ಕನ್ನಡ ಸುದ್ದಿ  /  Karnataka  /  Bjp Govt Stands In Defense Of Cheaters Rowdies Across Country Says Congress

Congress on BJP Govt: ಬಿಜೆಪಿ ಸರ್ಕಾರ ದೇಶದಾದ್ಯಂತ ಮೋಸಗಾರರು, ರೌಡಿಗಳ ರಕ್ಷಣೆಗೆ ನಿಂತಿದೆ: ಕಾಂಗ್ರೆಸ್

ರಮೇಶ್ ಜಾರಕಿಹೊಳಿ ಅವರು ಸಾಲ ಮಾಡಿರುವ 9 ಸಹಕಾರಿ ಬ್ಯಾಂಕುಗಳ ಪೈಕಿ ಹರಿಹಂತ್ ಕೋ ಆಪರೇಟಿವ್ ಬ್ಯಾಂಕ್ ಕೂಡ ಒಂದು. ಇದರ ಮಾಲೀಕರಾದ ಅಭಿನಂದನ್ ಪಾಟೀಲ್ ಅವರು ರಮೇಶ್ ಜಾರಕಿಹೊಳಿಯವರ ಬೇನಾಮಿ ವ್ಯಕ್ತಿಯಾಗಿದ್ದಾರೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.

ಕಾಂಗ್ರೆಸ್
ಕಾಂಗ್ರೆಸ್

ಬೆಂಗಳೂರು: ಬಿಜೆಪಿ ಸರ್ಕಾರ ದೇಶದಾದ್ಯಂತ ಮೋಸಗಾರರು ರೌಡಿಗಳ ರಕ್ಷಣೆಗೆ ನಿಂತಿದೆ. 2019ರಲ್ಲಿ ಸಮ್ಮಿಶ್ರ ಸರ್ಕಾರವನ್ನು ಕೆಳಮಿದ ನಂತರ ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಅವರು ರಮೇಶ್ ಜಾರಕಿಹೊಳಿ ಅವರ ರಕ್ಷಣೆಗೆ ನಿಂತಿದ್ದಾರೆ. ಇವರ ಜೊತೆಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಫಡ್ನವೀಸ್, ರಾಜ್ಯ ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್, ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿಯವರು ಕೂಡ ರಮೇಶ್ ಜಾರಕಿಹೊಳಿ ಅವರ ರಕ್ಷಣೆಗೆ ನಿಂತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ರಮೇಶ್ ಜಾರಕಿಹೊಳಿ ಅವರು ಸಾಲ ಮಾಡಿರುವ 9 ಸಹಕಾರಿ ಬ್ಯಾಂಕುಗಳ ಪೈಕಿ ಹರಿಹಂತ್ ಕೋ ಆಪರೇಟಿವ್ ಬ್ಯಾಂಕ್ ಕೂಡ ಒಂದು. ಇದರ ಮಾಲೀಕರಾದ ಅಭಿನಂದನ್ ಪಾಟೀಲ್ ಅವರು ರಮೇಶ್ ಜಾರಕಿಹೊಳಿಯವರ ಬೇನಾಮಿ ವ್ಯಕ್ತಿಯಾಗಿದ್ದಾರೆ. ರಮೇಶ್ ಜಾರಕಿಹೊಳಿಯವರು ಇವರ ಸಹಕಾರಿ ಬ್ಯಾಂಕ್ ನಿಂದ 42 ಕೋಟಿ ಸಾಲವನ್ನು ಪಡೆದಿರುತ್ತಾರೆ. ಈ ಬ್ಯಾಂಕ್ ನವರು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (NCLT) ಮೊರೆ ಹೋಗಿ, ತಮ್ಮ ಸಾಲ ವಸೂಲಾತಿಗೆ ಅರ್ಜಿ ಹಾಕುತ್ತಾರೆ. ಈ ಅರ್ಜಿ ಆಧಾರದ ಮೇಲೆ NCLTಯು ಐ ಆರ್ ಸಿ (ವಸೂಲಿ) ಪ್ರಕ್ರಿಯೆಗೆ ಆದೇಶ ನೀಡಿದೆ.

ಈ ಸಂದರ್ಭದಲ್ಲಿ ಕೇವಲ ಹರಿಹಂತ್ ಬ್ಯಾಂಕ್ ಹೊರತುಪಡಿಸಿ ಉಳಿದ ಯಾವುದೇ ಬ್ಯಾಂಕ್ ಗಳು ಸಾಲ ಮರುಪಾವತಿ ಮಾಡಲು NCLT ಗೆ ಅರ್ಜಿ ಹಾಕಿಲ್ಲ ಏಕೆ ಎಂದು ನಾವು ಇತರೆ ಎಂಟು ಬ್ಯಾಂಕುಗಳಿಗೆ ಪತ್ರ ಬರೆದಿದ್ದೇವೆ.

