ಹೈಕಮಾಂಡ್ ಅಂಗಳದಲ್ಲಿ ಬಿಜೆಪಿ ಬಣ ಜಗಳ; ಶ್ರೀರಾಮುಲು ರಾಜ್ಯಾಧ್ಯಕ್ಷರಾಗಲು ಯತ್ನಾಳ್ ಒಲವು; ವರಿಷ್ಠರ ಸಂಪರ್ಕದಲ್ಲಿ ವಿಜಯೇಂದ್ರ
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಪಕ್ಷದೊಳಗೆ ಬಣ ರೂಪುಗೊಂಡಿದೆ. ಯಾವುದೇ ಕಾರಣಕ್ಕೂ ಬಿಎಸ್‌ವೈ ಪುತ್ರ ಮುಂದಿನ ರಾಜ್ಯಾಧ್ಯಕ್ಷರಾಗಬಾರದು ಎಂದು ಪಣ ತೊಟ್ಟಿದೆ. ಅತ್ತ ವಿಜಯೇಂದ್ರ ಪರವೂ ಬಣವೊಂದು ತೊಡೆ ತಟ್ಟಿ ನಿಂತಿದ್ದು, ದೆಹಲಿ ಹೈಕಮಾಂಡ್‌ಗೆ ಹೊಸ ಸವಾಲು ಸೃಷ್ಟಿಯಾಗಿದೆ.

ಕರ್ನಾಟಕ ಬಿಜೆಪಿ ಬಣಗಳಾಗಿ ವಿಂಗಡಣೆಯಾಗಿದೆ. ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣ ಸಮರ ಸಾರಿದೆ. ಮುಂದಿನ ಅವಧಿಗೆ ಬಿಎಸ್‌ವೈ ಪುತ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬಾರದು ಎಂದು ಪಣ ತೊಟ್ಟಿದೆ. ಯತ್ನಾಳ್ ಬಣದೊಂದಿಗೆ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಧ್ವನಿಗೂಡಿಸಿದ್ದಾರೆ. ಈಗಾಗಲೇ ಬಣದ ಸದಸ್ಯರು ರಾಷ್ಟ್ರ ರಾಜಧಾನಿಗೆ ತೆರಳಿ ಹೈಕಮಾಂಡ್ ಕದ ತಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಮುಂದುವರೆಸಬಾರದು ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾಗೆ ಮನವಿ ಸಲ್ಲಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ದೆಹಲಿ ನಾಯಕರಿಂದ ನಮಗೆ ಮೆಚ್ಚುಗೆ ಸಿಕ್ಕಿದೆ. ಎಲ್ಲ ವಿಚಾರಗಳನ್ನು ಹೈಕಮಾಂಡ್ ಬಳಿ ಮನವರಿಕೆ ಮಾಡಿಕೊಟ್ಟಿದ್ದೇವೆ. ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾವು ತಲೆಬಾಗುತ್ತೇವೆ. ವಿಜಯೇಂದ್ರ ಅವರಂತೆ ನಾವು ಹತಾಶರಾಗಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ಬೆಳವಣಿಗೆಗಳ ಕುರಿತು ಮಾತನಾಡಿದ ರೆಬೆಲ್ ನಾಯಕ ಶ್ರೀರಾಮುಲು, ಹೈಕಮಾಂಡ್‌ನಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಕೆಲವರು ಸಣ್ಣ ವಯಸ್ಸಿನಲ್ಲೇ ದೊಡ್ಡ ನಾಯಕರಾಗಲು ಹೋಗಿ ಸ್ಪೀಡ್ ಹೆಚ್ಚಿಸಿಕೊಳ್ಳುತ್ತಾರೆ. ಈ ಭರದಲ್ಲಿ ಅಪಘಾತ ಆಗುತ್ತದೆ ಎಂಬ ಅರಿವು ಅವರಿಗೆ ಇರುವುದಿಲ್ಲ ಎಂದು ರಾಮುಲು ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ. ಎರಡನೇ ಬಾರಿ ನಾನೇ ರಾಜ್ಯಾಧ್ಷಕ್ಷಾಗುತ್ತೇನೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಅವರು ಎಷ್ಟು ಬಾರಿಯಾದರೂ ಅಧ್ಯಕ್ಷರಾಗಲಿ. ಹೈಕಮಾಂಡ್ ಹೇಳಿದರೆ ಅದನ್ನು ಪ್ರಶ್ನಿಸುವವರು ಯಾರಿದ್ದಾರೆ? ಇನ್ನು ಐದು ಬಾರಿಯಾದರೂ ಅವರೇ ಅಧ್ಯಕ್ಷರಾಗಲಿ ಎಂದಿದ್ದಾರೆ.
