BJP manifesto 2023 karnataka: ಬಿಜಪಿ ಪ್ರಣಾಳಿಕೆ ಜನರದ್ದು; 8000 ಸಲಹಾಪೆಟ್ಟಿಗೆ ಮೂಲಕ ಜನರ ಸಲಹೆ ಸೂಚನೆ ಸಂಗ್ರಹಕ್ಕೆ ಮುಂದಾದ ಬಿಜೆಪಿ
ಕನ್ನಡ ಸುದ್ದಿ  /  ಕರ್ನಾಟಕ  /  Bjp Manifesto 2023 Karnataka: ಬಿಜಪಿ ಪ್ರಣಾಳಿಕೆ ಜನರದ್ದು; 8000 ಸಲಹಾಪೆಟ್ಟಿಗೆ ಮೂಲಕ ಜನರ ಸಲಹೆ ಸೂಚನೆ ಸಂಗ್ರಹಕ್ಕೆ ಮುಂದಾದ ಬಿಜೆಪಿ

BJP manifesto 2023 karnataka: ಬಿಜಪಿ ಪ್ರಣಾಳಿಕೆ ಜನರದ್ದು; 8000 ಸಲಹಾಪೆಟ್ಟಿಗೆ ಮೂಲಕ ಜನರ ಸಲಹೆ ಸೂಚನೆ ಸಂಗ್ರಹಕ್ಕೆ ಮುಂದಾದ ಬಿಜೆಪಿ

BJP manifesto 2023 Karnataka: ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯು ಸಮೃದ್ಧ ಕರ್ನಾಟಕವೇ ಬಿಜೆಪಿಯ ಭರವಸೆ ಎಂಬ ಘೋಷಣೆಯೊಂದಿಗೆ ಕೆಲಸ ಮಾಡಲಿದೆ. ಚುನಾವಣೆ ಹೊಸ್ತಿಲಲ್ಲಿ ನಾವಿದ್ದೇವೆ. ಕರ್ನಾಟಕವನ್ನು ಹೆಮ್ಮೆಯ ರಾಜ್ಯವನ್ನಾಗಿ ಮಾಡಲು ಬದ್ಧರಿದ್ದೇವೆ. ಭವ್ಯ ಭವಿಷ್ಯಕ್ಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ ಎಂದು ಸಚಿವ ಸುಧಾಕರ್‌ ಹೇಳಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಜನರ ಪ್ರಣಾಳಿಕೆ ರೂಪಿಸಲು ಸಲಹಾ ಪೆಟ್ಟಿಗೆ ಸಿದ್ಧಪಡಿಸಿರುವುದನ್ನು ಪ್ರದರ್ಶಿಸಿದ ಬಿಜೆಪಿ ನಾಯಕರು
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಜನರ ಪ್ರಣಾಳಿಕೆ ರೂಪಿಸಲು ಸಲಹಾ ಪೆಟ್ಟಿಗೆ ಸಿದ್ಧಪಡಿಸಿರುವುದನ್ನು ಪ್ರದರ್ಶಿಸಿದ ಬಿಜೆಪಿ ನಾಯಕರು (BJP)

ಬೆಂಗಳೂರು: ಸಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆ ಎಂಬ ಘೋಷಣೆಯೊಂದಿಗೆ ರಾಜ್ಯದ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ, ಜನರ ಪ್ರಣಾಳಿಕೆ ರೂಪಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ರಾಜ್ಯದಾದ್ಯಂತ 8,000 ಸಲಹಾ ಪೆಟ್ಟಿಗೆ ಸ್ಥಾಪಿಸಲು ಮುಂದಾಗಿದೆ. ಅಲ್ಲದೆ, ವೆಬ್‌ಸೈಟ್‌, ವಾಟ್ಸ್‌ಆಪ್‌ ಮೂಲಕವೂ ಜನರ ಸಲಹೆ ಸ್ವೀಕರಿಸಲು ಕ್ರಮ ತೆಗೆದುಕೊಂಡಿದೆ.

ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಬುಧವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದರು.

ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯು ಸಮೃದ್ಧ ಕರ್ನಾಟಕವೇ ಬಿಜೆಪಿಯ ಭರವಸೆ ಎಂಬ ಘೋಷಣೆಯೊಂದಿಗೆ ಕೆಲಸ ಮಾಡಲಿದೆ. ಚುನಾವಣೆ ಹೊಸ್ತಿಲಲ್ಲಿ ನಾವಿದ್ದೇವೆ. ಕರ್ನಾಟಕವನ್ನು ಹೆಮ್ಮೆಯ ರಾಜ್ಯವನ್ನಾಗಿ ಮಾಡಲು ಬದ್ಧರಿದ್ದೇವೆ. ಭವ್ಯ ಭವಿಷ್ಯಕ್ಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ ಎಂದು ಸಚಿವ ಸುಧಾಕರ್‌ ಹೇಳಿದರು.

ಮಂಡಲದ ವಿವಿಧೆಡೆ 25 ಬಾಕ್ಸ್ ಸೇರಿ ಒಟ್ಟು 8 ಸಾವಿರ ಸಲಹಾ ಪೆಟ್ಟಿಗೆ ಇಡಲಾಗುವುದು. ವೆಬ್ ಸೈಟ್ (bjp4samruddhaKarnataka.in) ಇದ್ದು ಅದನ್ನು ಬಾಕ್ಸ್ ಮೇಲೆ ನಮೂದಿಸಲಾಗಿದೆ. ವಾಟ್ಸಪ್ ಸಂಖ್ಯೆ +91 8595158158 ಗೆ ಜನಸಾಮಾನ್ಯರು ಪ್ರಣಾಳಿಕೆ ಕುರಿತು ಸಲಹೆ ನೀಡಬಹುದು. ಕ್ಯೂ ಆರ್ ಕೋಡ್ ಮೂಲಕ ಸಲಹೆ ನೀಡಬಹುದು. ರಾಜ್ಯದ ಒಂದು ಕೋಟಿಗೂ ಹೆಚ್ಚು ಜನರನ್ನು ತಲುಪುವ ಗುರಿ ಇದೆ ಎಂದು ಸಚಿವ ಸುಧಾಕರ್‌ ವಿವರ ನೀಡಿದರು.

ರಾಜ್ಯದ 224 ಕ್ಷೇತ್ರಗಳಲ್ಲಿ ಮಾರ್ಚ್ 25ರವರೆಗೆ ಸಭೆ ನಡೆಯಲಿದೆ. ಜತೆಗೆ ವಿಡಿಯೋ ವ್ಯಾನ್ ಪ್ರಗತಿ ರಥದಲ್ಲೂ ಸಲಹಾ ಪೆಟ್ಟಿಗೆ ಇರುತ್ತದೆ. ಕನಿಷ್ಠ 50 ಸೆಕ್ಟರ್ ಸಭೆಗಳನ್ನು ಮಾಡಲಾಗುವುದು. ತೋಟಗಾರಿಕೆ, ರೇಷ್ಮೆ ಸೇರಿ ಕೃಷಿ ವಲಯದ ಸಭೆ, ಕೈಗಾರಿಕೆ, ಸಣ್ಣ ಮಧ್ಯಮ, ಗುಡಿ ಕೈಗಾರಿಕೆ ಸಬಲೀಕರಣಕ್ಕೆ ತಂಡದ ಸಭೆ ನಡೆಸಲಾಗುತ್ತದೆ. ಈ ಸೆಕ್ಟರ್ ಸಭೆಗಳಲ್ಲಿ ಕೇಂದ್ರ ಸಚಿವರು, ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆ.‌ ಎಲ್ಲ ಕಡೆ ಜನರು ನೀಡುವ ಸಲಹೆಗಳನ್ನು ಸ್ವೀಕರಿಸಿ ಅನುಷ್ಠಾನ ಯೋಗ್ಯವಾದ ಸಲಹೆಗಳನ್ನು ಇಟ್ಟುಕೊಂಡು ಬಿಜೆಪಿಯ ಪ್ರಣಾಳಿಕೆಯನ್ನು ರೂಪಿಸಲಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಡಬಲ್‌ ಇಂಜಿನ್‌ ಸರ್ಕಾರದ ಫಲ ಇದು…