ನಮ್ಮ ಪತ್ರವನ್ನು ಪರಿಗಣಿಸಿದ NCLT ಕಳೆದ ತಿಂಗಳು ತಾನು ಆದೇಶಿಸಿದ ಪ್ರಕ್ರಿಯೆಗೆ ಸಂಪೂರ್ಣ ತಡೆ ನೀಡಿತು. ಈಗ ಒಂದು ವಾರದ ಹಿಂದೆ ತಡೆಯಾಜ್ಞೆಯನ್ನು ಹಿಂಪಡೆದು ಬಿಡ್ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಜಾಹಿರಾತು ನೀಡಲಾಗಿದ್ದು, ದಿವಾಳಿಯಾಗಿರುವ ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್ ಕಂಪನಿಯನ್ನು ಖರೀದಿಸಲು ಬಯಸುವವರು ಅರ್ಜಿ ಹಾಕಬಹುದು ಎಂದು ಕೆಲವು ಷರತ್ತುಗಳನ್ನು ಪ್ರಕಟಿಸಿದೆ ಎಂದು ಎಂ ಲಕ್ಷ್ಮಣ್ ವಿವರಿಸಿದ್ದಾರೆ.

ರಮೇಶ್ ಜಾರಕಿಹೊಳಿ ಒಡೆತನದ ಸರ್ಕಾರೆ ಕಾರ್ಖಾನೆಯಿಂದ 850 ಕೋಟಿ ಸಾಲ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮೀ ಶುಗರ್ ಕಂಪನಿಯು 9 ವಿವಿಧ ಬ್ಯಾಂಕ್ ಗಳ ಸಾಲ ಸೇರಿದಂತೆ ಒಟ್ಟು 850 ಕೋಟಿ ರೂಪಾಯಿ ಗುಳುಂ ಮಾಡಲು ಕಳೆದ ಏಳೆಂಟು ತಿಂಗಳಿನಿಂದ ಸತತ ಪ್ರಯತ್ನ ಮಾಡುತ್ತಿದ್ದಾರೆ. ಈಗ ಈ ಪ್ರಯತ್ನ ಅಂತಿಮ ಹಂತಕ್ಕೆ ಬಂದು ನಿಂತಿದೆ. 22.11.2022ರಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯಿಂದ ಹಣ ಪಡೆಯಬೇಕಿರುವವರ ಹಿತಾಸಕ್ತಿ ಅರ್ಜಿ ಯನ್ನು ಕರೆಯಲಾಗಿದೆ.

ರಾಜ್ಯದ ಎಲ್ಲಾ ಸಹಕಾರಿ ಬ್ಯಾಂಕುಗಳ ನೇತೃತ್ವ ವಹಿಸಿರುವ ಪಿಕ್ಸ್ ಬ್ಯಾಂಕ್ ಈ ಸಂಸ್ಥೆಯನ್ನು ದಿವಾಳಿ ಸಂಸ್ಥೆಯೆಂದು ಘೋಷಣೆ ಮಾಡುತ್ತದೆ. ಇದರ ವಿರುದ್ಧ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ಕೋರುತ್ತಾರೆ. ಆಗ ನ್ಯಾಯ ಬೇಕು ನೀವು ಮಾಡಿರುವ ಸಾಲದ ಶೇಕಡ 50ರಷ್ಟು ಹಣವನ್ನು ತೀರಿಸಿ ನಂತರ ನ್ಯಾಯಕ್ಕಾಗಿ ಆಗಮಿಸಬೇಕು ಎಂದು ಆರು ತಿಂಗಳ ಗಡಗು ನೀಡಲಾಗಿದೆ. ಆದರೆ ಈ ಸಂಸ್ಥೆ ಒಂದು ಪೈಸೆ ಸಾಲವನ್ನು ತೀರಿಸಲಿಲ್ಲ. ನಂತರ 2021ರ ನವೆಂಬರ್ ನಲ್ಲಿ ಅಪೆಕ್ಸ್ ಬ್ಯಾಂಕ್ಸ್ ನ ಮುಖ್ಯಸ್ಥರಾದ ಬೆಳ್ಳಿ ಪ್ರಕಾಶ್ ಎಂಬುವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಈ ಸಕ್ಕರೆ ಕಾರ್ಖಾನೆ ಆಸ್ತಿಯನ್ನು ಮುಟ್ಟೋಗೋಲು ಹಾಕಿಕೊಂಡು ಅದರಿಂದ ಬರುವ ಹಣವನ್ನು ಬ್ಯಾಂಕುಗಳ ಸಾಲ ತೀರಿಸಲು ನೀಡಬೇಕು ಎಂದು ತಿಳಿಸುತ್ತಾರೆ.

