ಹೈಡ್ರಾಮಾ ಬಳಿಕ ಬಿಜೆಪಿ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರು; ಸ್ಟೇಷನ್ ಬೇಲ್ ಸೇರಿ ತಿಳಿಯಬೇಕಾದ ಅಂಶಗಳಿವು
ಪೊಲೀಸರಿಗೆ ಧಮ್ಕಿಹಾಕಿದ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜ ಭಾರಿ ಹೈಡ್ರಾಮಾದ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದು, ಸ್ಟೇಷನ್ ಬೇಲ್ ಪಡೆದಿದ್ದಾರೆ. ಪ್ರಕರಣ ಒಟ್ಟಾರೆ ಬೆಳವಣಿಗೆಯ ಸಂಪೂರ್ಣ ಮಾಹಿತಿ ಇಲ್ಲಿದೆ (ವರದಿ: ಹರೀಶ್ ಮಾಂಬಾಡಿ).
ಮಂಗಳೂರು: ಕರ್ತವ್ಯನಿರತ ಪೊಲೀಸರನ್ನು ನಿಂದಿಸಿದ ಆರೋಪ ಸಹಿತ 143, 147, 341, 504, 506 ಜತೆಗೆ 149 ಐಪಿಸಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಗೆ ಬುಧವಾರ ರಾತ್ರಿ ಹಾಜರಾದ ಶಾಸಕ ಹರೀಶ್ ಪೂಂಜಾ ಅವರನ್ನು ಬೆಳ್ತಂಗಡಿ ಪೊಲೀಸರು ವಿಚಾರಣೆ ನಡೆಸಿ, ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ. ಮೇ 18 ರಂದು ಅಕ್ರಮ ಕಲ್ಲುಕೋರೆ ಗಣಿಗಾರಿಕೆಗೆ ಸಂಬಂಧಿಸಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ವಿರೋಧಿಸಿ ಪೂಂಜಾ ಪೊಲೀಸ್ ಠಾಣೆಯಲ್ಲಿ ಹಾಗೂ ಮರುದಿನ ಪ್ರತಿಭಟನಾ ಸಭೆಯಲ್ಲಿ ನಡೆಸಿದ ವಾಗ್ಬಾಣಗಳ ಬಳಿಕ ನಡೆದ ಬೆಳವಣಿಗೆಯ ಮುಂದುವರಿದ ಭಾಗವಿದು.
ಬುಧವಾರ ದಿನವಿಡೀ ನಡೆದ ಪೂಂಜಾ ಬಂಧನಯತ್ನ ಪ್ರಕರಣದ ವಿದ್ಯಮಾನಗಳು ಹೀಗಿವೆ
- ಬುಧವಾರ ಬೆಳಗ್ಗೆ 10.30ಕ್ಕೆ ಪೂಂಜಾ ಅವರ ಗರ್ಡಾಡಿ ನಿವಾಸಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ನೋಟಿಸ್ ನೀಡಿ ಮರಳಿದ್ದಾರೆ.
- ಬಳಿಕ 15 ನಿಮಿಷಗಳಾದ ಮೇಲೆ ಮತ್ತೆ ಆಗಮಿಸಿದ ಪೊಲೀಸರು ಬಂಧನಕ್ಕೆಂದು ಆಗಮಿಸಿದ್ದಾರೆಂದು ಕಾರ್ಯಕರ್ತರು ಆಕ್ಷೇಪಿಸಿದ್ದಾರೆ. ನಾವು ವಿಚಾರಣೆಗೆ ಕರೆದುಕೊಂಡು ಹೋಗಲು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ವಕೀಲರು ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ.
- ಮಾತುಕತೆಗಳು ನಡೆಯುತ್ತಿದ್ದಂತೆಯೇ ಸಂಜೆ ಸುಮಾರು 4 ಗಂಟೆಯ ಹೊತ್ತಿಗೆ ಜಿಲ್ಲೆಯ ಎಲ್ಲಾ ಕಡೆಗಳಿಂದ ಪೊಲೀಸರ ಆಗಮನ. ಒಂದೆಡೆ ಪೊಲೀಸರ ಕಾವಲು, ಮತ್ತೊಂದೆಡೆ ಕಾರ್ಯಕರ್ತರ ಬೆಂಗಾವಲು. ಹೊರಭಾಗದಲ್ಲಿ ಟ್ರಾಫಿಕ್ ಜಾಮ್
- ಎರಡನೇ ನೋಟಿಸ್ ನೀಡಲು ಡಿವೈಎಸ್ಪಿ ತಂಡ ಆಗಮನ. ಕಾರ್ಯಕರ್ತರಿಂದ ಗೋಬ್ಯಾಕ್ ಘೋಷಣೆ
ಇದನ್ನೂ ಓದಿ: ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅರೆಸ್ಟ್ ಆಗುವ ಸಾಧ್ಯತೆ
- ಸಂಜೆಯಾಗುತ್ತಿದ್ದಂತೆ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು ಆಗಮಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಸಾಗುವ ಮುನ್ಸೂಚನೆ. ಈ ಸಂದರ್ಭದಲ್ಲಿ ಶಾಸಕರ ವಿನಂತಿ ಮೇರೆಗೆ ಇಬ್ಬರು ಅಧಿಕಾರಿಗಳಿಗೆ ಮನೆಯೊಳಗೆ ಬರಲು ಅವಕಾಶ
- ಇದಾದ ಬಳಿಕ ಸಂಸದರು, ಬಿಜೆಪಿ ಮುಖಂಡರು, ಶಾಸಕರೊಂದಿಗೆ ಪೊಲೀಸರ ಮಾತುಕತೆ. ವಿಚಾರಣೆಗೆ ಠಾಣೆಗೆ ಹಾಜರಾಗುವಂತೆ ಡಿವೈಎಸ್ಪಿ ತಂಡ ಸೂಚನೆ
- ರಾತ್ರಿ 9.30ರ ವೇಳೆಗೆ ಶಾಸಕ ಹರೀಶ್ ಪೂಂಜಾ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಸುಳ್ಯ ಶಾಸಕಿ ಭಾಗೀರಥಿ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯ, ವಕೀಲ ಪ್ರತಾಪ್ ಸಿಂಹ ನಾಯಕ್ ಜೊತೆ ಠಾಣೆಗೆ ಹಾಜರು
- ಪೊಲೀಸ್ ವಿಚಾರಣೆಯ ಬಳಿಕ ಹೊರಬಂದ ಶಾಸಕ ಹರೀಶ್ ಪೂಂಜಾ. ಇಡೀ ದಿನದ ಹೈಡ್ರಾಮಾ ಅಂತ್ಯ.
