ಅಪ್ಪನ ಮನೆ ಆಸ್ತಿನಾ ಎಂದಿದ್ದ ಅರವಿಂದ ಬೆಲ್ಲದ ಕ್ಷಮೆ; ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ ಎಂದ ಸಿಎಂ
Arvind Bellad on Siddaramaiah: ಜಿಂದಾಲ್ ಕುರಿತ ವಿಚಾರವಾಗಿ ಅದೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದ ಅರವಿಂದ ಬೆಲ್ಲದ ಅವರು ಪತ್ರದ ಮೂಲಕ ಕ್ಷಮೆಯಾಚಿಸಿದ್ದಾರೆ.
ಧಾರವಾಡ: ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ ಭೂಮಿ ಕೊಡಲು ಅಪ್ಪನ ಮನೆ ಆಸ್ತಿನಾ ಎಂಬ ತಮ್ಮ ಹೇಳಿಕೆ ಕುರಿತು ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಷಮೆ ಕೇಳಿದ್ದಾರೆ. ಜಿಂದಾಲ್ ಹೇಳಿಕೆಗೆ ಸಂಬಂಧಿಸಿ ಸಿಎಂಗೆ ಲಿಖಿತ ಪತ್ರ ಬರೆದು ತಮ್ಮ ಹೇಳಿಕೆಗೆ ವಿಷಾದಿಸಿದ್ದಾರೆ. ಬೆಲ್ಲದ ಅವರ ಕ್ಷಮೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ ಎಂಬ ಮಾತು ಈ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವೆನಿಸುತ್ತಿದೆ ಎಂದು ಹೇಳಿದ್ದಾರೆ.
ಆಗಸ್ಟ್ 24ರಂದು ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಜಿಂದಾಲ್ ಕಂಪನಿಯ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು, ಕಡಿಮೆ ದರದಲ್ಲಿ ಜಿಂದಾಲ್ ಭೂಮಿ ಕೊಡಲು ಅದೇನು ಸಿಎಂ ಅಪ್ಪನ ಮನೆ ಆಸ್ತಿನಾ ಎಂಬ ಹೇಳಿಕೆ ನೀಡಿದ್ದರು. ಅಂದು ಮಾತಿನ ಭರದಲ್ಲಿ ವ್ಯಕ್ತಪಡಿಸಿದ ಪದ ತಮಗೂ ಶೋಭೆ ತರದು ಎಂದು ಪತ್ರದಲ್ಲಿ ಸ್ಪಷ್ಟಪಡಿಸುವ ಮುಖಾಂತರ ತಾವೊಬ್ಬ ಜವಾಬ್ದಾರಿ ಜನಪ್ರತಿನಿಧಿ ಎಂಬುದನ್ನು ಬೆಲ್ಲದ ಸಾಬೀತುಪಡಿಸಿದ್ದಾರೆ. ಮಾತನಾಡುವ ವೇಗದಲ್ಲಿ ಈ ಪದವನ್ನು ಬಳಿಸಿದ್ದು ನನಗೆ ಶೋಭೆ ತರುವುದಿಲ್ಲ. ಹಾಗಾಗಿ, ಈ ಪತ್ರದ ಮುಖಾಂತರ ಕ್ಷಮೆಯಾಚಿಸುತ್ತೇನೆ ಎಂದು ಬೆಲ್ಲದ ಅವರು ಹೇಳಿದ್ದಾರೆ.