ಈ ಷರತ್ತುಗಳು ಏನೆಂದರೆ, ಈ ಕಂಪನಿ ಖರೀದಿಸುವವರು ಶುಗರ್ ಕಂಪನಿ ನಡೆಸಿರಬೇಕು. ಜೊತೆಗೆ ಫೈನಾನ್ಸ್ ಕಂಪನಿಗಳು ಕೂಡ ಈ ಕಾರ್ಖಾನೆಯನ್ನು ಖರೀದಿಸಬಹುದು ಎಂದು ತಿಳಿಸಲಾಗಿದೆ. ಇಲ್ಲಿ ಪ್ರಮುಖ ವಿಚಾರ ಎಂದರೆ, ಈ ಜಾಹೀರಾತಿನ 5ನೇ ಅಂಶದಲ್ಲಿ ಮುಖ್ಯ ಉತ್ಪನ್ನಗಳ ಅಳವಡಿಕೆ ಸಾಮರ್ಥ್ಯ ಎಂದು ನಮೂದಿಸಿ, ಕಬ್ಬಿನ ಕಾಕಂಬಿಯಿಂದ 60 ಕೆಎಲ್ ಪಿಡಿ ಎಥೆನಾಲ್ ಇಂಧನ ಘಟಕ ಇದೆ ಅದನ್ನು ಮಾರಾಟಕ್ಕೆ ಒಳಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕಾರ್ಖಾನೆಯಲ್ಲಿ ಈ ಘಟಕವನ್ನು ತೋರಿಸಬೇಕೆಂದು ನಾನು ಈ ಮೂಲಕ ಅಪೇಕ್ಸ್ ಬ್ಯಾಂಕ್ NCLT ಸೇರಿದಂತೆ ಎಲ್ಲರಿಗೂ ಸವಾಲು ಹಾಕುತ್ತೇನೆ. ಕಾರಣ ಕಾರ್ಖಾನೆಯಲ್ಲಿ ಈ ಘಟಕ ಇಲ್ಲ. ಈ ಘಟಕ ನಿರ್ಮಾಣಕ್ಕಾಗಿ ಬ್ಯಾಂಕಿನಿಂದ 60 ಕೋಟಿ ಸಾಲ ಪಡೆಯಲಾಗಿದೆ. ಈ ಸಾಲವನ್ನು ಹೈಟೆಕ್ ಇಂಜಿನಿಯರ್ಸ್ ಕಾರ್ಪೊರೇಷನ್ ಲಿಮಿಟೆಡ್ ಎಂಬ ಮಹಾರಾಷ್ಟ್ರದ ಕಂಪನಿಗೆ ಈ ಘಟಕವನ್ನು ಖರೀದಿಸಲು ಬ್ಯಾಂಕ್ ನಿಂದ ಹಣ ವರ್ಗಾವಣೆ ಆಗುತ್ತದೆ. ಇದು ಈ ಘಟಕ ಸ್ಥಾಪನೆಗೆ ಅಗತ್ಯವಿರುವ ಯಂತ್ರೋಪಕರಣಗಳ ಸರಬರಾಜು ಕಂಪನಿಯಾಗಿದೆ. ಈ ಕಂಪನಿಗೆ ಹಣ ವರ್ಗಾವಣೆಯಾದರೂ ಯಂತ್ರೋಪಕರಣಗಳು ಬರುವುದಿಲ್ಲ ಹಾಗೂ ಈ ಘಟಕ ಸ್ಥಾಪನೆ ಆಗುವುದೇ ಇಲ್ಲ. ಈ ಕಂಪನಿ ಮೂಲಕ 60 ಕೋಟಿ ಹಣವನ್ನು ರಮೇಶ್ ಜಾರಕಿಹೊಳಿಯವರ ಬೇನಾಮಿ ಖಾತೆಗಳಿಗೆ ಜಮಾವಣೆ ಆಗಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.

