ಕನ್ನಡ ಸುದ್ದಿ  /  ಕರ್ನಾಟಕ  /  ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ; ಕರ್ನಾಟಕದಾದ್ಯಂತ ಪ್ರತಿಭಟನೆ, ಬಿಜೆಪಿ ನಾಯಕರ ಮಾತುಗಳಲ್ಲಿದ್ದ 10 ಅಂಶಗಳಿವು

ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ; ಕರ್ನಾಟಕದಾದ್ಯಂತ ಪ್ರತಿಭಟನೆ, ಬಿಜೆಪಿ ನಾಯಕರ ಮಾತುಗಳಲ್ಲಿದ್ದ 10 ಅಂಶಗಳಿವು

ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ ಮಾಡಿದ್ದನ್ನು ವಿರೋಧಿಸಿ ಕರ್ನಾಟಕದಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ. ಇಂದು (ಜೂನ್ 17) ಪ್ರತಿಭಟನೆ ವೇಳೆ ಬಿಜೆಪಿ ನಾಯಕರ ಮಾತುಗಳಲ್ಲಿದ್ದ 10 ಅಂಶಗಳಿವು.

ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ ಮಾಡಿದ್ದನ್ನು ವಿರೋಧಿಸಿ ಕರ್ನಾಟಕದಾದ್ಯಂತ ಬಿಜೆಪಿಯವರಿಂದ ಪ್ರತಿಭಟನೆ ನಡೆಯಿತು.
ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ ಮಾಡಿದ್ದನ್ನು ವಿರೋಧಿಸಿ ಕರ್ನಾಟಕದಾದ್ಯಂತ ಬಿಜೆಪಿಯವರಿಂದ ಪ್ರತಿಭಟನೆ ನಡೆಯಿತು.

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಕರ್ನಾಟಕದಲ್ಲಿ ಪ್ರತಿಪಕ್ಷ ಬಿಜೆಪಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಕರ್ನಾಟಕ ಸರ್ಕಾರ ಶನಿವಾರ ಇಂಧನದ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದು, ಪರಿಣಾಮ ಪೆಟ್ರೋಲ್ ದರ ಲೀಟರಿಗೆ 3 ರೂಪಾಯಿ, ಮತ್ತು ಡೀಸೆಲ್ ದರ ಲೀಟರಿಗೆ 3.5 ರೂಪಾಯಿ ದುಬಾರಿಯಾಗಿದೆ. ಇದನ್ನು ವಿರೋಧಿಸಿ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ಪ್ರತಿಭಟನೆ ನಡೆಸಿತು. ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಪ್ರತಿಭಟನೆಯ ನೇತೃತ್ವವಹಿಸಿದರು. ಏರಿಸಿದ ಇಂಧನ ದರ ಹಿಂಪಡೆಯುವ ತನಕವೂ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ಮುಂದುವರಿಸಲಿದೆ ಎಂದು ವಿಜಯೇಂದ್ರ ಇದೇ ವೇಳೆ ಘೋಷಿಸಿದರು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿಕ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ; ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಉಲ್ಲೇಖಿಸಿದ 5 ಮುಖ್ಯ ಅಂಶಗಳು

1) ನಾವು ವಿಪಕ್ಷವಾಗಿ ಜನರ ಪರವಾಗಿ ಧ್ವನಿ ಎತ್ತಬೇಕಿದೆ. ರಾಜ್ಯದ ರೈತರು, ಬಡವರು, ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಾವು- ನೀವೆಲ್ಲರೂ ಸೇರಿ ಮಾಡಬೇಕಿದೆ. ಜನವಿರೋಧಿ ಸರಕಾರ ಮತ್ತು ಜನವಿರೋಧಿ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

2) ವಿರೋಧ ಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯನವರಿಗೆ ಇದ್ದ ಜನಪರ ಕಾಳಜಿ ಮುಖ್ಯಮಂತ್ರಿಗಳಾದ ಬಳಿಕ ಎಲ್ಲಿ ಕಳೆದುಹೋಗಿದೆ. ಲೋಕಸಭಾ ಚುನಾವಣೆಯಲ್ಲಿ 18ರಿಂದ 20 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ಕಾಂಗ್ರೆಸ್ ಮುಖಂಡರು ಫಲಿತಾಂಶ ಬಂದ ಬಳಿಕ ಹತಾಶರಾಗಿದ್ದಾರೆ.

