ಕನ್ನಡ ಸುದ್ದಿ  /  Karnataka  /  Bjp Hits Back Congress Over Alleged Bbmp Files Disappear Accusation Made Against State Government

BBMP Files: ಸಿದ್ರಾಮಣ್ಣ..ಇಲ್ಲೈತೆ ನೋಡಿ ಬಿಬಿಎಂಪಿ ಫೈಲ್ಸ್:‌ ಕಡತ ನಾಪತ್ತೆ ಆರೋಪಕ್ಕೆ ಬಿಜೆಪಿ ತಿರುಗೇಟು..!

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಜಾಹೀರಾತು ನೀತಿಗೆ ಸಂಬಂಧಿಸಿದ ಮಹತ್ವದ ಕಡತವೊಂದು ನಾಪತ್ತೆಯಾಗಿದೆ ಎಂಬ ಕಾಂಗ್ರೆಸ್‌ ಆರೋಪವನ್ನು ಆಡಳಿತಾರೂಢ ಬಿಜೆಪಿ ಅಲ್ಲಗಳೆದಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾಡಿರುವ ಟ್ವೀಟ್‌ನ್ನು, ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಕಾಂಗ್ರೆಸ್ ಜನತೆಯ ಹಾದಿ ತಪ್ಪಿಸಲು ಪ್ರಯತ್ನಿಸಿರುವುದಕ್ಕೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಬಿಜೆಪಿ ಟ್ವೀಟ್‌ನ ಚಿತ್ರ
ಬಿಜೆಪಿ ಟ್ವೀಟ್‌ನ ಚಿತ್ರ (Verified Twitter)

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಜಾಹೀರಾತು ನೀತಿಗೆ ಸಂಬಂಧಿಸಿದ ಮಹತ್ವದ ಕಡತವೊಂದು ನಾಪತ್ತೆಯಾಗಿದೆ ಎಂಬ ಕಾಂಗ್ರೆಸ್‌ ಆರೋಪವನ್ನು ಆಡಳಿತಾರೂಢ ಬಿಜೆಪಿ ಅಲ್ಲಗಳೆದಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾಡಿರುವ ಟ್ವೀಟ್‌ನ್ನು, ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ಬಿಬಿಎಂಪಿಯ ಯಾವುದೇ ಕಡತ ಕೂಡ ನಾಪತ್ತೆಯಾಗಿಲ್ಲ. ಎಲ್ಲಾ ಕಡತಗಳೂ ಸುರಕ್ಷಿತವಾಗಿ ಮುಖ್ಯಮಂತ್ರಿ ಕಚೇರಿ ತರಲುಪಿದೆ ಎಂದು ಸ್ಪಷ್ಟಪಡಿಸಿದೆ.

'ಬಿಬಿಎಂಪಿ ಜಾಹೀರಾತು ನೀತಿಗೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿವೆ ಎಂಬ ಸಿದ್ದರಾಮಯ್ಯ ಅವರ ಆರೋಪ ನಿರಾಧಾರ ಮತ್ತು ಸುಳ್ಳು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಯಂತೆ ಸಿದ್ದರಾಮಯ್ಯ ವರ್ತಿಸುತ್ತಿರುವುದು ನಾಚಿಗೆಗೇಡಿನ ಸಂಗತಿ..' ಎಂದು ಬಿಜಪಿ ಟ್ವೀಟ್‌ ಮೂಲಕ ಕಿಡಿಕಾರಿದೆ.

ಮುಂದುವರೆದು 'ಬಿಬಿಎಂಪಿ ಜಾಹೀರಾತು ನೀತಿಗೆ ಸಂಬಂಧಿಸಿದ ಎಲ್ಲ ಕಡತಗಳು (ಮುಖ್ಯ ಕಡತ, ಭಾಗ 1, 3 ಮತ್ತು 4) ನಗರಾಭಿವೃದ್ಧಿ ಇಲಾಖೆಯಲ್ಲಿವೆ. ಕಡತಗಳು ಯಾವುದೇ ಸಚಿವರ ಕಚೇರಿ ಅಥವಾ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಣೆಯಾಗಿಲ್ಲ ಅಥವಾ ತಪ್ಪಿಹೋಗಿಲ್ಲ. ಕಾಂಗ್ರೆಸ್ ಜನತೆಯ ಹಾದಿ ತಪ್ಪಿಸಲು ಪ್ರಯತ್ನಿಸಿರುವುದಕ್ಕೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು..' ಎಂದು ಬಿಜೆಪಿ ಒತ್ತಾಯಿಸಿದೆ.