ಘಟನೆಯ ಕುರಿತು ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆ
ಬೆಳ್ತಂಗಡಿ ವಿಧಾನಸಭಾ ಶಾಸಕ ಹರೀಶ್ ಪೂಂಜರ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿಚಾರಣೆಗಾಗಿ ಠಾಣೆಗೆ ಕರೆತರಲು, ಬೆಳ್ತಂಗಡಿ ಠಾಣಾ ಪೊಲೀಸರು ಅವರ ಮನೆಗೆ ತೆರಳಿರುತ್ತಾರೆ. ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡದ ಸಂಸದ ನಳೀನ್ ಕುಮಾರ್ ಕಟೀಲ್, ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿಕೊಂಡಿದ್ದಾರೆ. ಬೆಳ್ತಂಗಡಿ ಠಾಣಾ 58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು, ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.
ಪೂಂಜಾ ವಿರುದ್ಧ ಸೆಕ್ಷನ್ ಗಳೇನು? ಆರೋಪ ಸಾಬೀತಾದರೆ ಏನಾಗಬಹುದು?
ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣ ಆರೋಪಿಗಳ ಪರವಾಗಿ ಠಾಣೆಗೆ ಬಂದಿದ್ದ ವೇಳೆ ಆರೋಪಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿರುವುದು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುವುದು. ಈ ಬಗ್ಗೆ ಪೂಂಜಾರವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕಲಂ:353, 504 IPC ರಂತೆ ಪ್ರಕರಣ ದಾಖಲಿಸಲಾಗಿದೆ.
ಎರಡನೇ ಪ್ರಕರಣದಲ್ಲಿ ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗ ಪೂರ್ವಾನುಮತಿ ಪಡೆಯದೆ ಶಾಸಕ ಹರೀಶ್ ಪೂಂಜಾ ಮತ್ತಿತರರು ಪ್ರತಿಭಟನಾ ಸಭೆ ನಡೆಸಿದ್ದು, ಆ ಸಂದರ್ಭದಲ್ಲಿ ಕಾರ್ಯಕರ್ತರಿಗಾಗಿ, ಪೊಲೀಸರ ಕಾಲರ್ ಹಿಡಿಯಲು ಸಿದ್ದನೆಂದು ಹಾಗೂ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಸಿ, ಸಾರ್ವಜನಿಕ ನೌಕರರಾದ, ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಹಾಕಿರುವ ಆರೋಪ ಇದೆ.
ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 143, 147, 341, 504, 506 ಜೊತೆಗೆ 149 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. ಎಲ್ಲ ಸೆಕ್ಷನ್ ಗಳೂ ಗುಂಪು ಸೇರುವುದು, ಕ್ರಿಮಿನಲ್ ಬೆದರಿಕೆ, ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೆ ಸಭೆ ಸೇರುವುದು, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಯಂಥ ಸೆಕ್ಷನ್ ಗಳಾಗಿವೆ. ಇವುಗಳ ಶಿಕ್ಷೆಯ ಗರಿಷ್ಠ ಪರಿಮಿತಿ ಅಂದಾಜು ಮೂರು ವರ್ಷಗಳವರೆಗೆ ಇರುವ ಕಾರಣ ಸ್ಟೇಷನ್ ಬೇಲ್ ಪಡೆಯುವ ಅವಕಾಶಗಳು ಇದ್ದ ಹಿನ್ನೆಲೆಯಲ್ಲಿ ಪೂಂಜಾ ಅವರಿಗೆ ಸ್ಟೇಷನ್ ಜಾಮೀನು ದೊರಕಿದೆ.
ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧದ ಆರೋಪ ಸಾಬೀತಾದರೆ ಇದರಂತೆ 143ರನ್ವಯ ಆರು ತಿಂಗಳವರೆಗಿನ ಜೈಲುವಾಸ, ದಂಡ, ಅಥವಾ ಎರಡೂ ವಿಧಿಸುವ ಅವಕಾಶವಿದೆ, 147ರನ್ವಯ ಎರಡು ವರ್ಷದವರೆಗೆ ಶಿಕ್ಷೆಗೆ ಅವಕಾಶ ಇದೆ. 341ರನ್ವಯ ಒಂದು ತಿಂಗಳ ಜೈಲು, 506 ಕ್ರಿಮಿನಲ್ ಬೆದರಿಕೆಗೆ ಎರಡು ವರ್ಷಗಳ ಶಿಕ್ಷೆಗೆ ಅವಕಾಶವಿದೆ. (ವರದಿ: ಹರೀಶ ಮಾಂಬಾಡಿ).