ಇದೀಗ ಸಿದ್ದರಾಮಯ್ಯ ಪ್ರತಿಕ್ರಿಯೆ ಹೀಗಿದೆ ನೋಡಿ
ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಕೆಲವೊಮ್ಮೆ ಉದ್ವೇಗದಲ್ಲಿ ಮತ್ತೊಬ್ಬರ ಘನತೆಗೆ ಚ್ಯುತಿ ತರುವಂತಹ ಹೇಳಿಕೆ ಅರಿವಿಗೆ ಬಾರದೆಯೇ ಬಂದು ಬಿಡುತ್ತದೆ. ಜಿಂದಾಲ್ ಕಂಪನಿಗೆ ಭೂಮಿ ನೀಡಿರುವ ನಮ್ಮ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಮಾತನಾಡುವಾಗ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ ಅವರು ವೈಯಕ್ತಿಕವಾಗಿ ನನ್ನನ್ನು ನಿಂದನೆ ಮಾಡಿದ್ದರು. ತಮ್ಮ ತಪ್ಪಿನ ಅರಿವಾಗಿ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ. ಅವರ ಈ ನಡೆಯನ್ನು ನಾನು ಅತ್ಯಂತ ಮುಕ್ತವಾಗಿ ಸ್ವಾಗತಿಸುತ್ತೇನೆ, ಜೊತೆಗೆ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ದ್ವೇಷವಾಗಲೀ, ಬೇಸರವಾಗಲೀ ಯಾವುದು ಇಲ್ಲವೆಂಬುದನ್ನು ಈ ಮೂಲಕ ತಿಳಿಸಬಯಸುತ್ತೇನೆ ಎಂದು ಸೂಚಿಸಿದ್ದಾರೆ.
ನಾನು ಒಂದೆರಡು ಬಾರಿ ಬಾಯ್ತಪ್ಪಿನಿಂದ ಏಕವಚನ ಬಳಕೆ ಮಾಡಿ ನಂತರ ವಿಷಾದ ವ್ಯಕ್ತಪಡಿಸಿದ್ದೇನೆ, ಆ ತಪ್ಪು ಮರುಕಳಿಸದಂತೆ ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ. ನನ್ನ ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲಿ ವಿಪಕ್ಷಗಳ ಹಲವು ಕಿರಿಯ, ಹಿರಿಯ ನಾಯಕರಿಂದ ವೈಯಕ್ತಿಕ ನಿಂದನೆ, ಚಾರಿತ್ರ್ಯಹನನ ಮಾಡುವಂತಹ ಪದಬಳಕೆ ಎಲ್ಲವನ್ನೂ ಕೇಳಿದ್ದೇನೆ, ಎದುರಿಸಿದ್ದೇನೆ. ಮೊದಲ ಬಾರಿಗೆ ಅರವಿಂದ ಬೆಲ್ಲದ್ ಅವರು ತಾವು ಬಳಸಿದ ಪದದ ಬಗ್ಗೆ ಸ್ವತಃ ಅವರೇ ಬೇಸರ ವ್ಯಕ್ತಪಡಿಸಿ, ಪತ್ರದ ಮೂಲಕ ಕ್ಷಮೆ ಕೇಳಿ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅರವಿಂದ್ ಅವರ ತಂದೆ ಚಂದ್ರಕಾಂತ ಬೆಲ್ಲದ್ ಅವರು ನನ್ನ ದೀರ್ಘಕಾಲದ ಸ್ನೇಹಿತರು. ಅವರೊಬ್ಬ ಸಜ್ಜನ ರಾಜಕಾರಣಿ. ಅವರ ಸಜ್ಜನಿಕೆಯ ಪರಂಪರೆಯನ್ನು ಅರವಿಂದ್ ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸುತ್ತೇನೆ. ರಾಜಕೀಯವು ಬರೀ ಟೀಕೆ, ಆರೋಪ-ಪ್ರತ್ಯಾರೋಪಗಳಿಂದಲೇ ತುಂಬಿಹೋಗುತ್ತಿರುವ ಈ ಕಾಲದಲ್ಲಿ ಅರವಿಂದ ಬೆಲ್ಲದ್ ಅವರ ನಡೆ ಮೌಲ್ಯಯುತ ರಾಜಕಾರಣದ ಜೀವಂತಿಕೆಯ ಸಂಕೇತವಾಗಿ ಕಾಣುತ್ತಿದೆ. “ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ” ಎಂಬ ಮಾತು ಈ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವೆನಿಸುತ್ತಿದೆ ಎಂದದ್ದಾರೆ.