ಶ್ರೀ ರಾಮಲುಗೆ ಬೆಂಬಲ ಎಂದ ಯತ್ನಾಳ್
ಶ್ರೀ ರಾಮಲು ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರಾದರೆ ನಮ್ಮ ತಕರಾರಿಲ್ಲ. ಅವರೂ ನಮ್ಮವರೇ. ಅವರಾದ್ರೆ ನಮ್ಮ ಬೆಂಬಲ ಇರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಮಾತನಾಡಿದ ಅವರು, ನಮ್ಮ ಬಣದಿಂದ ಯಾರು ಸ್ಪರ್ಧೆ ಮಾಡುತ್ತೇವೆ ಅನ್ನೋದು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇವೆ. ನಾನೂ ಸಹ ದೆಹಲಿಗೆ ಹೋಗುತ್ತಿದ್ದೇನೆ. ನಮ್ಮ ಬಣದ ನಾಯಕರು ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡುತ್ತೇವೆ. ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ದೆಹಲಿ ವರಿಷ್ಠರೊಂದಿಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದೇನೆ
ತಮ್ಮದೇ ಪಕ್ಷದ ನಾಯಕರು ತನ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೂ, ವಿಜಯೇಂದ್ರ ತಲೆಕೆಡಿಸಿಕೊಂಡಂತಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಹೋರಾಟದ ನೇತೃತ್ವ ವಹಿಸಿದ್ದು ನಾನು. ನಮ್ಮದೇ ಪಕ್ಷದ ಕೆಲವು ನಾಯಕರ ಹೇಳಿಕೆಗಳಿಂದ ಈಗಾಗಲೇ ಪಕ್ಷದ ಕಾರ್ಯಕರ್ತರು ನೊಂದಿದ್ದಾರೆ. ದೆಹಲಿ ನಾಯಕರ ಮುಂದೆ ಏನು ಹೇಳುತ್ತಾರೋ ಹೇಳಿಕೊಳ್ಳಲಿ. ತಾನು ವರಿಷ್ಠರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮಾಧ್ಯಮಗಳಿಗೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇದರ ನಡುವೆ ವಿಜಯೇಂದ್ರ ಪರ ಬಣವೂ ಸದ್ದು ಮಾಡುತ್ತಿದೆ. ಮಾಜಿ ಸಚಿವ ಬಿಸಿ ಪಾಟೀಲ್, ರೇಣುಕಾಚಾರ್ಯ ಪಕ್ಷದ ಅಧ್ಯಕ್ಷರ ಬೆಂಬಲವಾಗಿ ತೊಡೆ ತಟ್ಟಿ ನಿಂತಿದ್ದಾರೆ.
ದೆಹಲಿ ಚುನಾವಣೆ ಬೆನ್ನಲ್ಲೇ ಬಿಜೆಪಿ ಅಧ್ಯಕ್ಷರ ಚುನಾವಣೆ
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಂದ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಅಧಕ್ಷರ ಚುನಾವಣೆ ನಡೆಯಲಿದೆ. ದೆಹಲಿ ಫಲಿತಾಂಶ ಫೆ.8ರಂದು ಹೊರಬೀಳಲಿದೆ. ಅದಕ್ಕೂ ಮುನ್ನ ರಾಜ್ಯ ಬಿಜೆಪಿ ಘಟಕಗಳಿಗೂ ಅಧಕ್ಷರ ಚುನಾವಣೆ ನಡೆಯಬೇಕಿದೆ. ಹೀಗಾಗಿ ತಮ್ಮ ಬಣದಿಂದ ಒಬ್ಬರನ್ನು ಕಣಕ್ಕಿಳಿಸಲಾಗುವುದು ಎಂದು ಈ ಹಿಂದೆಯೇ ಯತ್ನಾಳ್ ಹೇಳಿದ್ದರು. ಇದೀಗ ಶ್ರೀರಾಮುಲು ಅವರನ್ನು ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಯತ್ನಾಳ್ ಬಣದ ಬೆಂಬಲ ಇರುವುದು ಸ್ಪಷ್ಟವಾಗುತ್ತಿದೆ.
ಇನ್ನಷ್ಟು ರಾಜಕೀಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
