BJP list: ಅಭ್ಯರ್ಥಿ ಅಂತಿಮಗೊಳಿಸಲು ರಾಜ್ಯ, ಕೇಂದ್ರ ನಾಯಕರಿಂದ ಸರ್ಕಸ್; ಬಿಜೆಪಿ ಪಟ್ಟಿ ಮತ್ತಷ್ಟು ವಿಳಂಬ; ಬಿಎಸ್ವೈ ಬೆಂಗಳೂರಿಗೆ ವಾಪಸ್
ಕನ್ನಡ ಸುದ್ದಿ  /  ಕರ್ನಾಟಕ  /  Bjp List: ಅಭ್ಯರ್ಥಿ ಅಂತಿಮಗೊಳಿಸಲು ರಾಜ್ಯ, ಕೇಂದ್ರ ನಾಯಕರಿಂದ ಸರ್ಕಸ್; ಬಿಜೆಪಿ ಪಟ್ಟಿ ಮತ್ತಷ್ಟು ವಿಳಂಬ; ಬಿಎಸ್ವೈ ಬೆಂಗಳೂರಿಗೆ ವಾಪಸ್

BJP list: ಅಭ್ಯರ್ಥಿ ಅಂತಿಮಗೊಳಿಸಲು ರಾಜ್ಯ, ಕೇಂದ್ರ ನಾಯಕರಿಂದ ಸರ್ಕಸ್; ಬಿಜೆಪಿ ಪಟ್ಟಿ ಮತ್ತಷ್ಟು ವಿಳಂಬ; ಬಿಎಸ್ವೈ ಬೆಂಗಳೂರಿಗೆ ವಾಪಸ್

ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂಬ ಪ್ರಸ್ತಾಪವನ್ನ ಬಿಜೆಪಿ ಹೈಕಮಾಂಡ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಎಸ್ ಯಡಿಯೂರಪ್ಪ (ಫೋಟೋ-ANI)
ಬಿಎಸ್ ಯಡಿಯೂರಪ್ಪ (ಫೋಟೋ-ANI)

ಬೆಂಗಳೂರು: ವಿಧಾನಸಭೆ ಚುನಾವಣೆಗೆ (Assembly Election) ಬಿಜೆಪಿ ಅಭ್ಯರ್ಥಿಗಳ ಪಟ್ಟಿ (BJP Candidates List) ಅಂತಿಮಗೊಳಿಸುವ ವಿಚಾರದಲ್ಲಿ ರಾಜ್ಯದ ನಾಯಕರು ಹಾಗೂ ಕೇಂದ್ರ ನಾಯಕರ ನಡುವೆ ಒಮ್ಮತ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅಭ್ಯರ್ಥಿಗಳ ಪಟ್ಟಿ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

ಬೆಂಗಳೂರು ಬಳಿಕ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ನಾಯಕರು ಸತತ ಮೂರು ದಿನಗಳಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಹುರಿಯಾಳುಗಳನ್ನು ಅಂತಿಮಗೊಳಿಸಲು ಆಗುತ್ತಿಲ್ಲ. ಕೆಲವು ಕ್ಷೇತ್ರಗಳಿಗೆ ಹಾಲಿ ಶಾಸಕರಿಗೆ ಟಿಕೆಟ್ ನೀಡದಿರಲು ನಿರ್ಧಾರಿಸಲಾಗಿದೆಯಂತೆ.

ಅಂತಿಮವಾಗಿ ರಾಜ್ಯದ ನಾಯಕರು ಹಾಗೂ ಅಮಿತ್ ಶಾ ಅವರು ಪಟ್ಟಿಯನ್ನು ಪರಿಶೀಲನೆ ನಡೆಸಿದ ಬಳಿಕ ಇಂದು ರಾತ್ರಿ ಅಥವಾ ನಾಳೆಯೊಳಗೆ ಪಟ್ಟಿ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಟಿಕೆಟ್ ಅಂತಿಮಗೊಳಿಸುವ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೋಮವಾರ ತಡರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಕಳೆದ ಶುಕ್ರವಾರದಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬಿಎಸ್ ಯಡಿಯೂರಪ್ಪ ಕೂಡ ಅಭ್ಯರ್ಥಿಗಳ ಆಯ್ಕೆಗಾಗಿ ಸಭೆ ನಡೆಸುತ್ತಿದ್ದಾರೆ. ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸದೆ ಬೆಂಗಳೂರಿಗೆ ವಾಪಸಾಗಿರುವುದು ಯಡಿಯೂರಪ್ಪ ಪಕ್ಷದಲ್ಲಿ ಅಸಮಾಧಾನ ಮೂಡಿಸಿದೆ ಎಂಬ ಊಹಾಪೋಹಗಳು ಎದ್ದಿವೆ.

