ಎಚ್ಚರ! ಆಪ್ಗಳ ಮೂಲಕ ಸಾಲ ಪಡೆಯುವವರು ಈ ಸ್ಟೋರಿ ಓದಿ; ಲೋನ್ ಪಡೆದ ಬಿಜೆಪಿ ಮುಖಂಡನ ಪುತ್ರನ ಕಥೆ ಏನಾಗಿದೆ ನೋಡಿ
Loan App: ಆಪ್ ಮೂಲಕ ಸಾಲ ನೀಡುವ ಕಂಪನಿಯೊಂದರಿಂದ 6 ಲಕ್ಷ ಸಾಲ ಪಡೆದ ಬಿಜೆಪಿ ಮುಖಂಡನ ಪುತ್ರ ಬಡ್ಡಿ ಇತ್ಯಾದಿ ಸೇರಿ 45 ಲಕ್ಷ ರೂ. ಕಟ್ಟಿದ್ದರೂ ಆತನನ್ನು ಬಿಡುತ್ತಿಲ್ಲ. ಕುಟುಂಬಸ್ಥರ ಅಶ್ಲೀಲ ಫೋಟೋ ಸೃಷ್ಟಿಸಿ, ಶೇರ್ ಮಾಡಿ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ.
ಆಪ್ಗಳ ಮೂಲಕ ಸಾಲ ಪಡೆಯುದರಿಂದಾಗುವ ಅನಾಹುತಗಳನ್ನು ಕುರಿತು ಪೊಲೀಸರು ಎಚ್ಚರಿಕೆಗಳನ್ನು ನೀಡುತ್ತಲೇ ಇದ್ದರೂ ಸಾರ್ವಜನಿಕರು ಮತ್ತೆ ಮತ್ತೆ ಇವುಗಳ ಬಲೆಗೆ ಬೀಳುತ್ತಲೇ ಇದ್ದಾರೆ. ಇದೀಗ ಬಿಜೆಪಿ ಮುಖಂಡರೊಬ್ಬರ ಪುತ್ರ ಈ ಬಲೆಗೆ ಬಿದ್ದಿದ್ದಾರೆ. ಸಾಲ ಪಡೆದ 8ರಷ್ಟು ಹಣವನ್ನು ತೆತ್ತು ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಕಾಶ್ (ಹೆಸರು ಬದಲಾಯಿಸಲಾಗಿದೆ) ಬಿಜೆಪಿ ಪದಾಧಿಕಾರಿಯೊಬ್ಬರ ಪುತ್ರ. ಇವರ ತಂದೆ ಇತ್ತೀಚೆಗೆ ನಡೆದ ವಿಧಾನಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ತ್ವರಿತ ಹಣದ
ಅವಶ್ಯಕತೆಗಾಗಿ ಮೊಬೈಲ್ ಆಪ್ ಮೂಲಕ ಸಾಲ ನೀಡುವ ಕಂಪನಿಯೊಂದರಿಂದ ಆಕಾಶ್ 6 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಇದುವರೆಗೂ ಬಡ್ಡಿ ಇತ್ಯಾದಿ ಸೇರಿ 45 ಲಕ್ಷ ರೂಪಾಯಿ ಕಟ್ಟಿದ್ದರೂ ಇನ್ನೂ ಹೆಚ್ಚಿನ ಮೊತ್ತವನ್ನು ಕಟ್ಟಲೇಬೇಕೆಂದು ಪೀಡಿಸುತ್ತಲೇ ಇದ್ದಾರೆ. ಅಲ್ಲದೇ ಕುಟುಂಬಸ್ಥರ ಅಶ್ಲೀಲ ಫೋಟೋ ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು, ಇದೀಗ ಆಕಾಶ್ ಖಿನ್ನತೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ.
ಮೇಕ್ ಮನಿ ಎಂಬ ಆಪ್ನಿಂದ ಸಾಲ ಪಡೆದಿದ್ದಾಗಿ ತಿಳಿದು ಬಂದಿದೆ. ಸಾಲ ಪಡೆಯುವಾಗ ಆಕಾಶ್ ತನ್ನ ಕಾಂಟಾಕ್ಟ್ ಮತ್ತು ಫೋಟೋ ಗ್ಯಾಲರಿಯನ್ನು ಪ್ರವೇಶಿಸಲು ಮೇಕ್ ಮನಿ ಕಂಪನಿಗೆ ಅನುಮತಿ ನೀಡಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಇದೊಂದು ತಪ್ಪಿಗೆ ಆಪ್ ಕಂಪನಿಯ ನೌಕರರು ಎಂದು ಹೇಳಿಕೊಂಡ ದುಷ್ಕರ್ಮಿಗಳು ಇಡೀ ಕುಟುಂಬವನ್ನು ಶೋಷಿಸುತ್ತಿದ್ದಾರೆ.
