ಪ್ರಮುಖ ಸಮುದಾಯಗಳ ನಾಯಕರ ಕೊರತೆ ಎದುರಿಸುತ್ತಿದೆ ಕರ್ನಾಟಕ ಬಿಜೆಪಿ; ಎಲ್ಲ ಜಾತಿಗಳ ಯುವಕರನ್ನು ಸೆಳೆಯಲು ಕಾರ್ಯತಂತ್ರ
ಕರ್ನಾಟಕದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಮೇಲೇಳದ ಬಿಜೆಪಿಯ ಕಮಲವನ್ನು ಅರಳಿಸಲು ನಾಯಕರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಈಗ ಮತ್ತೊಂದು ಸುತ್ತಿನ ಪ್ರಯತ್ನಗಳು ಶುರುವಾಗಿವೆ.ವರದಿ: ಎಚ್.ಮಾರುತಿ.ಬೆಂಗಳೂರು

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿರುವ ಹಾಗೆ ಕರ್ನಾಟಕದ ಬಿಜೆಪಿಯಲ್ಲಿ ಮೇಲ್ವರ್ಗಗಳಿಗೆ ಸೇರಿದ ನಾಯಕರ ಕೊರತೆ ಎದುರಿಸುತ್ತಿದೆ. ಈ ಕೊರತೆಯನ್ನು ನೀಗಿಸಲು ಪ್ರಾತಿನಿಧ್ಯ ಹೊಂದಿಲ್ಲದ ಸಮುದಾಯಗಳ ಯುವಕರನ್ನು ಪಕ್ಷದತ್ತ ಸೆಳೆಯಲು ಮುಂದಾಗಿದೆ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಈ ಸಮುದಾಯಗಳಿಗೆ ಆದ್ಯತೆ ನೀಡಲೂ ನಿರ್ಧರಿಸಿದೆ. ಕೇವಲ ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮಾತ್ರವಲ್ಲ, ಮುಂಬರುವ 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾಯಕರನ್ನು ಹುಟ್ಟು ಹಾಕಲು ನಿರ್ಧರಿಸಿದೆ. ಬಿಜೆಪಿ ಮೈಸೂರು ಚಲೋ ಮತ್ತು ಜನಾಕ್ರೋಶ ಯಾತ್ರೆಗಳನ್ನು ನಡೆಸಿದೆಯಾದರೂ ಕಾಂಗ್ರೆಸ್ ನ ಪ್ರಮುಖ ನಾಯಕರಿಗೆ ಪರ್ಯಾಯ ನಾಯಕರಿಲ್ಲದಿರುವ ಕೊರತೆಯನ್ನು ಕಂಡುಕೊಂಡಿದೆ. ಕುರುಬ ಮತ್ತು ಅಹಿಂದ ವರ್ಗಗಳ ಮೇಲೆ ಹಿಡಿತ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಕ್ಕಲಿಗ ಸಮುದಾಯದ ಮೇಲೆ ಹಿಡಿತ ಹೊಂದಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪರಿಶಿಷ್ಟ ಜಾತಿಯ ಮೇಲೆ ಹಿಡಿತ ಹೊಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದುರಿಸುವ ನಾಯಕರು ಇಲ್ಲವಾಗಿದ್ದಾರೆ.
ಜಾತಿ ನಾಯಕರ ಕೊರತೆಯಿಂದಾಗಿಯೇ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎಸ್‌ಟಿ ಸಮುದಾಯಗಳಿಗೆ ಮೀಸಲಾದ 15 ಸ್ಥಾನಗಳಲ್ಲಿ ಒಂದನ್ನೂ ಗೆಲ್ಲಲಾಗಲಿಲ್ಲ. ಆದರೆ ಸತೀಶ್ ಜಾರಕಿಹೊಳಿ ಮೊದಲಾದ ನಾಯಕರ ಕಾರಣಕ್ಕಾಗಿ ಕಾಂಗ್ರೆಸ್ 14ರಲ್ಲಿ ಗೆಲುವು ಸಾಧಿಸಿದೆ. ಇದೀಗ ಬಿಜೆಪಿ ಹಿಂದುಳಿದ ವರ್ಗ, ಒಕ್ಕಲಿಗ ಮತ್ತು ದಲಿತ ಸಮುದಾಯಗಳ ನಾಯಕರನ್ನು ಹುಟ್ಟು ಹಾಕಿ ತರಬೇತಿ ನೀಡಲು ಮುಂದಾಗಿದೆ. ಅಷ್ಟೇ ಅಲ್ಲ, ʼವಕ್ಫ್ ಸುಧಾರ್ ಜನಜಾಗೃತಿ ಅಭಿಯಾನʼದ ಮೂಲಕ ವಕ್ಫ್ ತಿದ್ದುಪಡಿ ಕಾಯಿದೆಯ ಪ್ರಯೋಜನಗಳ ಅರಿವು ಮೂಡಿಸುವ ಮೂಲಕ ಅಲ್ಪಸಂಖ್ಯಾತರ ಒಲವು ಗಳಿಸಲು ಉದ್ದೇಶಿಸಿದೆ.