ಪಕ್ಷದ ನಾಯಕರ ಸಂಬಂಧಿಕರಿಗೆ ಟಿಕೆಟ್ ನೀಡುವುದರ ವಿರುದ್ಧ ಬಿಜೆಪಿ ಹೈಕಮಾಂಡ್ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿಲ್ಲ ಎನ್ನಲಾಗಿದೆ.

80 ವರ್ಷದ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ತಮ್ಮ ಪುತ್ರ ಬಿವೈ ವಿಜಯೇಂದ್ರ ಅವರು ಶಿಕಾರಿಪುರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ್ದರು.

ವಿಜಯೇಂದ್ರ ಅವರು ಶಿಖಾರಿಪುರದಿಂದ "ಸ್ವಯಂಚಾಲಿತ ಆಯ್ಕೆ" ಅಲ್ಲ ಮತ್ತು "ಅಭ್ಯರ್ಥಿಗಳ ನಿರ್ಧಾರವನ್ನು ಯಾರ ಅಡುಗೆಮನೆಯಲ್ಲಿಯೂ ತೆಗೆದುಕೊಳ್ಳಲಾಗುವುದಿಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಗಳು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುವಂತಿವೆ.

ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು ಎಂಬ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಯಡಿಯೂರಪ್ಪ ಅವರು ಅಸಮಾಧಾನಗೊಂಡಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸಂಭಾವ್ಯ ಅಭ್ಯರ್ಥಿಗಳ ಕುರಿತು ಮಾಹಿತಿಗಾಗಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ್ದ ಯಡಿಯೂರಪ್ಪ ಅವರು, 170 ರಿಂದ 180 ಅಭ್ಯರ್ಥಿಗಳ ಹೆಸರುಗಳು ಮೊದಲ ಪಟ್ಟಿಯಲ್ಲಿ ಇರುತ್ತವೆ ಎಂದು ಹೇಳಿದ್ದರು.

ಮಾತುಕತೆ ಹೇಗೆ ನಡೆದಿದೆ ಎಂಬುದರ ಬಗ್ಗೆ ಅಸಮಾಧಾನವಿಲ್ಲ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು. ಅಸಮಾಧಾನಗೊಂಡಿಲ್ಲ. ನಾನು ಯಾವಾಗಲೂ ಸಂತೋಷದ ವ್ಯಕ್ತಿ. ಸ್ಥಾನದ ಆಯ್ಕೆಯ ಆಧಾರದ ಮೇಲೆ ನಾವು ಪೂರ್ಣ ಬಹುಮತವನ್ನು ಪಡೆಯುತ್ತೇವೆ ಎಂದು ನನಗೆ ಖಾತ್ರಿಯಿದೆ ಎಂದಿದ್ದರು.

ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಅಥವಾ ಬುಧವಾರ ಪ್ರಕಟಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ಹೆಚ್ಚಿನ ಗ್ರೌಂಡ್ ರಿಪೋರ್ಟ್‌ಗಳನ್ನು ಸಂಗ್ರಹಿಸಬೇಕಾಗಿದೆ. ಹೆಚ್ಚಿನ ಮಾಹಿತಿ ಸಂಗ್ರಹಿಸಿ ಹೊಸ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಬೇಕಿದೆ ಅಂತಲೂ ಹೇಳಿದ್ದಾರೆ.

ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದ ವರದಿಗಳನ್ನು ತಳ್ಳಿಹಾಕಿರುವ ಸಿಎಂ ಬೊಮ್ಮಾಯಿ, ಎಲ್ಲ ಸಭೆಗಳಲ್ಲಿ ಯಡಿಯೂರಪ್ಪ ನಮ್ಮೊಂದಿಗಿದ್ದರು. ಅವರು 10 ಗಂಟೆಗಳ ಕಾಲ ನಮ್ಮೊಂದಿಗೆ ಕುಳಿತು ಎಲ್ಲಾ 224 ಕ್ಷೇತ್ರಗಳ ಬಗ್ಗೆ ತಮ್ಮ ಇನ್ಪುಟ್ ನೀಡಿದ್ದಾರೆ. ಪ್ರಚಾರ ಮತ್ತು ಜಾಹೀರಾತುಗಳ ಬಗ್ಗೆ ನಾವು ನಡ್ಡಾ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ 224 ಅಭ್ಯರ್ಥಿಗಳ ಪೈಕಿ 166 ಮತ್ತು ಜನತಾದಳ (ಜಾತ್ಯತೀತ) 93 ಅಭ್ಯರ್ಥಿಗಳ ಪಟ್ಟಿನ್ನು ಈಗಾಗಲೇ ಪ್ರಕಟಿಸಿದೆ.

Whats_app_banner