ಸರ್ಕಾರಕ್ಕೆ ಕಾರ್ಖಾನೆ ಹಾಗೂ ರೈತರು, ಜನರ ಹಣದ ಬಗ್ಗೆ ಕಾಳಜಿ ಇದ್ದರೆ, ಈ ಕಾರ್ಖಾನೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಆ ಮೂಲಕ 9 ಬ್ಯಾಂಕುಗಳ ಸಾಲ, ರೈತರಿಗೆ ಸಿಗಬೇಕಾಗಿರುವ ಬಾಕಿ ಹಣ, ಸರಬರಾಜು ದಾರರಿಗೆ ಆಗಬೇಕಿರುವ ಬಾಕಿ ಪಾವತಿಯನ್ನು ನೀವೇ ನೀಡಿ ಎಂದು ಆಗ್ರಹಿಸಿದ್ದಾರೆ.

ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪನಿ ವಿಚಾರದಲ್ಲಿ ನಾವು ಯಾವುದೇ ಹಂತದಲ್ಲೂ ಸುಮ್ಮನೆ ಕೂರುವುದಿಲ್ಲ. ಈ ವಿಚಾರವನ್ನು ನಾವು ಹೈಕೋರ್ಟ್ ಗೆ ತೆಗೆದುಕೊಂಡು ಹೋಗಲಿದ್ದು ಅಲ್ಲಿ ಪ್ರಕ್ರಿಯೆ ಆರಂಭವಾಗಲಿ. ಸರಿಯಾದ ರೀತಿಯಲ್ಲಿ ಪ್ರಕ್ರಿಯೆ ನಡೆಯದಿದ್ದರೆ NCLT ಯ irc ಪ್ರಕ್ರಿಯೆ ವಿರುದ್ಧ ಕೋರ್ಟ್ ಮೆಟ್ಟಿಲು ಏರುತ್ತೇವೆ. ಬ್ಯಾಂಕ್ ಹಾಗೂ ಇತರ ಎಲ್ಲಾ ಸಾಲ ಹಾಗೂ ಬಾಕಿ ಪಾವತಿಗಳನ್ನು ತೀರಿಸುವ ಅವಕಾಶ ಸಿಗದಿದ್ದರೆ ಈ ಕಾರ್ಖಾನೆಯನ್ನು ಯಾರಿಗೂ ಮಾರಾಟ ಮಾಡದೆ ಸರ್ಕಾರವೇ ಉಳಿಸಿಕೊಳ್ಳಬೇಕು. ಕಾರಣ ಈ ಕಾರ್ಖಾನೆಯ ಒಟ್ಟು ಆಸ್ತಿಯ ಮೌಲ್ಯ ಸುಮಾರು ಒಂದು ಸಾವಿರ ಕೋಟಿ ಇದೆ.

ಒಂದು ವೇಳೆ ರಮೇಶ್ ಜಾರಕಿಹೊಳಿಯವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಿದ್ದರೆ, ಸುಮ್ಮನೆ ಕೂರುತ್ತಿದ್ದರೆ. ಇದೇ ಕಾರಣಕ್ಕೆ ದೇಶದಾದ್ಯಂತ ಮೋಸಗಾರರು, ವಂಚಕರು, ರೌಡಿಗಳು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಬಿಜೆಪಿ ಸೇರಿದರೆ ನಮಗೆ ರಕ್ಷಣೆ ಸಿಗಲಿದೆ ಎಂದು ಇವರು ಆಲೋಚಿಸುತ್ತಿದ್ದಾರೆ. ರಾಜ್ಯದ್ಯಂತ 60 ರೂಡಿಗಳು ಬಿಜೆಪಿ ಸೇರಲು ಪಟ್ಟಿ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಈ ರೌಡಿಗಳನ್ನು ಕಣಕ್ಕಿಳಿಸಲು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ.