ಪಕ್ಷದಲ್ಲಿ ನಾಯಕತ್ವದ ಗುಣಗಳುಳ್ಳವರ ಕೊರತೆ ಇಲ್ಲ. ಪಕ್ಷಕ್ಕೆ ಹೊಸ ರಕ್ತದ ಅವಶ್ಯಕತೆ ಇದ್ದು, ಎಲ್ಲ ಸಮುದಾಯಗಳಿಂದ ಹೊಸ ಮುಖಗಳನ್ನು ಗುರುತಿಸುವ ಅಗತ್ಯ ಇದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.
ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಕುರಿತು ರಾಜ್ಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆ ಜತೆಗೆ ಹೊಸ ನಾಯಕರನ್ನು ಗುರುತಿಸುವ ಕೆಲಸವನ್ನೂ ಮಾಡಲಾಗುತ್ತದೆ ಎಂದು ಹೇಳುತ್ತಾರೆ.
ಪಕ್ಷದ ರಾಜ್ಯ ಅಧ್ಯಕ್ಷರಾಗಿ ವೀರಶೈವ ಲಿಂಗಾಯತರ ಮತಗಳನ್ನು ಕ್ರೋಢೀಕರಿಸಲು ಬಿ.ವೈ.ವಿಜಯೇಂದ್ರ ಕೆಲಸ ಮಾಡುತ್ತಲೇ ಇದ್ದಾರೆ. ಈ ಸಮಾಜ ಕಾಂಗ್ರೆಸ್ ನತ್ತಲೂ ಮುಖ ಮಾಡಿದ್ದು ಅವರನ್ನು ಮರಳಿ ಪಕ್ಷದ ತೆಕ್ಕೆಗೆ ತರುವ ಸವಾಲು ಅವರಿಗಿದೆ.
ಈ ಎಲ್ಲ ಸವಾಲುಗಳನ್ನು ಎದುರಿಸಿ ಪ್ರಮುಖ ಸಮುದಾಯಗಳನ್ನು ಸೆಳೆಯಲು ಹೈಕಮಾಂಡ್ ನಿರ್ದೇಶನ ನೀಡಿದೆ. ರಾಷ್ಟ್ರೀಯ ಜಾತಿಜನಗಣತಿಯ ಅಂಕಿಅಂಶಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲೂ ನಿರ್ದೇಶನ ನೀಡಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ವಿಜಯೇಂದ್ರ ಅವರು ಶೀಘ್ರದಲ್ಲೇ ಮತ್ತೊಂದು ಸುತ್ತಿನ ರಾಜ್ಯ ಪ್ರವಾಸ ನಡೆಸಲಿದ್ದಾರೆ. ಹಿಂದುಳಿದ ವರ್ಗಗಳ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದೆ. ಜಿಲ್ಲಾ ಘಟಕಗಳು ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿವೆ. ಉದಾಹರಣೆಗೆ ಹಾವೇರಿ ಜಿಲ್ಲೆಯಲ್ಲಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಮತ್ತು ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್ ಪೂಜಾರ್ ಅವರ ನಾಯಕತ್ವದಲ್ಲಿ ಪಕ್ಷವು ಲಿಂಗಾಯತ, ಒಬಿಸಿ ಮತ್ತು ದಲಿತ ಸಮುದಾಯಗಳಿಗೆ ಸೇರಿದ ಯುವ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರೂ ಸಹ ಪಕ್ಷದ ಜತೆ ನಿಲ್ಲಲು ಬಯಸಿದ್ದಾರೆ. ಇದೇ ಮಾದರಿಯನ್ನು ಎಲ್ಲ ಜಿಲ್ಲೆಗಳಲ್ಲೂ ಅನುಸರಿಸಲಾಗುತ್ತದೆ ಎಂದು ಮತ್ತೊಬ್ಬ ಮುಖಂಡರು ಹೇಳುತ್ತಾರೆ.
ವರದಿ: ಎಚ್.ಮಾರುತಿ. ಬೆಂಗಳೂರು