ರಾಜ್ಯ ಸರ್ಕಾರದ ಜನಪ್ರಿಯತೆ ಸಹಿಸದ ಕಾಂಗ್ರೆಸ್‌ ನಾಯಕರು, ದಿನಕ್ಕೊಂದು ಇಲ್ಲಸಲ್ಲದ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನತೆಗೆ ಕಾಂಗ್ರೆಸ್‌ ನಾಯಕರ ಅಸಲಿಯತ್ತು ಏನೆಂಬುದು ತಿಳಿದಿದ್ದು, ಅವರ ನಿರಾಧಾರ ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಬಿಬಿಎಂಪಿ ಕಡತ ನಾಪತ್ತೆ ಆರೋಪ ಶುದ್ಧ ಸುಳ್ಳು. ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾಡಿರುವ ಟ್ವೀಟ್‌ ಇದಕ್ಕೆ ಸಾಕ್ಷಿ. ಆದರೆ ದಿನಬೆಳಗಾದರೆ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಸಿದ್ದರಾಮಯ್ಯ, ಕಡತ ನಾಪತ್ತೆಯಾಗಿದೆ ಎಂದು ಬೊಬ್ಬೆ ಹೊಡೆಯುತ್ತಿರುವುದು ನಾಚಿಕಗೇಡಿನ ಸಂಗತಿ ಎಂದು ಬಿಜೆಪಿ ಹರಿಹಾಯ್ದಿದೆ.

ಏನಿದು ವಿವಾದ?

2021ರ ಡಿ.7ರಂದು ಬಿಬಿಎಂಪಿ ಜಾಹೀರಾತು ನೀತಿಗೆ ಸಂಬಂಧಿಸಿದ ಕಡತಗಳನ್ನು, ನಗರಾಭಿವೃದ್ಧಿ ಇಲಾಖೆಯು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿಕೊಟ್ಟಿತ್ತು. ಆದರೆ ಈ ಕಡತಗಳು ಇದುವರೆಗೂ ವಾಪಸ್ ಇಲಾಖೆಗೆ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಬಿಬಿಎಂಪಿಯ ಜಾಹೀರಾತು ನೀತಿಗೆ ಸಂಬಂಧಿಸಿದ ಮಹತ್ವದ ಕಡತವೊಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದಲೇ ನಾಪತ್ತೆಯಾಗಿದೆ ಎಂಬ ಅನುಮಾನ ಭಾರೀ ಸಂಚಲವನ್ನು ಸೃಷ್ಟಿ ಮಾಡಿತ್ತು.

ಈ ಕುರಿತು ಪ್ರಶ್ನೆ ಮಾಡಿದ್ದ ಪ್ರತಿಪಕ್ಷ ಕಾಂಗ್ರೆಸ್‌, ಸಿಎಂ ಆಪ್ತ ಕಾರ್ಯದರ್ಶಿಯ ಹನಿಟ್ರಾಪ್‌ ವಿಚಾರಕ್ಕೂ ಹಾಗೂ ಕಡತ ನಾಪತ್ತೆಗೂ ಸಂಬಂಧವಿರುವ ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೇ ಮುಖ್ಯಮಂತ್ರಿ ಕಚೇರಿಯು ಸಿಎಂ ಬಸವರಾಜ ಬೊಮ್ಮಾಯಿ ಅವರ ಹಿಡಿತದಲ್ಲಿ ಇಲ್ಲವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿತ್ತು.

ಮುಂದುವರೆದು, ಬಿಬಿಎಂಪಿಗೆ ಸಂಬಂಧಿಸಿದ ಮಹತ್ವದ ಕಡತಗಳನ್ನೇ ರಕ್ಷಿಸಲಾಗದವರು, ರಾಜ್ಯವನ್ನು ರಕ್ಷಿಸಲು ಸಾಧ್ಯವೇ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಪ್ರಶ್ನಿಸಿತ್ತು.

ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಬಿಬಿಎಂಪಿ ಜಾಹೀರಾತು ನೀತಿಗೆ ಸಂಬಂಧಿಸಿದ ಕಡತಗಳು ಇಲಾಖೆಗೆ ಸುರಕ್ಷಿತವಾಗಿ ಮರಳಿವೆ ಎಂದು ಸ್ಪಷ್ಟಪಡಿಸಿದ್ದಾರೆ.

IPL_Entry_Point