ಕನ್ನಡ ಸುದ್ದಿ  /  Karnataka  /  Bjp Parliamentary Board: Gadkari, Chouhan Dropped From Bjp Parliamentary Board; Yediyurappa, Sonowal Among 6 New Entrants

BJP parliamentary board: ಸಂಸದೀಯ ಸಮಿತಿಗೆ ಯಡಿಯೂರಪ್ಪ; ಗಡ್ಕರಿ, ಚೌಹಾಣ್‌ ಹೊರಕ್ಕೆ

ಬಿಜೆಪಿ ಸಂಸದೀಯ ಮಂಡಳಿ (BJP parliamentary board) ಯ ಪುನಾರಚನೆ ಆಗಿದ್ದು, ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಕೈಬಿಡಲಾಗಿದೆ. ಕರ್ನಾಟಕದಿಂದ ಬಿಎಸ್‌ ಯಡಿಯೂರಪ್ಪ ಸೇರಿ ಆರು ಹೊಸಬರನ್ನು ಸೇರಿಸಲಾಗಿದೆ.

ಬಿಎಸ್ ಯಡಿಯೂರಪ್ಪ (ಫೋಟೋ-ಸಂಗ್ರಹ)
ಬಿಎಸ್ ಯಡಿಯೂರಪ್ಪ (ಫೋಟೋ-ಸಂಗ್ರಹ)

ನವದೆಹಲಿ: ಕರ್ನಾಟಕದಲ್ಲಿ ಚುನಾವಣಾ ವರ್ಷ ಸಮೀಪವಿರುವ ಕಾರಣ, ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ತರಲಾಗಿದೆ.

ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಪಕ್ಷದ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ಇದೇ ವೇಳೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಆರು ಹೊಸಬರನ್ನು ಸಂಸದೀಯ ಮಂಡಳಿಗೆ ಸೇರಿಸಲಾಗಿದೆ.

ಯಡಿಯೂರಪ್ಪ ಅವರಲ್ಲದೆ, ಕೇಂದ್ರ ಸಚಿವ ಸರ್ಬಾನಂದ ಸೊನೊವಾಲ್‌, ಇಕ್ಬಾಲ್‌ ಸಿಂಗ್‌ ಲಾಲ್‌ಪುರ, ಕೆ.ಲಕ್ಷ್ಮಣ್‌, ಸುಧಾ ಸಾದವ್‌, ಸತ್ಯನಾರಾಯಣ ಜಟಿಯಾ ಅವರು ಸಂಸದೀಯ ಮಂಡಳಿ ಸೇರಿದ ಹೊಸಬರು.

ಈ ಪೈಕಿ ಲಾಲ್‌ಪುರ ಅವರು ಬಿಜೆಪಿ ಸಂಸದೀಯ ಮಂಡಳಿ ಸೇರಿದ ಮೊದಲ ಸಿಖ್‌ ಸಮುದಾಯದವರು. ಅಂದರೆ ಅಲ್ಪಸಂಖ್ಯಾತ ಸಮುದಾಯದ ಪ್ರಾತಿನಿಧ್ಯ ಎಂದು ಪರಿಗಣಿಸಲಾಗಿದೆ.

ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಕೆ. ಲಕ್ಷ್ಮಣ್ ಅವರ ಸೇರ್ಪಡೆ ಕಾರಣ ತೆಲಂಗಾಣದಲ್ಲಿ ಅವರ ನೆಲೆ ಕಾಣುವ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೇರಿದ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೂ ಸ್ಥಾನ ಲಭಿಸಿದೆ. ಇದು ಕೂಡ ರಾಜಕೀಯವಾಗಿ ಲೆಕ್ಕಾಚಾರದ ನಡೆಯೇ ಆಗಿದೆ.

ಸಂಸದೀಯ ಮಂಡಳಿಯನ್ನು ಹೆಚ್ಚು ಸಮಾಜಮುಖಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದಿಂದ ಇರುವಂತೆ ನೋಡಿಕೊಳ್ಳುವುದಕ್ಕೆ ಈ ರೀತಿ ಪುನಾರಚನೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಷಾ, ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಸಂಸದೀಯ ಮಂಡಳಿಯಲ್ಲಿದ್ದಾರೆ.