ಈ ಸಂಬಂಧ ಆಕಾಶ್ ಚಿಕ್ಕಪ್ಪ ರಮೇಶ್ (ಹೆಸರು ಬದಲಾಯಿಸಲಾಗಿದೆ) ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊಬೈಲ್ ನಲ್ಲಿ ಬಿತ್ತರಗೊಳ್ಳದ ಅನ್ನೋನ್ ನಂಬರ್ಗಳಿಂದ ಕರೆ ಮಾಡಿ ತಮ್ಮನ್ನು ಮೇಕ್ ಮನಿ ಕಂಪನಿಯ ನೌಕರರು ಎಂದು ಪರಿಚಯಿಸಿಕೊಂಡು ತಮ್ಮನ್ನು ಮತ್ತು ತಮ್ಮ ಪತ್ನಿ ಮತ್ತು ಪುತ್ರಿಯನ್ನು ಶೋಷಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಾಲ ಪಡೆದ ಆಕಾಶ್ ಪೋಷಕರ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿ ಇಬ್ಬರು ಮಹಿಳೆಯರ ಜೊತೆ ಇರುವಂತೆ ಅಶ್ಲೀಲವಾದ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಾ ಬೆದರಿಸುತ್ತಿದ್ದಾರೆ ಎಂದೂ ದೂರಿದ್ದಾರೆ.
ಇದಕ್ಕೂ ಮುನ್ನ ಆಕಾಶ್ ಬಡ್ಡಿ ಸಹಿತ ಎಲ್ಲ ಸಾಲವನ್ನು ತೀರಿಸಿದ್ದಾರೆ. ಆದರೂ ನಿಮ್ಮ ಸಾಲ ತೀರಿಲ್ಲ ಎಂದು ಬೆದರಿಕೆ ಒಡಿದ್ದಾರೆ. ಈ ಬೆದರಿಕೆಗೆ ಬಗ್ಗದಿದ್ದಾಗ ದುಷ್ಕರ್ಮಿಗಳು ನಿಮ್ಮ ಬೆತ್ತಲೆ ಚಿತ್ರಗಳನ್ನು ನಿಮ್ಮ ಮೊಬೈಲ್ ನಲ್ಲಿರುವ ಎಲ್ಲ ನಂಬರ್ ಗಳಿಗೆ ಕಳುಹಿಸುವುದಾಗಿ ಬೆದಿರಕೆ ಒಡ್ಡಿದ್ದಾರೆ. ಇದಕ್ಕಾಗಿ ಕೆಲವು ಬೆತ್ತಲೆ ಚಿತ್ರಗಳನ್ನು ಸೃಷ್ಟಿಸಿ ಕಳುಹಿಸಿದ್ದಾರೆ.
ಈ ರೀತಿ ಬೆದರಿಕೆ ಒಡ್ಡುತ್ತಾ ಸುಮಾರು 45 ಲಕ್ಷ ರೂಪಾಯಿಗಳನ್ನು ಕಿತ್ತಿದ್ದಾರೆ. ಆದರೂ ಇನ್ನೂ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಲೇ ಇದ್ದರು. ಈ ಮಾನಸಿಕ ಹಿಂಸೆಯನ್ನು ತಾಳಲಾರದೆ ಆಕಾಶ್ ಈಶಾನ್ಯ ಸಿ ಇ ಎನ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಆಕಾಶ್ಗೆ ಕಳೆದ ಮೂರು ವಾರಗಳಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮನೆಯಲ್ಲಿ ಒಮ್ಮೊಮ್ಮೆ ಆಕಾಶ್ ಆತ್ಮಹತ್ಯೆ ಮಾಡಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದ್ದ. ದೈಹಿಕವಾಗಿ ಕುಗ್ಗಿ ಹೋಗಿದ್ದ. ಆದ್ದರಿಂದ ಆತನ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಚಿಕ್ಕಪ್ಪ ರಮೇಶ್ ತಿಳಿಸಿದ್ದಾರೆ.
ಸಾಲ ಪಡೆದ ಆಕಾಶ್ ದೂರು ದಾಖಲಿಸಿದ ನಂತರ ಮೇಕ್ ಮನಿ ದುಷ್ಕರ್ಮಿಗಳು ಕರೆ ಮಾಡುವುದನ್ನು ನಿಲ್ಲಿಸಿದ್ದಾರೆ. ಬದಲಾಗಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಹಿಂಸಿಸುತ್ತಿದ್ದಾರೆ. ನಕಲಿ ಫೇಸ್ ಬುಕ್ ಅಕೌಂಟ್ ಗಳನ್ನು ಹುಟ್ಟುಹಾಕಿ ನಮ್ಮ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಬರೆಯುತ್ತಿದ್ದಾರೆ. ಇದರಿಂದ ನನ್ನ ಪತ್ನಿ ಮತ್ತು ಪುತ್ರಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ರಮೇಶ್ ಹೇಳಿದ್ದಾರೆ. ದುಷ್ಕರ್ಮಿಗಳು ಒಮ್ಮೊಮ್ಮೆ ಸ್ಥಳಿಯ ಮತ್ತು ವಿದೇಶಿ ನಂಬರ್ ಗಳಿಂದ ಕರೆ ಮಾಡುತ್ತಿದ್ದರು ಮತ್ತು ಹಿಂದಿಯಲ್ಲಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಎರಡೂ ಪ್ರಕರಣಗಳನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾಕಿಸ್ತಾನ ಮತ್ತು ಯುಎಇ ಇಂದ ಕರೆಗಳನ್ನು ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ವರದಿ: ಎಚ್ ಮಾರುತಿ