3) ಕಾಂಗ್ರೆಸ್ ಪಕ್ಷದ ಶಾಸಕರೇ ಗ್ಯಾರಂಟಿ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಕಳೆದ ಒಂದು ವರ್ಷದ ಅಧಿಕಾರದಲ್ಲಿ ಒಂದೇ ಒಂದು ರೂಪಾಯಿಯನ್ನೂ ಅಭಿವೃದ್ಧಿಗೆ ಕೊಡಲು ಸಾಧ್ಯವಾಗಿಲ್ಲ. ಮುದ್ದೇಬಿಹಾಳದ ಕಾಂಗ್ರೆಸ್ ಶಾಸಕ ನಾಡಗೌಡರು ಅಭಿವೃದ್ಧಿ ಕಾರ್ಯ ಸ್ಥಗಿತವಾದ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಸಿದ್ಧ ಎಂದ ಅವರು ತಾವು ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡಲೂ ಆಗದ ಸ್ಥಿತಿ ಎಂಬುದರ ಕಡೆಗೆ ಗಮನ ಸೆಳೆದಿದ್ದಾರೆ.

4) ಬಿಜೆಪಿ ಸರಕಾರ ಇದ್ದಾಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ರಾಜ್ಯದಲ್ಲಿ ಕಂದಾಯ ಮಿಗತೆ ಇತ್ತು. ಹೆಚ್ಚು ಸಾಲಗಳೂ ಇರಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಒಂದೇ ಒಂದು ವರ್ಷದಲ್ಲಿ ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ದಿವಾಳಿ ಅಂಚಿಗೆ ಹೋಗಿದೆ. ರಸ್ತೆ, ಶಾಲೆಗಳ ಅಭಿವೃದ್ಧಿ, ಆಸ್ಪತ್ರೆಗಳ ವಿಚಾರದಲ್ಲೂ ಅಭಿವೃದ್ಧಿ ಎಂಬುದು ಕನಸಾಗಿದೆ. ಹಾಗಿದ್ದರೆ ಯಾವ ಪುರುಷಾರ್ಥಕ್ಕೆ ಆಡಳಿತ ನಡೆಸುತ್ತಿದ್ದೀರಿ.

5) ಬೆಲೆ ಏರಿಕೆ, ಹಣದುಬ್ಬರದ ಕುರಿತು ತಿಳಿದಿದ್ದರೂ ಹಣಕಾಸು ಸಚಿವರಾಗಿಯೂ ಅನುಭವಿಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಈ ಜನವಿರೋಧಿ ನಿರ್ಧಾರ ಮಾಡಿದ್ದು, ಇದು ಅಕ್ಷಮ್ಯ.

ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ; ಬಿಜೆಪಿ ನಾಯಕರು ಯಾರು ಏನಂದರು

ವಿಪಕ್ಷ ನಾಯಕ ಆರ್ ಅಶೋಕ್ ಅವರ ಹೇಳಿಕೆ ಮೂರು ಮುಖ್ಯ ಅಂಶ

1) ಸಿದ್ದರಾಮಯ್ಯನವರಿಗೆ ಎರಡು ನಾಲಿಗೆ. ಹಿಂದೆ ಅವರು ವಿರೋಧ ಪಕ್ಷದಲ್ಲಿದ್ದಾಗ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯನ್ನು ಖಂಡಿಸಿದ್ದರು. ಈಗ ಅವರೇ ದರ ಏರಿಕೆ ಮಾಡಿ ಸಮರ್ಥಿಸುತ್ತಿದ್ದಾರೆ. (ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆಯ ವಿಡಿಯೋ ಪ್ರದರ್ಶಿಸಿದರು).

