ಕನ್ನಡ ಸುದ್ದಿ  /  Karnataka  /  Bjp Govt Tampered Voter List Through Private Agency Says Siddaramaiah

Siddaramaiah on BJP Govt: ಬಿಜೆಪಿ ಸರ್ಕಾರ ಖಾಸಗಿ ಸಂಸ್ಥೆ ಮೂಲಕ ಮತದಾರರ ಪಟ್ಟಿಯನ್ನು ತಿರುಚಿಸಿದೆ: ಸಿದ್ದರಾಮಯ್ಯ

ಮುಖ್ಯಮಂತ್ರಿಗಳೇ ಬಿಬಿಎಂಪಿ ಉಸ್ತುವಾರಿಗಳಾಗಿದ್ದು ಅವರು ಕೂಡ ಮತದಾರರ ಪಟ್ಟಿಯನ್ನು ತಿರುಚುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಅಂಬೇಡ್ಕರ್, ಮಹಾತ್ಮ ಗಾಂಧಿ, ಜವಹಾರ್‌ ಲಾಲ್ ನೆಹರೂ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಅಂಬೇಡ್ಕರ್, ಮಹಾತ್ಮ ಗಾಂಧಿ, ಜವಹಾರ್‌ ಲಾಲ್ ನೆಹರೂ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.

ಬೆಂಗಳೂರು: ಯಾವುದೇ ಚುನಾವಣೆ ಸಂವಿಧಾನದ ರೀತಿಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯಬೇಕು. ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಇರಬೇಕು ಅದನ್ನು ತಿರುಗಿಸುವ ಕೆಲಸಕ್ಕೆ ಅವಕಾಶ ನೀಡಬಾರದು. ಆದರೆ ಬಿಜೆಪಿ ಸರ್ಕಾರ ಖಾಸಗಿ ಸಂಸ್ಥೆ ಮೂಲಕ ಮತದಾರರ ಪಟ್ಟಿಯನ್ನು ತಿರುಚಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಖಾಸಗಿ ಸಂಸ್ಥೆ ಮೂಲಕ ಮತದಾರರ ಪಟ್ಟಿಯನ್ನು ತಿರುಚಿಸಿದೆ. ಚಿಲುಮೆ ಸಂಸ್ಥೆಯನ್ನು ಜಿಲ್ಲಾ ಚುನಾವಣಾ ಅಧಿಕಾರಿ ನೇಮಿಸಿದ್ದು, ಇವರೇ ಬಿಬಿಎಂಪಿಯ ಮುಖ್ಯ ಆಯುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳೇ ಬಿಬಿಎಂಪಿ ಉಸ್ತುವಾರಿಗಳಾಗಿದ್ದು ಅವರು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದೆವು. ಇದರ ಜೊತೆಗೆ ಮತದಾರರ ಪಟ್ಟಿಯನ್ನು ಮರುಪರಿಷ್ಕರಣೆ ಮಾಡಿ, ಕುಂದು ಕೊರತೆ ಅರ್ಜಿ ದಿನಾಂಕವನ್ನು ವಿಸ್ತರಿಸಬೇಕು. ಕಳುವಾಗಿರುವ ಮತದಾರರ ಮಾಹಿತಿಯನ್ನು, ತಿರುಚಲಾಗಿರುವ ಮತದಾರ ಪಟ್ಟಿಯನ್ನು ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.

ವಿಭಾಗೀಯ ಅಧಿಕಾರಿ ಮೂಲಕ ಈ ಪ್ರಕರಣದ ತನಿಖೆ ನಡೆದರೆ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ವಿಚಾರಣೆ ಆಗುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಬದ್ಧವಾಗಿ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಸ್ಥಾಪಿಸಲಾಗಿದೆ. ಇದರಲ್ಲಿ ಪ್ರಧಾನ ಮಂತ್ರಿಗಳಾಗಲಿ ಅಥವಾ ರಾಷ್ಟ್ರಪತಿಗಳಾಗಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

ಈ ತಿಂಗಳ 23ರಂದು ನಮ್ಮ ನಿಯೋಗವು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಿತ್ತು. ಆಯೋಗವು ನಮ್ಮ ದೂರನ್ನು ಅರಿತು ರಂಗಪ್ಪ ಹಾಗೂ ಶ್ರೀನಿವಾಸ್ ಎಂಬ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇಬ್ಬರು ಬಿಬಿಎಂಪಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾಗಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿಯ ಗಮನಕ್ಕೆ ಬಾರದೆ ಈ ಇಬ್ಬರು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿ ಮಾಹಿತಿ ಕಳೆದು ಮಾಡಲು ಸಾಧ್ಯವೇ? ನಮ್ಮ ದೂರಿನಲ್ಲಿರುವ ಆರೋಪಗಳನ್ನು ಕೇಂದ್ರ ಚುನಾವಣಾ ಆಯೋಗವು ಅರಿತಿರುವ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಮಾಹಿತಿ ಕಳವು ಆಗದೆ, ಮತದಾರರ ಪಟ್ಟಿ ತಿರುಚದೆ, ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಹಾಗೂ ತೆಗೆದು ಹಾಕದೆ ಇದ್ದರೆ ಅಮಾನತುಗೊಳಿಸಲು ಸಾಧ್ಯವೇ? ಈ ಪ್ರಕರಣದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಆದರೆ ಈ ಪ್ರಕರಣವನ್ನು ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ಈ ಮೂರೂ ಕ್ಷೇತ್ರಗಳಿಗೆ ಮಾತ್ರ ಉಸ್ತುವಾರಿಯಾಗಿದ್ದ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಿದ್ದಾರೆ. ನಂತರ ಮೂವರು ಐಎಎಸ್ ಆಫೀಸರ್ ಗಳನ್ನು ಈ ಕ್ಷೇತ್ರಗಳ ಉಸ್ತುವಾರಿಯಾಗಿ ನೇಮಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿನ ಆಕ್ಷೇಪಗಳನ್ನು ಸಲ್ಲಿಸಲು ಡಿಸೆಂಬರ್ 9 ರಂದು ಅಂತಿಮ ಗಡುವಾಗಿತ್ತು. ಆದರೆ ಈಗ 15 ದಿನಗಳ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಇನ್ನು ವೀಕ್ಷಕರಾಗಿ ಉಜ್ವಲ್ ಘೋಷ್ ಅವರನ್ನು ಬಿಬಿಎಂಪಿ ಕೇಂದ್ರಕ್ಕೆ, ರಾಮಚಂದ್ರನ್ ಆರ್ ಅವರನ್ನು ಬಿಬಿಎಂಪಿ ಉತ್ತರಕ್ಕೆ ಹಾಗೂ ರಾಜೇಂದ್ರ ಚೋಳನ್ ಅವರನ್ನು ಬಿಬಿಎಂಪಿ ದಕ್ಷಿಣಕ್ಕೆ, ಡಾಕ್ಟರ್ ಎನ್ ಮಂಜುಳಾ ಅವರನ್ನು ಬೆಂಗಳೂರು ನಗರ ವಿಭಾಗಕ್ಕೆ ನೇಮಿಸಲಾಗಿದೆ. ಇವರನ್ನು ಯಾಕೆ ನೇಮಿಸಲಾಗಿದೆ? ಕಾರಣ ಈ ಪ್ರಕರಣದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲಾಗಿದೆ. 28 ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇನೆ ಎಂದು ವಿಪಕ್ಷ ನಾಯಕರು ಹೇಳಿದ್ದಾರೆ.

IPL_Entry_Point