಶವಿದೆ ಎಂದು ಹೇಳುತ್ತಾರೆ. ಆದರೆ ರೌಡಿಗಳನ್ನು ಯಾಕೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಸಮರ್ಥನೆ ಮಾಡಿಕೊಂಡವರು ಮುಖ್ಯಮಂತ್ರಿಗಳು ಹಾಗೂ ಸಚಿವ ಅಶ್ವತ್ ನಾರಾಯಣ ಅವರು.

ಮಾಧ್ಯಮಗಳಲ್ಲಿ ಟೀಕೆ ಹೆಚ್ಚಾದ ಬಳಿಕ ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಕೊಡಗೇರಿ ಪ್ರದೇಶಗಳಲ್ಲಿ ಮತ ಸೆಳೆಯುವ ಉದ್ದೇಶದಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು ಎಂದು ಅವರದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಈ ಪಟ್ಟಿಯನ್ನು ಸಮಯ ಬಂದಾಗ ತಿಳಿಸುತ್ತೇವೆ. ಈ ಪಟ್ಟಿಯನ್ನು ಬಿಜೆಪಿಯವರೇ ನೀಡಬಹುದು ಅದಕ್ಕಾಗಿ ಕಾಯೋಣ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ನಾಲ್ಕು ಪ್ರಕರಣ, ಕೇಂದ್ರ ಸಚಿವ ಪ್ರಹಲ್ಲಾ ಜೋಶಿಯವರ ಮೇಲೆ ಒಂದು ಕ್ರಿಮಿನಲ್ ಪ್ರಕರಣ ಇದೆ. ಸಚಿವ ಶ್ರೀರಾಮುಲು, ಸಚಿವ ಗೋಪಾಲಯ್ಯ ಅವರು ಈ ಹಿಂದೆ ಎರಡು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ನಾವಿಲ್ಲಿ ಯಾವುದೇ ವ್ಯಕ್ತಿಗಳ ಮೇಲೆ ಟೀಕೆ ಮಾಡುತ್ತಿಲ್ಲ ಬಿಜೆಪಿಯವರು ಬೇರೆಯವರ ಮೇಲೆ ಕೆಸರು ಎರಚಿಸುವ ಮುನ್ನ ತಮ್ಮ ಸ್ಥಾನದ ಬಗ್ಗೆ ಆಲೋಚಿಸಬೇಕು ಎಂದು ತಿಳಿಸಿದರು.

ಸಿಡಿ ವಿಚಾರದಲ್ಲಿ ಯಾರ ವಿರುದ್ಧ ಪ್ರಕರಣ ಇದೆ ಎಂದು ಕೇಳಿದ ಪ್ರಶ್ನೆಗೆ, ಈ ವಿಚಾರವಾಗಿ ಸಚಿವ ಸುಧಾಕರ್, ಗೋಪಾಲಯ್ಯ, ಎಸ್ ಟಿ ಸೋಮಶೇಖರ್ ಸೇರಿದಂತೆ 13 ಸಚಿವರು ಜಾಮೀನು ಪಡೆದಿದ್ದಾರೆ. 13 ಶಾಸಕರ ಹೆಸರು ಕೂಡ ಇದೆ. ಸದಾನಂದ ಗೌಡರು ಕೂಡ ಈ ವಿಚಾರವಾಗಿ ಜಾಮೀನು ತೆಗೆದುಕೊಂಡಿದ್ದಾರೆ. ಮೈಸೂರು ಸಂಸದರು ಈ ವಿಚಾರದಲ್ಲಿ ನಾಲ್ಕು ಜಾಮೀನನ್ನು ತೆಗೆದುಕೊಂಡಿದ್ದಾರೆ. ನನ್ನ ಪ್ರಕಾರ ಅವರದು 26 ಸಂಚಿಕೆಗಳಿವೆ ಎಂದು ರಮೇಶ್ ಬಾಬು ಹೇಳಿದ್ದಾರೆ.

IPL_Entry_Point