ಇದು ಬಿಜೆಪಿಯವರ ಸಂಸ್ಕೃತಿ

ನಾಗಮಂಗಲದಲ್ಲಿ ಫೈಟರ್ ರವಿ ಎಂಬಾತ ಈಗಾಗಲೇ ಧಮಕಿಹಾಕಲು ಶುರು ಮಾಡಿಕೊಂಡಿದ್ದಾರೆ. ಇನ್ನು ರಾಜ್ಯದ 47 ಬಿಜೆಪಿ ಶಾಸಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿವೆ. ಅವರಿಗೆ ಕ್ರಿಮಿನಲ್ ಹಿನ್ನೆಲೆಗಳಿವೆ. 224 ಕ್ಷೇತ್ರದ ಪೈಕಿ ಬಿಜೆಪಿಯ 47, ಕಾಂಗ್ರೆಸ್ ನ 13 ಹಾಗೂ ಜೆಡಿಎಸ್ ನ ಹನ್ನೊಂದು ಶಾಸಕರ ಮೇಲೆ ಕ್ರಿಮಿನಲ್ ಹಿನ್ನಲೆ ಇದೆ. ಇನ್ನು ಮೂರು ಜನ ಸಂಸದರ ಮೇಲು ಕ್ರಿಮಿನಲ್ ಕೇಸ್ ಗಳಿದ್ದು, ಆ ಮೂರು ಜನ ಸಂಸದರು ಬಿಜೆಪಿಯವರಾಗಿದ್ದಾರೆ. 16 ಮಂತ್ರಿಗಳ ಪೈಕಿ 13 ಜನ ಮಂತ್ರಿಗಳ ಮೇಲೆ ಲೈಂಗಿಕ ಸಿಡಿ ಪ್ರಕರಣಗಳಿವೆ. ಈ 13 ಮಂದಿಯು ಈ ವಿಚಾರವಾಗಿ ಸುದ್ದಿ ಪ್ರಕಟಿಸಿದಂತೆ ತಡೆಯಾಜ್ಞೆ ತಂದಿದ್ದಾರೆ. ಇದು ಬಿಜೆಪಿಯವರ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ ಅವರಿಂದಲೇ ಟಿಪ್ಪು ಮನೆ, ಗೋಲ್ ಗುಂಬಜ್ ಗೆ ದೀಪಾಲಂಕಾರ

ಮೈಸೂರಿನ ಸಂಸದರು ಬಸ್ ತಂಗು ತಾಣಗಳ ಮೇಲಿದ್ದ ಮೂರು ಗುಂಬಜ್ ಗಳಿದ್ದ ಕಾರಣ ಅದು ಮಸೀದಿ ರೀತಿಯಲ್ಲಿ ಕಾಣುತ್ತಿದೆ ಎಂದು ಎರಡು ಗುಂಬಜ್ ಗಳನ್ನು ಹೊಡೆದು ಹಾಕಿದ್ದಾರೆ. ಇಂದಿನ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತಿನ ಪ್ರಕಾರ ಮುಂದಿನ ಜಿ 20 ಶೃಂಗಸಭೆಯು ಭಾರತದಲ್ಲಿ ನಡೆಯಲಿದೆ.

ಇದಕ್ಕಾಗಿ ದೇಶದಲ್ಲಿ ನೂರು ಪಾರಂಪರಿಕ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ವಿಶೇಷ ದೀಪಗಳ ಅಳವಡಿಕೆ ಕಾರ್ಯ ಆರಂಭವಾಗಲಿದೆ. ಈ 100 ಕಟ್ಟಡಗಳ ಪೈಕಿ ಟಿಪ್ಪು ಅರಮನೆ ಕೂಡ ಒಂದು. ಗೋಲ್ ಗುಂಬಜ್ ಎರಡನೆಯದಾಗಿದೆ. ಬಿಜೆಪಿ ನಾಯಕರು ಟಿಪ್ಪುವಿನ ಬಗ್ಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಸಿಟಿ ರವಿ ಹಾಗೂ ಪ್ರತಾಪ್ ಸಿಂಹ ಅವರೇ, ದಯಮಾಡಿ ನೀವು ನರೇಂದ್ರ ಮೋದಿ ಅವರನ್ನು ಈ ವಿಚಾರವಾಗಿ ಕೇಳಬೇಕು. ಟಿಪ್ಪುವಿನ ವಿರುದ್ಧ ಮತಂಗ ಕೊಲೆಗಡುಕ ಎಂಬ ಪದಗಳನ್ನು ಬಳಸುತ್ತೀರಿ. ಆದರೆ ಈಗ ನರೇಂದ್ರ ಮೋದಿ ಅವರೇ ಟಿಪ್ಪು ಅವರ ಮನೆ ಹಾಗೂ ಗೋಲ್ ಗುಂಬಜ್ ಗೆ ದೀಪಾಲಂಕಾರ ಮಾಡುತ್ತಿದ್ದಾರೆ. ಇದು ನಿಮ್ಮ ಇಬ್ಬಗೆಯ ನೀತಿಯಲ್ಲವೇ? ಇದೆಲ್ಲವೂ ಜನಗಳಿಗೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ಇದಕ್ಕೆ ನೀವು ಉತ್ತರ ನೀಡಬೇಕು. ಈ ಬಗ್ಗೆ ಸಿಟಿ ರವಿ ಹಾಗೂ ಪ್ರತಾಪ್ ಸಿಂಹ ಅವರು ಹೇಳಿಕೆ ನೀಡಬೇಕು.

IPL_Entry_Point