ಬಿಜೆಪಿ ಸರಕಾರ ಜನಸಾಮಾನ್ಯರ ಸರಕಾರ. ಜನಸಾಮಾನ್ಯರ ಸಿಎಂ ಆಗಿ ಬಸವರಾಜ ಬೊಮ್ಮಾಯಿಯವರು ಹೊರಹೊಮ್ಮಿದ್ದಾರೆ. ಪ್ರತಿ ವರ್ಗದ ಜನರಿಗೆ ಅಭಿವೃದ್ಧಿಯ ಅಮೃತವನ್ನು ತಮ್ಮ ಬಜೆಟ್ ಮೂಲಕ ಮುಖ್ಯಮಂತ್ರಿಯವರು ನೀಡಿದ್ದಾರೆ. ಕಾಂಗ್ರೆಸ್ ಕೇವಲ 38 ಶೇ. ಭರವಸೆ ಅನುಷ್ಠಾನ ಮಾಡಿತ್ತು. ಕೋವಿಡ್, ಅತಿವೃಷ್ಟಿಯ ವಿಕೋಪ ಇದ್ದರೂ, ಆರ್ಥಿಕ ಹಿಂಜರಿತದ ನಡುವೆ ಇಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ನಮಗೆ ಸ್ಪಷ್ಟ ಬಹುಮತವನ್ನು ಕೊಡಿ. ನೂರಕ್ಕೆ ನೂರು ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಡಾ.ಸುಧಾಕರ್‌ ತಿಳಿಸಿದರು.

ಡಬಲ್ ಎಂಜಿನ್ ಸರಕಾರವು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದೆ. ರೈಲ್ವೆ ಸೇರಿ ಅನೇಕ ರಾಷ್ಟ್ರೀಯ ಯೋಜನೆಗಳಾಗಿವೆ. ವಿಮಾನನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ- ರಾಜ್ಯ ಸರಕಾರಗಳು ಶ್ರಮಿಸಿವೆ. ಡಬಲ್ ಎಂಜಿನ್ ಸರಕಾರದ ಸಾಧನೆ ಏನು ಎಂದು ಕೇಳುವವರಿಗೆ ಇದು ತಕ್ಕ ಉತ್ತರ. ಶಿವಮೊಗ್ಗ ವಿಮಾನನಿಲ್ದಾಣವನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಮೈಸೂರು ರನ್‍ವೇ ವಿಸ್ತರಣೆ ನಡೆದಿದೆ. ಬೆಂಗಳೂರು- ಮೈಸೂರು ದಶಪಥ ಯೋಜನೆ ಸಿದ್ಧಗೊಂಡಿದೆ ಎಂದು ಹೇಳಿದರು.

ರೈತ ಸಮ್ಮಾನ್ ಯೋಜನೆಯಡಿ ನಮ್ಮ ರಾಜ್ಯದಲ್ಲಿ 59 ಲಕ್ಷ ಕೃಷಿಕರಿಗೆ ಪ್ರಯೋಜನ ಸಿಗುತ್ತಿದೆ. ಇವರಿಗೆ 10 ಸಾವಿರ ರೂ. ನೇರವಾಗಿ ಸಿಗುತ್ತಿದೆ. ಇದು ದೇಶದ ಇತಿಹಾಸದಲ್ಲೇ ಮೊದಲು. ರೈತರಿಗೆ ಸ್ಪಷ್ಟ ಕಾರ್ಯಕ್ರಮ ಕೊಡಲು ಕಾಂಗ್ರೆಸ್ ವಿಫಲವಾಗಿತ್ತು. ರೈತ ವಿದ್ಯಾನಿಧಿ ಸೇರಿ ಹೊಸ ಕಾರ್ಯಕ್ರಮಗಳನ್ನು ನಾವು ಜಾರಿಗೊಳಿಸಿದ್ದೇವೆ. ಇದು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪರಿಣಾಮ ಬೀರುತ್ತಿದೆ. ಇದರಡಿ 12 ಲಕ್ಷ ಜನರಿಗೆ 460 ಕೋಟಿಯನ್ನು ವಿನಿಯೋಗಿಸಿದ್ದೇವೆ. ದಯನೀಯವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನ ಸಿಗುತ್ತಿದೆ ಎಂದು ಡಾ.ಸುಧಾಕರ್‌ ವಿವರಿಸಿದರು.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ಜನಸಾಮಾನ್ಯರ ಆಶಯಕ್ಕೆ ಅನುಗುಣವಾಗಿ ಮುಂದುವರಿಯಲಿದೆ. ಅಂತ್ಯೋದಯದಲ್ಲಿ ನಂಬಿಕೆ ಬಿಜೆಪಿಯದು. ಬಿಜೆಪಿಗೆ ಪೂರ್ಣ ಬಹುಮತ ಕೊಡಲು ಜನರಲ್ಲಿ ಮನವಿ ಮಾಡಿದರು. ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Whats_app_banner