2) ಗ್ಯಾರೆಂಟಿಗೆ ಖರ್ಚು ಮಾಡುತ್ತಿರುವ ಹಣ ಸರ್ಕಾರದ ಖಜಾನೆಯಿಂದಲೇ ನೀಡಲಾಗುತ್ತಿದೆ. ಅದನ್ನೇನೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿಯವರು, ಕಾಂಗ್ರೆಸ್ ಪಕ್ಷದಿಂದ ಹಣ ಕೊಡುತ್ತಿಲ್ಲ. ಜನರ ಅನುಕೂಲಕ್ಕೆ ಗ್ಯಾರೆಂಟಿ ಯೋಜನೆ ಜಾರಿಗೊಳಿಸಿದ ಅದೇ ರೀತಿಯಲ್ಲಿ ಕೂಡಲೇ ಪೆಟ್ರೋಲ್ ಡೀಸೆಲ್ ದರ ಇಳಿಸಬೇಕು.

3) ಸಿದ್ದರಾಮಯ್ಯನವರು ಮಾನಮರ್ಯಾದೆ ಇಲ್ಲದ ಕಾಂಗ್ರೆಸ್ಸಿಗೆ ಸೇರಿದವರು. ವಾಲ್ಮೀಕಿ ನಿಗಮಕ್ಕೆ ಸೇರಿದ 187 ಕೋಟಿ ರೂಪಾಯಿ ಅಕ್ರಮ ಪ್ರಕರಣದಲ್ಲಿ ನಾಗೇಂದ್ರ ಅವರ ವಿಕೆಟ್ ಪತನವಾಗಿದೆ. ಈಗ ಎರಡನೇ ವಿಕೆಟ್ ಸಿದ್ದರಾಮಯ್ಯನವರದು.

ಕಾಂಗ್ರೆಸ್ ಸರಕಾರವು ಕಳೆದೊಂದು ವರ್ಷದಲ್ಲಿ ನಿರಂತರವಾಗಿ ಬೆಲೆ ಏರಿಕೆ, ದರ ಏರಿಕೆಯನ್ನು ಮಾಡುತ್ತಲೇ ಬಂದಿದೆ. ಏರಿಸಿದ ಪೆಟ್ರೋಲ್, ಡೀಸೆಲ್ ದರ ಹಿಂಪಡೆಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಆಗ್ರಹಿಸಿದರು.

ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಜನರಿಗೆ ಮೂರು ನಾಮ ಹಾಕುತ್ತಿದೆ. ಸಿದ್ದರಾಮಯ್ಯನವರು ತಾವು ಮಾತ್ರ ಟೋಪಿ ಹಾಕುವುದಲ್ಲ. ಜನರಿಗೆಲ್ಲ ಟೋಪಿ ಹಾಕುತ್ತಿದ್ದಾರೆ. ಟೋಪಿ ಹಾಕಿ ನಾಮ ಹಾಕಿ ಜನರಿಗೆ ಚೆಂಬು ಕೊಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಮಾಜಿ ಸಚಿವ ಬೈರತಿ ಬಸವರಾಜ್, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ಎಂಎಲ್‍ಸಿಗಳಾದ ಛಲವಾದಿ ನಾರಾಯಣಸ್ವಾಮಿ, ಗೋಪಿನಾಥ ರೆಡ್ಡಿ, ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ರಘು, ಎ.ಎಸ್.ಪಾಟೀಲ ನಡಹಳ್ಳಿ, ಧೀರಜ್ ಮುನಿರಾಜು, ಬೆಂಗಳೂರಿನ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.