ಕೇಂದ್ರ ಚುನಾವಣಾ ಸಮಿತಿಯನ್ನು ಕೂಡ ಪಕ್ಷ ಪುನಾರಚನೆ ಮಾಡಿದ್ದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌, ಕೇಂದ್ರ ಸಚಿವ ಭೂಪೇಂದರ್‌ ಯಾದವ್‌, ಓಂ ಮಾಥುರ್‌, ಮಹಿಳಾ ವಿಭಾಗದ ಮುಖ್ಯಸ್ಥೆ ವನತಿ ಶ್ರೀನಿವಾಸನ್‌ ಅವರನ್ನು ಸಮಿತಿಗೆ ಸೇರಿಸಿತ್ತು. ಇದೇ ವೇಳೆ, ಕೇಂದ್ರ ಸಚಿವ ಶಹನವಾಜ್‌ ಹುಸೇನ್‌, ಜುಯೆಲ್‌ ಓರಮ್‌ ಅವರನ್ನು ಸಮಿತಿಯಿಂದ ಕೈಬಿಡಲಾಗಿದೆ. ಇವರು ಸಂಸದೀಯ ಮಂಡಳಿಯ ಸದಸ್ಯರು ಕೂಡ.

ಚುನಾವಣಾ ಸಮಿತಿಯಲ್ಲೂ ಯಡಿಯೂರಪ್ಪ

ಲೋಕಸಭಾ, ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯಲ್ಲಿಯೂ ಬಿಎಸ್‌ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಅವರ ಇತ್ತೀಚಿನ ನಡೆಗಳು ಇದಕ್ಕೆ ಇಂಬುಕೊಡುವಂತೆ ಇವೆ. ಅವರನ್ನು ನಿರ್ಲಕ್ಷಿಸಿದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಾಗದು. ಈ ಹಿಂದೆ ಕೆಜೆಪಿ ರಚನೆ ಮಾಡಿದಾಗ ಅದರ ಏಟಿನ ರುಚಿ ಯಡಿಯೂರಪ್ಪ ಮತ್ತು ಪಕ್ಷಕ್ಕೂ ಆಗಿದೆ. ಆದ್ದರಿಂದ ಯಡಿಯೂರಪ್ಪ ಅವರ ಲೆಕ್ಕಾಚಾರದ ನಡೆಗಳು ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಪಕ್ಷಕ್ಕೆ ನಷ್ಟ ಎಂಬ ಸಂದೇಶ ರವಾನೆ ಆಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ಬದಲಾವಣೆಗಳು ಎನ್ನುತ್ತಿವೆ ಪಕ್ಷದ ಮೂಲಗಳು.

ಸಂಸದೀಯ ಮಂಡಳಿಯ ಪ್ರಾಮುಖ್ಯತೆ

ಬಿಜೆಪಿಯ ಮಟ್ಟಿಗೆ ಸಂಸದೀಯ ಮಂಡಳಿಯು ಪಕ್ಷದ ಆಡಳಿತ ಮಂಡಳಿ. ಅದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಪರವಾಗಿ ದಿನನಿತ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ರಾಷ್ಟ್ರೀಯ ಕಾರ್ಯಕಾರಿಣಿ ಎಂದರೆ ಪಕ್ಷದ ಅಧ್ಯಕ್ಷರು ಮತ್ತು ಇತರ ಹತ್ತು ಸದಸ್ಯರನ್ನು ಒಳಗೊಂಡ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿ.

ಪಕ್ಷದ ಸಂಸದೀಯ ಮತ್ತು ಶಾಸಕಾಂಗ ಗುಂಪುಗಳ ಚಟುವಟಿಕೆಗಳು ಸಂಸದೀಯ ಮಂಡಳಿಯು ಮೇಲ್ವಿಚಾರಣೆ ನಡೆಯುತ್ತವೆ. ಇದು ರಾಷ್ಟ್ರೀಯ ಕಾರ್ಯಕಾರಿಣಿಯ ಅಧೀನದ ಎಲ್ಲ ಘಟಕಗಳಿಗೆ ಮಾರ್ಗದರ್ಶನ ನೀಡುತ್ತ, ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.

IPL_Entry_Point